ಕಾಂಗ್ರೆಸ್ ತ್ರಿವಿಕ್ರಮ ಕಮಲ ಕಂಪನ

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಆಗಬಲ್ಲ ಸೆಮಿಫೈನಲ್ ಕದನವೆಂದೇ ಬಿಂಬಿತವಾಗಿದ್ದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ ಅಲೆಯನ್ನೇ ನೆಚ್ಚಿಕೊಂಡಿದ್ದ ಬಿಜೆಪಿ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢಗಳಲ್ಲಿ ಆಡಳಿತ ವಿರೋಧಿ ಭಾವನೆಗೆ ತಲೆಬಾಗಿದೆ. ಕಳೆದ ಐದು ವರ್ಷಗಳಿಂದ ಮೋದಿ-ಬಿಜೆಪಿ ಎದುರು ನಿರಂತರ ಸೋಲಿನ ಚಡಪಡಿಕೆಯಲ್ಲಿದ್ದ ಕಾಂಗ್ರೆಸ್​ಗೆ ಅದೇ ಮೂರು ರಾಜ್ಯಗಳು ಕೈಹಿಡಿದಿವೆ. ಇನ್ನೊಂದೆಡೆ ಮಿಜೋರಾಂ ಕೈತಪು್ಪವುದರೊಂದಿಗೆ ಪೂರ್ಣ ಈಶಾನ್ಯಭಾರತ ಕಾಂಗ್ರೆಸ್​ವುುಕ್ತವಾದರೆ. ಇತ್ತ ತೆಲಂಗಾಣದಲ್ಲಿ ಕೆಸಿಆರ್ ಮತ್ತೆ ಕಿಂಗ್ ಆಗಿದ್ದಾರೆ. ಒಟ್ಟಾರೆಯಾಗಿ ಲೋಕಸಭೆ ಚುನಾವಣೆಗೆ 4-5 ತಿಂಗಳಿರುವಂತೆ ಹೊರಬಿದ್ದಿರುವ ಈ ಪಂಚರಾಜ್ಯ ತೀರ್ಪು ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ನಾಯಕರಿಗೆ ಹಲವು ಸಂದೇಶ ರವಾನಿಸಿದೆ.

ಬಿಜೆಪಿಗೆ ಪಾಠ: ಚುನಾವಣೆಗೆ ವರ್ಷ ಮೊದಲೇ ರಾಜಸ್ಥಾನದಲ್ಲಿ ಗೆಲುವು ಕಷ್ಟ ಎಂಬ ಬಗ್ಗೆ ಬಿಜೆಪಿ ನಾಯಕರೇ ಮಾತನಾಡಿಕೊಳ್ಳುತ್ತಿದ್ದರು. ವಾಸ್ತವದಲ್ಲಿ, ಸಿಎಂ ವಸುಂಧರಾ ರಾಜೆ ಮೇಲಿನ ಜನಾಕ್ರೋಶದ ಪ್ರಮಾಣ ಕಾಂಗ್ರೆಸ್ ಸೀಟುಗಳನ್ನು 150ರ ಗಡಿ ದಾಟಿಸಬೇಕಿತ್ತು. ಆದರೆ, ಪ್ರಧಾನಿ ಮೋದಿಯವರ ಸತತ ರ್ಯಾಲಿಗಳ ಪರಿಣಾಮ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡ ಬಿಜೆಪಿ, ಕಾಂಗ್ರೆಸ್ ಸಂಖ್ಯೆಯನ್ನು 100ಕ್ಕೆ ಸೀಮಿತಗೊಳಿಸಿತು. ಕಳೆದ ಚುನಾವಣೆಯಲ್ಲಿ 199 ಸೀಟುಗಳಲ್ಲಿ 163 ಸೀಟುಗಳನ್ನು ಬಿಜೆಪಿ ಬಾಚಿಕೊಂಡ ರೀತಿಯ ನಿರ್ವಹಣೆ ಕಾಂಗ್ರೆಸ್​ನಿಂದ ಕಂಡುಬರಲಿಲ್ಲ. ಆದರೂ, ನಾಯಕತ್ವದ ವಿಷಯದಲ್ಲಿ ರಾಜಸ್ಥಾನ ಫಲಿತಾಂಶ ಬಿಜೆಪಿಗೆ ಪಾಠ ಕಲಿಸಿದೆ ಎನ್ನಲಡ್ಡಿಯಿಲ್ಲ. ಬಿಜೆಪಿಯನ್ನು ಸಾಂಪ್ರದಾಯಿಕವಾಗಿ ಬೆಂಬಲಿಸುತ್ತಿದ್ದ ರಜಪೂತ, ಜಾಟ್ ಸೇರಿದಂತೆ ಮೇಲ್ವರ್ಗದ ಮತದಾರನ ಮುನಿಸೇ ಸೋಲಿಗೆ ಕಾರಣ ಎನ್ನಲಾಗುತ್ತಿದೆ. ಛತ್ತೀಸ್​ಗಢದಲ್ಲಿ ರಮಣ್ ಸಿಂಗ್ ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂಬ ನಿರೀಕ್ಷೆಗಳಿದ್ದರೂ ಕಾಂಗ್ರೆಸ್ ಜಯಭೇರಿ ಬಿಜೆಪಿ ವರಿಷ್ಠರನ್ನೇ ನಿಬ್ಬೆರಗಾಗಿಸಿದೆ.

ಪೂರ್ಣ ಶರಣಾಗತಿಯಲ್ಲ: 3 ಅವಧಿಗಳ ನಿರಂತರ ಅಧಿಕಾರದ ಬಳಿಕ ಮಧ್ಯಪ್ರದೇಶದಲ್ಲಿ ಜನಾಭಿಪ್ರಾಯ ಬಿಜೆಪಿಯಿಂದ ಕಾಂಗ್ರೆಸ್ ಕಡೆ ವಾಲಿದ್ದು ಅಚ್ಚರಿಯೇನಲ್ಲ.

ಆರ್​ಎಸ್​ಎಸ್ ಸಂಘಟನಾ ಶಕ್ತಿ ಮತ್ತು ಶಿವರಾಜ್ ಸಿಂಗ್ ವರ್ಚಸ್ವೀ ನಾಯಕತ್ವದಿಂದಾಗಿ ಕೊನೆಕ್ಷಣದವರೆಗೂ ಕೈ-ಕಮಲ ಭಾರೀ ಹೋರಾಟಕ್ಕೆ ಸಾಕ್ಷಿಯಾದವು. ಕೆಲವೇ ಸೀಟುಗಳ ಅಂತರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದರೂ, ಸರ್ಕಾರ ರಚನೆ ಬಗ್ಗೆ ಇನ್ನೂ ಖಚಿತತೆ ಇಲ್ಲ. ಎಸ್ಸಿ/ಎಸ್ಟಿ ದೌರ್ಜನ್ಯ ಕಾಯ್ದೆ ಬಗ್ಗೆ ಸುಪ್ರೀಂಕೋರ್ಟ್ ತೀರ್ಪನ್ನು ತಿರಸ್ಕರಿಸಿ, ಸುಗ್ರೀವಾಜ್ಞೆ ಮೂಲಕ ಮೂಲ ಕಾಯ್ದೆಯನ್ನೇ ಉಳಿಸಿಕೊಂಡ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಮಧ್ಯಪ್ರದೇಶದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಇದು ಚುನಾವಣೆಯಲ್ಲೂ ಪ್ರತಿಫಲಿಸಿರುವಂತಿದೆ.

ಮಹಾಮೈತ್ರಿ ಗೊಂದಲ: 2019ರಲ್ಲಿ ಮೋದಿ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕಲೆಂದು ಸಜ್ಜುಗೊಳ್ಳುತ್ತಿರುವ ಮಹಾಮೈತ್ರಿಗೆ ಪಂಚರಾಜ್ಯ ಫಲಿತಾಂಶ ಸ್ಪಷ್ಟ ದಿಕ್ಸೂಚಿಯಾಗಿಲ್ಲ. ಇದಕ್ಕೆ ಕಾರಣ, ರಾಜಸ್ಥಾನ ಮಧ್ಯಪ್ರದೇಶ, ಛತ್ತೀಸ್​ಗಡದಲ್ಲಿ ಮೈತ್ರಿ ಹೊರೆಯಿಲ್ಲದೆ ಪ್ರತ್ಯೇಕವಾಗಿ ಸ್ಪರ್ಧಿಸಿ ಕಾಂಗ್ರೆಸ್ ಅಧಿಕಾರದ ಹೊಸ್ತಿಲೇರಿದೆ. ತೆಲಂಗಾಣದಲ್ಲೂ ಕಾಂಗ್ರೆಸ್, ಟಿಡಿಪಿ ಮೊದಲಾದ ಪಕ್ಷಗಳ ಮೈತ್ರಿ ನೆಲಕಚ್ಚಿದೆ. ಹೀಗಾಗಿ ಮಹಾಮೈತ್ರಿ ಮೇಲೋ ಅಥವಾ ಚುನಾವಣೋತ್ತರ ಒಡಂಬಡಿಕೆ ಒಳಿತೋ ಎಂಬ ಬಗ್ಗೆ ಗೊಂದಲ ಹಾಗೆಯೇ ಇದೆ ಎನ್ನಬೇಕು. ಇನ್ನೊಂದೆಡೆ, ಉತ್ತರ ಪ್ರದೇಶದಂಥ ರಾಜ್ಯದಲ್ಲಿ ಕಾಂಗ್ರೆಸ್-ಎಸ್​ಪಿ-ಬಿಎಸ್​ಪಿಯ ಸಂಭವನೀಯ ಮೈತ್ರಿಕೂಟ 73 ಸಂಸದರುಳ್ಳ ಬಿಜೆಪಿಯನ್ನು ಅಹರ್ನಿಶಿಯಾಗಿ ಕಾಡಬಲ್ಲದು ಎಂಬ ಅಭಿಪ್ರಾಯವೂ ಇದೆ. 2014ರ ಲೋಕಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್​ಗಢದ 65ರಲ್ಲಿ 63 ಸ್ಥಾನಗಳನ್ನು ಬಿಜೆಪಿ ಬಾಚಿಕೊಂಡಿತ್ತು. ಆದರೆ ಈ ಮೂರೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿರುವುದರಿಂದ 2014ರ ಸಾಧನೆ ಪುನರಾವರ್ತನೆ ಸುಲಭವಲ್ಲ.

ರಾಹುಲ್ ನಾಯಕತ್ವಕ್ಕೆ ಶಕ್ತಿ: ರಾಹುಲ್ ನಾಯಕತ್ವದಲ್ಲಿ ಕಾಂಗ್ರೆಸ್ ಚುನಾವಣೆ ಗೆದ್ದ ಉದಾಹರಣೆಗಳಿರಲಿಲ್ಲ. ಪಂಜಾಬ್​ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕಾರಣದಿಂದಾಗಿ ಕಾಂಗ್ರೆಸ್ ಗೆದ್ದಿತ್ತು. ಆದರೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಡಿ.11ಕ್ಕೆ ಒಂದು ವರ್ಷ ಪೂರೈಸಿದ ದಿನವೇ ರಾಹುಲ್ ರಾಜಕೀಯ ಜೀವನದಲ್ಲಿ ಗೆಲುವಿನ ಹೊಸ ಅಧ್ಯಾಯ ಆರಂಭವಾಗಿರುವುದು ಅವರ ಭವಿಷ್ಯದ ದೃಷ್ಟಿಯಿಂದ ಶುಭ ಸಂಕೇತವೇ. ಮೇಲಾಗಿ, ಮೂರು ರಾಜ್ಯಗಳ ಗೆಲುವನ್ನು ಕೈ ನಾಯಕರು ರಾಹುಲ್ ಗಾಂಧಿಗೆ ಉಡುಗೊರೆಯಾಗಿ ಸಮರ್ಪಿಸಿದ್ದಾರೆ. ‘ರಾಹುಲ್ ಗಾಂಧಿ ದೇಶದ ಮುಂದಿನ ಪ್ರಧಾನಿ’ ಎಂಬ ಘೊಷಣೆಗಳೂ ಕಾಂಗ್ರೆಸ್ ಕೇಂದ್ರ ಕಚೇರಿ ಮುಂದೆ ಧ್ವನಿಸಲಾರಂಭಿಸಿವೆ. ಆದರೆ, ಮಹಾಮೈತ್ರಿಯ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್​ರನ್ನು ಪ್ರಾದೇಶಿಕ ನಾಯಕರು ಒಪ್ಪಿಕೊಳ್ಳುತ್ತಾರಾ ಎಂಬುದು ಸದ್ಯದ ಪ್ರಶ್ನೆ.

ಮೋದಿ ವಿರುದ್ಧವೇ?: ಪಂಚ ರಾಜ್ಯಗಳ ಫಲಿತಾಂಶ ‘ಮೋದಿ ವಿರುದ್ಧದ ಜನಾಭಿಪ್ರಾಯ’ ಎಂದು ಹೇಳಲಾಗದು. ಹಾಗೆಂದು, ಇದು ಮೋದಿ-ಅಮಿತ್ ಷಾಗೆ ಎಚ್ಚರಿಕೆ ಗಂಟೆ ಎಂಬುದೂ ಸುಳ್ಳಲ್ಲ. ಈ ಫಲಿತಾಂಶ ದೇಶದ ರಾಜಕೀಯ ಸಮೀಕರಣ, ಲಾಭ-ನಷ್ಟದ ಲೆಕ್ಕಾಚಾರಗಳನ್ನು ಬದಲಿಸುವ ಜತೆಗೆ ತಕ್ಕಮಟ್ಟಿಗೆ ಬೇರೆ ರಾಜ್ಯಗಳ ಜನರ ಮನಸ್ಸಲ್ಲಿ ‘ಏಕೆ ಹೀಗಾಯ್ತು’ ಎಂಬ ಪ್ರಶ್ನೆ ಮೂಡಿಸಿರುವುದಂತೂ ನಿಜ. ಬಿಜೆಪಿ ನಾಯಕರೇ ಒಪ್ಪಿಕೊಂಡಂತೆ, ಆತ್ಮಾವಲೋಕನಕ್ಕೆ ಇದು ಸಕಾಲ.

ರಾಹುಲ್​ಗೆ ವಾರ್ಷಿಕೋತ್ಸವ ಉಡುಗೊರೆ!

ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಒಂದು ವರ್ಷ ಪೂರ್ಣಗೊಂಡಿದೆ. ಇದೇ ವೇಳೆ ಮೂರು ರಾಜ್ಯಗಳ ಗೆಲುವಿನ ಉಡುಗೊರೆ ದೊರೆತಿದೆ. ರಾಹುಲ್ ಗಾಂಧಿ ಚುನಾವಣೆ ಇತಿಹಾಸದಲ್ಲಿ ಗೆಲುವು ಮರೀಚಿಕೆ ಎಂಬತಾಗಿತ್ತು. ಆದರೆ ಬಿಜೆಪಿಯ ಭದ್ರಕೋಟೆ, ಹಿಂದಿ ಹೃದಯ ಭಾಗದಲ್ಲೇ ಕಾಂಗ್ರೆಸ್ ಸರ್ಕಾರ ರಚಿಸುತ್ತಿರುವುದು ರಾಹುಲ್ ಪಾಲಿಗೆ ಶುಭ ಸುದ್ದಿಯಾಗಿದೆ. ವಿಶೇಷವೆಂದರೆ ಕಳೆದ 7-8 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಸಂಭ್ರಮದ ವಾತಾವರಣ ನಿರ್ವಣವಾಗಿದೆ.

ಯಶಸ್ಸಿನ ಮಂತ್ರ

ಗುಜರಾತ್ ವಿಧಾನಸಭೆ ಚುನಾವಣೆಯಿಂದ ರಾಹುಲ್ ಗಾಂಧಿ ಮೃದು ಹಿಂದುತ್ವ, ರೈತರ ಪರ ಧ್ವನಿ ಹಾಗೂ ನಿರುದ್ಯೋಗ ಸಮಸ್ಯೆ ಮೂಲಕ ಮತದಾರರನ್ನು ಸೆಳೆಯಲು ಯಶಸ್ವಿಯಾಗುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಲಾರಂಭಿಸಿದೆ. ರಾಹುಲ್ ಗಾಂಧಿ ಟೆಂಪಲ್ ರನ್ ಟೀಕೆಗೆ ಕಾರಣವಾದರೂ ಚುನಾವಣೆ ಕಣದಲ್ಲಿ ಕಾಂಗ್ರೆಸ್​ಗೆ ಲಾಭವಾಗುತ್ತಿರುವ ಲಕ್ಷಣ ಗೋಚರಿಸಿದೆ. ರೈತರ ಸಾಲಮನ್ನಾ ವಿಚಾರ ಹಾಗೂ ಉದ್ಯೋಗ ಸೃಷ್ಟಿ ಭರವಸೆ ಕೂಡ ರಾಹುಲ್ ಕೈ ಹಿಡಿಯುತ್ತಿದೆ. ಹೀಗಾಗಿ 2019ರ ಲೋಕಸಭೆ ಚುನಾವಣೆಗೆ ನರೇಂದ್ರ ಮೋದಿ ಪಾಲಿಗೆ ರಾಹುಲ್ ಗಾಂಧಿ 2014ರ ರಾಗಾ ಆಗಿ ಉಳಿದಿಲ್ಲ ಎನ್ನುವುದು ಖಾತ್ರಿಯಾಗುತ್ತಿದೆ.

ಬಿಜೆಪಿಗೆ ಆತಂಕ

ಈಗ ಚುನಾವಣೆ ನಡೆದಿರುವ 5 ರಾಜ್ಯಗಳಲ್ಲಿ ಒಟ್ಟು 83 ಲೋಕಸಭೆ ಕ್ಷೇತ್ರಗಳಿವೆ. ಇವುಗಳಲ್ಲಿ ಸದ್ಯಕ್ಕೆ ಬಿಜೆಪಿ ಬಳಿ 65 ಕ್ಷೇತ್ರಗಳಿವೆ. ಆದರೆ ಇದೇ ಫಲಿತಾಂಶ ಲೋಕಸಭೆಯಲ್ಲೂ ಪುನರಾವರ್ತನೆಯಾದರೆ 30ಕ್ಕೂ ಅಧಿಕ ಸೀಟುಗಳನ್ನು ಬಿಜೆಪಿ ಕಳೆದುಕೊಳ್ಳಲಿದೆ. ಉತ್ತರಪ್ರದೇಶದಲ್ಲೂ 30ಕ್ಕೂ ಅಧಿಕ ಸೀಟುಗಳು ಕಡಿಮೆಯಾಗುವ ಸೂಚನೆಯಿದ್ದು, ಒಟ್ಟಾರೆ ಹಿಂದಿ ಪ್ರಭಾವವಿರುವ ರಾಜ್ಯಗಳಲ್ಲಿ 60ಕ್ಕೂ ಅಧಿಕ ಸೀಟುಗಳನ್ನು ಬಿಜೆಪಿ ಕಳೆದುಕೊಳ್ಳಲಿದೆ. ಇದರಿಂದ ಬಿಜೆಪಿ ಸಂಖ್ಯೆ 200ರ ಆಸುಪಾಸಿಗೆ ಬರಲಿದೆ.

ಬಿಜೆಪಿ, ಎನ್​ಡಿಎ ಆಡಳಿತ ರಾಜ್ಯಗಳು

ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರ, ಹರಿಯಾಣ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಬಿಹಾರ, ಜಾರ್ಖಂಡ, ಆಸ್ಸಾಂ, ಅರುಣಾಚಲಪ್ರದೇಶ, ಸಿಕ್ಕಿಂ, ಮಿಜೋರಾಂ, ತ್ರಿಪುರ, ಮಣಿಪುರ, ನಾಗಾಲ್ಯಾಂಡ್, ಮೇಘಾಲಯ, ಗೋವಾ.

ಇತರೆ

ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಒಡಿಶಾ, ಪಶ್ಚಿಮ ಬಂಗಾಳ, ದೆಹಲಿ ರಾಜ್ಯಪಾಲರ ಆಡಳಿತ: ಜಮ್ಮು-ಕಾಶ್ಮೀರ

ಕಾಂಗ್ರೆಸ್ ಹಾಗೂ ಮೈತ್ರಿ ಆಡಳಿತ ರಾಜ್ಯಗಳು

ಕರ್ನಾಟಕ, ಪಂಜಾಬ್, ರಾಜಸ್ಥಾನ, ಛತ್ತೀಸ್​ಗಢ, ಮಧ್ಯಪ್ರದೇಶ, ಪುದುಚೇರಿ

ಕೈತಪ್ಪಿದ ರಾಜ್ಯ 3, ಚಿಂತೆ ನೂರು

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಪಡೆಯುವಲ್ಲಿ ಮಧ್ಯಪ್ರದೇಶ, ಛತ್ತೀಸ್​ಗಢ ಹಾಗೂ ರಾಜಸ್ಥಾನದ ಕೊಡುಗೆಯೂ ಅಪಾರ. ಮಧ್ಯಪ್ರದೇಶದ 29 ಲೋಕಸಭಾ ಸ್ಥಾನಗಳಲ್ಲಿ 27, ಛತ್ತೀಸ್​ಗಢದ 11ರಲ್ಲಿ 10 ಮತ್ತು ರಾಜಸ್ಥಾನದ 25 ಕ್ಷೇತ್ರಗಳಲ್ಲಿ 25ನ್ನೂ ಬಿಜೆಪಿ ಗೆದ್ದಿತ್ತು. ಇದೀಗ ಪಂಚರಾಜ್ಯ ಫಲಿತಾಂಶ ಲೋಕಸಭೆ ಭವಿಷ್ಯದ ದೃಷ್ಟಿಯಿಂದ ಬಿಜೆಪಿಗೆ ಆತಂಕ ತಂದಿದೆ.

ಆಡಳಿತ ವಿರೋಧಿ ಅಲೆ

 • ಮಧ್ಯಪ್ರದೇಶ, ಛತ್ತೀಸ್​ಗಢ, ರಾಜಸ್ಥಾನದಲ್ಲಿ ಬಿಜೆಪಿ ಆಡಳಿತವಿರೋಧಿ ಅಲೆಯಲ್ಲಿ ಕೊಚ್ಚಿ ಹೋಗಿದೆ.
 • ಮಿಜೋರಾಂನಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಆ ಮೂಲಕ ಈಶಾನ್ಯ ರಾಜ್ಯಗಳಲ್ಲಿ ಕೈಪಡೆ ವಾಶ್​ಔಟ್ ಆಗಿದೆ.
 • ಮಹಾಮೈತ್ರಿಕೂಟವನ್ನು ದಿಟ್ಟವಾಗಿ ಎದುರಿಸಿದ ಕೆ.ಚಂದ್ರಶೇಖರ್ ರಾವ್ ತೆಲಂಗಾಣದಲ್ಲಿ ಅಧಿಕಾರ ಉಳಿಸಿಕೊಂಡಿದ್ದಾರೆ.

 

ಸಂದೇಶವೇನು?

 • ಆಡಳಿತ ವಿರೋಧಿ ಅಲೆ ಪ್ರಬಲವಾಗಿದ್ದರೆ ಈಜಿ ದಡ ಸೇರುವುದು ಕಷ್ಟ
 • ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ಚುನಾವಣೆಗಳ ದಿಕ್ಸೂಚಿ ಆಗುವುದಿಲ್ಲ
 • ಬದಲಾವಣೆ ಜಗದ ನಿಯಮ, ಹೊಸ ಮುಖಗಳತ್ತ ಮತದಾರನ ಒಲವು

 

ಬಿಜೆಪಿಗೆ ಎಚ್ಚರಿಕೆ ಪಾಠ

 • ಮೋದಿ ವರ್ಚಸ್ಸು, ಕಳಂಕರಹಿತ ಆಡಳಿತವೊಂದೇ ಮತ ತಂದುಕೊಡುವುದಿಲ್ಲ
 • ಎಷ್ಟೇ ಪ್ರಬಲರಾಗಿದ್ದರೂ ಭ್ರಷ್ಟಾಚಾರ ಆರೋಪ ಹೊತ್ತವರಿಗೆ ಮಣೆ ಹಾಕಬೇಕಿಲ್ಲ
 • ರಾಮಮಂದಿರದಂತಹ ಭಾವನಾತ್ಮಕ ವಿಷಯಗಳಷ್ಟೇ ಮತದಾರರ ಮನಗೆಲ್ಲಲು ಸಾಕಾಗದು
 • ಸೋತ ರಾಜ್ಯಗಳಲ್ಲಿ ನಾಯಕತ್ವ ಬಲಪಡಿಸುವ ಅಗತ್ಯ
 • ಲೋಪ ಅರಿತು ಲೋಕಸಭೆ ಚುನಾವಣೆಗೆ ತಯಾರಾಗುವ ಅನಿವಾರ್ಯತೆ

ಮಧ್ಯಪ್ರದೇಶ ಸಸ್ಪೆನ್ಸ್

ಭೋಪಾಲ್: ಭಾರತದ ಹೃದಯ ಭಾಗ, ಮಧ್ಯಪ್ರದೇಶದಲ್ಲಿ ಚುನಾವಣೆ ಕಣ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಒಂದೂವರೆ ದಶಕ ರಾಜ್ಯದಲ್ಲಿ ಆಡಳಿತ ನಡೆಸಿದ್ದ ಬಿಜೆಪಿಗೆ ಭಾರಿ ಶಾಕ್ ನೀಡಿರುವ ಕಾಂಗ್ರೆಸ್ ಬಹುಮತದತ್ತ ದಾಪುಗಾಲಿಟ್ಟಿದೆ. ಆಡಳಿತ ವಿರೋಧಿ ಅಲೆಗೆ ಶಿವರಾಜ್ ಸಿಂಗ್ ಚೌಹಾಣ್ ಅಧಿಕಾರ ಕಳೆದುಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ. ಅತಂತ್ರ ವಿಧಾನಸಭೆ ನಿರ್ವಣವಾಗುವ ಸಾಧ್ಯತೆಯಿದ್ದರೂ ಬಿಎಸ್​ಪಿ ಹಾಗೂ ಪಕ್ಷೇತರರ ಬೆಂಬಲದಿಂದ ಕಾಂಗ್ರೆಸ್ ಅಧಿಕಾರ ಹಿಡಿಯುವ ಸಾಧ್ಯತೆಯಿದೆ. ಬಿಜೆಪಿ ನಾಯಕಿ ಉಮಾ ಭಾರತಿ 2003ರಲ್ಲಿ ಮಧ್ಯಪ್ರದೇಶ ಸಿಎಂ ಆಗಿದ್ದರು. 2005ರಲ್ಲಿ ಮುಖ್ಯಮಂತ್ರಿ ಹುದ್ದೆಗೆ ಬಂದಿದ್ದ ಶಿವರಾಜ್ ಸಿಂಗ್ ಚೌಹಾಣ್ ಪ್ರಶ್ನಾತೀತ ನಾಯಕರಾಗಿ ಬೆಳೆದಿದ್ದರು. ಆದರೆ ರಾಹುಲ್ ಗಾಂಧಿ, ಕಮಲ್​ನಾಥ್, ಜ್ಯೋತಿರಾದಿತ್ಯ ಸಿಂಧಿಯಾ ತಂಡ ಚೌಹಾಣ್ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದ್ದಾರೆ. ಮೃದು ಹಿಂದುತ್ವ, ಗೋ ರಕ್ಷಣೆ, ರಾಮನಾಮ ಜಪದಂಥ ಪ್ರಯೋಗಗಳನ್ನು ಮೊದಲ ಬಾರಿಗೆ ಕಾಂಗ್ರೆಸ್ ಬಳಕೆ ಮಾಡಿ ಗೆಲುವಿನ ದಡ ತಲುಪಿದೆ.

ಏಕಾಂಗಿ ಶಿವರಾಜ್: ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಪ್ರಶ್ನಾತೀತ ನಾಯಕರಾಗಿದ್ದ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಎರಡನೇ ಹಂತದ ನಾಯಕರ ಕೊರತೆ ತೀವ್ರವಾಗಿತ್ತು. ಆಡಳಿತ ವಿರೋಧಿ ಅಲೆಯಿದ್ದರೂ ಮುಖ್ಯಮಂತ್ರಿ ಮೇಲೆ ಅನುಕಂಪವಿತ್ತು. ಇದೇ ಕಾರಣಕ್ಕೆ ಛತ್ತೀಸ್​ಗಢ ಹಾಗೂ ರಾಜಸ್ಥಾನ ಮಾದರಿಯ ಹೀನಾಯ ಸೋಲಿನಿಂದ ಮಧ್ಯಪ್ರದೇಶ ಬಿಜೆಪಿ ಪಾರಾಗಿದೆ. ಆದರೆ ಕಾಂಗ್ರೆಸ್ ಕಮಲ್-ಸಿಂಧಿಯಾ-ದಿಗ್ವಿಜಯ್ ತ್ರಿವಳಿ ಹೋರಾಟದ ಮುಂದೆ ಚೌಹಾಣ್ ಏಕಾಂಗಿ ಹೋರಾಟ ಮಂಕಾಯಿತು. ಕಳೆದ ಒಂದೂವರೆ ದಶಕಗಳಿಂದ ಅಧಿಕಾರದಿಂದ ದೂರವಿದ್ದ ಕಾಂಗ್ರೆಸ್ ಪಾಳಯದಲ್ಲಿ ಇದೇ ಮೊದಲ ಬಾರಿಗೆ ಒಗ್ಗಟ್ಟು ಕಾಣಿಸಿಕೊಂಡಿತ್ತು. ಪಕ್ಷದ ಉಳಿವಿಗಾಗಿ ಮುಖ್ಯಮಂತ್ರಿ ಗಾದಿಯ ಚರ್ಚೆ ಬದಿಗಿಟ್ಟು ಸಂಘಟಿತರಾಗಿ ಕೆಲಸ ಮಾಡಿದ್ದರು.

30 ಭಿನ್ನರ ಕಾಟ

ಮಧ್ಯಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​ಗೆ 30 ಭಿನ್ನರ ಕ್ಷೇತ್ರಗಳು ಭಾರಿ ಹೊಡೆತ ನೀಡಿವೆ. ಇದರಲ್ಲಿ 17 ಬಿಜೆಪಿಗೆ ಸೇರಿದ್ದು, 14 ಸೀಟುಗಳನ್ನು ಕಳೆದುಕೊಂಡಿದೆ. ಈ ಬಾರಿ ಚುನಾವಣೆಯಲ್ಲಿ ಹೊಸಬರಿಗೆ ಅವಕಾಶ ನೀಡುವ ಸಲುವಾಗಿ ಒಟ್ಟು 27 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಇದಕ್ಕೆ ಭಿನ್ನ ಧ್ವನಿಯೂ ಇದ್ದು ಇನ್ನಷ್ಟು ಹೊಸಬರಿಗೆ ಕೊಟ್ಟಿದ್ದರೆ ಆಡಳಿತ ವಿರೋಧಿ ಅಲೆ ಕಡಿಮೆ ಮಾಡಬಹುದಿತ್ತು ಎಂಬ ವಾದವೂ ಇದೆ.

ರೈತರು, ಮೇಲ್ವರ್ಗ ಕಿಚ್ಚು!

ಮಧ್ಯಪ್ರದೇಶದ ಆಡಳಿತ ವಿರೋಧಿ ಅಲೆಗೆ ರೈತರು ಹಾಗೂ ಮೇಲ್ವರ್ಗಗಳ ಹೋರಾಟವು ಕಿಚ್ಚು ಹಚ್ಚಿತು. ರೈತರ ಹೋರಾಟ ದೇಶ ಮಟ್ಟದಲ್ಲಿ ಸುದ್ದಿ ಮಾಡಿದರೂ ತ್ವರಿತ ಕ್ರಮಕ್ಕೆ ಬಿಜೆಪಿ ಮುಂದಾಗಲಿಲ್ಲ. ಅದನ್ನೇ ಪ್ರಮುಖ ವಿಚಾರವನ್ನಾಗಿಸಿಕೊಂಡ ಕಾಂಗ್ರೆಸ್, ಯಾತ್ರೆ ಹಾಗೂ ಸಾಲಮನ್ನಾ ವಿಚಾರದ ಮೂಲಕ ಬಿಜೆಪಿಗೆ ಇನ್ನಷ್ಟು ನಷ್ಟವಾಗುವಂತೆ ನೋಡಿಕೊಂಡಿತು. ಇದಕ್ಕೆ ತುಪ್ಪ ಸುರಿಯುವಂತೆ ಬಿಜೆಪಿಯ ಪ್ರಮುಖ ಮತಬ್ಯಾಂಕ್ ಆಗಿದ್ದ ಹಿಂದುಳಿದ ಹಾಗೂ ಮೇಲ್ವರ್ಗಗಳ ಕಣ್ಣು ಕೆಂಪಗಾಯಿತು. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಹಿತ ಕಾಪಾಡಲು ಕೇಂದ್ರ ಸರ್ಕಾರ ಜಾರಿ ಮಾಡಿದ ಸುಗ್ರೀವಾಜ್ಞೆ ಕಾಂಗ್ರೆಸ್​ಗೆ ಪರೋಕ್ಷ ಲಾಭ ತಂದುಕೊಟ್ಟಿತು. ಮೇಲ್ವರ್ಗಗಳು ಬಿಜೆಪಿಯಿಂದ ದೂರವಾಗಿ ಕಾಂಗ್ರೆಸ್​ನತ್ತ ಒಲವು ತೋರಿದವು. ಇದಕ್ಕೆ ಪೂರಕವೆಂಬಂತೆ ಉದ್ದೇಶಪೂರ್ವಕವಾಗಿಯೇ ದಲಿತರ ಮತಬ್ಯಾಂಕ್ ಹೊಂದಿರುವ ಬಿಎಸ್​ಪಿಯಿಂದ ದೂರ ಇರುವ ನಿರ್ಧಾರಕ್ಕೆ ಕಮಲ್​ನಾಥ್ ನಿರ್ಧರಿಸಿದರು. ಇದರಿಂದ ಕಾಂಗ್ರೆಸ್ ಮತಪ್ರಮಾಣ ಶೇ.5 ಹೆಚ್ಚಳವಾದರೆ, ಬಿಜೆಪಿಯು ಶೇ.4 ಮತಗಳನ್ನು ಕಳೆದುಕೊಂಡಿತು. ಆಡಳಿತ ವಿರೋಧಿ ಅಲೆ ಎಷ್ಟರ ಮಟ್ಟಿಗೆ ಹೊಡೆತ ನೀಡಿದೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆಯೆಂದರೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಮತ ಅಂತರಕ್ಕಿಂತ ಹೆಚ್ಚು ನೋಟಾ ಚಲಾವಣೆಯಾಗಿದೆ. ಒಟ್ಟಾರೆ ರಾಜ್ಯದಲ್ಲಿ ಶೇ.1.5 ಜನರು ನೋಟಾ ಒತ್ತಿದ್ದಾರೆ.

ಯಾರು ಮುಖ್ಯಮಂತ್ರಿ?

ಹಿರಿಯ ನಾಯಕ ಕಮಲ್​ನಾಥ್ ಸಿಎಂ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಆರಂಭಿಕ ಅವಧಿಗೆ ಕಮಲ್​ನಾಥ್ ಸಿಎಂ ಯಾಗಲಿದ್ದು, ರಾಹುಲ್ ಆಪ್ತ ಜ್ಯೋತಿರಾದಿತ್ಯ ಸಿಂಧಿಯಾ ಅವರು ಉಪಮುಖ್ಯಮಂತ್ರಿ ಹುದ್ದೆ ನಿಭಾಯಿಸುವ ಸಾಧ್ಯತೆಯಿದೆ.

ಬಿಜೆಪಿ ಹಿನ್ನಡೆಗೆ ಕಾರಣ

 • ಶಿವರಾಜ್ ಸಿಂಗ್ ಏಕಾಂಗಿ ಹೋರಾಟ
 • ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಹಿತ ಕಾಪಾಡಲು ತಂದ ಸುಗ್ರೀವಾಜ್ಞೆಯಿಂದ ಮೇಲ್ವರ್ಗಗಳ ಮತದಾರರ ಆಕ್ರೋಶ
 • ರೈತರ ಸಮಸ್ಯೆಗೆ ಸೂಕ್ತ ಸ್ಪಂದನೆ ನೀಡದಿರುವುದು
 • ಮೊದಲ ಬಾರಿಗೆ ಕಾಂಗ್ರೆಸ್ ನಾಯಕರ ಒಗ್ಗಟ್ಟಿನ ಹೋರಾಟ

ಕೈ ತೆಕ್ಕೆಗೆ ರಾಜೇಸ್ಥಾನ

ಜೈಪುರ: ನಿರೀಕ್ಷೆಯಂತೆ ರಾಜಸ್ಥಾನದಲ್ಲಿ ಆಡಳಿತಾರೂಢ ಬಿಜೆಪಿಗೆ ಹಿನ್ನಡೆಯಾಗಿದೆ. ಸಿಎಂ ವಸುಂಧರಾ ರಾಜೇ ಆಡಳಿತದ ವಿರುದ್ಧ ಅಸಮಾಧಾನಗೊಂಡಿದ್ದ ಜನರು ಕಾಂಗ್ರೆಸ್​ಗೆ ಅಧಿಕಾರ ನೀಡಿದ್ದಾರೆ. ಬಹುತೇಕ ಸಮೀಕ್ಷೆಗಳು ಬಿಜೆಪಿ ಸೋಲಲಿದೆ ಎಂದು ಸುಳಿವು ಕೊಟ್ಟಿದ್ದವು. ಪ್ರಧಾನಿ ನರೇಂದ್ರ ಮೋದಿ ಬಿರುಸಿನ ಪ್ರಚಾರ ನಡೆಸಿದ್ದರು. ಇದರಿಂದ ಕಾಂಗ್ರೆಸ್ ಎದುರು ಹೀನಾಯ ಸೋಲು ಕಾಣುವುದರಿಂದ ಕಮಲ ಪಾಳಯ ಪಾರಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ರಾಜ್ಯ ಕಾಂಗ್ರೆಸ್​ನ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಮತ್ತು ಯುವ ನಾಯಕ ಸಚಿನ್ ಪೈಲಟ್ ನಡುವಿನ ಸಾಮರಸ್ಯದ ಚುನಾವಣಾ ಪ್ರಚಾರ ಬಿಜೆಪಿಗೆ ಭಾರಿ ಹೊಡೆತ ಕೊಟ್ಟಿದೆ. ಕಾಂಗ್ರೆಸ್​ಗೆ ಸರಳ ಬಹುಮತ ಖಚಿತವಾಗಿದೆ. ಆದರೂ ಗೆಲುವು ಸಾಧಿಸಿರುವ ಪಕ್ಷೇತರ ಅಭ್ಯರ್ಥಿಗಳನ್ನು ಸಂರ್ಪಸಿ, ಕಾಂಗ್ರೆಸ್ ನಾಯಕರು ಬೆಂಬಲ ಕೋರಿದ್ದಾರೆ.

ಗೆಹ್ಲೋಟ್​ಗೆ ಸಿಎಂ ಹುದ್ದೆ, ಪೈಲಟ್​ಗೆ ಡಿಸಿಎಂ ಹುದ್ದೆ ಲಭಿಸಲಿದೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ. 1998-2003 ಹಾಗೂ 2008-2013 ಅವಧಿಗೆ ಗೆಹ್ಲೋಟ್ ಸಿಎಂ ಆಗಿದ್ದರು.

ಸರ್ಕಾರ ರಚನೆಗೆ ಸಿದ್ಧತೆ: ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಈಗಾಗಲೇ ಬಿಜೆಪಿಯೇತರ ಪಕ್ಷಗಳು ಮತ್ತು ಜಯಿಸಿರುವ ಸ್ವತಂತ್ರ ಅಭ್ಯರ್ಥಿಗಳೊಂದಿಗೆ ಸಚಿನ್ ಪೈಲಟ್ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ನಮ್ಮ ಸಿದ್ಧಾಂತ ಒಪು್ಪವ ಎಲ್ಲರೊಂದಿಗೂ ಸಂಪರ್ಕದಲ್ಲಿದ್ದೇವೆ. ಜನಾದೇಶ ಸಂಪೂರ್ಣವಾಗಿ ಬಿಜೆಪಿ ವಿರುದ್ಧವಾಗಿದೆ. ಅಹಂಕಾರದ ರಾಜಕಾರಣಕ್ಕೆ ಫಲಿತಾಂಶ ಭಾರಿ ಪೆಟ್ಟು ಕೊಟ್ಟಿದೆ ಎಂದು ಸಚಿನ್ ಹೇಳಿದ್ದಾರೆ.

ಬಿಜೆಪಿ ಹಿರಿಯ ನಾಯಕ ಜಸ್ವಂತ್ ಸಿಂಗ್ ಪುತ್ರ ಮಾನವೇಂದ್ರ ಸಿಂಗ್ ಚುನಾವಣೆ ಘೋಷಣೆಯಾದ ಬಳಿಕ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಸಿಎಂ ರಾಜೇ ವಿರುದ್ಧ ಸ್ಪರ್ಧಿಸಿ, ಬಿಜೆಪಿ ಸರ್ಕಾರದ ವಿರುದ್ಧ ಬಿರುಸಿನ ಪ್ರಚಾರ ಮಾಡಿದ್ದು ಗಮನಾರ್ಹ. ಆದರೆ ರಾಜೇ ಎದುರು ಅವರು ಸೋತಿದ್ದಾರೆ.

ಏಕೈಕ ಮುಸ್ಲಿಂ ಅಭ್ಯರ್ಥಿಗೆ ಸೋಲು

ಬಿಜೆಪಿ ಕಣಕ್ಕಿಳಿಸಿದ್ದ ಏಕೈಕ ಮುಸ್ಲಿಂ ಅಭ್ಯರ್ಥಿ ಯೂನುಸ್ ಖಾನ್, ಕಾಂಗ್ರೆಸ್​ನ ಸಚಿನ್ ಪೈಲಟ್ ಎದುರು ಸೋತಿದ್ದಾರೆ. ರಾಜೇ ಸಂಪುಟದಲ್ಲಿ ಖಾನ್ ಸಾರಿಗೆ ಸಚಿವರಾಗಿದ್ದರು. ಎರಡು ಬಾರಿ ಸಂಸದರಾಗಿರುವ ಸಚಿನ್​ಗೆ ಇದು ಮೊದಲ ವಿಧಾನಸಭೆ ಚುನಾವಣೆ.

 

ಸಿಎಂ ಅಭ್ಯರ್ಥಿ ಯಾರೆಂದು ರಾಹುಲ್ ಗಾಂಧಿ ಮತ್ತು ಪಕ್ಷದ ಶಾಸಕರು ನಿರ್ಧರಿಸಲಿದ್ದಾರೆ. ರಾಜಸ್ಥಾನದಲ್ಲಿ ಕೈ ಪಾಳಯದ ಗೆಲುವು ದೇಶಾದ್ಯಂತ ವಿಸ್ತರಿಸಲಿದೆ. ಜನರ ಆಶೀರ್ವಾದ ನಮ್ಮ ಮೇಲಿದೆ.

| ಸಚಿನ್ ಪೈಲಟ್, ಕಾಂಗ್ರೆಸ್ ನಾಯಕ

ಬಿಜೆಪಿ ಹಿನ್ನಡೆಗೆ ಕಾರಣ

 • ಸಿಎಂ ರಾಜೇ ರಾಜ ವಂಶಸ್ಥೆ ಎಂಬ ಠೀವಿ ಪ್ರದರ್ಶಿಸಿ ಜನಸಾಮಾನ್ಯರಿಂದ ದೂರ ಉಳಿದಿದ್ದು.
 • ರೈತರ ಸಾಲ ಮನ್ನಾ ವಿಚಾರವಾಗಿ ಸರ್ಕಾರದಿಂದ ವಿಳಂಬ ನಡೆ. ಕಾಂಗ್ರೆಸ್ ಸರ್ಕಾರ ರಚನೆಯಾದರೆ 10 ದಿನದಲ್ಲಿ ಸಾಲ ಮನ್ನಾ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್​ರಿಂದ ಚುನಾವಣಾ ಪ್ರಚಾರದಲ್ಲಿ ಘೋಷಣೆ.
 • ರಾಜ್ಯ ಬಿಜೆಪಿ ಅಧ್ಯಕ್ಷ ನೇಮಕಾತಿಯಲ್ಲಿ ಕೇಂದ್ರದ ನಾಯಕರೊಂದಿಗೆ ಜಟಾಪಟಿ. ಆರ್​ಎಸ್​ಎಸ್ ಜತೆಗೂ ರಾಜೇ ಅಸಮಾಧಾನ.
 • ಸಿಎಂ ರಾಜೇ ಸೇರಿ ಸಂಪುಟ ಸಚಿವರ ಕಾರ್ಯವೈಖರಿಗೆ ಜನರ ಅಸಮಾಧಾನ.
 • ರಜಪೂತ ಸಮುದಾಯದವನಾದ ಪಾತಕಿ ಆನಂದಪಾಲ್ ಸಿಂಗ್​ನನ್ನು ಪೊಲೀಸರು ಎನ್​ಕೌಂಟರ್ ಮಾಡಿದ್ದು ಸಮುದಾಯದ ಜನರನ್ನು ಕೆರಳಿಸಿತ್ತು. ಬಹುಸಂಖ್ಯಾತ ರಜ ಪೂತರು ಬಿಜೆಪಿ ವಿರುದ್ಧ ನಿಲ್ಲಲಿದ್ದಾರೆ ಎಂದು ಸಮೀಕ್ಷೆಗಳು ಎಚ್ಚರಿಸಿದ್ದವು.

ತೆಲಂಗಾಣದಲ್ಲಿ ಕೆಸಿಆರ್ ಕಿಂಗ್

ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ 88 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್) ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಮರಳಿದೆ. ತೆಲಂಗಾಣ ಅಸ್ಮಿತೆ ವಿಚಾರವನ್ನೇ ಮುಂದಿಟ್ಟುಕೊಂಡು ಪ್ರಚಾರ ಕೈಗೊಂಡಿದ್ದ ಸಿಎಂ ಕೆ. ಚಂದ್ರಶೇಖರ್ ರಾವ್, ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಕೂಟ ವನ್ನು ಸುಲಭವಾಗಿ ಸೋಲಿಸಿದ್ದಾರೆ. ಮಹಾ ಮೈತ್ರಿಕೂಟ ಕೇವಲ 21 ಸ್ಥಾನ ಗಳಿಸಿದೆ. ಅದರಲ್ಲಿ ಕಾಂಗ್ರೆಸ್ 19 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಟಿಡಿಪಿ ಕೇವಲ 2 ಸ್ಥಾನ ಗಳಿಸಿದೆ. ಕಾಂಗ್ರೆಸ್ 93 ಕ್ಷೇತ್ರಗಳಲ್ಲಿ, ಟಿಡಿಪಿ 14 ಕ್ಷೇತ್ರಗಳಲ್ಲಿ, ತೆಲಂಗಾಣ ಜನ ಸಮಿತಿ 8 ಕ್ಷೇತ್ರಗಳಲ್ಲಿ ಮತ್ತು ಸಿಪಿಐ 3 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು. ತೆಲಂಗಾಣ ಜನ ಸಮಿತಿ ಮತ್ತು ಸಿಪಿಐ ಒಂದೂ ಕ್ಷೇತ್ರದಲ್ಲಿ ಗೆದ್ದಿಲ್ಲ. ಟಿಆರ್​ಎಸ್​ಗೆ ಬೆಂಬಲ ನೀಡಿದ್ದ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ 7 ಕ್ಷೇತ್ರಗಳಲ್ಲೂ ಗೆಲವು ಸಾಧಿಸಿದೆ. ಬಿಜೆಪಿ ಕೇವಲ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಗೆದ್ದ ತಂತ್ರ

2014ರಲ್ಲಿ ಪ್ರತ್ಯೇಕ ರಾಜ್ಯವಾದ ಬಳಿಕ ನಡೆದಿದ್ದ ಮೊದಲ ವಿಧಾನಸಭೆ ಚುನಾವಣೆಯಲ್ಲಿ ಬಹುಮತದೊಂದಿಗೆ ಅಧಿಕಾರ ಹಿಡಿದಿದ್ದ ಟಿಆರ್​ಎಸ್​ನ ಆಡಳಿತಾವಧಿ 2019ರ ಮೇನಲ್ಲಿ ಮುಕ್ತಾಯವಾಗಲಿತ್ತು. ಆದರೆ, ಹೊಸ ರಾಜ್ಯ ರಚನೆ, ಅದರ ಅಭಿವೃದ್ಧಿಗಾಗಿ ಹಾಕಿದ್ದ ಶ್ರಮದ ಮೇಲೆ ಅಪಾರ ನಂಬಿಕೆ ಹೊಂದಿದ್ದ ಸಿಎಂ ಕೆ. ಚಂದ್ರಶೇಖರ್ ರಾವ್ ಅವಧಿ ಮುಗಿಯಲು 9 ತಿಂಗಳು ಮೊದಲೇ ಚುನಾವಣೆಗೆ ಹೋಗುವ ನಿರ್ಧಾರ ಕೈಗೊಂಡರು. ಅವರ ಈ ತಂತ್ರಗಾರಿಕೆ ಯಶಸ್ವಿಯಾಗಿದೆ.

ಜನಪ್ರಿಯ ಸಿಎಂ

ಕೆಸಿಆರ್ ಗೆಲುವಿಗೆ ಅವರು ಜಾರಿಗೊಳಿಸಿದ್ದ ಹಲವು ಕಲ್ಯಾಣ ಯೋಜನೆಗಳು ಮಹತ್ವದ ಪಾತ್ರ ವಹಿಸಿವೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ಬದಲು ಮುಂಗಾರು ಮತ್ತು ಹಿಂಗಾರು ಹಂಗಾಮಿಗೆ ಎಕರೆಗೆ 8 ಸಾವಿರ ರೂ.ನಂತೆ ರೈತರಿಗೆ ಧನಸಹಾಯ ನೀಡಿದ್ದರು. ಹಿಂದು ಮತ್ತು ಮುಸ್ಲಿಂ ಹೆಣ್ಣುಮಕ್ಕಳಿಗಾಗಿ ಕಲ್ಯಾಣ ಲಕ್ಷ್ಮಿ, ಶಾದಿ ಮುಬಾರಕ್ ಎಂಬ ವಿವಾಹ ಯೋಜನೆಗಳನ್ನು ಜಾರಿಗೊಳಿಸಿದ್ದರು. ವಿವಾಹವಾಗುವ ಹೆಣ್ಣುಮಕ್ಕಳಿಗೆ ತಲಾ 1 ಲಕ್ಷ ರೂ. ಧನಸಹಾಯ, ಹಿರಿಯ ನಾಗರಿಕರು, ಅಂಗವಿಕಲರು, ವಿಧವೆಯರಿಗೂ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಿದರು. ಇದರಿಂದ ಅವರ ಜನಪ್ರಿಯತೆಯೂ ಹೆಚ್ಚಾಗಿತ್ತು.

57 ಸಾವಿರ ಮತ ಅಂತರದ ಗೆಲುವು

ತೆಲಂಗಾಣದ ಸಿಎಂ ಕೆ. ಚಂದ್ರಶೇಖರ್ ರಾವ್ ಗಾಜ್ವೆಲ್ ಕ್ಷೇತ್ರದಲ್ಲಿ 57,321 ಮತಗಳ ಅಂತರದಿಂದ ಕಾಂಗ್ರೆಸ್​ನ ವಾಂಟೇರು ಪ್ರತಾಪ್ ರೆಡ್ಡಿ ವಿರುದ್ಧ ಗೆಲುವು ಸಾಧಿಸಿದರು.


ಛತ್ತೀಸ್​ಗಢ ಕೇಸರಿ ಕೋಟೆ ಛಿದ್ರ

ರಾಯಪುರ: ಒಂದೂವರೆ ದಶಕದಿಂದ ರಮಣ್ ಸಿಂಗ್ ಕಟ್ಟಿದ್ದ ಕೇಸರಿ ಕೋಟೆಯನ್ನು ಕಾಂಗ್ರೆಸ್ ಛಿದ್ರಗೊಳಿಸಿದೆ. ಈ ಮೂಲಕ ಸತತ ನಾಲ್ಕನೇ ಬಾರಿ ಸಿಎಂ ಆಗಲು ಬಯಸಿದ್ದ ರಮಣ್ ಸಿಂಗ್ ಕನಸೂ ಭಗ್ನಗೊಂಡಿದೆ. ಚುನಾವಣೆಯಲ್ಲಿ ಬಿಜೆಪಿ ಸೋಲುತ್ತಿದ್ದಂತೆ ರಾಜ್ಯಪಾಲೆ ಆನಂದಿಬೆನ್ ಪಟೇಲ್​ರನ್ನು ಭೇಟಿಯಾಗಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಉತ್ತಮ ಆಡಳಿತ ಮುಂದಿಟ್ಟುಕೊಂಡು ರಮಣ್ ಸಿಂಗ್ ಚುನಾವಣೆ ಎದುರಿಸಿದ್ದರು. ಆದರೆ, ಬಿಜೆಪಿ ಭದ್ರಕೋಟೆಯಾದ ಜಗದಾಳ್​ಪುರ, ನಾರಾಯಣಪುರ, ಡೋಂಗ್ರಾಗಢಗಳಲ್ಲಿ ಭಾರಿ ಹಿನ್ನೆಡೆಯಾಗಿದೆ. ಸಿಎಂ ರಮಣ್ ಸಿಂಗ್ ರಾಜನಂದಗಾಂವ್ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಸಂಬಂಧಿ ಕರುಣಾ ಶುಕ್ಲಾರನ್ನು ಸೋಲಿಸಿದ್ದಾರೆ.

ಬಿಜೆಪಿ ಸೋಲಿಗೆ ಕಾರಣವೇನು?: ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಂಡ ಕಾಂಗ್ರೆಸ್, ಮೂರನೇ ಎರಡಕ್ಕಿಂತಲೂ ಹೆಚ್ಚಿನ ಬಹುಮತ ಗಳಿಸಿದೆ. ಆದರೆ, ಬಿಎಸ್​ಪಿ ಅಧಿನಾಯಕಿ ಮಾಯಾವತಿ, ಮಾಜಿ ಸಿಎಂ ಅಜಿತ್ ಜೋಗಿ ಅವರ ಜನತಾ ಕಾಂಗ್ರೆಸ್ ಛತ್ತೀಸ್​ಗಢ (ಜೆಸಿಸಿಜೆ) ಜತೆ ಮಾಡಿಕೊಂಡ ಮೈತ್ರಿ ಅಷ್ಟೇನೂ ಫಲಪ್ರದವಾಗಲಿಲ್ಲ. ಛತ್ತೀಸ್​ಗಢದಲ್ಲಿ ಎರಡು ಹಂತದಲ್ಲಿ ಮತದಾನವಾಗಿತ್ತು. ನಕ್ಸಲ್ ಪೀಡಿತ 18 ಕ್ಷೇತ್ರಗಳಲ್ಲಿ ನ. 12ರಂದು ಉಳಿದ 72 ಕ್ಷೇತ್ರಗಳಿಗೆ ನ.20ರಂದು ಮತದಾನ ನಡೆದಿತ್ತು. ಒಟ್ಟಾರೆ ಶೇ. 76.35 ಮತದಾನವಾಗಿತ್ತು. ಬಿಜೆಪಿ 40, ಕಾಂಗ್ರೆಸ್ 44 ಮತ್ತು ಇತರರು 6 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಮತದಾನೋತ್ತರ ಸಮೀಕ್ಷೆಗಳು ಹೇಳಿದ್ದವು. ಆದರೆ, ಕಾಂಗ್ರೆಸ್​ಗೆ ಭಾರಿ ಜಯಭೇರಿ ಬಾರಿಸಿದೆ.

ಸಿಎಂ ಯಾರು?

ಛತ್ತೀಸ್​ಗಢ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭೂಪೇಶ್ ಬಗೇಲ್, ವಿಸರ್ಜಿತ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಟಿ.ಎಸ್. ಸಿಂಗದೇವ್ ಮತ್ತು ಕಾಂಗ್ರೆಸ್​ನ ಹಿರಿಯ ಮುಖಂಡ ತಾಮ್ರಧ್ವಜ್ ಸಾಹು ಅವರ ಹೆಸರು ಮುಖ್ಯಮಂತ್ರಿ ಹುದ್ದೆಗೆ ಬಲವಾಗಿ ಕೇಳಿಬರುತ್ತಿದೆ. ಅಂತಿಮ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ಕೈಗೊಳ್ಳಲಿದೆ.

ಜನಾದೇಶವನ್ನು ಗೌರವದಿಂದ ಸ್ವೀಕರಿಸುತ್ತೇವೆ. ಸೋಲಿನ ಹೊಣೆಯನ್ನು ನಾನೇ ಹೊರುವೆ. ಒಂದೂವರೆ ದಶಕ ರಾಜ್ಯದ ಜನರ ಸೇವೆ ಮಾಡುವ ಮಹಾಸೌಭಾಗ್ಯ ದೊರಕಿದ್ದು ನನ್ನ ಅದೃಷ್ಟ. ಜಯಶಾಲಿ ಯಾದ ಕಾಂಗ್ರೆಸ್​ಗೆ ಅಭಿನಂದನೆ. ಬಲಿಷ್ಠ ವಿರೋಧ ಪಕ್ಷವಾಗಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುವೆವು.

| ಡಾ.ರಮಣ್ ಸಿಂಗ್, ನಿರ್ಗಮಿತ ಸಿಎಂ


ಈಶಾನ್ಯ ಕಾಂಗ್ರೆಸ್​ಮುಕ್ತ

ಐಜ್ವಾಲ್: ಮಿಜೋರಾಂನಲ್ಲಿ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದ್ದ ಆಡಳಿತರೂಢ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದೆ. ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್​ಎಫ್) ಭರ್ಜರಿ ಗೆಲುವು ದಾಖಲಿಸಿದೆ. ಕಾಂಗ್ರೆಸ್ ಬಳಿಯಿದ್ದ ಕೊನೆಯ ಈಶಾನ್ಯ ರಾಜ್ಯವೂ ಕೈತಪ್ಪಿದ್ದು, ಈಶಾನ್ಯ ಭಾರತ ಕಾಂಗ್ರೆಸ್ ಮುಕ್ತವಾಗಿದೆ. 5 ಬಾರಿ ಮುಖ್ಯಮಂತ್ರಿಯಾಗಿದ್ದ ಲಾಲ್ ಥನಹಾವಲಾಗೆ ಭಾರಿ ಮುಖಭಂಗವಾಗಿದ್ದು, ಚಂಫಾಯಿ ದಕ್ಷಿಣ ಮತ್ತು ಸೆರಛಿಪ್ ಎರಡೂ ಕ್ಷೇತ್ರಗಳಲ್ಲಿ ಪರಾಭವ ಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲ ಕೆ.ರಾಜಶೇಖರನ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಮಿಜೋರಾಂನ ರಾಜಕೀಯದಲ್ಲಿ ಪ್ರತಿ ಹತ್ತು ವರ್ಷಕ್ಕೆ ಅಧಿಕಾರ ಬದಲಾಗುವ ಸಂಪ್ರದಾಯ ಈ ಚುನಾವಣೆಯಲ್ಲೂ ಪುನರಾವರ್ತನೆಯಾಗಿದೆ. ಕಾಂಗ್ರೆಸ್ ಸೋಲಿಗೆ ಆಡಳಿತ ವಿರೋಧಿ ಅಲೆ ಕಾರಣವಾದರೆ, ಈ ಅಲೆಯನ್ನು ಎಂಎನ್​ಎಫ್ ವಿಜಯದ ಮೆಟ್ಟಿಲನ್ನಾಗಿ ಮಾಡಿಕೊಂಡು ಮೂರನೇ ಎರಡರಷ್ಟು ಬಹುಮತ ಪಡೆಯುವ ಮೂಲಕ ಸುಭದ್ರ ಸ್ಥಿತಿಯಲ್ಲಿದೆ.

ಖಾತೆ ತೆರೆದ ಬಿಜೆಪಿ

ಮಿಜೋರಾಂನಲ್ಲಿ ಬಿಜೆಪಿ ಖಾತೆ ತೆರೆದಿದೆ. ಲುಂಗಲೈ ಜಿಲ್ಲೆಯ ತುಚಿವಾಂಗ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಬುದ್ಧ ಧನ್ ಚಕ್ಮಾ ಜಯಗಳಿಸಿದ್ದಾರೆ.

ಜೋರಾಮ್ಂಗಾ 3ನೇ ಬಾರಿ ಸಿಎಂ

1988ರಿಂದ 2008ರವರೆಗೆ ಮುಖ್ಯಮಂತ್ರಿ ಆಗಿದ್ದ ಎಂಎನ್​ಎಫ್ ಅಧ್ಯಕ್ಷ ಜೋರಾಮ್ಂಗಾ ಮೂರನೇ ಬಾರಿಗೆ ಸಿಎಂ ಹುದ್ದೆಗೇರುವುದು ಖಚಿತವಾಗಿದೆ. ಅವರು ಮಂಗಳವಾರ ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.

ಚುನಾವಣಾ ಪೂರ್ವ ಸಮೀಕ್ಷೆ

ಚುನಾವಣಾ ಪೂರ್ವ ಸಮೀಕ್ಷೆಗಳು ಎಂಎನ್​ಎಫ್ 18, ಕಾಂಗ್ರೆಸ್ 16, ಇತರರ 6 ಸ್ಥಾನ ದೊರೆಯಬಹುದು ಎಂದು ಅಂದಾಜಿಸಿದ್ದವು. ಎಂಎನ್​ಎಫ್ ಮತ್ತು ಕಾಂಗ್ರೆಸ್ ಎಲ್ಲ 40 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಬಿಜೆಪಿ 39 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು.