More

  ದೆಹಲಿ ಮಾದರಿ ರೈತ ಹೋರಾಟಕ್ಕೆ ಶಿವಮೊಗ್ಗದಲ್ಲಿ ಜೂ.24 ರಂದು ಸಮಾವೇಶ

  ಮೈಸೂರು: ದೆಹಲಿ ಮಾದರಿಯಲ್ಲಿ ದಕ್ಷಿಣ ಭಾರತದಲ್ಲಿ ರೈತ ಹೋರಾಟ ಬಲಗೊಳಿಸಲು ಜೂ.24 ರಂದು ಶಿವಮೊಗ್ಗದಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ರೈತ ಮುಖಂಡರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

  ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಗೊಳಿಸಬೇಕು, ರೈತರ ಕೃಷಿ ಸಾಲ ಮನ್ನಾ ಮಾಡಬೇಕು, ಬೆಳೆ ವಿಮೆ ನೀತಿ ಬದಲಾಯಿಸಿ ಪ್ರತಿ ರೈತರ ಹೊಲದ ಬೆಳೆವಿಮೆ ಜಾರಿಗೆ ತರಬೇಕು, ಬರಗಾಲ, ಅತಿವೃಷ್ಟಿ, ಪ್ರಕೃತಿ ವಿಕೋಪ ಸಂದರ್ಭ ಬೆಳೆ ನಷ್ಟ ಪರಿಹಾರ ನೀಡಲು ರೂಪಿಸಿರುವ ಎನ್‌ಡಿಆರ್‌ಎಫ್ ಮಾನದಂಡ ಬದಲಾಯಿಸಬೇಕು. ಈ ವಿಚಾರಗಳ ಕುರಿತು ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

  ರಾಜದ ರೈತರು ಉತ್ಪಾದಿಸಿದ ಕೃಷಿ ಉತ್ಪನ್ನಗಳ ಎಂಎಸ್‌ಪಿ ಖರೀದಿ ಅನುದಾನ ಪ್ರಮಾಣವನ್ನು ಕೇಂದ್ರ ಸರ್ಕಾರ ಏರಿಕೆ ಮಾಡ ಬೇಕು. ಪಂಜಾಬ್, ಹರಿಯಾಣ, ತೆಲಂಗಾಣ ರಾಜ್ಯಗಳಲ್ಲಿ ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ಶೇ.45 ರಷ್ಟು ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರ ನಮ್ಮ ರಾಜ್ಯದಲ್ಲಿ ಕೇವಲ ಶೇ.3 ರಷ್ಟು ಕೃಷಿ ಉತ್ಪನ್ನಗಳನ್ನು ಖರೀದಿಸಲು ಮಾತ್ರ ಅನುದಾನ ನೀಡುತ್ತಿರುವುದು ಸರಿಯಲ್ಲ. ಇದು ಕೇಂದ್ರ ಸರ್ಕಾರದ ತಾರತಮ್ಯ ನೀತಿಯಾಗಿದೆ. ಈ ಅನ್ಯಾಯವನ್ನು ಸರಿ ಪಡಿಸಲು ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.

  ಬರಗಾಲದಿಂದ ರೈತರು ಸಂಕಷ್ಟಕ್ಕೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಸಾಲ ಮೇಳ ನಡೆಸುವಂತೆ ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೆ ರಾಜ್ಯ ಸರ್ಕಾರ ಹಾಗೂ ಹಾಗೂ ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿ ನಿರ್ದೇಶ ನೀಡಿದೆ. ಒಂದುವೇಳೆ ಈ ಬ್ಯಾಂಕ್ ಸಾಲ ಮೇಳ ನಡೆಸದೆ ಇದ್ದರೆ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

  See also  ಅಹಂನಿಂದ ಪ್ರಸಾದನ ಕಲೆಗಾರರ ಗೌರವಕ್ಕೆ ಧಕ್ಕೆ: ಸಂವಾದದಲ್ಲಿ ಬಿ.ಎಂ.ರಾಮಚಂದ್ರ ಬೇಸರ

  ರಾಜ್ಯದಲ್ಲಿ ಕಬ್ಬು ಬೆಳೆಗಾರರು ವಾರ್ಷಿಕ 25,000 ಕೋಟಿ ರೂ. ಹಣಕಾಸಿನ ವಹಿವಾಟು ನಡೆಸುತ್ತಿದ್ದಾರೆ. ಈ ಎಲ್ಲ ವಹಿವಾಟಿನ ಮಾಹಿತಿ ಕಬ್ಬು ಬೆಳೆಗಾರರಿಗೆ ದೊರೆಯುವಂತೆ ಮಾಡಲು ಡಿಜಿಟಲ್ ತಂತ್ರಜ್ಞಾನ ಅಭಿವೃದ್ಧಿ ಪಡಿಸಬೇಕು. ಕಬ್ಬು ಬೆಳೆಗಾರರು ಹಾಗೂ ಬೆಳೆಗಾರರ ನಡುವೆ ನಡೆಯುವ ಒಪ್ಪಂದ ಪತ್ರ, ಕಬ್ಬಿನ ಹಣ ಪಾವತಿ ಸಂದೇಶ, ಇಳುವರಿ ಮಾಹಿತಿ ಸೇರಿದಂತೆ ಪ್ರತಿಯೊಂದು ಮಾಹಿತಿ ನೀಡುವ ಆ್ಯಪ್ ಅಭಿವೃದ್ಧಿ ಪಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

  ರಾಜ್ಯದಲ್ಲಿ ಕೃಷಿ ಚಟುವಟಿಕೆ ಪ್ರಾರಂಭಗೊಂಡಿದ್ದು, ಕಳಪೆ ರಸಗೊಬ್ಬರ, ಕೀಟನಾಶಕ ಹಾಗೂ ಬಿತ್ತನೆ ಬೀಜ ವಿತರಣೆಯಾಗದಂತೆ ಸರ್ಕಾರ ತಡೆಯೊಡ್ಡಬೇಕು. ಕಳಪೆ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕವನ್ನು ನೀಡುವವರನ್ನು ಬಂಧಿಸಿ ಕಠಿಣ ಕಾನೂನಿಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿದರು.

  ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಮಾರ್ಬಳಿ ನೀಲಕಂಠಪ್ಪ, ಬರಡನಪುರ ನಾಗರಾಜ್, ವೆಂಕಟೇಶ್, ಟಿ.ವಿಜಯೇಂದ್ರ, ಪ್ರದೀಪ್, ಮಹದೇವ ಹಾಗೂ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts