ಮದುವೆಗೆ ಷರತ್ತಿನ ಅನುಮತಿ

ಬೆಂಗಳೂರು: ಮುಕ್ತ ಹಾಗೂ ನ್ಯಾಯಸಮ್ಮತ ಲೋಕಸಭೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಮದುವೆ, ಹುಟ್ಟುಹಬ್ಬದಂತಹ ಖಾಸಗಿ ಶುಭ ಸಮಾರಂಭಗಳಿಗೆ ಅನುಮತಿ ಪಡೆದುಕೊಳ್ಳುವ ಅಗತ್ಯವಿಲ್ಲವಾದರೂ ಮತದಾರರನ್ನು ಓಲೈಸುವಂತಹ ಯಾವುದೇ ಚಟುವಟಿಕೆ ಮಾಡುವುದನ್ನು ನಿಷೇಧಿಸಲಾಗಿದೆ. ಕಾರ್ಯಕ್ರಮಗಳ ನೆಪದಲ್ಲಿ ರಾಜಕೀಯ ವ್ಯಕ್ತಿಗಳು ಊಟ, ಮದ್ಯದ ವ್ಯವಸ್ಥೆ ಮಾಡುವುದು ಬಹಿರಂಗವಾದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಎಚ್ಚರಿಸಿದ್ದಾರೆ. ಶುಭ ಸಮಾರಂಭಗಳಿಗೆ ಅನುಮತಿ ಇದೆಯೇ ಇಲ್ಲವೇ ಎಂದು ಗೊಂದಲಕ್ಕೀಡಾಗಿ ಹಲವರು ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಮಾದರಿ ನೀತಿ ಸಂಹಿತೆ ಜಾರಿ ದಳದ ಅಧಿಕಾರಿಗಳನ್ನು ಭೇಟಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.

ಖಾತೆ ಮೇಲೂ ನಿಗಾ: ಪೇಟಿಎಂ ಸೇರಿದಂತೆ ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರಗಳ ಮೇಲೆ ನಿಗಾ ಇಡುವುದು ಕಷ್ಟವಾದರೂ ಒಂದೇ ಅಕೌಂಟ್ ನಿಂದ ದೊಡ್ಡ ಮೊತ್ತದ ಹಣ ವರ್ಗಾವಣೆಯಾಗುತ್ತಿದ್ದರೆ ಅಂತಹ ಖಾತೆಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಲಿದ್ದಾರೆ. ಬ್ಯಾಂಕ್ ಹಾಗೂ ಎಟಿಎಂಗಳಿಗೆ ಹಣ ಸಾಗಿಸುವ ವಾಹನಗಳವರೂ ಚುನಾವಣಾ ಆಯೋಗಕ್ಕೆ ಅಗತ್ಯ ದಾಖಲೆ ನೀಡಿ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.

ಬಳಕೆಗೆ ನಿರ್ಬಂಧ: ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ಸೇರಿದಂತೆ ಮಿಲಿಟರಿ ಅಧಿಕಾರಿಗಳ ಫೋಟೋ, ವೀಡಿಯೋವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ.

ಪ್ರಚಾರ ಸಾಮಗ್ರಿ ತೆರವು: ರಾಜ್ಯಾದ್ಯಂತ 702 ನಾಕಾ, 1,513 ಪ್ಲೈಯಿಂಗ್ ಸ್ಕಾ್ವಡ್ ಹಾಗೂ 1,837 ಸ್ಪಾಟಿಕ್ ಸರ್ವೆಲೆನ್ಸ್ ತಂಡ ರಚಿಸಲಾಗಿದೆ. ಇದುವರೆಗೆ ಸಾರ್ವಜನಿಕ ಆಸ್ತಿಗಳ ಮೇಲಿನ 23,735 ಗೋಡೆ ಬರಹ, 89, 688 ಪೋಸ್ಟರ್,52,452-ಬ್ಯಾನರ್ ಹಾಗೂ 25,935 ಇತರೆ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ. ಖಾಸಗಿ ಆಸ್ತಿಗಳ ಮೇಲಿನ 62,173 ಪ್ರಚಾರ ಸಾಮಗ್ರಿಗಳನ್ನು ತೆಗೆದು ಹಾಕಲಾಗಿದೆ.

ಹಣ, ಗಿಫ್ಟ್ ಸಾಗಣೆಗೆ ದಾಖಲೆ ಕಡ್ಡಾಯ

ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಸಾರ್ವಜನಿಕರು 50 ಸಾವಿರಕ್ಕಿಂತ ಹೆಚ್ಚು ನಗದು ಸಾಗಣೆ ಮಾಡುವಂತಿಲ್ಲ. 10 ಸಾವಿರ ರೂ.ಗೂ ಹೆಚ್ಚು ಮೌಲ್ಯದ ಉಡುಗೊರೆ ಗಳನ್ನು ಸಾಗಿಸುವಂತಿಲ್ಲ. ಒಂದು ವೇಳೆ ಸಾಗಿಸಿದರೆ ನಿರ್ದಿಷ್ಟ ದಾಖಲೆಗಳನ್ನು ತಮ್ಮೊಂದಿಗೆ ಇರಿಸಿಕೊಳ್ಳಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ಸಾಲು ಸಾಲು ಮುಹೂರ್ತ

ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಾಲುಸಾಲಾಗಿ ವಿವಾಹ ಮುಹೂರ್ತಗಳಿವೆ. ಮಾ.27, 28, 30, ಏ.17, 19, 20, 21, 22, 23, 24, 26, 27, 29 ಮತ್ತು ಮೇ 2, 6, 7, 8, 9, 10, 12, 14, 15, 16, 20, 21, 23ರಂದು ಉತ್ತಮ ಮುಹೂರ್ತಗಳಿವೆ. ಏ.18 ಹಾಗೂ 23 ರಾಜ್ಯದಲ್ಲಿ ಮತದಾನ ನಡೆಯಲಿದ್ದು, ಈ ದಿನ ವಿವಾಹ ಮುಹೂರ್ತಗಳಿರುವುದರಿಂದ ಮತದಾನ ಪ್ರಮಾಣ ಕಡಿಮೆಯಾಗುವ ಆತಂಕವೂ ಇದೆ.

ಜೂನ್​ನಲ್ಲಿ ಮಂಡ್ಯದಲ್ಲಿ ಹೊಸ ಸಕ್ಕರೆ ಕಾರ್ಖಾನೆಗೆ ಅಡಿಗಲ್ಲು ಹಾಕುವುದಾಗಿ ಸಿಎಂ ನೀಡಿರುವ ಹೇಳಿಕೆ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.

| ಸಂಜೀವ್ ಕುಮಾರ್, ರಾಜ್ಯ ಮುಖ್ಯ ಚುನಾವಣಾಧಿಕಾರಿ