ಮೈತ್ರಿ ಗೊಂದಲ ಬಿಜೆಪಿಗೆ ಲಾಭ?

ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದರೂ ಇನ್ನೂ ಸೀಟು ಹಂಚಿಕೆ ಗೊಂದಲದಲ್ಲೇ ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳು ಮುಳುಗಿದ್ದು, ಚುನಾವಣೆ ಪ್ರಚಾರಕ್ಕೆ ಅತ್ಯಂತ ಕಡಿಮೆ ಸಮಯ ದೊರಕುವ ಅಪಾಯ ಅಭ್ಯರ್ಥಿಗಳನ್ನು ಕಾಡುತ್ತಿದೆ. ಇನ್ನೊಂದೆಡೆ, ರಾಜ್ಯದಲ್ಲಿ ಸರ್ಕಾರ ರಚನೆ ಮನಸ್ಥಿತಿಯಿಂದ ಸಂಪೂರ್ಣ ಹೊರಬಂದು ಲೋಕಸಭಾ ಚುವಾನಣೆ ತಯಾರಿಯಲ್ಲಿರುವ ಬಿಜೆಪಿ ಲಾಭವಾಗಬಹುದೆಂಬ ನಿರೀಕ್ಷೆಯಲ್ಲಿದೆ.

ವಿಧಾನಸಭಾ ಚುನಾವಣೆಗೆ ಬಿಜೆಪಿ ವರ್ಷಕ್ಕೆ ಮುನ್ನವೇ ತಯಾರಿ ಆರಂಭಿಸಿತ್ತಾದರೂ, ಲೋಕಸಭಾ ತಯಾರಿಯಲ್ಲಿ ಸಾಕಷ್ಟು ಹಿಂದೆ ಬಿದ್ದಿದೆ ಎಂಬ ಆರೋಪ ಕಾರ್ಯಕರ್ತರಿಂದಲೇ ಕೇಳಿಬಂದಿತ್ತು. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಿ ನಮ್ಮ ಸರ್ಕಾರ ರಚನೆಯಾಗುತ್ತದೆ ಎಂಬುದರತ್ತಲೇ ನಾಯಕರು ಗಮನ ನೆಟ್ಟಿದ್ದರಿಂದ ೆಬ್ರವರಿವರೆಗೂ ಲೋಕ ತಯಾರಿ ಬಿಸಿ ಏರಲೇ ಇಲ್ಲ. ಬೂತ್ ಸಮಿತಿ ಬಲವರ್ಧನೆ, ಪ್ರಣಾಳಿಕೆಗೆ ಅಭಿಪ್ರಾಯ ಸಂಗ್ರಹ, ಪ್ರಚಾರ ಸಮಿತಿ ರಚನೆ ಸೇರಿ ಅನೇಕ ವಿಚಾರಗಳಲ್ಲಿ ಕಾಂಗ್ರೆಸ್ ಮುಂದಿದೆ ಎಂಬ ಭಾವನೆಯಿತ್ತು. ಆದರೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಡಿಯೋ ಬಿಡುಗಡೆ ಪ್ರಕರಣ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ರಾಜ್ಯ ಬಿಜೆಪಿ ಸಂಸತ್ ಚುನಾವಣೆಯತ್ತ ಹೊರಳಿದ್ದು, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪ್ರವಾಸಗಳು ಚೇತರಿಕೆ ನೀಡಿವೆ. ಮೇರಾ ಬೂತ್ ಸಬ್ಸೆ ಮಜಬೂತ್, ಮೇರಾ ಪರಿವಾರ್ ಭಾಜಪ ಪರಿವಾರ್, ಕಮಲ ಜ್ಯೋತಿ ಸಂಕಲ್ಪ ಅಭಿಯಾನ ಸೇರಿ ಅನೇಕ ಕಾರ್ಯಕ್ರಮಗಳು ಕಾರ್ಯ
ಕರ್ತರನ್ನು ಚುರುಕುಗೊಳಿಸುವ ಪ್ರಯತ್ನ ಮಾಡಿವೆ. 6-7 ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಪರ್ಯಾಯ ಹೆಸರುಗಳು ಕೇಳಿಬರುತ್ತಿದ್ದರೂ, ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ಕಾರ್ಯಕರ್ತರ ಉತ್ಸಾಹ ಹೆಚ್ಚಿದೆ. ಸಂಘ ಪರಿವಾರ ಈಗಾಗಲೇ ಅನೇಕ ದಿನಗಳಿಂದ ಸಕ್ರಿಯವಾಗಿರುವ ಕಾರಣ ತಯಾರಿ
ಯಲ್ಲಿ ಮುಂದಿದ್ದೇವೆ ಎಂದು ಬಿಜೆಪಿ ನಾಯಕರು ಹೇಳಿ ಕೊಳ್ಳುತ್ತಿದ್ದಾರೆ.

ಮೂರೇ ಕ್ಷೇತ್ರಗಳು ಅಂತಿಮ!
ಮೈತ್ರಿ ಪಕ್ಷಗಳ ನಾಯಕರೇ ಹೇಳುವಂತೆ ಸದ್ಯಕ್ಕೆ ಶಿವಮೊಗ್ಗ, ಮಂಡ್ಯ, ಹಾಸನಕ್ಕೆ ಮಾತ್ರ ಸೀಟು ಹಂಚಿಕೆ ಅನೌಪಚಾರಿಕ ವಾಗಿ ಅಂತಿಮವಾಗಿದೆ. ಈ ಮೂರೂ ಕ್ಷೇತ್ರಗಳು ಜೆಡಿಎಸ್ ಪಾಲಾಗಲಿವೆ. ದಕ್ಷಿಣದಲ್ಲಿ ಪ್ರಾಬಲ್ಯವಿದೆ ಎಂದು ಜೆಡಿಎಸ್ ವಾದಿಸುತ್ತಿದ್ದು, ಸದ್ಯ ಕಾಂಗ್ರೆಸ್ ತೆಕ್ಕೆಯಲ್ಲಿರುವ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರಿನ ಪೈಕಿ ಎರಡು ಕ್ಷೇತ್ರವನ್ನು ಬಲವಾಗಿ ಕೇಳುತ್ತಿದೆ. ಬಿಜೆಪಿ ಬಳಿಯಿರುವ ಮೈಸೂರು-ಕೊಡಗು ಹಾಗೂ ಬೆಂಗಳೂರು ಉತ್ತರ ಕ್ಷೇತ್ರಗಳನ್ನೂ ಬಯಸುತ್ತಿದೆ. ಮೈತ್ರಿ ಪಕ್ಷಗಳು ಸೀಟು ಹಂಚಿಕೆ ನಡೆಸಿದ ನಂತರವೂ ಸಾಕಷ್ಟು ಕೆಲಸ ಬಾಕಿ ಇರುತ್ತವೆ. ಆಯ್ಕೆ ಯಾಗುವ ಅಭ್ಯರ್ಥಿಗಳಿಗೆ ಪ್ರಚಾರಕ್ಕೆ ಅತ್ಯಂತ ಕಡಿಮೆ ಸಮಯ ತಗಲುತ್ತದೆ. ಇತ್ತೀಚೆಗಷ್ಟೆ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರರ ವಿರುದ್ಧ ಪ್ರಚಾರ ನಡೆಸಿರುವ, ಕಾದಾಡಿರುವ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಒಮ್ಮತ ಮೂಡಿಸಿ ಚುನಾವ ಣೆಗೆ ಕೆಲಸ ಮಾಡಿಸಲು ಒಪ್ಪಿಸಬೇಕಿದೆ. ಇನ್ನೊಬ್ಬರಿಗೆ ಟಿಕೆಟ್ ಸಿಕ್ಕಿದೆ ಎಂದು ಕಾಂಗ್ರೆಸ್ ಅಥವಾ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಬೆಂಬಲಿಸುವ ಅಪಾಯಕ್ಕೆ ಕಡಿವಾಣ ಹಾಕಲು ಸಾಕಷ್ಟು ಶ್ರಮಿಸಬೇಕು. ಈ ಎಲ್ಲ ಗೊಂದಲದ ಲಾಭ ನೇರವಾಗಿ ಬಿಜೆಪಿಗೆ ಲಭಿಸಲಿದೆ. ಆದಷ್ಟೂ ಶೀಘ್ರದಲ್ಲಿ ಸೀಟು ಹಂಚಿಕೆ ಮುಕ್ತಾಯಗೊಳಿಸುವುದು ಉತ್ತಮ ಎಂಬ ಮಾತು ಮೈತ್ರಿ ಪಕ್ಷಗಳ ವಲಯದಲ್ಲಿದೆ.

ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಬಗ್ಗೆ ಕಾರ್ಯಕರ್ತರು ಹಾಗೂ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಜತೆ ಚರ್ಚಿಸಿ 8 ದಿನಗಳಲ್ಲಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗುವುದು.
| ಬಿ.ಎಸ್. ಯಡಿಯೂರಪ್ಪ  ಬಿಜೆಪಿ ರಾಜ್ಯಾಧ್ಯಕ್ಷ

ಯುದ್ಧಾನುಕೂಲ ಹೇಳಿಕೆಗೆ ಟೀಕೆ
ಬೆಂಗಳೂರು: ಪಾಕ್ ವಿರುದ್ಧ ಭಾರತ ಸರ್ಕಾರ ನಡೆಸುತ್ತಿರುವ ಕಾರ್ಯಾಚರಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 22 ಸ್ಥಾನ ಜಯಿಸಲಿದೆ ಎಂಬ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ನೀಡುವ ಮೂಲಕ ಪರಿಸ್ಥಿತಿ ತಿಳಿಗೊಳಿಸಲು ಮುಂದಾಗಿದ್ದಾರೆ. ಟ್ವಿಟರ್‌ನಲ್ಲಿ ಹೇಳಿಕೆ ನೀಡಿರುವ ಬಿಎಸ್‌ವೈ, ಕರ್ನಾಟಕದಲ್ಲಿ ಬಿಜೆಪಿಗೆ ಪೂರಕ ವಾತಾವರಣವಿದೆ ಎಂದಿದ್ದೇನೆ. ಮೋದಿ ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ 22 ಸ್ಥಾನ ಜಯಿಸುತ್ತೇವೆ ಎಂದು ಅನೇಕ ತಿಂಗಳಿಂದ ಹೇಳುತ್ತಿದ್ದು, ಇದೇನು ಹೊಸದಲ್ಲ ಎಂದಿದ್ದಾರೆ.

ಪಾಕ್ ವಿರುದ್ಧ ಕಾರ್ಯಾಚರಣೆಯಿಂದಾಗಿ ರಾಜ್ಯದಲ್ಲಿ 22 ಸ್ಥಾನ ಗೆಲ್ಲಲು ಅನುಕೂಲವಾಗುತ್ತದೆ ಎಂದು ಯಡಿಯೂರಪ್ಪ ಚಿತ್ರದುರ್ಗದಲ್ಲಿ ಬುಧವಾರ ಹೇಳಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಪಾಕಿಸ್ತಾನ ಮಾಧ್ಯಮಗಳೂ ಇದೇ ವಿಷಯ ಪ್ರಸಾರ ಮಾಡಿ, ಭಾರತ ಸರ್ಕಾರದ ಉದ್ದೇಶ ಎಂದು ಟೀಕಿಸಿದ್ದವು. ಇದರಿಂದ ಬಿಜೆಪಿ ತೀವ್ರ ಮುಜುಗರಕ್ಕೆ ಸಿಲುಕಿತ್ತು. ರಾಜ್ಯ ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್, ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿ ಅನೇಕರು ಬಿಎಸ್‌ವೈ ಹೇಳಿಕೆಯನ್ನು ಆಕ್ಷೇಪಿಸಿದ್ದರು. ಯುದ್ಧ ಹಾಗೂ ಸೈನಿಕರ ಬಲಿದಾನವನ್ನು ಚುನಾವಣೆಗೆ ಬಳಸಿಕೊಳ್ಳಬಾರದು ಎಂದಿದ್ದರು.

ಪಿಟಿಐ ಪ್ರತಿಕ್ರಿಯೆ: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹರೀಕ್ ಎ ಇನ್ಸ್ಾ (ಪಿಟಿಐ) ಪಕ್ಷ ಸಹ ಪ್ರತಿಕ್ರಿಯಿಸಿ, ಪಾಕ್ ವಿರುದ್ಧದ ಯುದ್ಧವನ್ನು ಭಾರತದಲ್ಲಿ ಚುನಾವಣೆ ಲಾಭಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದಿತ್ತು. ಕೇಂದ್ರ ಸಚಿವ ಹಾಗೂ ನಿವೃತ್ತ ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ಅವರು ಟ್ವಿಟರ್‌ನಲ್ಲಿ, ‘ನಿಮ್ಮ ಹೇಳಿಕೆಯನ್ನು ವಿನಮ್ರವಾಗಿ ವಿರೋಧಿಸುತ್ತೇನೆ. ಒಂದು ದೇಶವಾಗಿ, ನಮ್ಮ ನಾಗರಿಕರ ಹಾಗೂ ದೇಶದ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸಿದ್ದೇವೆಯೇ ಹೊರತು ಹೆಚ್ಚು ಸೀಟು ಗೆಲ್ಲಲಲ್ಲ. ಅಟಲ್‌ಜೀ ಅವರ ಈ ಭಾಷಣ ನಮ್ಮ ನಿಲುವನ್ನು ಸ್ಪಷ್ಟಪಡಿಸುತ್ತದೆ’ ಎಂದಿದ್ದರು.

ವರದಿ ಪಡೆದ ವರಿಷ್ಠರು: ಯಡಿಯೂರಪ್ಪ ಯಾವ  ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ? ಅದನ್ನು ತಿರುಚಲಾಗಿದೆಯೇ? ಎಂಬ ಬಗ್ಗೆ ರಾಜ್ಯ ಘಟಕದಿಂದ ಕೇಂದ್ರದ ವರಿಷ್ಠರು ವರದಿ ಪಡೆದಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಭಾರತೀಯ ಸೇನೆ ಪಾಕ್ ಮೇಲೆ ನಡೆಸಿದ ದಾಳಿಯನ್ನು ಬಿಜೆಪಿ ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿದೆ. ಸೈನಿಕ ಜೀವನದ ಜತೆ ಬಿಜೆಪಿ ಚೆಲ್ಲಾಟ ಆಡುತ್ತಿದೆ. ಬಿಎಸ್‌ವೈ ಹೇಳಿಕೆಯನ್ನು ನಾನು ಖಂಡಿಸುತ್ತೇನೆ.
| ಎಚ್.ಡಿ.ಕುಮಾರಸ್ವಾಮಿ ಸಿಎಂ

ಪಾಕ್ ಉಗ್ರರ ಮೇಲೆ ವೈಮಾನಿಕ ದಾಳಿ ನಂತರ ಪ್ರಧಾನಿ ಮೋದಿ ಎಲ್ಲವೂ ನನ್ನಿಂದಲೇ ಆಯಿತು ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಯುದ್ಧ ಮಾಡುವವರು ಸೈನಿಕರೇ ಹೊರತು ನಾವಲ್ಲ ಎಂಬುದನ್ನು ಮನಗಾಣಬೇಕು. ಅದನ್ನು ಎಂದೂ ರಾಜಕೀಯಕ್ಕೆ ಬಳಸಿಕೊಳ್ಳಬಾರದು.
| ಎಚ್.ಡಿ.ದೇವೇಗೌಡ ಮಾಜಿ ಪ್ರಧಾನಿ