ಅಕ್ರಮ, ಸಾಗಾಟ, ಬಜರಂಗದಳ, ಪಿಎಫ್‌ಐ ನಡುವೆ ಘರ್ಷಣೆ

ವಿಟ್ಲ: ಜಾನುವಾರು ಅಕ್ರಮ ಸಾಗಾಟ ಮಾಹಿತಿ ಪಡೆದ ಪೊಲೀಸರು ತಪಾಸಣೆಗಾಗಿ ಕಡಂಬುವಿಗೆ ತೆರಳಿದಾಗ ಎರಡು ಗುಂಪಿನ ಜನರು ಸ್ಥಳದಲ್ಲಿ ಜಮಾಯಿಸಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆಪಾದನೆಯಡಿ ಬಜರಂಗದಳ ಹಾಗೂ ಪಿಎಫ್‌ಐ ಮುಖಂಡರನ್ನು ಶನಿವಾರ ಬೆಳಗ್ಗೆ ವಶಕ್ಕೆ ಪಡೆಯಲಾಗಿದೆ.

ವಿಟ್ಲ ಸಾಲೆತ್ತೂರು ರಸ್ತೆಯಲ್ಲಿ ಜಾನುವಾರುಗಳ ಅಕ್ರಮ ಸಾಗಾಟ ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ ಪೊಲೀಸರು ತನಿಖೆಗೆ ಮುಂದಾಗಿದ್ದರು. ಈ ಸಂದರ್ಭ ವಾಹನವೊಂದರಲ್ಲಿ ಜಾನುವಾರುಗಳು ಪತ್ತೆಯಾದವು. ಒಳರಸ್ತೆಗಳಲ್ಲೂ ತಪಾಸಣೆ ನಡೆಸಿದಾಗ ಎರಡು ಕೋಣಗಳು ಪತ್ತೆಯಾಗಿವೆ.

ಜಾನುವಾರು ಪತ್ತೆ ವಿಚಾರ ತಿಳಿದು ಬಜರಂಗದಳ ಕಾರ‌್ಯಕರ್ತರು ಸ್ಥಳದಲ್ಲಿ ಜಮಾಯಿಸುತ್ತಿದ್ದಂತೆ ಪಿಎಫ್‌ಐ ಕಾರ‌್ಯಕರ್ತರೂ ಗುಂಪುಗೂಡಿ, ಪರಸ್ಪರ ಮಾತಿನ ಚಕಮಕಿ ಏರ್ಪಟ್ಟಿತು. ಪೊಲೀಸರು ಎಲ್ಲರನ್ನೂ ಸ್ಥಳದಿಂದ ಓಡಿಸಿದರೂ, ಜಾಗ ಖಾಲಿ ಮಾಡಿದ ಎರಡು ಗುಂಪುಗಳ ಕಾರ‌್ಯಕರ್ತರು ಕಡಂಬು ಜಂಕ್ಷನ್‌ನಲ್ಲಿ ಜಮಾಯಿಸಿ ಪರಸ್ಪರ ಹೊಡೆದಾಡಿಕೊಂಡರು. ತಕ್ಷಣ ಪೊಲೀಸರು ಲಾಠಿ ಪ್ರಹಾರ ಮಾಡಿ, ಉಭಯ ಗುಂಪಿನ ಮುಖಂಡರನ್ನು ವಶಕ್ಕೆ ಪಡೆದುಕೊಂಡರು.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್, ಎಎಸ್‌ಪಿ ಸೈದುಲ್ಲ ಅಡವಾತ್, ವೃತ್ತ ನಿರೀಕ್ಷಕ ನಾಗರಾಜ್, ವಿಟ್ಲ ಉಪನಿರೀಕ್ಷಕ ಯಲ್ಲಪ್ಪ ಭೇಟಿ ನೀಡಿದ್ದಾರೆ. ಹೆಚ್ಚುವರಿ ಭದ್ರತೆಗಾಗಿ ಕೆಎಸ್‌ಆರ್‌ಪಿ ತುಕಡಿಯನ್ನು ಸ್ಥಳದಲ್ಲಿ ನಿಯೋಜಿಸಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.

ಮೂರು ಪ್ರಕರಣ ದಾಖಲು: ಘಟನೆ ಬಳಿಕ ಒಂದೇ ಸಮುದಾಯಕ್ಕೆ ಸೇರಿದ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದು, ಅವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ಜಾನುವಾರು ಅಕ್ರಮ ವಧೆಗೆ ಪ್ರಯತ್ನ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆಪಾದನೆ ಸಹಿತ ಒಟ್ಟು ಮೂರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತಂಡಗಳನ್ನು ರಚಿಸಲಾಗಿದೆ. ಘಟನೆಯಲ್ಲಿ ಓರ್ವ ಮುಖಂಡನಿಗೂ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆಮರೆಸಿಕೊಳ್ಳದಂತೆ ಆಸ್ಪತ್ರೆಗೆ ಪೊಲೀಸ್ ಕಾವಲು ಹಾಕಲಾಗಿದೆ.

ಜಾನುವಾರು ಸಾಗಾಟ ವಿಚಾರದಲ್ಲಿ ಉಭಯ ಗುಂಪುಗಳ ನಡುವಿನ ಮಾತುಕತೆ ಘರ್ಷಣೆಗೆ ತಿರುಗಿದೆ. ಸಿಬ್ಬಂದಿಯ ಸಕಾಲಿಕ ಕ್ರಮದಿಂದ ಹೆಚ್ಚಿನ ಅನಾಹುತಗಳಾಗಿಲ್ಲ. ಹೊಡೆದಾಟದ ವಿಡಿಯೋ ಲಭ್ಯವಿದ್ದು, ಅದರನ್ವಯ ಕಾರ‌್ಯಾಚರಣೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. ಈಗಾಗಲೇ ಪ್ರತ್ಯೇಕ ಕಾಯ್ದೆಗಳಡಿ ಮೂರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತ್ತಿದೆ.
|ಲಕ್ಷ್ಮೀ ಪ್ರಸಾದ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಕಡಂಬು ಎಂಬಲ್ಲಿ ಗೋವುಗಳನ್ನು ಅಕ್ರಮವಾಗಿ ಬಂಧಿಸಿಡಲಾಗಿದೆ. ಇದು ಖಂಡನೀಯ, ಅಕ್ರಮ ವ್ಯವಹಾರ ನಿರತರ ವಿರುದ್ಧ ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು.
| ಅಕ್ಷಯ್ ರಜಪೂತ್ ಕಲ್ಲಡ್ಕ, ಬಜರಂಗದಳ ವಿಟ್ಲ ಪ್ರಖಂಡ ಸಂಚಾಲಕ