ಇದು ಕ್ರೂರ ವಿಧಿಯ ಅಟ್ಟಹಾಸ ಎಂದ ಮಾಜಿ ಪ್ರಧಾನಿ; ಭವಿಷ್ಯದಲ್ಲಿ ಹೀಗಾಗದಿರಲಿ ಎಂದ ಸಿದ್ದರಾಮಯ್ಯ

ಬೆಂಗಳೂರು: ಮಂಡ್ಯದ ಭೀಕರ ದುರಂತಕ್ಕೆ ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಪರಮೇಶ್ವರ್​ ಟ್ವೀಟ್​ ಮೂಲಕ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

“ಪಾಂಡವಪುರದ ಕನಗನಮರಡಿಯ ಘೋರ ಘಟನೆ ಮನಕಲಕಿದೆ. ಅದರಲ್ಲೂ, ಬಾಳಿ ಬದುಕಬೇಕಿದ್ದ ಮಕ್ಕಳೂ ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದು ನನ್ನನ್ನು ಅತೀವ ಘಾಸಿಗೊಳಿಸಿದೆ. ಇದು ಕ್ರೂರ ವಿಧಿಯ ಅಟ್ಟಹಾಸವೇ ಸರಿ. ನೋವುಣ್ಣುತ್ತಿರುವ ಸಂತ್ರಸ್ತ ಕುಟುಂಬಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ,” ಎಂದು ದೇವೇಗೌಡರು ಟ್ವೀಟ್​ ಮಾಡಿದ್ದಾರೆ.

“ದುರ್ಘಟನೆಯಲ್ಲಿ 20 ಕ್ಕೂ ಅಧಿಕ ಮಂದಿ ಸಾವಿಗೀಡಾಗಿರುವುದು ಅತೀವ ನೋವುಂಟುಮಾಡಿದೆ. ಮೃತರ ಕುಟುಂಬಕ್ಕೆ ನನ್ನ ಸಂತಾಪಗಳು ಹಾಗೂ ಮುಂದೆ ಇಂತಹ ದುರ್ಘಟನೆಗಳು ಸಂಭವಿಸದಿರಲಿ ಎಂದು ಪ್ರಾರ್ಥಿಸುತ್ತೇನೆ,” ಎಂದು ಸಿದ್ದರಾಮಯ್ಯ ಟ್ವೀಟ್​ ಮೂಲಕ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

“ಮಂಡ್ಯದ ಪಾಂಡವಪುರದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತ ಅತೀವ ದುಃಖ ತಂದಿದೆ. ಈ ದಾರುಣ ಅವಘಡದಲ್ಲಿ ಅಗಲಿದ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ,” ಎಂದು ಪರಮೇಶ್ವರ್​ ಟ್ವೀಟ್​ ಮಾಡಿದ್ದಾರೆ.

ಪಾಂಡವಪುರ ತಾಲ್ಲೂಕಿನ ಕನಗನಮರಡಿಯಲ್ಲಿ ವಿ.ಸಿ.ನಾಲೆಗೆ ಖಾಸಗೀ ಬಸ್ ಬಿದ್ದು 23ಮಂದಿ ಅಸು ನೀಗಿರುವುದು ದುರ್ದೈವದ ಸಂಗತಿ. ಅಮಾಯಕರು ಹೀಗೆ ಅನ್ಯಾಯವಾಗಿ ಸಾವಿಗೀಡಾಗಿರುವುದು ಅತ್ಯಂತ ನೋವುಂಟು ಮಾಡಿದೆ. ಮೃತರ ಕುಟುಂಬಕ್ಕೆ ಸಾಂತ್ವನ ಕೋರುವೆ. ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮೃತರ ಕುಟುಂಬಕ್ಕೆ ಅಗತ್ಯವಾದ ನೆರವು ನೀಡಲು ಮುಂದಾಗಬೇಕು ಎಂದು ಮಾಜಿ ಸಿಎಂ ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ಮಂಡ್ಯದಲ್ಲಿ ದುರಂತಕ್ಕೀಡಾದ ಬಸ್​ ಮಂಗಳೂರಿನದ್ದು, 18 ವರ್ಷ ಹಳೆಯದು