ಅನುಭವಕ್ಕಿಂತ ಆತ್ಮಸ್ಥೈರ್ಯ ಮುಖ್ಯ

ವರೊಬ್ಬ ನಿಪುಣ ಶಸ್ತ್ರಚಿಕಿತ್ಸಕರು. ಒಮ್ಮೆ ಮಧ್ಯರಾತ್ರಿಯಲ್ಲಿ ‘ತೀವ್ರ ಗಾಯಕ್ಕೆ ಒಳಗಾದ ಒಬ್ಬ ವ್ಯಕ್ತಿ ದಾಖಲಾಗಿದ್ದಾನೆ, ಕೂಡಲೇ ಬರಬೇಕು’ ಎಂಬ ಸಂದೇಶ ಅವರ ಆಸ್ಪತ್ರೆಯಿಂದ ಬಂತು. ಹೋಗಿ ನೋಡಿದರೆ, ವ್ಯಕ್ತಿಯ ಸ್ಥಿತಿ ಗಂಭೀರವಾಗಿತ್ತು. ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿತ್ತು. ಬೆಳಗ್ಗೆ ಆಪರೇಷನ್ ನಡೆಸಲು ನಿರ್ಧರಿಸಿ, ಸಂಬಂಧಿಗಳಿಗೆ ತಿಳಿಸಿದರು. ಆದರೆ, ಅದೊಂದು ಅಪರೂಪದ ಸರ್ಜರಿ. ತುರ್ತಾಗಿ ಮಾಡಲೇಬೇಕಾಗಿದ್ದರಿಂದ ಆ ಅನುಭವಿ ವೈದ್ಯರಿಗೂ ತಳಮಳವುಂಟಾಗಿ, ತಮ್ಮ ಸ್ನೇಹಿತರ ಬಳಿ ದುಗುಡ ತೋಡಿಕೊಂಡರು. ‘ಮೊದಲು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನ ಮಾಡಿ. ಅದಕ್ಕಾಗಿ 10 ನಿಮಿಷಗಳ ಕಾಲ ದೀರ್ಘಶ್ವಾಸ ತೆಗೆದುಕೊಂಡು, ನಂತರ ವ್ಯಾಯಾಮ ಮಾಡಿ. ಸ್ನಾನ ಮುಗಿಸಿ ಶಾಂತಿಯುತ ಜಾಗದಲ್ಲಿ ಕುಳಿತು, ನಡೆಸಬೇಕಾದ ಸರ್ಜರಿ ಯಾವುದು, ಅದನ್ನು ಹೇಗೆ ಮ್ಯಾನೇಜ್ ಮಾಡಬೇಕು ಮುಂತಾಗಿ ಯೋಚಿಸಿ. ಇಲ್ಲಿ ನಿಮಗೆ ಬೇಕಾದುದು ಅನುಭವಕ್ಕಿಂತಲೂ ಮಾನಸಿಕ ಸ್ಥೈರ್ಯ’ಎಂದು ಸ್ನೇಹಿತರು ಧೈರ್ಯ ತುಂಬಿದರು. ರಾತ್ರಿ ನಿದ್ದೆ ಮಾಡದಿದ್ದರೂ, ವೈದ್ಯರ ಮನದಲ್ಲಿ ಅದೇನೋ ಕಾನ್ಪಿಡೆನ್ಸ್, ಈ ಶಸ್ತ್ರಕ್ರಿಯೆ ಮಾಡಬಲ್ಲೆ ಎಂಬ ನಂಬಿಕೆ. ಮರುದಿನ ಸಂಜೆ ಮತ್ತೆ ಸ್ನೇಹಿತರಿಗೆ ಫೋನ್ ಮಾಡಿದ ವೈದ್ಯರು, ಯಶಸ್ವಿಯಾಗಿ ಆ ಶಸ್ತ್ರಚಿಕಿತ್ಸೆ ಮಾಡಿದ್ದೇನೆ ಎಂದು ಸಂತೋಷ ಹಂಚಿಕೊಂಡರು. ಹೀಗೆ…ಎಷ್ಟೇ ಅನುಭವಿಗಳಾದರೂ ಕೆಲವು ಬಾರಿ, ಸಂದಿಗ್ಧ ಸಮಯದಲ್ಲಿ ತಳಮಳ ಸಹಜ. ಆಗ ಕೈಹಿಡಿಯೋದು ಆತ್ಮಸ್ಥೈರ್ಯ.