ಕಾಂಕ್ರೀಟ್ ರಸ್ತೆಯೂ ಅಪಾಯ

«ರಸ್ತೆ ಮಧ್ಯ ಅಪಾಯಕಾರಿ ಬಿರುಕು *ನಿಯಂತ್ರಣ ತಪ್ಪಿ ಬಿದ್ದು ಹಲವರಿಗೆ ಗಾಯ»

ಭರತ್ ಶೆಟ್ಟಿಗಾರ್ ಮಂಗಳೂರು
ನಗರದಲ್ಲಿನ ಕಾಂಕ್ರೀಟ್ ರಸ್ತೆಗಳು ಕೆಲವು ಕಡೆ ಸಂಚಾರಕ್ಕೆ ಅಪಾಯಕಾರಿಯಾಗುತ್ತಿದ್ದು, ದ್ವಿಚಕ್ರ ವಾಹನ ಸವಾರರು ಪ್ರತಿ ದಿನವೂ ಬಿದ್ದು ಗಾಯಗೊಳ್ಳುತ್ತಿದ್ದಾರೆ.

ಹಲವು ವರ್ಷಗಳ ಹಿಂದೆ ನಿರ್ಮಾಣವಾದ ಕಾಂಕ್ರೀಟ್ ರಸ್ತೆಗಳೇ ಈಗ ದ್ವಿಚಕ್ರ ವಾಹನ ಸವಾರರಿಗೆ ಅಪಾಯಕಾರಿಯಾಗುತ್ತಿವೆ. ರಸ್ತೆಯ ಚೌಕಾಕಾರದ ಸ್ಲಾೃಬ್‌ಗಳ ನಡುವೆ ಅಂತರ ಹೆಚ್ಚಾಗಿದ್ದು, ಕೆಲವೆಡೆ ಅಗಲದ ಗುಂಡಿಗಳುಂಟಾಗಿವೆ. ಒಂದಕ್ಕೊಂದು ಸಮಾನಾಂತರವಾಗಿರಬೇಕಾದ ಕಾಂಕ್ರೀಟ್ ಸ್ಲಾೃಬ್‌ಗಳು ಕುಸಿದು ಎತ್ತರ-ತಗ್ಗು ಉಂಟಾಗಿ, ಗುಂಡಿಗಳಿಗಿಂತಲೂ ಅಪಾಯಕಾರಿಯಾಗಿದೆ. ದ್ವಿಚಕ್ರ ವಾಹನಗಳ ಚಕ್ರ ಈ ಬಿರುಕುಗಳ ಮೇಲೆ ಹಾದುಹೋದಾಗ ಬ್ಯಾಲೆನ್ಸ್ ತಪ್ಪಿ ಸವಾರರು ನೆಲಕ್ಕೆ ಬೀಳುತ್ತಾರೆ. ಇಂಥ ಹಲವು ಘಟನೆಗಳು ನಗರದಲ್ಲಿ ನಡೆದಿವೆ. ಗಂಭೀರ ಗಾಯಗೊಂಡ ಉದಾಹರಣೆಗಳೂ ಇವೆ.

ಈ ರಸ್ತೆಗಳು ಅಪಾಯಕಾರಿ: ನಗರದ ಎಂ.ಜಿ ರಸ್ತೆಯುದ್ದಕ್ಕೂ ಕಾಂಕ್ರೀಟ್ ರಸ್ತೆ ಕುಸಿತ, ಬಿರುಕು ಇದೆ. ಮಹಾನಗರ ಪಾಲಿಕೆ ಮುಂಭಾಗದಲ್ಲಿರುವ ಬಸ್ ನಿಲ್ದಾಣ ಎದುರು, ಲೇಡಿಹಿಲ್ ವೃತ್ತ ಬಳಿಯ ಪೆಟ್ರೋಲ್ ಬಂಕ್ ಎದುರು ದೊಡ್ಡ ಮಟ್ಟದಲ್ಲಿ ಕುಸಿತವಿದೆ. ಬಸ್‌ನಲ್ಲಿ ಸಂಚರಿಸುವವರಿಗೂ ಇದು ಅನುಭವಕ್ಕೆ ಬರುತ್ತದೆ. ಎಂಪೈರ್ ಮಾಲ್ ಬಳಿ, ಎಸ್‌ಡಿಎಂ ಕಾಲೇಜು ಎದುರು, ಮಾನಸ ಟವರ್ಸ್‌ ಎದುರು ಮತ್ತು ಅಂಬೇಡ್ಕರ್ ವೃತ್ತದಿಂದ -ಮಿಲಾಗ್ರಿಸ್ ಹಂಪನಕಟ್ಟೆ ಹೋಗುವಲ್ಲೂ ರಸ್ತೆ ಕುಸಿದಿದೆ. ರಸ್ತೆ ಬದಿ ಅಳವಡಿಸಲಾದ ಇಂಟರ್‌ಲಾಕ್ ಕೂಡ ಕುಸಿದಿದೆ. ಲೈಟ್‌ಹೌಸ್ ಹಿಲ್ ರಸ್ತೆ ಕಥೆಯೂ ಇದೇ. ಬಂಟ್ಸ್‌ಹಾಸ್ಟೆಲ್ ವೃತ್ತ ಬಳಿ, ಕೆಎಸ್‌ಆರ್‌ಟಿಸಿ ರಸ್ತೆ, ಬೆಂದೂರ್‌ವೆಲ್, ನವಭಾರತ್ ವೃತ್ತ ಮೊದಲಾದೆಡೆಯೂ ರಸ್ತೆ ಅಪಾಯಕಾರಿಯಾಗುತ್ತಿದೆ. ಕೊಟ್ಟಾರ ಚೌಕಿ ಬಳಿ ಹೆದ್ದಾರಿಯಿಂದ ನಗರಕ್ಕೆ ಬರುವ ಫೆರ‌್ರಿ ರಸ್ತೆ ಆರಂಭವಾದಲ್ಲೇ ರಸ್ತೆ ಕುಸಿದು, ಬಿರುಕು ಬಿಟ್ಟಿದೆ. ಇನ್ಫೋಸಿಸ್ ಎದುರು, ಲೇಡಿಹಿಲ್‌ನಲ್ಲೂ ರಸ್ತೆ ಅಪಾಯಕಾರಿಯಾಗಿದೆ.

ಇಂಟರ್‌ಲಾಕ್ ಕುಸಿತ: ನಗರದ ವಿವಿಧೆಡೆ ಕಾಂಕ್ರೀಟ್ ರಸ್ತೆ ಬದಿಗೆ ಪಾದಚಾರಿ ಮಾರ್ಗದಲ್ಲಿ ಇಂಟರ್‌ಲಾಕ್ ಅಳವಡಿಸಲಾಗಿದ್ದು, ಇದು ಪಾದಚಾರಿಗಳಿಗಷ್ಟೇ ಅಲ್ಲದೆ ದ್ವಿಚಕ್ರ ವಾಹನ ಸವಾರರಿಗೂ ಸಂಕಷ್ಟ ತಂದೊಡ್ಡುತ್ತಿದೆ. ಕಾಂಕ್ರೀಟ್ ರಸ್ತೆಗೆ ಸಮನಾಗಿ ಅಳವಡಿಸಲಾಗಿರುವ ಇಂಟರ್‌ಲಾಕ್ ಕುಸಿಯುತ್ತಿದ್ದು, ಕಾಂಕ್ರೀಟ್ ಅಂಚಿಗೆ ಹೋದ ದ್ವಿಚಕ್ರ ವಾಹನಗಳು ಆಯ ತಪ್ಪಿ ಮಗುಚಿ ಬೀಳುತ್ತಿವೆ. ಜ್ಯೋತಿ ಟಾಕೀಸ್ ಬಳಿ ತಿರುವಿನಲ್ಲಿ ಈ ಹಿಂದೆ ಇಂಟರ್‌ಲಾಕ್ ಎದ್ದು ಹೋಗಿ ಬೃಹತ್ ಹೊಂಡ ನಿರ್ಮಾಣವಾಗಿತ್ತು. ಕೆಲ ತಿಂಗಳ ಹಿಂದೆ ಇಂಟರ್‌ಲಾಕ್ ಅಳವಡಿಸಿ ಸರಿಪಡಿಸಲಾಗಿತ್ತು. ಆದರೆ ಮತ್ತೆ ಇಂಟರ್‌ಲಾಕ್ ಎದ್ದು ಹೋಗಿ ಗುಂಡಿಯುಂಟಾಗಿದೆ.

ಹಿಂದಿನ ಮೇಯರ್ ಸ್ಪಂದನೆ: ಕಾಂಕ್ರೀಟ್ ರಸ್ತೆ ಅಪಾಯಕಾರಿಯಾಗಿರುವ ಕುರಿತು ವರ್ಷದ ಹಿಂದೆ ‘ವಿಜಯವಾಣಿ’ಯಲ್ಲಿ ಚಿತ್ರ ಸಹಿತ ವಿಶೇಷ ವರದಿ ಪ್ರಕಟಿಸಲಾಗಿತ್ತು. ಅದಕ್ಕೆ ಸ್ಪಂದಿಸಿದ್ದ ಅಂದಿನ ಮೇಯರ್ ಕವಿತಾ ಸನಿಲ್ ವರದಿಯಲ್ಲಿ ಸೂಚಿಸಲಾಗಿದ್ದ ಕೆಲವೆಡೆ ರಸ್ತೆಯಲ್ಲಿ ಚೂಪಾದ ಅಂಚನ್ನು ಡ್ರಿಲ್ಲಿಂಗ್ ಮೂಲಕ ಸಮತಟ್ಟುಗೊಳಿಸಲು ಸೂಚಿಸಿದ್ದರು. ಆದರೆ ರಸ್ತೆ ಮಧ್ಯದಲ್ಲಿದ್ದ ಬಿರುಕುಗಳನ್ನು ಸರಿಪಡಿಸಿರಲಿಲ್ಲ. ಹೀಗಾಗಿ ಸ್ಕೂಟರ್- ಬೈಕ್ ಸವಾರರು ಸ್ಕಿಡ್ ಆಗಿ ಬೀಳುವ ಘಟನೆಗಳು ನಿರಂತರವಾಗಿದೆ.

ನಗರದ ಕಾಂಕ್ರೀಟ್ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳನ್ನು ಚಲಾಯಿಸುವುದು ಅಪಾಯಕಾರಿಯಾಗಿದೆ. ಹೆಚ್ಚಿನ ಕಾಂಕ್ರೀಟ್ ರಸ್ತೆಯ ಮಧ್ಯದಲ್ಲಿ ಬಿರುಕು ಬಿಟ್ಟಿದೆ. ಸರಿಪಡಿಸದಿದ್ದಲ್ಲಿ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇದೆ.
– ಗಿರೀಶ್ ಪೂಜಾರಿ, ಖಾಸಗಿ ಸಂಸ್ಥೆ ಉದ್ಯೋಗಿ