More

  ಮುಲಾಜಿಲ್ಲದೆ ಸರ್ಕಾರಿ ಆಸ್ತಿ ವಶಪಡಿಸಿಕೊಳ್ಳಿ

  ತೇರದಾಳ: ಪಟ್ಟಣದ ಪುರಸಭೆ ಕಚೇರಿಗೆ ಜಿಲ್ಲಾಧಿಕಾರಿ ಕೆ.ಎಂ. ಮಂಗಳವಾರ ಭೇಟಿ ನೀಡಿ, ಪ್ರತಿ ಅಧಿಕಾರಿ ಟೇಬಲ್‌ಗೆ ತೆರಳಿ ಅವರ ಕಾರ್ಯ ಹಾಗೂ ಜವಾಬ್ದಾರಿ ಪ್ರಶ್ನಿಸುವ ಮೂಲಕ ಬೆವರಿಳಿಸಿದರು.

  ಅಂದಾಜು 75 ಲಕ್ಷ ರೂ.ತೆರಿಗೆ ಪೈಕಿ 50 ಲಕ್ಷದಷ್ಟು ಬಾಕಿ ಉಳಿದಿದ್ದು, ಅದಕ್ಕಾಗಿ ಕರವಸೂಲಿ ಜಾಥಾ ನಡೆಸಬೇಕು. ಜಾಥಾದಲ್ಲಿ ಸದಸ್ಯರು ಭಾಗಿಯಾಗಿ ಸಹಕರಿಸಬೇಕು. ಪುರಸಭೆಯಲ್ಲಿ ಸಿಸಿ ಟಿವಿ ಅಳವಡಿಸಿ. ಸರ್ಕಾರಿ ಆಸ್ತಿಗಳನ್ನು ಯಾವುದೇ ಮುಲಾಜಿಲ್ಲದೆ ವಶಕ್ಕೆ ಪಡೆದುಕೊಳ್ಳುವಂತೆ ಸೂಚಿಸಿದರು.

  ಇದಕ್ಕೂ ಮುನ್ನ ವಿಶೇಷ ತಹಸೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸಿದರು. ಮುಖಂಡರಾದ ಅಶೋಕ ಆಳಗೊಂಡ, ಪಿ.ಎಸ್. ಮಾಸ್ತಿ ಮತ್ತಿತರರು, ಪಟ್ಟಣದ ಕೆರೆ ಒತ್ತುವರಿಯಾಗುತ್ತಿದೆ. ಅದಕ್ಕೆ ನೀರು ಹರಿಸುವ ಕಾರ್ಯವಾಗಬೇಕಿದೆ. ತಾಲೂಕು ಘೋಷಣೆಯಾಗಿದ್ದರೂ ವಿಶೇಷ ತಹಸೀಲ್ದಾರ್ ಕಚೇರಿಯಲ್ಲೇ ಸಿಬ್ಬಂದಿ ಇಲ್ಲ. ಸ್ಥಳೀಯ ಪಿಎಚ್‌ಸಿಯಲ್ಲಿ ಎಂಬಿಬಿಎಸ್ ಸೇರಿ ವೈದ್ಯರ ಕೊರತೆ ಇದ್ದು ಕೂಡಲೇ ಸಿಬ್ಬಂದಿ ನೇಮಿಸುವಂತೆ ಮನವಿ ಮಾಡಿದಾಗ ಸಿಬ್ಬಂದಿ ನೇಮಕಾತಿಗಾಗಿ ಕೇಂದ್ರ ಕಚೇರಿಯಿಂದ ಅನುಮೋದನೆ ಪಡೆಯುವಂತೆ ಜಿಲ್ಲಾಧಿಕಾರಿಗಳು ಎಸಿ ಸಂತೋಷ ಕಾಮಗೌಡ ಹಾಗೂ ಎಸ್.ಬಿ. ಕಾಂಬಳೆ ಅವರಿಗೆ ಸೂಚಿಸಿದರು.ಕೆರೆ ಒತ್ತುವರಿ ತೆರವುಗೊಳಿಸುವಂತೆ ನಿರ್ದೇಶನ ನೀಡಿದರು.

  ತಾಲೂಕು ಹೋರಾಟ ಸಮಿತಿ ಬುಜಬಲಿ ಕೆಂಗಾಲಿ ಸೇರಿ ಅನೇಕರು ಪೂರ್ಣ ತಾಲೂಕು ರಚನೆ ಮತ್ತು ತಾಲೂಕಿಗೆ ಒಂದು ಲಕ್ಷ ಜನಸಂಖ್ಯೆ ಕೊಡುವಂತೆ ಒತ್ತಾಯಿಸಿದರು. ನಂತರ ಜಿಲ್ಲಾಧಿಕಾರಿಗಳು ಪುರಸಭೆ ರಸ್ತೆ ಕಾಮಗಾರಿ ವೀಕ್ಷಿಸಿದರು. ಸ್ಥಳದಲ್ಲಿದ್ದ ಸಾರ್ವಜನಿಕರು ಕುಂಬಾರ ಗಲ್ಲಿಯಲ್ಲಿ ಅರ್ಧಕ್ಕೆ ಉಳಿದ ಕಾಮಗಾರಿ ಕುರಿತು ಡಿಸಿ ಗಮನಕ್ಕೆ ತಂದರು. ಆಗ ವೃದ್ಧನೊಬ್ಬ ಮಳೆ ಬಂದರೆ ನೀರು ಒಳಗೆ ಬರುತ್ತೆ, ನಮಗೆ ಪರ್ಯಾಯ ವ್ಯವಸ್ಥೆ ಮಾಡ್ರಿ.. ಇಲ್ಲ, ರಸ್ತೆ ಕಿತ್ತುಹಾಕಲು ಅನುಮತಿ ಕೊಡಿ ಎಂದು ಕೈಮುಗಿದು ಕೇಳಿಕೊಂಡರು.

  ಅಂಬೇಡ್ಕರ್ ವೃತ್ತ ಬಳಿಯ ಅಂಗನವಾಡಿ ಸಂಖ್ಯೆ-1ರ ಪ್ರವೇಶಬಾಗಿಲಲ್ಲೇ ಚರಂಡಿ ನೀರು ನಿಂತಿದ್ದನ್ನು ಕಂಡ ಜಾನಕಿ ಅವರು ಅಧಿಕಾರಿಗಳ ಮೇಲೆ ಗರಂ ಆದರು. ಕೇಂದ್ರದಲ್ಲಿ ಮಕ್ಕಳ ಹಾಜರಾತಿ ಮತ್ತಿತರ ಸಮಸ್ಯೆಗಳಿಗಾಗಿ ಸಂಬಂಧಿಸಿದವರಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡರು. ಮಕ್ಕಳ ಆಟ, ಪಾಠ, ಆಹಾರ ವ್ಯವಸ್ಥೆ ವೀಕ್ಷಿಸಿದರಲ್ಲದೆ, ಶುದ್ಧ ಕುಡಿಯುವ ನೀರಿನ ಘಟಕ, ರಸ್ತೆ, ಸ್ವಚ್ಛತೆ ಸೇರಿ ಹಲವಾರು ಸೌಲಭ್ಯಗಳನ್ನು ವೀಕ್ಷಿಸಿದ ಅವರು, ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸಲು ಅಧಿಕಾರಿಗಳಿಗೆ ಸೂಚಿಸಿದರು.

  ಇದೇ ವೇಳೆ ಕಾಮಗಾರಿ ಹೆಸರಲ್ಲಿ ಅಧಿಕಾರಿಗಳು ಹಾಗೂ ಟೆಂಡರ್‌ದಾರರ ನಿರ್ಲಕ್ಷೃದ ಆರೋಪಗಳೂ ಕೇಳಿಬಂದವು. ನಂತರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಮೂರ್ತಿ ವೀಕ್ಷಣೆ ಮಾಡಿದರು.

  ಉಪತಹಸೀಲ್ದಾರ್ ಶ್ರೀಕಾಂತ ಮಾಯನ್ನವರ, ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ, ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ, ಪಿಎಸ್‌ಐ ಅಪ್ಪು ಐಗಳಿ, ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು, ಪುರಸಭೆ ಸದಸ್ಯರು ಹಾಗೂ ಸಾರ್ವಜನಿಕರು ಇದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 22

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts