ಸಿನಿಮಾ

ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಗೆಲ್ಲಿಸಿ

ಚಿಕ್ಕೋಡಿ: ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಭಾರತೀಯ ಜನತಾ ಪಕ್ಷವನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಮನವಿ ಮಾಡಿದರು.

ಪಟ್ಟಣದ ಆರ್‌ಟಿ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಚಿಕ್ಕೋಡಿ-ಸದಲಗಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಕತ್ತಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸರ್ಜಿಕಲ್ ದಾಳಿ ಮೂಲಕ ಪಾಕ್‌ಗೆ ನುಗ್ಗಿ ದೇಶದಲ್ಲಿ ಭಯೋತ್ಪಾದನೆ ನಿಯಂತ್ರಿಸಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಶಾಂತಿ ಈಗ ಮರುಕಳಿಸುತ್ತಿದೆ.

ಕಾಂಗ್ರೆಸ್‌ನ ರಾಹುಲ್ ಬಾಬಾ ನೀಡುವ ಸುಳ್ಳು ಆಶ್ವಾಸನೆಗಳಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದರು. ಮಣಿಪುರ, ನಾಗಾಲ್ಯಾಂಡ್, ಗುಜರಾತ, ಉತ್ತರ ಪ್ರದೇಶ ಸೇರಿ ಯಾವ ಯಾವ ರಾಜ್ಯದಲ್ಲಿ ಹೋಗಿ ಕಾಂಗ್ರೆಸ್‌ನವರು ಸುಳ್ಳು ಆಶ್ವಾಸನೆ ನೀಡಿದ್ದಾರೋ ಅಲ್ಲೆಲ್ಲ ಕಾಂಗ್ರೆಸ್ ಸೋತಿದೆ. ಮೇ 10ರಂದು ಕಿತ್ತೂರು ಕರ್ನಾಟಕದ ಕಲ್ಯಾಣಕ್ಕಾಗಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲಿಸುವುದರ ಮೂಲಕ ಬಿಜೆಪಿಗೆ ಬಲ ನೀಡಬೇಕು ಎಂದರು.

ಅಭ್ಯರ್ಥಿ ರಮೇಶ ಕತ್ತಿ ಮಾತನಾಡಿ, ಕಾಂಗ್ರೆಸ್‌ನವರು ಬಜರಂಗದಳ ಬ್ಯಾನ್ ಮಾಡುವುದಾಗಿ ಹೇಳುತ್ತಿದ್ದಾರೆ. ಅವರು ತಾಕತ್ತಿದ್ದರೆ ಬ್ಯಾನ್ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು. ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುವುದು ಮತ್ತು ಲಕ್ಷಾಂತರ ಯುವಕರಿಗೆ ಉದ್ಯೋಗ ನೀಡುವುದೇ ನನ್ನ ಧ್ಯೇಯ ಎಂದರು.

ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ ಮಾತನಾಡಿ, ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ರಮೇಶ ಕತ್ತಿ ಅವರನ್ನು ಗೆಲ್ಲಿಸಬೇಕು. ಮಹಾಲಕ್ಷ್ಮೀ ಏತ ನೀರಾವರಿ ಸೇರಿದಂತೆ ಬಿಜೆಪಿ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ತಾವೇ ಮಾಡಿದ್ದೇವೆ ಎಂದು ಸುಳ್ಳು ಹೇಳುವ ನಾಯಕರನ್ನು ಸೋಲಿಸಬೇಕು ಎಂದರು.

ಬಿಜೆಪಿ ಗೆಲ್ಲಿಸಲು ಜೊಲ್ಲೆ ಮನವಿ: ಈ ಬಾರಿ ಚಿಕ್ಕೋಡಿ-ಸದಲಗಾ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ರಮೇಶ ಕತ್ತಿ ಅವರನ್ನು ಗೆಲ್ಲಿಸಬೇಕು ಎಂದು ಅಣ್ಣಾಸಾಹೇಬ ಜೊಲ್ಲೆ ಅವರು ಮನವಿ ಮಾಡಿದರು. ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲು ಕೋರೆ, ಬಿಜೆಪಿ ಮುಖಂಡ ಎಂ.ಬಿ.ಝಿರಲಿ, ಹಾಲಸಿದ್ಧನಾಥ ಕಾರ್ಖಾನೆ ಅಧ್ಯಕ್ಷ ಚಂದ್ರಕಾಂತ ಕೊಠಿವಾಲೆ, ಸತೀಶ ಅಪ್ಪಾಜಿಗೋಳ, ಪ್ರಕಾಶ ಪಾಟೀಲ, ಶಾಂಭವಿ ಅಶ್ವತಪುರ, ಸಂಜಯ ಪಾಟೀಲ, ಮಾಜಿ ಶಾಸಕ ಬಾಳಸಾಹೇಬ ವಡ್ಡರ್ ಜಗದೀಶ ಕವಟಗಿಠ ಇತರರಿದ್ದರು.

Latest Posts

ಲೈಫ್‌ಸ್ಟೈಲ್