ದ್ವೇಷ, ಕ್ಲೇಶ ಹೊಡೆದೋಡಿಸಲು ಸಮ್ಮೇಳನ ಪೂರಕ

blank

ಮಂಡ್ಯ (ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆ): ನಮ್ಮ ನಡುವೆ ಇರುವ ದ್ವೇಷ, ಕ್ಲೇಶ, ದೋಷಗಳನ್ನು ಹೊಡೆದೋಡಿಸಲು ಸಾಹಿತ್ಯ ಸಮ್ಮೇಳನ ಪೂರಕವಾಗಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧಿಪತಿ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಸಮ್ಮೇಳನದ ಉದ್ಘಾಟನಾ ಕಾಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ಇಂದು ಕನ್ನಡ ಡಿಂಡಿಮವ ಬಾರಿಸಬೇಕಾದ ಅನಿವಾರ್ಯತೆಯಿದೆ. ಆ ಮೂಲಕ ಸತ್ತಂತಿಹರನು ಬಡಿದೆಚ್ಚರಿಸಬೇಕಿದೆ ಎಂದರು.

ಭಾಷಾಭಿಮಾನ, ಭಾಷೆಯ ಕುರಿತು ಜಾಗೃತಿ ಮೂಡಿಸುವಲ್ಲಿ ಇಂತಹ ಸಮ್ಮೇಳನಗಳು ಪರಿಣಾಮಕಾರಿ ಪಾತ್ರ ವಹಿಸುತ್ತವೆ. ಇಂದಿನ ಕಾಲಘಟ್ಟದಲ್ಲಿ ಕನ್ನಡಕ್ಕೆ ಎದುರಾಗಿರುವ ಸಂಕಷ್ಟಗಳನ್ನು ಎದುರಿಸಲೇಬೇಕಿದೆ. ಇದಕ್ಕೆ ಭಾಷಾ ಪ್ರೇಮ ಅವಶ್ಯ ಎಂದು ಅಭಿಪ್ರಾಯಪಟ್ಟರು.
ಸ್ಪೀಕರ್ ಭಾಷಾ ಪ್ರೀತಿ ಪಾಠ: ಕಳೆದ ಕೆಲವು ದಿನಗಳಿಂದ ವಿಧಾನಸಭೆಯಲ್ಲಿ ಶಿಸ್ತಿನ ಪಾಠ ಮಾಡುತ್ತಿದ್ದ ಸ್ಪೀಕರ್ ಯು.ಟಿ.ಖಾದರ್, ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಷಾ ಪ್ರೀತಿ ಬಗ್ಗೆ ಪಾಠ ಮಾಡಿ ಗಮನ ಸೆಳೆದರು. ನಾವು ಬೇರೆ ಭಾಷೆಯನ್ನು ದ್ವೇಷಿಸಿ ಕನ್ನಡವನ್ನು ಬೆಳೆಸಲು ಸಾಧ್ಯವಿಲ್ಲ. ಗಡಿ ಭಾಗದಲ್ಲಿರುವವರು ನೆರೆಯ ಭಾಷೆಯನ್ನೂ ಗೌರವಿಸಬೇಕು ಎಂದು ತಿಳಿಸಿದರು.

ಮಂಡ್ಯದ ಬಗ್ಗೆ ವಿಶೇಷ ಅಭಿಮಾನವ್ಯಕ್ತಪಡಿಸಿದ ಖಾದರ್, ಮಂಡ್ಯದ ಗಂಡು ಎಂದರೆ ಅಂಬರೀಷ್ ಮಾತ್ರವಲ್ಲ. ಇಲ್ಲಿರುವ ಪ್ರತಿಯೊಬ್ಬರಲ್ಲೂ ವಿಶೇಷ ಶಕ್ತಿಯಿದೆ. ಇಲ್ಲಿನ ಜನರ ಕನ್ನಡ ಪ್ರೀತಿ ವಿಶೇಷವಾದದ್ದು ಎಂದರು.

ಸಾಹಿತ್ಯ ಸಮ್ಮೇಳನಗಳು ಮುಂದಿನ ಪೀಳಿಗೆಗೆ ನಮ್ಮ ಭಾಷೆ, ಸಂಸ್ಕೃತಿಯನ್ನು ದಾಟಿಸಲು ಅನುಕೂಲವಾಗಿವೆ. ಪಾಶ್ಚಾತ್ಯ, ಸಂಸ್ಕೃತಿ, ತಂತ್ರಜ್ಞಾನದ ಭರಾಟೆಯನ್ನೂ ಮೀರಿ ಕನ್ನಡ ಬೆಳೆಯುತ್ತಿದೆ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಈ ಇಲಾಖೆ ನಿರ್ವಹಣೆ ಮಾಡುತ್ತಿರುವ ನನಗೆ ಇದು ಮೂರನೇ ಸಮ್ಮೇಳನವಾಗಿದೆ. ಮಂಡ್ಯ ಎಂದರೆ ಇಂಡಿಯಾ ಎನ್ನುವ ಮಾತಿದೆ. ಇಲ್ಲಿ ಮೂರನೇ ಬಾರಿಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಸಿದ್ದುಗೆ ಬಹುಪರಾಕ್: ಅಖಿಲ ಭಾರತ ಸಾಹಿತ್ಯ ಸಮ್ಮೆಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವರು ಸಿಎಂ ಸಿದ್ದರಾಮಯ್ಯ ಅವರಿಗೆ ಬಹುಪರಾಕ್ ಹೇಳುವಲ್ಲಿ ಸ್ಪರ್ಧೆಗೆ ಬಿದ್ದವರಂತೆ ಕಂಡುಬಂದಿತು. ಶಿವರಾಜ ತಂಗಡಗಿ ಅನ್ನರಾಮಯ್ಯ, ಕನ್ನಡ ರಾಮಯ್ಯ, ಗ್ಯಾರಂಟಿ ರಾಮಯ್ಯ ಎಂದು ಮಾತು ಅರಂಭಿಸಿದರೆ ಅದಕ್ಕೂ ಮುನ್ನ ಮಾತನಾಡಿದ ಎನ್.ಚಲುವರಾಯಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಮಧೇನುವಿದ್ದಂತೆ. ಅಭಿವೃದ್ಧಿ ಹಾಗೂ ಬಡಜನರ ಪರವಾದ ಕೆಲಸಕ್ಕೆ ಅವರೆಂದೂ ಹಿಂದೇಟು ಹಾಕುವುದಿಲ್ಲ. ನಾನು 3-4 ಸಿಎಂಗಳನ್ನು ನೋಡಿದ್ದೇನೆ. ಇಷ್ಟೊಂದು ಸಹಕಾರ ಯಾರಿಂದಲೂ ಸಿಕ್ಕಿರಲಿಲ್ಲ ಎಂದರು.

ಮಾತಿಗೆ ನಿಂತ ಸ್ಪೀಕರ್ ಸಾಹೇಬರು, ಕನ್ನಡದ ಮೇಲಿನ ಪ್ರೀತಿಯಿಂದಾಗಿ ರಾಜ್ಯ ಸರ್ಕಾರ ವಿಧಾನಸಭೆ ಅಧಿವೇಶನವನ್ನು ಒಂದು ದಿನ ಮೊಟಕುಗೊಳಿಸಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಕ್ರೆಡಿಟ್ ನೀಡಿದರು.

ಎಸ್.ಎಂ.ಕೃಷ್ಣಗೆ ಸಂತಾಪ: ಇತ್ತೀಚೆಗೆ ನಿಧನರಾದ ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾಯಕ್ರಮದ ಅರಂಭದಲ್ಲಿ ಮೌನಾಚರಣೆ ಮಾಡುವ ಮೂಲಕ ಸಂತಾಪ ಸೂಚಿಸಲಾಯಿತು. ಆರಂಭದಲ್ಲಿ ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ, ಎಸ್.ಎಂ.ಕೃಷ್ಣ ಅವರಂತಹ ರಾಜಕಾರಣಿ ಎಂದಿಗೂ ಸಿಗುವುದಿಲ್ಲ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಎಸ್.ಎಂ.ಕೃಷ್ಣ ರಾಜ್ಯಕ್ಕೆ ಈ ಜಿಲ್ಲೆಯ ಪ್ರಮುಖ ಕೊಡುಗೆ ಎಂದು ಹೇಳಿದರು.

Share This Article

ಬಿಸಿಲಲ್ಲಿ ಸೆಖೆ ತಾಳಲಾರದೆ ICE ನೀರು ಕುಡಿದ್ರೆ ಜೀವಕ್ಕೆ ಅಪಾಯ ಖಂಡಿತ! Summer Health

Summer Health: ನೀರು ಮನುಷ್ಯರಿಗೆ ಬಹಳ ಅವಶ್ಯಕ. ನಾವು ಅನ್ನ ತಿನ್ನದೆ ಬದುಕಬಹುದು, ಆದರೆ ನೀರು…

ತಾಳಲಾರದ ಬೇಗೆ, ತಡೆಯುವುದು ಹೇಗೆ? ಎಸಿ, ಕೂಲರ್ ಈ ಎರಡರಲ್ಲಿ ಯಾವುದು ಬೆಸ್ಟ್​? ಇಲ್ಲಿದೆ ನೋಡಿ ಉತ್ತರ | Summer

Summer: ಇದು ಬೇಸಿಗೆ ಕಾಲ. ಕೇವಲ ಬೇಸಿಗೆ ಅಲ್ಲ ಮುಂದಿನ ಎರಡು ತಿಂಗಳಲ್ಲಿ ಬಿರು ಬೇಸಿಗೆ…

ಒಂದು ಪ್ರೀತಿಯ ಅಪ್ಪುಗೆ ಸಾಕು! ವಾಸಿ ಮಾಡುತ್ತೆ ನಾನಾ ಕಾಯಿಲೆ… hugging

hugging : ಫೆಬ್ರವರಿ 12 ರಂದು ಅಪ್ಪುಗೆಯ ದಿನ, ಅಂದರೆ ಪ್ರೀತಿಪಾತ್ರರನ್ನು ಅಪ್ಪಿಕೊಳ್ಳುವ ಮೂಲಕ ಅವರ…