ಅಕ್ಕಿಆಲೂರ: ಹೆಚ್ಚುತ್ತಿರುವ ಕಾಂಕ್ರೀಟ್ ಜಗತ್ತು, ಪ್ರಕೃತಿಗೆ ಮಾರಕವಾಗುತ್ತಿದೆ ಎಂದು ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ಅಬ್ದುಲ್ ಸತ್ತಾರ ಸುಂಕದವರ ಹೇಳಿದರು.
ಸಮೀಪದ ಶಿರಗೋಡ ವಲಯದ ಚಿಕ್ಕೌಂಶಿಹೊಸೂರ ಗ್ರಾಮದಲ್ಲಿ ಸೋಮವಾರ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಪರಿಸರ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೀಳುವ ಮಳೆ ಇಂಗಲು, ಕಾಂಕ್ರೀಟ್ ರಸ್ತೆ, ಚರಂಡಿಗಳು ಅಡ್ಡಿಯಾಗಿವೆ. ಕಾಡುಗಳು ಇದ್ದಲ್ಲಿ ಮಳೆ ಅಧಿಕ ಎಂಬ ಸಾಮಾನ್ಯ ಜ್ಞಾನ ಇದ್ದರೂ, ಕಾಡುಗಳ ಸಂರಕ್ಷಣೆ ಮತ್ತು ಗಿಡನೆಟ್ಟು ಬೆಳಸುವಲ್ಲಿ ಸಮುದಾಯದ ನಿರ್ಲಕ್ಷ್ಯ ತೋರಿಸುತ್ತಿದೆ ಎಂದರು.
ವಾಸುದೇವಮೂರ್ತಿ ಮೂಡಿ ಮಾತನಾಡಿ, ಸಾಮಾಜಿಕ ಕಾರ್ಯವೇ ಉಸಿರಾಗಿಸಿಕೊಂಡ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಾ ಸಮಾಜಮುಖಿ ಕಾರ್ಯಕ್ಕೆ ತನ್ನನ್ನು ಸಮರ್ಪಿಸಿಕೊಳ್ಳುತ್ತಿದೆ. ಮಕ್ಕಳಲ್ಲಿ ಪರಿಸರ, ಸಮಾಜದ ಕುರಿತು ಜವಾಬ್ದಾರಿ ಮೂಡಿಸಬೇಕು ಎಂದು ಹೇಳಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಮುಖ್ಯಾಧ್ಯಾಪಕಿ ಶಬಾನ ಬೇಗಂ ಕಲಘಟಗಿ, ಅಂಜುಮನ್ ಕಮಿಟಿ ಅಧ್ಯಕ್ಷ ಹುಸೇನ್ ಮಿಯಾ ಬಳಗಲಿ, ಮಸೀದ್ ಸಾಬ್ ಗಡ್ಡಿಗೆರ, ಸಂಘದ ಒಕ್ಕೂಟದ ಅಧ್ಯಕ್ಷೆ ಗೀತಾ ಈಳಿಗೇರ, ಒಕ್ಕೂಟದ ಉಪಾಧ್ಯಕ್ಷೆ ಆಶಾ ಹುಲ್ಲತ್ತಿ, ಕೃಷಿ ವಿಭಾಗದ ಮೇಲ್ವಿಚಾರಕಿ ಮಹಾಂತೇಶ ಹರಕುಣಿ, ಸೇವಾ ಪ್ರತಿನಿಧಿ ಜ್ಯೋತಿ ಪೂಜಾರ ಉಪಸ್ಥಿತರಿದ್ದರು.