ಸೂಪರ್​ಸ್ಟಾರ್​ ರಜನಿಕಾಂತ್ ಮಗಳಾದ ಸೌಂದರ್ಯರ ಎರಡನೇ ಮದುವೆಗೆ ಸಿದ್ಧತೆ

ಚೆನ್ನೈ: ಸೂಪರ್​ಸ್ಟಾರ್​ ರಜನಿಕಾಂತ್​ ಅವರ ಮಗಳಾದ ಸೌಂದರ್ಯ ರಜನಿಕಾಂತ್​ ಅವರ ಎರಡನೇ ಮದುವೆಗೆ ಸಿದ್ಧತೆ ನಡೆದಿದೆ. ಫೆಬ್ರವರಿ 11ರಂದು ವಿವಾಹ ಕಾರ್ಯ ಜರುಗುವುದು ಖಚಿತವಾಗಿದೆ.

ಇತ್ತೀಚೆಗಷ್ಟೇ ರಜನಿಕಾಂತ್​ ಮತ್ತು ಪತ್ನಿ ಲತಾ ರಜನಿಕಾಂತ್​ ಅವರು ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಮದುವೆ ಆಮಂತ್ರಣ ಪತ್ರದೊಂದಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದರು.

ಈಗ ಅಧಿಕೃತ ಮಾಹಿತಿ ಹೊರಬಿದ್ದಿದ್ದು, ಸೌಂದರ್ಯ ರಜನಿಕಾಂತ್​ ಅವರು ನಟ ಹಾಗೂ ಉದ್ಯಮಿ ವಿಶಾಗನ್ ವನಂಗಮುಡಿ ಅವರೊಂದಿಗೆ ಫೆಬ್ರವರಿ 11 ರಂದು ಸಪ್ತಪದಿ ತುಳಿಯಲಿದ್ದಾರೆ. ಫೆ.10 ರಂದು ವಿವಾಹ ಪೂರ್ವ ಕಾರ್ಯಗಳಾದ ಸಂಗೀತ ಹಾಗೂ ಮೆಹಂದಿ ಕಾರ್ಯಕ್ರಮ ಜರುಗಲಿದೆ.​

ಸೌಂದರ್ಯ ಅವರು ಈ ಮುಂಚೆ ಅಶ್ವಿನ್​ ರಾಮ್​ಕುಮಾರ್​ ಜತೆ ವಿವಾಹವಾಗಿ 8 ವರ್ಷ ವೈವಾಹಿಕ ಜೀವನ ನಡೆಸಿದ್ದರು. ಇಬ್ಬರ ನಡುವೆ ಅನೇಕ ವಿಚಾರಗಳಲ್ಲಿ ಹೊಂದಾಣಿಕೆ ಆಗದಿದ್ದಕ್ಕೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದಾಗಿ 2016ರಲ್ಲಿ ಸ್ವತಃ ಸೌಂದರ್ಯ ಅವರು ಬಹಿರಂಗಪಡಿಸಿದ್ದರು. 2017ರಲ್ಲಿ ಪ್ರಕರಣ ಇತ್ಯರ್ಥಗೊಂಡು ಪರಸ್ಪರ ಒಪ್ಪಿಗೆ ಮೇರೆಗೆ ಬೇರೆಯಾಗಿದ್ದರು.

ಸೌಂದರ್ಯ ಅವರಿಗೆ ವೇದ ಕೃಷ್ಣ ಹೆಸರಿನ 6 ವರ್ಷದ ಮಗನಿದ್ದು, ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಕಳೆದ ವರ್ಷ ಸಂಬಂಧಿಕರ ಮನೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ವಿಶಾಗನ್​ ಅವರ ಪರಿಚಯವಾಗಿ, ಸೇಹ ಬೆಳೆದು ಪ್ರೀತಿಗೆ ತಿರುಗಿತ್ತು. ಅಲ್ಲದೇ ವಿಶಾಗನ್​ ಅವರಿಗೂ ಇದು ಎರಡನೇ ಮದುವೆಯಾಗಿದೆ.

ವಿಶಾಗನ್​ ಅವರು ಹಲವು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ಔಷಧೀಯ ಕಂಪನಿಯೊಂದನ್ನು ನಡೆಸುತ್ತಿದ್ದಾರೆ. ಸೌಂದರ್ಯ ಅವರಿಗೂ ಚಿತ್ರರಂಗದ ಮೇಲೆ ಒಲವಿದ್ದು, ತಂದೆ ರಜನಿಕಾಂತ್​ ನಟನೆಯ ಭಾರತದ ಮೊದಲ ಮೋಶನ್​ ಕ್ಯಾಪ್ಚರ್ ತಂತ್ರಜ್ಞಾನ ಚಿತ್ರ ಕೊಚಾಡಿಯನ್ ಅನ್ನು ನಿರ್ದೇಶಿಸಿದ ಖ್ಯಾತಿಯನ್ನು ಹೊಂದಿದ್ದಾರೆ.(ಏಜೆನ್ಸೀಸ್​)