ಬೀದರ್​ನಲ್ಲಿ ಲಾಠಿ ಪ್ರಹಾರ, ಮೂವರಿಗೆ ಗಾಯ; ಚಿಕ್ಕೋಡಿಯಲ್ಲಿ ಹೊಡೆದಾಡಿಕೊಂಡ ಕಾಂಗ್ರೆಸ್​ ಕಾರ್ಯಕರ್ತರು

ಬೀದರ್​: ಔರಾದ್ ತಾಲೂಕಿನ ಚಿಂತಾಕಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​ ನಡುವೆ ಗಲಾಟೆ ನಡೆದಿದೆ. ಪೊಲೀಸರ ಜತೆಗೂ ಕಾರ್ಯಕರ್ತರು ವಾಗ್ವಾದ ನಡೆಸಿದ್ದಾರೆ.

ಮತಗಟ್ಟೆ ಒಳಗಡೆಯೇ ಬಿಜೆಪಿ-ಕಾಂಗ್ರೆಸ್​ ಕಾರ್ಯಕರ್ತರ ನಡುವೆ ಜಗಳ ಶುರುವಾಗಿದ್ದು ತಪ್ಪಿಸಲು ಬಂದ ಪೊಲೀಸರ ಜತೆಗೂ ವಾಗ್ವಾದಕ್ಕೆ ಇಳಿದಿದ್ದಾರೆ. ಈ ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.

ಕಾಂಗ್ರೆಸ್​ನವರು ಪೊಲೀಸರನ್ನು ಬಳಸಿಕೊಂಡು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಆಗಮಿಸಿದ್ದು ಭದ್ರತೆ ಕಲ್ಪಿಸಲಾಗಿದೆ.

ಹೊಡೆದಾಡಿಕೊಂಡ ಕಾಂಗ್ರೆಸ್​ ಕಾರ್ಯಕರ್ತರು

ಚಿಕ್ಕೋಡಿ: ಕಾಂಗ್ರೆಸ್​ ಕಾರ್ಯಕರ್ತರೇ ಹೊಡೆದಾಡಿಕೊಂಡ ಘಟನೆ ಇಂದಿರಾ ನಗರದ ಬೂತ್​ ನಂಬರ್​ 217ರಲ್ಲಿ ನಡೆದಿದೆ.

ಮತದಾನ ತಾವೇ ಮುಂದೆ ಹೋಗಬೇಕು ಎಂದು ಗಲಾಟೆ ಮಾಡಿಕೊಂಡ ಕಾರ್ಯಕರ್ತರು ನಡು ಬೀದಿಯಲ್ಲೇ ರಂಪ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ.
ಈ ಮತಗಟ್ಟೆ ಅಕ್ಕಪಕ್ಕ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್​ ಭದ್ರತೆ ನೀಡಲಾಗಿದೆ. ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾವೇರಿಯಲ್ಲೂ ಲಾಠಿ ಪ್ರಹಾರ

ಮತದಾನದ ವೇಳೆ ಸಂಚಾರ ನಿಯಂತ್ರಣಕ್ಕಾಗಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದು ಈಗ ಮತದಾರರು ಮತಗಟ್ಟೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಹಾವೇರಿ ಜಿಲ್ಲೆಯ ಅಗಡಿ ಗ್ರಾಮದಲ್ಲಿ ಘಟನೆ ನಡೆದಿದ್ದು ಮತದಾರರ ಓಲೈಕೆಗಾಗಿ ಎಸಿ ತಿಪ್ಪೇಸ್ವಾಮಿ ಸ್ಥಳಕ್ಕೆ ದೌಡಾಯಿಸಿದ್ದಾರೆ.