ಚನ್ನಗಿರಿ: ತಾಲೂಕಿನ ಸಂತೇಬೆನ್ನೂರಿನ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಜ.8 ರಂದು 17 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಮ್ಮೇಳನಕ್ಕೆ ಸಕಲ ಸಿದ್ಧತೆ ನಡೆದಿದೆ.

ಪ್ರವೇಶದ್ವಾರಕ್ಕೆ ಕೆಂಗ ಹನುಮಪ್ಪ ನಾಯಕ ಮಹಾದ್ವಾರ ಹಾಗೂ ವೇದಿಕೆಗೆ ದಿ. ಜಿ.ಸಿದ್ದಲಿಂಗಪ್ಪ ಗೌಡ್ರು ಮಹಾವೇದಿಕೆ ಎಂದು ನಾಮಕರಣ ಮಾಡಲಾಗಿದೆ.
ಬೆಳಗ್ಗೆ 7.30ಕ್ಕೆ ರಾಷ್ಟ್ರ ಧ್ವಜಾರೋಹಣ ನೆರವೇರಲಿದೆ. ಬೆಳ್ಳಿರಥದಲ್ಲಿ ಸಮ್ಮೇಳನಾಧ್ಯಕ್ಷ ಕೆ. ಸಿದ್ದಲಿಂಗಪ್ಪ ಅವರ ಮೆರವಣಿಗೆ ಪ್ರಾರಂಭವಾಗಲಿದೆ. ಅಲ್ಲಿಂದ ಪುಷ್ಕರಣಿಯಿಂದ ಕೋಟೆರಸ್ತೆ, ಅಗಳೇರಿ ಬೀದಿ, ಬಾಡರಸ್ತೆ, ಪುನೀತ್ ರಾಜ್ಕುಮಾರ್ ವೃತ್ತದ ಮೂಲಕ ಸಮ್ಮೇಳನದ ವೇದಿಕೆ ತಲುಪಲಿದೆ.
ಮೆರವಣಿಗೆಯಲ್ಲಿ ಚಿತ್ರದುರ್ಗ ಹುಲ್ಲೂರು ಶ್ರೀದುರ್ಗಾಂಬಿಕಾ ಕಲಾ ತಂಡದಿಂದ ಲಂಬಾಣಿ ಕುಣಿತ, ಮಹಿಳೆಯರ ತಮಟೆ ವಾದ್ಯ, ಕೀಲು ಕುದುರೆ, ಬೊಂಬೆ ಕುಣಿತ, ಹೊಳಲ್ಕೆರೆ ತಾಲೂಕು ಕಡೂರು ಗ್ರಾಮದ ಶ್ರೀ ವೀರಭದ್ರೇಶ್ವರ ಕಲಾತಂಡದ ವೀರಗಾಸೆ, ಸಂತೇಬೆನ್ನೂರು ಶ್ರೀ ಬೀರಲಿಂಗೇಶ್ವರ ಕಲಾ ತಂಡದಿಂದ ಡೊಳ್ಳುಕುಣಿತ, ಶ್ರೀ ಮೈಲಾರಲಿಂಗೇಶ್ವರ ಕಲಾ ತಂಡದಿಂದ ನಾಸಿಕ್ ಡೋಲು, ಕಹಳೆ, ಶ್ರೀ ಆಂಜನೇಯ ವಾದ್ಯ ವೃಂದದ ವಾದ್ಯಮೇಳ, ಶ್ರೀ ಚೈತನ್ಯ ಗುರುಕುಲ ವಿದ್ಯಾಸಂಸ್ಥೆ ಶಾಲಾ ವಿದ್ಯಾರ್ಥಿಗಳಿಂದ ಕುಂಭಮೇಳ, ಕೋಲಾಟ, ನಂದಿಕೋಲು, ಡೊಳ್ಳು ಕುಣಿತ, ಛದ್ಮವೇಷ, ಯಕ್ಷಗಾನ ನಡೆಯಲಿದೆ.
ಪುಸ್ತಕ, ಕೃಷಿ, ಆರೋಗ್ಯ ಜಾಗೃತಿ ಮಳಿಗೆ ನಿರ್ವಿುಸಲಾಗಿದೆ. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟನೆ ನೆರವೇರಿಸಲಿದ್ದಾರೆ. ತಹಸೀಲ್ದಾರ್ ಜಿ.ಎಸ್. ಶಂಕರಪ್ಪ, ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗಿಸ್, ತಾಪಂ ಇಒ ಬಿ.ಕೆ. ಉತ್ತಮ್ ಬಿಇಒ ಎಲ್. ಜಯಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸಮ್ಮೇಳನದ ಉದ್ಘಾಟನೆ ನೆರವೇರಿಸಲಿದ್ದಾರೆ. ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಸ್ವಾಮೀಜಿ ಸಾನ್ನಿಧ್ಯ, ಶಾಸಕ ಬಸವರಾಜ್ ಶಿವಗಂಗಾ ಅಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನಾಧ್ಯಕ್ಷರಾಗಿ ಕೆ. ಸಿದ್ದಲಿಂಗಪ್ಪ ಸಂತೇಬೆನ್ನೂರು ಭಾಗವಹಿಸಲಿದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಗ್ರಾಮದ ಎಲ್ಲ ಕಡೆ ಹಾಗೂ ಮೆರವಣಿಗೆ ಬರುವ ರಸ್ತೆಯುದ್ದಕ್ಕೂ ಕನ್ನಡ ಬಾವುಟಗಳು ರಾರಾಜಿಸುತ್ತಿವೆ.