More

    ಜೀವಿಜಯ ಮರಳಿದರೆ ಸ್ವಾಗತ: ಧರ್ಮಜ ಉತ್ತಪ್ಪ

    ಮಡಿಕೇರಿ:

    ವಿಧಾನಪರಿಷತ್ ಚುನಾವಣೆ ಸಂದರ್ಭ ಡಾ. ಮಂಥರ್ ಗೌಡ ಅವರನ್ನು ಬೆಂಬಲಿಸಿ ಮಾತನಾಡಿದ್ದ ಬಿ.ಎ. ಜೀವಿಜಯ ಅವರಿಗೆ ಡಾ. ಮಂಥರ್ ಗೌಡ ಈಗ ಹೊರಗಿನ ವ್ಯಕ್ತಿ ಹೇಗೆ ಆದರು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ ಪ್ರಶ್ನಿಸಿದರು. ಬಿಜೆಪಿಯ ತತ್ವ ಸಿದ್ದಾಂತಗಳಿಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಬಿ.ಎ ಜೀವಿಜಯ, ದಿಢೀರನೆ ಅಪ್ಪಚ್ಚು ರಂಜನ್‌ಗೆ ಬೆಂಬಲ ಸೂಚಿಸುವ ಮಾತನಾಡಿದ್ದು, ಅವರಲ್ಲಿದ್ದ ಜಾತ್ಯಾತೀತ ತತ್ವ ಎಲ್ಲಿ ಹೋಯಿತು ಎಂದೂ ಕೇಳಿದರು.

    ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಿಸಲು ೭ ಆಕಾಂಕ್ಷಿಗಳಿದ್ದರು. ಕ್ಷೇತ್ರದ ೪೮ ವಲಯಗಳಲ್ಲೂ ಸಭೆ ನಡೆಸಿದ ಸಂದರ್ಭ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಅಭ್ಯರ್ಥಿಗೆ ಸಂಪೂರ್ಣ ಬೆಂಬಲ ಸೂಚಿಸುವುದಾಗಿ ಎಲ್ಲಾ ಆಕಾಂಕ್ಷಿಗಳು ನಿರ್ಧರಿಸಿದ್ದರು. ಆದರೆ ಇದೀಗ ಅಸಮಾಧಾನಗೊಂಡು ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಸರಿಯಲ್ಲ. ಈಗ ಟಿಕೆಟ್ ಸಿಗದೇ ಇರುವ ಕಾರಣಕ್ಕೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಟಿಯಲ್ಲಿ ಹೇಳಿದರು.

    ಚುನಾವಣೆ ಸಂದರ್ಭ ರಾಜೀನಾಮೆ ಪರ್ವ ಸಾಮಾನ್ಯ. ಆದ್ರೆ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪರವಾಗಿದ್ದಾರೆ. ಬಿಜೆಪಿಯ ಭ್ರಷ್ಟಾಚಾರದಿಂದಾಗಿ ಕಾಂಗ್ರೆಸ್ ಪರವಾದ ವಾತಾವರಣ ಎಲ್ಲೆಡೆ ಸೃಷ್ಟಿಯಾಗಿದೆ. ಈಗಲೂ ಜೀವಿಜಯ ಮನಸ್ಸು ಬದಲಾಯಿಸಿ ಪಕ್ಷದಲ್ಲಿ ಮುಂದುವರಿಯುವ ಯೋಚನೆ ಮಾಡಿದರೆ ಸ್ವಾಗತಿಸುವುದಾಗಿ ತಿಳಿಸಿದರು.

    ಪಕ್ಷದ ಜಿಲ್ಲಾ ಉಪಾಧ್ಯಕ್ಷ ಅನಂತ್ ಕುಮಾರ್ ಅಸಮಾಧಾನಗೊಂಡು ರಾಜೀನಾಮೆ ಘೋಷಿಸಿದ್ದಾರೆ. ನಾನು ಅವರ ಕರೆ ಸ್ವೀಕರಿಸುತ್ತಿಲ್ಲ ಎನ್ನುವ ಕಾರಣ ನೀಡಿರುವುದು ಶುದ್ದ ಸುಳ್ಳು. ಸಾಕಷ್ಟು ಬಾರಿ ಅವರಿಗೆ ಕರೆ ಮಾಡಿದ್ದೇನೆ. ಅವರೇ ಕರೆ ಸ್ವೀಕರಿಸದೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಪಕ್ಷದಲ್ಲಿ ಅವರಿಗೆ ಹೆಚ್ಚಿನ ಅವಕಾಶಗಳಿತ್ತು. ಚುನಾವಣೆ ಸಂದರ್ಭ ಎಲ್ಲರೂ ಒತ್ತಡದಲ್ಲಿ ಇರ್ತೇವೆ. ಈ ವೇಳೆ ವೈಯಕ್ತಿಕ ವಿಚಾರವಾಗಿ ಕೆಲವೊಂದು ನೋವುಂಟಾಗುವ ಸನ್ನಿವೇಶವೂ ಇರುತ್ತದೆ. ನಾನೂ ಕೆಲ ವಿಚಾರಗಳಲ್ಲಿ ನೋವು ಅನುಭವಿಸಿದ್ದೇನೆ. ಎಲ್ಲವನ್ನೂ ಸಹಿಸಿಕೊಂಡು ಮುಂದುವರಿಯಬೇಕಾಗುತ್ತದೆ ಎಂದರು.
    ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಬಿ.ಎ. ಜೀವಿಜಯ ಎರಡನೇ ಹಂತದ ನಾಯಕರಿಗೆ ಮಾರ್ಗದರ್ಶನ ನೀಡುವ ಸ್ಥಾನದಲ್ಲಿರಬೇಕಿತ್ತು. ಇಳಿ ವಯಸ್ಸಿನಲ್ಲಿ ಕಿರಿಯರಿಗೆ ತಮ್ಮ ರಾಜಕೀಯ ಅನುಭವಗಳನ್ನು ಧಾರೆ ಎರೆಯುವ ದೊಡ್ಡತನ ಇರಬೇಕಿತ್ತು. ಮಂಥರ್ ಗೌಡ ಗೆಲುವಿಗೆ ಶ್ರಮಿಸುವುದಾಗಿ ಹಿರಿಯ ನಾಯಕರ ಸಮ್ಮುಖದಲ್ಲಿ ಹೇಳಿದ್ದರು. ಆದರೆ ರಾಜೀನಾಮೆ ನೀಡುವ ಅವಶ್ಯಕತೆ ಇರಲಿಲ್ಲ. ಮತದಾರರೇ ಜಿಲ್ಲೆಯಲ್ಲಿ ಬದಲಾವಣೆ ಬಯಸಿರುವಾಗ ಇಂತಹ ಘಟನೆಗಳು ದುಃಖಕರ ಎಂದರು.

    ಮಾಜಿ ಎಂಎಲ್‌ಸಿ ಅರುಣ್ ಮಾಚಯ್ಯ ಮಾತನಾಡಿ, ಬಿಜೆಪಿ ಸರ್ಕಾರದ ವೈಫಲ್ಯ, ದೌರ್ಬಲ್ಯಗಳೇ ಕಾಂಗ್ರೆಸ್‌ಗೆ ಪ್ರಬಲ ಅಸ್ತ್ರವಾಗಿದೆ. ಜಾತಿ, ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸಿ ಮತ ಪಡೆಯುತ್ತಿದ್ದಾರೆ. ಆದರೆ ಈ ಬಾರಿ ಕೊಡಗಿನ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
    ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಮಂಜುನಾಥ ಗುಂಡೂರಾವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಕಾಂಗ್ರೆಸ್ ನಗರಾಧ್ಯಕ್ಷ ರಾಜೇಶ್ ಯಲ್ಲಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts