ಧ್ವನಿವರ್ಧಕ ಪರವಾನಗಿ ಕೊಡುವವರಾರು?

ಹರೀಶ್ ಮೋಟುಕಾನ, ಮಂಗಳೂರು

ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜಿಸಲು ಸ್ಥಳ ಹಾಗೂ ಧ್ವನಿವರ್ಧಕ ಬಳಸಲು ಪರವಾನಗಿ ಪಡೆಯುವುದು ನಿಯಮ. ಚುನಾವಣಾ ಸಂದರ್ಭ ಈ ಲೈಸೆನ್ಸ್ ನೀಡುವವರು ಯಾರು ಎನ್ನುವುದರ ಬಗ್ಗೆ ಅಧಿಕಾರಿಗಳಲ್ಲೇ ಸರಿಯಾದ ಮಾಹಿತಿ ಇಲ್ಲ. ಇದರಿಂದಾಗಿ ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆದಾಡುವ ಸ್ಥಿತಿ ಎದುರಾಗಿದೆ.

ಚುನಾವಣೆ ಸಂದರ್ಭ ರಾಜಕೀಯೇತರ ಕಾರ್ಯಕ್ರಮ ಆಯೋಜಿಸುವವರಿಗೆ ಸುಲಭವಾಗಬೇಕು ಎನ್ನುವ ಉದ್ದೇಶದಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ. ಆರ್‌ಟಿಒ, ಪಿಡಬ್ಲೂೃಡಿ, ಪೊಲೀಸ್ ಇಲಾಖೆ ಸಿಬ್ಬಂದಿ ವ್ಯವಸ್ಥೆ ಮಾಡಲಾಗಿದೆ. ಆದರೆ ಅವರಿಗೆ ರಾಜಕೀಯ ಹಾಗೂ ರಾಜಕೀಯೇತರ ಕಾರ್ಯಕ್ರಮಗಳ ಪರವಾನಗಿ ಯಾರು ನೀಡಬೇಕು ಎನ್ನುವ ಮಾಹಿತಿ ಇಲ್ಲ.

ನಿಯಮ ಪ್ರಕಾರ, ರಾಜಕೀಯ ಕಾರ್ಯಕ್ರಮಗಳಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿ ಅನುಮತಿ ನೀಡಬೇಕು. ರಾಜಕೀಯೇತರ ಕಾರ್ಯಕ್ರಮಗಳಿಗೆ ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಯಿಂದ ಪರವಾನಗಿ ಪಡೆಯುವಂತೆ ಹಿಂಬರಹ ನೀಡಬೇಕು. ಅವರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ, ಗಂಟೆಯೊಳಗೆ ಆಗಿ ಮುಯಿಯುವ ಕೆಲಸ, ಅವರಿವರಲ್ಲಿ ವಿಚಾರಿಸಿ ಎರಡು, ಮೂರು ದಿನಗಳಾದರೂ ಆಗುವುದಿಲ್ಲ.

ಪೊಲೀಸ್ ವರಿಷ್ಠಾಧಿಕಾರಿಯವರ ವ್ಯಾಪ್ತಿಯಲ್ಲಿ ಧ್ವನಿವರ್ಧಕ ಪರವಾನಗಿ ಪಡೆಯಬೇಕಾದರೆ ಮಂಗಳೂರಿನಲ್ಲಿ ಹಣ ಪಾವತಿಸಿ ರಶೀದಿಯೊಂದಿಗೆ ಬಂಟ್ವಾಳ ಸಹಾಯಕ ಪೊಲೀಸ್ ಅಧೀಕ್ಷಕರ ಮತ್ತು ಪುತ್ತೂರು ಉಪವಿಭಾಗ ಅಧೀಕ್ಷಕರ ಕಚೇರಿಗೆ ಹೋಗಬೇಕಾಗಿದೆ. ಪುತ್ತೂರು ಉಪವಿಭಾಗ ಅಧೀಕ್ಷಕರ ಕಚೇರಿಯಲ್ಲಿ ಈ ಬಗ್ಗೆ ವಿಚಾರಿಸುವಾಗ ಈಗ ಪೊಲೀಸ್ ಇಲಾಖೆಗೆ ಬರುವುದಿಲ್ಲ. ಸಹಾಯಕ ಆಯುಕ್ತರು, ತಹಸೀಲ್ದಾರ್ ನೀಡಬೇಕು ಎನ್ನುತ್ತಾರೆ. ನಿಯಮ ಪ್ರಕಾರ ಧ್ವನಿವರ್ಧಕ ಪರವಾನಗಿ ನೀಡುವ ಅಧಿಕಾರ ಪೊಲೀಸ್ ಇಲಾಖೆಗೆ ಮಾತ್ರ. ಸಮರ್ಪಕ ಮಾಹಿತಿ ಕೊರತೆಯಿಂದ ಅಧಿಕಾರಿಗಳಲ್ಲೇ ಗೊಂದಲವಿದೆ.

ಜಿಲ್ಲಾಧಿಕಾರಿ ಕಚೇರಿಯಿಂದ ಜಿಲ್ಲೆಯ ಎಲ್ಲ ಸಹಾಯಕ ಚುನಾವಣಾಧಿಕಾರಿಗಳಿಗೆ ಸಾರ್ವಜನಿಕರು ಕೇಳುವ ಅನುಮತಿ ವಿವರ ಕಳುಹಿಸಲಾಗುತ್ತದೆ. ಹಾಗಾಗಿ ಮತ್ತೆ ತಾಲೂಕುಗಳ ಚುನಾವಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಚುನಾವಣಾಧಿಕಾರಿ ಹಿಂಬರಹ ಇರುವುದರಿಂದ ಪೊಲೀಸ್ ಇಲಾಖೆ ಪರವಾನಗಿ ನೀಡಬೇಕು. ಆದರೆ ಪೊಲೀಸರಿಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ.

ಇತರ ಕೆಲಸಗಳು ಸ್ಥಗಿತ!: ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಹೆಚ್ಚಿನ ಕೆಲಸಗಳು ಸ್ಥಗಿತಗೊಂಡಿವೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಆಗದವರೂ ಚುನಾವಣಾ ಕರ್ತವ್ಯ ಎಂದು ಸಬೂಬು ನೀಡುತ್ತಿದ್ದಾರೆ. ತಾಲೂಕು ಕೇಂದ್ರಗಳಲ್ಲಿ ಪಡಿತರ ಚೀಟಿ, ಪಹಣಿಪತ್ರ, ಜಾತಿ, ಆದಾಯ ಪ್ರಮಾಣಪತ್ರ ಮೊದಲಾದ ಕೆಲಸಗಳು ನಡೆಯುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳಿಗೆ ಧ್ವನಿವರ್ಧಕ ಪರವಾನಗಿ ಅವಶ್ಯ. ಜಿಲ್ಲಾ ಚುನಾವಣಾಧಿಕಾರಿ ಪೊಲೀಸ್ ಇಲಾಖೆಯಿಂದ ಪಡೆದುಕೊಳ್ಳಲು ಹಿಂಬರಹ ನೀಡಿದ್ದಾರೆ. ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಬಂಟ್ವಾಳ, ಪುತ್ತೂರಿಗೆ ಹೋಗುವಂತೆ ಹೇಳಿದ್ದಾರೆ. ಅಲ್ಲಿ ವಿಚಾರಿಸುವಾಗ ಎಸಿ, ತಹಸೀಲ್ದಾರ್ ಕಚೇರಿಗೆ ಹೋಗುವಂತೆ ಹೇಳಿದ್ದಾರೆ.
|ರಮೇಶ್, ಸಾರ್ವಜನಿಕ ಬೆಳ್ತಂಗಡಿ