ಮೀಸಲಾತಿಯೊಂದೇ ಪರಿಹಾರವಲ್ಲ

ಹಿರಿಯೂರು: ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ಉತ್ತಮ ಶಿಕ್ಷಣ ಪಡೆದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ವಾಲ್ಮೀಕಿ ಸಮುದಾಯ, ನಿವೃತ್ತ ನೌಕರ, ವಕೀಲರ ಸಂಘದ ನೇತೃತ್ವದಲ್ಲಿ ನಗರದ ರೋಟರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೇವಲ ಮೀಸಲಾತಿ ಸೌಲಭ್ಯದಿಂದ ಸಮುದಾಯದ ಅಭಿವೃದ್ಧಿ ಸಾಧ್ಯವಿಲ್ಲ. ಶ್ರಮ ಸಂಸ್ಕೃತಿಯ ಪ್ರತೀಕವಾದ ನಾಯಕ ಸಮಾಜ ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆ ಜೀವನದ ಮೌಲ್ಯ, ಸಮಾಜಮುಖಿ ಚಿಂತನೆ ಬೆಳೆಸಿ, ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿ ಜೀವನದ ಕಡೆ ಚಿತ್ತ ಹರಿಸಬೇಕು ಎಂದರು.

ವಿದ್ಯಾರ್ಥಿಗಳು ಹೆತ್ತವರ ಕಷ್ಟ ಅರಿತು, ಛಲ, ಹೋರಾಟ, ಹಠ, ಗುರಿ, ಬದ್ಧತೆಯೊಂದಿಗೆ ಸವಾಲುಗಳನ್ನು ಎದುರಿಸಿ, ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು.

ಉನ್ನತ ಶಿಕ್ಷಣ ಪಡೆದ ಎಲ್ಲರಿಗೂ ಸರ್ಕಾರಿ ನೌಕರಿ ಕಷ್ಟ ಸಾಧ್ಯ. ನೌಕರಿಗಳ ಕೊರತೆ ಕಾಡುತ್ತಿದ್ದು, ಬಹಳಷ್ಟು ಜನರು ಉದ್ಯೋಗದಿಂದ ವಂಚಿತರಾಗಿದ್ದಾರೆ ಎಂದು ತಿಳಿಸಿದರು.

ಸ್ವಯಂ ಉದ್ಯೋಗ ಆಯ್ಕೆ ಮಾಡಿಕೊಂಡು ಅಭಿವೃದ್ಧಿಯತ್ತ ಸಾಗಬೇಕು. ಕೇವಲ ಮೀಸಲಾತಿಯಿಂದಲೇ ಎಲ್ಲ ಸಮಸ್ಯೆಗಳು ಪರಿಹಾರವಾಗುವುದಿಲ್ಲ.

ಬದುಕಿಗೆ ಬೇರೆ ಬೇರೆ ದಾರಿ ನಾವೇ ಹುಡುಕಿಕೊಳ್ಳಬೇಕು. 75 ವರ್ಷಗಳ ಹೋರಾಟದ ನಂತರ ಸಮಾಜ ಒಂದು ಹಂತ ತಲುಪಿದೆ. ಈಗಿನ ಮಕ್ಕಳು ಶೇ.80ಕ್ಕಿಂತ ಹೆಚ್ಚಿನ ಅಂಕ ಪಡೆದು ತೇರ್ಗಡೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಶಿಕ್ಷಣದಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯ ಎಂದರು.

ಜಿಲ್ಲಾ ಸಚಿವ ಡಿ.ಸುಧಾಕರ್ ಮಾತನಾಡಿ, ನಂಬಿಕೆ, ಸಹಬಾಳ್ವೆ, ಪ್ರೀತಿ, ವಿಶ್ವಾಸಕ್ಕೆ ಮತ್ತೊಂದು ಹೆಸರೇ ನಾಯಕ ಸಮಾಜ, ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವುದು ಸಮಾಜದ ಕರ್ತವ್ಯವಾಗಿದೆ. ಎಸ್ಸೆಸ್ಸೆಲ್ಸಿ-ಪಿಯು ನಂತರ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ಕಟ್ಟಿಕೊಳ್ಳಲು ಸಾಕಷ್ಟು ಅವಕಾಶಗಳಿವೆ ಎಂದು ಹೇಳಿದರು.

ವಿದ್ಯೆಯ ಜತೆಗೆ ಸಂಸ್ಕಾರ ಕಲಿತರೆ ಮಾತ್ರ ವಿದ್ಯೆಗೆ ಗೌರವ ಸಿಗುತ್ತದೆ. ಶಾಸಕ, ಸಚಿವನಾಗಿ ನಾಯಕ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಲಾಗಿದೆ.

ಪಂಚ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಹಿನ್ನಡೆಯಾಗಿದ್ದರೂ, ಮುಂಬರುವ ದಿನದಲ್ಲಿ ಎಲ್ಲವನ್ನು ಸರಿದೂಗಿಸಲಾಗುವುದು. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಉತ್ತಮ ಆಡಳಿತದ ಮೂಲಕ ಕರುನಾಡನ್ನು ಸರ್ವ ಜನಾಂಗದ ತೋಟವನ್ನಾಗಿಸುವ ಸಂಕಲ್ಪ ಮಾಡಿದೆ ಎಂದು ತಿಳಿಸಿದರು.

ಖಂಡೇನಹಳ್ಳಿ ಗ್ರಾಪಂ ಅಧ್ಯಕ್ಷೆ ಸಾವಿತ್ರಮ್ಮ ಈಶ್ವರಪ್ಪ, ದ್ರಾಕ್ಷರಸ ಮಂಡಳಿ ಅಧ್ಯಕ್ಷ ಡಾ.ಯೋಗೀಶ್ ಬಾಬು, ಹರ್ತಿಕೋಟೆ ವೀರೇಂದ್ರ ಸಿಂಹ, ಪ್ರಾಚಾರ್ಯ ಡಿ.ಚಂದ್ರಶೇಖರ್, ಪ್ರಾಧ್ಯಾಪಕ ಜೆ.ಕರಿಯಪ್ಪ ಮಾಳಿಗೆ, ಎಚ್.ಎಸ್.ಮಂಜುನಾಥ್, ಡಾ.ಹೇಮಣ್ಣ ನಾಯಕ, ಈಶ್ವರಪ್ಪ, ನಾಗರಾಜ್ ಇತರರಿದ್ದರು.

ಎಸ್ಸೆಸ್ಸೆಲ್ಸಿ-ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ನಾಯಕ ಸಮುದಾಯ ತನ್ನ ಪರಿಶ್ರಮ-ಶ್ರಮ ಸಂಸ್ಕೃತಿಯಿಂದ ಬದುಕು ಕಟ್ಟಿಕೊಂಡಿದ್ದು, ವಿದ್ಯಾರ್ಥಿಗಳು ಕೀಳರಿಮೆ-ಹಿಂಜರಿಕೆ ಬಿಟ್ಟು ಆತ್ಮವಿಶ್ವಾಸದಿಂದ ಸವಾಲುಗಳನ್ನು ಮೆಟ್ಟಿನಿಂತಾಗ ಮಾತ್ರ ಉಜ್ವಲ ಭವಿಷ್ಯ, ಸಮಾಜದಲ್ಲಿ ಉನ್ನತ ಸ್ಥಾನಮಾನ ಸಾಧ್ಯ.
ಶ್ರೀ ಪ್ರಸನ್ನಾನಂದ ಸ್ವಾಮೀಜಿ, ವಾಲ್ಮೀಕಿ ಗುರು ಪೀಠ

ವಿದ್ಯೆ ಕಲಿತ ಶಾಲೆ, ಅಕ್ಷರ ಕಲಿಸಿದ ಗುರುಗಳನ್ನು ಸ್ಮರಿಸುವ ಸಂಸ್ಕಾರವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜ್ಞಾನಕ್ಕೆ ಮಾತ್ರ ಮಾನ್ಯತೆ ಸಿಗಲಿದೆ. ಬುದ್ಧ, ಬಸವ, ವಾಲ್ಮೀಕಿ, ಗಾಂಧಿ, ಅಂಬೇಡ್ಕರ್ ಅವರ ಆದರ್ಶ ಸರ್ವಕಾಲಕ್ಕೂ ಶ್ರೇಷ್ಠವಾಗಿದ್ದು, ಅಹಿಂಸಾ ಮಾರ್ಗದಲ್ಲಿ ಬದುಕು ಕಟ್ಟಿಕೊಳ್ಳಬೇಕು.
ಟಿ.ರಘುಮೂರ್ತಿ, ಶಾಸಕ

Share This Article

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದ್ವೆ ಆಗ್ತಾರೆ! ನಿಜಕ್ಕೂ ಇದು ಸತ್ಯಾನಾ?

ಬೆಂಗಳೂರು:  ಪ್ರತಿಯೊಬ್ಬರ ತಲೆಯ ಮೇಲೆ ಸುಳಿಗಳಿರುವುದು ಸಾಮಾನ್ಯ. ಈ ಸುರುಳಿಗಳು ಹುಟ್ಟಿನಿಂದಲೇ ತಲೆಯ ಮೇಲೆ ಇರುತ್ತವೆ.…

ಸುಖವಾದ ನಿದ್ದೆ ಬೇಕೆಂದರೆ ಯೋಗದ ಮೊರೆಹೋಗಿ

ಪ್ರ:ಸರಿಯಾಗಿ ನಿದ್ರೆ ಬರುವುದಿಲ್ಲ. ರಾತ್ರಿ 2-3 ತಾಸು ನಿದ್ರೆ ಬಂದರೆ ಹೆಚ್ಚು. ಸುಖನಿದ್ರೆಗಾಗಿ ಯಾವ ಯೋಗ…

ಪುರುಷರೇ ಎಡಗೈ, ಮಹಿಳೆಯರ ಬಲ ಅಂಗೈ ತುರಿಕೆಯಾದ್ರೆ ಕಾದಿದೆ ಈ ಗಂಡಾಂತರ!

ಬೆಂಗಳೂರು: ಅಂಗೈ ತುರಿಕೆಯಾಗಿದೆ ಎಂದರೆ ಹಣ ಬರುತ್ತದೆ ಎಂದು ಹಲವರು ಹೇಳುತ್ತಾರೆ. ಕೆಲವರು ಹಣ ಕಳೆದುಕೊಳ್ಳುತ್ತಿದ್ದಾರೆ…