ಕರೊನಾ ನಂತರ ಒಟಿಟಿಗಳ ಹಾವಳಿಯಿಂದಾಗಿ ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದ್ದರೂ, 2023ರಲ್ಲಿ ಕೊಂಚ ಮಟ್ಟಿಗೆ ಚೇತರಿಕೆ ಕಂಡುಬರುತ್ತಿದೆ. ಬಾಲಿವುಡ್ ಮಂದಿಯ ಆಡಿದ್ದೇ ಆಟ ಎಂಬಂತಿದ್ದ ಪರಿಸ್ಥಿತಿ ಈಗ ಬದಲಾಗಿದೆ. ಪ್ರಾದೇಶಿಕ ಭಾಷೆಗಳಲ್ಲೂ ಸಿನಿಮಾಗಳ ಸಂಖ್ಯೆ ಹೆಚ್ಚಾಗಿದ್ದು, ಬಾಲಿವುಡ್ ಆಟಕ್ಕೆ ಬ್ರೇಕ್ ಬಿದ್ದಿದೆ.

ಮಾಲಿವುಡ್ಗೆ ಸಿಹಿ, ಕಹಿ
ಮಲಯಾಳಂನಲ್ಲಿ ಈ ವರ್ಷ 238 ಚಿತ್ರಗಳು ರಿಲೀಸ್ ಆಗಿವೆ. ಅದರಲ್ಲಿ ಟೊವಿನೊ ಥಾಮಸ್ ನಾಯಕನಾಗಿದ್ದ 2018ರ ಕೇರಳದಲ್ಲಿ ಸಂಭವಿಸಿದ ಪ್ರವಾಹದ ಕುರಿತ ‘2018’ ಚಿತ್ರ ಬಾಕ್ಸಾಫೀಸಿನಲ್ಲಿ ಮ್ಯಾಜಿಕ್ ಮಾಡಿದೆ. 200 ಕೋಟಿ ರೂ. ಕ್ಲಬ್ ಪ್ರವೇಶಿಸಿದ ಮೊದಲ ಮಲಯಾಳಂ ಸಿನಿಮಾ ಎಂಬ ದಾಖಲೆ ಬರೆಯುವುದರ ಜತೆಗೆ ಭಾರತದಿಂದ ಆಸ್ಕರ್ಗೆ ಅಧಿಕೃತವಾಗಿ ಆಯ್ಕೆಯಾಗಿತ್ತು. ಆದರೆ 88 ದೇಶಗಳ ಸಿನಿಮಾಗಳೊಂದಿಗೆ ಸ್ಪರ್ಧೆಯಲ್ಲಿದ್ದ ಆ ಚಿತ್ರ ಟಾಪ್ 15ರಲ್ಲಿ ಸ್ಥಾನಗಳಿಸಲು ವಿಫಲವಾಗಿ ಆಸ್ಕರ್ ರೇಸ್ನಿಂದ ಹೊರಬಿತ್ತು. ಇನ್ನು ಮಮ್ಮೂಟಿ ಅಭಿನಯದ ‘ಕಣ್ಣೂರ್ ಸ್ಕಾ್ವಡ್’, ಮೋಹನ್ಲಾಲ್ ನಾಯಕನಾಗಿರುವ ‘ನೆರು’, ನಹಸ್ ಹಿದಾಯತ್ ನಿರ್ದೇಶನದ ‘ಆರ್ಡಿಎಕ್ಸ್’ ಈ ವರ್ಷ ಸದ್ದು ಮಾಡಿದ ಬಿಗ್ಬಜೆಟ್ ಚಿತ್ರಗಳು. ಹಾಗೇ ‘ರೋಮಾಂಚಂ’, ‘ಮಧುರ ಮನೋಹರ ಮೋಹಂ’ ಚಿತ್ರಗಳೂ ಬಾಕ್ಸಾಫೀಸಿನಲ್ಲಿ ಉತ್ತಮ ಗಳಿಕೆ ಮಾಡಿಕೊಂಡವು.
ದೊಡ್ಡವರು, ಸಣ್ಣವರ ಸಮಪಾಲು!
ಈ ವರ್ಷ ತೆಲುಗಿನಲ್ಲಿ ಒಟ್ಟು 178 ಸಿನಿಮಾಗಳು ರಿಲೀಸ್ ಆಗಿವೆ. ಬಿಗ್ಬಜೆಟ್ನಲ್ಲಿ ಮೂಡಿಬಂದಿರುವ ದೊಡ್ಡ ಸ್ಟಾರ್ ಸಿನಿಮಾಗಳ ಜತೆಗೆ ಸಣ್ಣ ಬಜೆಟ್ ಸಿನಿಮಾಗಳೂ ಹಿಟ್ ಲಿಸ್ಟ್ ಸೇರಿ ಚಿತ್ರರಂಗಕ್ಕೆ ಹೊಸ ಹುರುಪು ನೀಡಿವೆ. ಅವುಗಳಲ್ಲಿ ಪ್ರಮುಖವಾಗಿ ಪ್ರಭಾಸ್, ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಮಾ ‘ಸಲಾರ್ 1: ಸೀಸ್ಫೈರ್’ ಒಂದೇ ವಾರದಲ್ಲಿ 500 ಕೋಟಿ ರೂ. ಬಾಚಿಕೊಂಡಿದ್ದು ಸಾವಿರ ಕೋಟಿ ಕಲೆಕ್ಷನ್ನತ್ತ ಮುನ್ನುಗ್ಗಿದೆ. ಚಿರಂಜೀವಿ ಅಭಿನಯದ ‘ವಾಲ್ಟೇರ್ ವೀರಯ್ಯ’, ಬಾಲಯ್ಯ ನಟಿಸಿದ್ದ ‘ವೀರಸಿಂಹ ರೆಡ್ಡಿ’ ಮತ್ತು ‘ಭಗವಂತ್ ಕೇಸರಿ’, ನಾನಿ ನಟಿಸಿರುವ ‘ಹೈ ನಾನ್ನ’ ಮತ್ತು ‘ದಸರಾ’ ಚಿತ್ರಗಳು ಗೆದ್ದು ಬೀಗಿವೆ. ಹಾಗೇ ಸಣ್ಣ ಬಜೆಟ್ ಸಿನಿಮಾಗಳಾದ ‘ಬಳಗಂ’, ‘ಬೇಬಿ’, ‘ಸಾಮಜವರಗಮನ’ ಚಿತ್ರಗಳೂ ಬಾಕ್ಸಾಫೀಸಿನಲ್ಲಿ ಕೋಟಿ ಕೋಟಿ ರೂ. ಗಳಿಕೆ ಮಾಡಿಕೊಂಡು ಗೆಲುವಿನ ನಗೆ ಬೀರಿವೆ. ಮತ್ತೊಂದೆಡೆ ‘ಆದಿಪುರುಷ್’, ‘ಟೈಗರ್ ನಾಗೇಶ್ವರ ರಾವ್’, ‘ಖುಷಿ’, ‘ಏಜೆಂಟ್’, ‘ಶಾಕುಂತಲಂ’, ‘ರಾವಣಾಸುರ’ ಸೇರಿ ಕೆಲವು ನಿರೀಕ್ಷಿತ ಚಿತ್ರಗಳು ಗಳಿಕೆಯಲ್ಲಿ ಹಿಂದೆ ಬಿದ್ದಿವೆ.
ಕಾಲಿವುಡ್ನಲ್ಲಿ ಸ್ಟಾರ್ಗಳ ದರ್ಬಾರ್
ಈ ವರ್ಷ ತಮಿಳಿನಲ್ಲಿ 256 ಸಿನಿಮಾಗಳು ಬಿಡುಗಡೆಯಾಗಿವೆ. ಅವುಗಳಲ್ಲಿ ವಿಜಯ್ ಅಭಿನಯದ ‘ಲಿಯೊ’ ಮತ್ತು ರಜಿನಿಕಾಂತ್ ನಟಿಸಿದ್ದ ‘ಜೈಲರ್’ ಚಿತ್ರಗಳು ಪ್ಯಾನ್ ಇಂಡಿಯಾ ಬಿಡುಗಡೆಯಾಗಿ 600 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿಕೊಂಡಿವೆ. ಹಾಗೇ ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್ 2’, ವಿಜಯ್ ನಾಯಕನಾಗಿದ್ದ ‘ವಾರಿಸು’, ಅಜಿತ್ ಕುಮಾರ್ ಅಭಿನಯದ ‘ತುನಿವು’, ಧನುಷ್ ನಟಿಸಿದ್ದ ‘ವಾತಿ’ ಚಿತ್ರಗಳೂ ಬಾಕ್ಸಾಫೀಸಿನಲ್ಲಿ ಭರ್ಜರಿ ಕಲೆಕ್ಷನ್ ಮಾಡಿಕೊಂಡಿವೆ. ಹಾಗೇ ‘ಚಿತ್ತ’, ‘ವಿಡುತಲೈ ಪಾರ್ಟ್ 1’, ‘ಪೊರ್ ತೊಳಿಲ್’, ‘ಮಾರ್ಕ್ ಆಂಟನಿ’, ‘ಗುಡ್ನೈಟ್’, ‘ಕೂಳಂಗಲ್’, ‘ಜಿಗರ್ ಥಂಡ ಡಬಲ್ ಎಕ್ಸ್’ ಸೇರಿ ಕೆಲವು ಸಿನಿಮಾಗಳು ಗೆಲುವಿನ ನಗೆ ಬೀರಿವೆ.
ಪ್ರಾದೇಶಿಕ ಚಿತ್ರಗಳಿಗೆ ಚೇತರಿಕೆ
ಅತ್ತ ಬಾಲಿವುಡ್ ಕೆಟ್ಟ ಸಿನಿಮಾಗಳಿಂದ ಸಪ್ಪೆಯಾದರೆ, ಅದು ಉತ್ತರ ಭಾರತದ ಪ್ರಾದೇಶಿಕ ಭಾಷೆಗಳ ಚಿತ್ರರಂಗಗಳಿಗೆ ವರದಾನವಾಗಿದೆ. ಅದಕ್ಕೆ ಪೂರಕ ಎಂಬಂತೆ ಮರಾಠಿ, ಭೋಜ್ಪುರಿ, ಬೆಂಗಾಲಿ, ಗುಜರಾತಿ ಚಿತ್ರರಂಗಗಳಲ್ಲಿ ಸಿನಿಮಾಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಈ ವರ್ಷ 84 ಮರಾಠಿ ಚಿತ್ರಗಳು, 57 ಬೆಂಗಾಲಿ, 55 ಗುಜರಾತಿ ಹಾಗೂ 21 ಭೋಜ್ಪುರಿ ಸಿನಿಮಾಗಳು ರಿಲೀಸ್ ಆಗಿವೆ.
ಹಾಲಿವುಡ್ನಲ್ಲಿ ಸೂಪರ್ಹೀರೋಗಳ ಆಟ
ಹಾಲಿವುಡ್ನಲ್ಲಿ ಈ ವರ್ಷ 305 ಸಿನಿಮಾಗಳು ಬಿಡುಗಡೆಯಾಗಿವೆ. ಪ್ರಾರಂಭದಿಂದಲೂ ಇಂಗ್ಲೀಷ್ ಸೂಪರ್ಹೀರೋ, ಕಾರ್ಟೂನ್, ಆನಿಮೇಟೆಡ್ ಸಿನಿಮಾಗಳ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚು. ಅದರಂತೆ ಈ ವರ್ಷ ಬಿಡುಗಡೆಯಾದ ಅಂತಹ ಸಿನಿಮಾಗಳು ಬಾಕ್ಸಾಫೀಸಿನಲ್ಲಿ ಗೆಲುವಿನ ನಗು ಬೀರಿವೆ. ‘ಬಾರ್ಬಿ’, ‘ದಿ ಸೂಪರ್ ಮಾರಿಯೋ ಬ್ರೋಸ್ ಮೂವಿ’, ‘ಸ್ಪೈಡರ್ವ್ಯಾನ್ : ಅಕ್ರಾಸ್ ದಿ ಸ್ಪೈಡರ್ ವರ್ಸ್’, ‘ಗಾರ್ಡಿಯನ್ಸ್ ಆಫ್ ದಿ ಗೆಲಾಕ್ಸಿ 3’, ‘ಓಪ್ಪೆನ್ಹೈಮರ್’, ‘ದಿ ಲಿಟಲ್ ಮಮೇಡ್’, ‘ಆಂಟ್ವ್ಯಾನ್ ಅಂಡ್ ದಿ ವಾಸ್ಪ್: ಕ್ವಾಂಟಮೇನಿಯಾ’ ಸೇರಿ ಹಲವು ಸಿನಿಮಾಗಳು ವಿಶ್ವಾದ್ಯಂತ ಉತ್ತಮ ಗಳಿಕೆ ಮಾಡಿಕೊಂಡಿವೆ.