ಉಳ್ಳಾಲದಲ್ಲಿ ಡೇಂಜರ್ ಕಾಂಕ್ರೀಟ್ ರಸ್ತೆಗಳು!

ಅನ್ಸಾರ್ ಇನೋಳಿ ಉಳ್ಳಾಲ
ಉಳ್ಳಾಲ ಅಭಿವೃದ್ಧಿಯ ನಾಗಲೋಟದಲ್ಲಿ ಮುಂದುವರಿಯಬೇಕಾದರೆ ಇಲ್ಲಿನ ರಸ್ತೆಗಳೆಲ್ಲವೂ ಕಾಂಕ್ರೀಟ್‌ನಿಂದ ಕಂಗೊಳಿಸಬೇಕು ಎನ್ನುವ ನಿಟ್ಟಿನಲ್ಲಿ ಸಚಿವರು ಕೋಟಿ ಕೋಟಿ ಅನುದಾನ ಉಳ್ಳಾಲದ ರಸ್ತೆಗಳಿಗೆ ಸುರಿಯುತ್ತಿದ್ದಾರೆ. ಆದರೆ ಗುತ್ತಿಗೆದಾರರು ಅವೈಜ್ಞಾನಿಕ ಕಾಮಗಾರಿ ನಡೆಸುತ್ತಿರುವುದರಿಂದ ವಾಹನ ಸವಾರರು ಪ್ರಾಣಭಯದಲ್ಲಿ ಸಂಚರಿಸಬೇಕಾಗಿದೆ.
ತೊಕ್ಕೊಟ್ಟು ಒಳ ರಸ್ತೆಯಿಂದ ಉಳ್ಳಾಲ ದರ್ಗಾವರೆಗೆ, ದರ್ಗಾದಿಂದ ನಗರಸಭೆಯವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಆಗಿದೆ. ಕಾಮಗಾರಿ ಸಂದರ್ಭ ಇಂತಿಷ್ಟು ದಪ್ಪವಾಗಿರಬೇಕು ಎನ್ನುವ ನಿಯಮವೂ ಪಾಲನೆಯಾಗಿದೆ. ಆದರೆ ಅದೇ ದಪ್ಪದ ರಸ್ತೆಗಳ ಬದಿಗೆ ಮಣ್ಣು ಹಾಕುವ ಅವಕಾಶ ಹೆಚ್ಚಿನ ಕಡೆ ಇಲ್ಲದಿರುವುದೇ ಅಪಾಯದ ಕರೆಗಂಟೆಯಾಗಿ ಪರಿಣಮಿಸಿದೆ.
ರಸ್ತೆಯುದ್ದಕ್ಕೂ ಹಿಂದೆಯೇ ನಗರಸಭೆಯಿಂದ ನಿರ್ಮಿಸಲಾದ ಒಳಚರಂಡಿಯಿದೆ. ಅದಕ್ಕೆ ಸಮನಾಗಿ ಕಾಂಕ್ರೀಟ್ ರಸ್ತೆ ನಿರ್ಮಿಸಿದ್ದರೆ ಯಾವುದೇ ಸಮಸ್ಯೆ ಬರುತ್ತಿರಲಿಲ್ಲ. ಆದರೆ ಇಲ್ಲಿ ಚರಂಡಿಗಿಂತ ಮೇಲ್ಮಟ್ಟದಲ್ಲಿ ಕಾಂಕ್ರೀಟ್ ರಸ್ತೆ ಎದ್ದು ನಿಂತಿರುವುದರಿಂದ ರಸ್ತೆಬದಿಗೆ ಮಣ್ಣು ಹಾಕಲು ಅಸಾಧ್ಯ. ಒಂದು ವೇಳೆ ಮಣ್ಣು ಹಾಕಿದರೂ ಚರಂಡಿ ಮೇಲೇನೇ ಹಾಕಬೇಕು ಎನ್ನುವ ಪರಿಸ್ಥಿತಿ ಇದೆ. ಕೆಲವು ಕಡೆ ತೆರೆದ ಚರಂಡಿಗೆ ತಾಗಿಯೇ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದ್ದು, ವಾಹನ ಸವಾರರು ಸ್ವಲ್ಪ ಯಾಮಾರಿದರೂ ಒಂದೋ ಆಸ್ಪತ್ರೆ ಸೇರಬೇಕು, ಇಲ್ಲವಾದರೆ ಯಮಲೋಕ ಸೇರಬೇಕು ಎನ್ನುವ ಸ್ಥಿತಿ ಇದೆ. ಈಗಾಗಲೇ ಹಲವು ಅಪಘಾತಗಳೂ ಇಲ್ಲಿ ನಡೆದಿವೆ.

ಜಾಗದ್ದೇ ಮೂಲ ಸಮಸ್ಯೆ:  ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಇಲಾಖೆಗೊಳಪಡುವ ಮುಖ್ಯ ರಸ್ತೆಗಳು ವಿಸ್ತರಣೆ ಸಂದರ್ಭ ಇಕ್ಕೆಲಗಳಲ್ಲಿ ಜಾಗ ಮೀಸಲಿಡಲಾಗುತ್ತದೆ. ಆದರೆ ಒಳರಸ್ತೆಗಳ ಕಾಮಗಾರಿ ಸಂದರ್ಭ ರಸ್ತೆ ಇಕ್ಕೆಲಗಳಲ್ಲಿ ಜಮೀನನ್ನು ಮುಕ್ತ ಮನಸ್ಸಿನಿಂದ ಬಿಟ್ಟು ಕೊಡುತ್ತಾರೆ. ಆದರೆ ಉಳ್ಳಾಲ ಭಾಗದಲ್ಲಿ ಕಾಮಗಾರಿ ನಡೆದ ರಸ್ತೆಯ ಇಕ್ಕೆಲಗಳಲ್ಲಿ ಮನೆಗಳಿದ್ದು, ವಿಸ್ತರಣೆಗೆ ಜಮೀನು ನೀಡುವವರೂ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಇದ್ದ ರಸ್ತೆಗೇ ಕಾಂಕ್ರೀಟ್ ಹಾಕಲಾಗಿದೆ. ಕೆಲವು ಕಡೆ ಹಳೆಯ ಚರಂಡಿ ಇದೆಯಾದರೂ ಇನ್ನು ಕೆಲವು ಕಡೆ ಇಲ್ಲ. ಹೊಸ ಚರಂಡಿ ನಿರ್ಮಾಣಕ್ಕೆ ಜಾಗವೂ ಇಲ್ಲದ ಪರಿಸ್ಥಿತಿ ಇದೆ.

ಒಳರಸ್ತೆಗಳಿಗೆ ಕೋಟಿಗಟ್ಟಲೆ ಹಣ ಸುರಿದು ಕಾಮಗಾರಿ ನಡೆಸುವ ಸಂದರ್ಭ ಸಾಕಷ್ಟು ವಿಸ್ತರಣೆ ಆಗಬೇಕು. ಜತೆಗೆ ಸೂಕ್ತವಾದ ಚರಂಡಿ ನಿರ್ಮಾಣಕ್ಕೂ ಅವಕಾಶ ಇರಬೇಕು. ಆದರೆ ಇಲ್ಲಿ ಅಂತಹ ಅವಕಾಶ ಇಲ್ಲದಿದ್ದರೂ ದುಬಾರಿ ಖರ್ಚಿನಲ್ಲಿ ಕಾಮಗಾರಿ ನಡೆಸಲಾಗಿದೆ. ಈಗಿನ ಕಾಮಗಾರಿ ವಾಹನ ಸವಾರರನ್ನು ಆತಂಕಕ್ಕೀಡು ಮಾಡಿದೆ.
ದಿನಕರ್ ಉಳ್ಳಾಲ್ ನಗರಸಭಾ ಸದಸ್ಯ

ನೂತನ ರಸ್ತೆಯಲ್ಲಿ ಸಾವಿರಾರು ಜನರು ನಡೆದಾಡುತ್ತಾರೆ, ಶಾಲೆ, ಕಾಲೇಜುಗಳಿಗೆ ಹೋಗುತ್ತಾರೆ. ಆದರೆ ನಡೆದಾಡಲು ಸೂಕ್ತವಾದ ಫುಟ್‌ಪಾತ್ ವ್ಯವಸ್ಥೆಯಿಲ್ಲದ ಕಾರಣ ಆತಂಕ ಎದುರಾಗಿದೆ. ರಸ್ತೆ ನಿರ್ಮಾಣ ಸಂದರ್ಭ ಮೂಲಸೌಕರ್ಯಕ್ಕೂ ಆದ್ಯತೆ ನೀಡಬೇಕಿತ್ತು.
ದಯಾನಂದ ತೊಕ್ಕೊಟ್ಟು, ವಾಹನ ಸವಾರ

Leave a Reply

Your email address will not be published. Required fields are marked *