ಬೆಂಗಳೂರು: ಮನಸ್ಸು ಮತ್ತು ಛಲ ಇದ್ದರೆ ಏನನಾದ್ದರೂ ಸಾಧಿಸಬಹುದು ಎಂಬುದನ್ನು ಬಿಎಂಟಿಸಿ ಕಂಡಕ್ಟರ್ ಒಬ್ಬರು ಮಾಡಿ ತೋರಿಸಿದ್ದಾರೆ. ಹೌದು, ಮಳವಳ್ಳಿ ಮೂಲದ ಎನ್.ಸಿ. ಮಧು ಕಂಡಕ್ಟರ್ ಆಗಿ ಕೆಲಸ ಮಾಡುತ್ತಲೇ ಯುಪಿಎಸ್ಸಿ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಸಾಧನೆ ಮಾಡಲು ಪ್ರೋತ್ಸಾಹ ನೀಡುತ್ತಿರುವವರು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಎಂಬುದು ಮತ್ತೊಂದು ವಿಶೇಷ.
ನಿತ್ಯ 8 ಗಂಟೆ ಕಂಡಕ್ಟರ್ ಕೆಲಸ ಮಾಡುವ ಮಧು, ನಿತ್ಯವೂ 5 ಗಂಟೆ ಯುಪಿಎಸ್ಸಿ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದರು. ಮುಖ್ಯಪರೀಕ್ಷೆಯಲ್ಲಿ ಉತ್ತೀರ್ಣರಾದ ಅವರು ಮಾರ್ಚ್ನಲ್ಲಿ ನಡೆವ ಸಂದರ್ಶನಕ್ಕೆ ಸಿ.ಶಿಖಾ ಮಾರ್ಗದರ್ಶನದಲ್ಲಿ ಸಿದ್ಧತೆಯನ್ನೂ ನಡೆಸುತ್ತಿದ್ದಾರೆ.
2019ರ ಜೂನ್ನಲ್ಲಿ ಮಧು ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆ ಬರೆದಿದ್ದರು. ಇದರ ಫಲಿತಾಂಶ ಅಕ್ಟೋಬರ್ನಲ್ಲಿ ಬಂದಿತು. ಪರೀಕ್ಷೆಗೆ ರಾಜ್ಯಶಾಸ್ತ್ರ ಮತ್ತು ಅಂತಾರಾಷ್ಟ್ರೀಯ ಸಂಬಂಧ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಕನ್ನಡದಲ್ಲೇ ಪೂರ್ವಭಾವಿ ಪರೀಕ್ಷೆ ಬರೆದಿದ್ದರು. ಮುಖ್ಯ ಪರೀಕ್ಷೆಯನ್ನು ಆಂಗ್ಲ ಭಾಷೆಯಲ್ಲಿ ಎದುರಿಸಿದ್ದರು.
ಕೆಲಸದ ನಡುವೆ ಓದು: ಮಧು 19ನೇ ವಯಸ್ಸಿಗೆ ವೃತ್ತಿ ಜೀವನ ಆರಂಭಿಸಿದವರು. ಓದುವ ಹಂಬಲ ಇದ್ದ ಕಾರಣ ಕೆಲಸ ಮಾಡುತ್ತಲೇ ದೂರ ಶಿಕ್ಷಣದ ಮೂಲಕ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಐಎಎಸ್ ಮಾಡಲೇಬೇಕು: 2014ರಲ್ಲಿ ಕೆಎಎಸ್ನಲ್ಲಿ ಉತ್ತೀರ್ಣರಾದರೂ ಐಎಎಸ್ ಮಾಡಲೇಬೇಕು ಎಂಬ ಛಲ ಮಧು ಅವರಲ್ಲಿತ್ತು. 2018ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದು ಅನುತ್ತೀರ್ಣರಾದರು. 2019ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಮಾರ್ಚ್ನಲ್ಲಿ ಸಂದರ್ಶನ ಎದುರಿಸಲು ಅಣಕು ಸಂದರ್ಶನದ ವಿಡಿಯೋ ನೋಡುತ್ತ ಕಲಿಕೆ ಮುಂದುವರಿಸಿದ್ದಾರೆ.
ನನಗೆ ಮೊದಲಿನಿಂದಲೂ ಐಎಎಸ್ ಮಾಡಬೇಕೆಂಬ ಆಸೆ ಇದ್ದು, ಅದನ್ನು ಪೂರೈಸಿಕೊಳ್ಳ ಬೇಕೆಂದು ವ್ಯಾಸಂಗ ಮಾಡುತ್ತಿದ್ದೇನೆ. ನಮ್ಮ ಕುಟುಂಬದಲ್ಲಿ ಹೆಚ್ಚು ಓದಿರುವವನು ನಾನೇ. ಶಿಖಾ ಮೇಡಂ ರೀತಿ ಅಧಿಕಾರಿ ಆಗಬೇಕು.
| ಎನ್.ಸಿ.ಮಧು ಬಿಎಂಟಿಸಿ ಕಂಡಕ್ಟರ್
ಸಿ.ಶಿಖಾ ಮಾರ್ಗದರ್ಶನ
ಐಎಎಸ್ ಮಾಡಬೇಕೆಂಬ ಹಂಬಲವನ್ನು ಬಿಎಂಟಿಸಿ ಎಂಡಿ ಸಿ.ಶಿಖಾ ಬಳಿ ಮಧು ಹೇಳಿದಾಗ ಸಹಾಯ ಮಾಡುವುದಾಗಿ ಅವರು ಹೇಳಿದ್ದಾರೆ. ಮುಖ್ಯಪರೀಕ್ಷೆಗೆ ಸಿದ್ಧತೆ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ವಾರದಲ್ಲಿ 2 ಗಂಟೆ ತರಬೇತಿ ಸಹ ನೀಡುತ್ತಿದ್ದಾರೆ.