ರಾಜಿ ಮೂಲಕ 88 ಪ್ರಕರಣ ಇತ್ಯರ್ಥ

ನಾಗಮಂಗಲ: ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಲೋಕ ಅದಾಲತ್‌ನಲ್ಲಿ ವಿವಿಧ ವ್ಯಾಜ್ಯಗಳಿಗೆ ಸಂಬಂಧಿಸಿದ 88 ಪ್ರಕರಣಗಳನ್ನು ನ್ಯಾಯಾಧೀಶರು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಿದರು.

ಜೆಎಂಎಫ್‌ಸಿ ಹಿರಿಯ ಮತ್ತು ಕಿರಿಯ ಶ್ರೇಣಿಯ ನ್ಯಾಯಾಲಯಗಳಲ್ಲಿ ಚೆಕ್‌ಬೌನ್ಸ್ ಕಾಯ್ದೆಯ 56, ಐಪಿಸಿ ಪ್ರಕರಣ 10, ಸಿವಿಲ್ ಪ್ರಕರಣ 3, ವ್ಯಾಜ್ಯಪೂರ್ವ ಪ್ರಕರಣ 9, ಕ್ರಿಮಿನಲ್ ಪ್ರಕರಣ 2, ಇತರ 8 ಸೇರಿದಂತೆ ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಒಟ್ಟು 88 ಪ್ರಕರಣಗಳನ್ನು ಎರಡೂ ಕಡೆಯ ಕಕ್ಷಿದಾರರು ಮತ್ತು ವಕೀಲರ ಸಮಕ್ಷಮದಲ್ಲಿ ವಿಲೇವಾರಿ ಮಾಡಲಾಯಿತು.

ಕಕ್ಷಿದಾರರನ್ನು ಕುರಿತು ಮಾತನಾಡಿದ ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಜಿ.ತಿಮ್ಮಯ್ಯ, ಸಣ್ಣಪುಟ್ಟ ಜಗಳವನ್ನೇ ದೊಡ್ಡದು ಮಾಡಿಕೊಂಡು ಸ್ವ ಪ್ರತಿಷ್ಠೆಗಾಗಿ ನ್ಯಾಯಾಲಯದ ಮೆಟ್ಟಿಲೇರಬಾರದು. ಹಣ ಮತ್ತು ಸಮಯ ವ್ಯರ್ಥವಿಲ್ಲದೆ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಂಡಿರುವ ಕಕ್ಷಿದಾರರು ಸಹೋದರತ್ವದಿಂದ ಬದುಕು ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಹಳ್ಳಿಗಳಲ್ಲಿ ಸಣ್ಣಪುಟ್ಟ ಘಟನೆಗಳು ಸಂಭವಿಸಿದಾಗ ಹಿರಿಯರ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳಬೇಕು. ಅದು ಸಾಧ್ಯವಾಗದಿದ್ದರೆ ಮಾತ್ರ ಕಾನೂನಿನ ಸಹಾಯ ಪಡೆದು ನ್ಯಾಯ ಪಡೆದುಕೊಳ್ಳಬೇಕು. ಲೋಕ ಅದಾಲತ್‌ನಲ್ಲಿ ಸೋಲು-ಗೆಲುವಿನ ಪ್ರಶ್ನೆ ಬರುವುದಿಲ್ಲ. ಉಭಯ ಕಕ್ಷಿದಾರರಿಗೂ ಸಮಾನ ನ್ಯಾಯ ದೊರೆಯುತ್ತದೆ. ಇದು ಸರ್ವೋಚ್ಚ ನ್ಯಾಯಾಲಯದ ಮಹಾತ್ವಾಕಾಂಕ್ಷೆಯೂ ಆಗಿದೆ ಎಂದರು.

ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಬಾಲಚಂದ್ರ ಎನ್.ಭಟ್ ಕಕ್ಷಿದಾರರ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿದರೆ, ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಜಿ.ತಿಮ್ಮಯ್ಯ ರಾಜಿ ಸಂಧಾನ ನಡೆಸಿ ಹಲವು ಪ್ರಕರಣಗಳನ್ನು ಇತ್ಯರ್ಥಗೊಳಿಸಿದರು.

ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಪಿ.ಜ್ಞಾನೇಂದ್ರ, ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ, ವಕೀಲರ ಸಂಘದ ಪದಾಧಿಕಾರಿಗಳು, ವಕೀಲರು, ಕಕ್ಷಿದಾರರು ಹಾಜರಿದ್ದರು.