ಡಿಸೆಂಬರ್​ಗೆ ಕಾವೇರಿ ಪೈಪ್​ಲೈನ್ ಅಳವಡಿಕೆ ಪೂರ್ಣ: 110 ಹಳ್ಳಿಗಳಿಗೆ ನೀರು ಸಂಪರ್ಕಕ್ಕೆ 983 ಕೋಟಿ ರೂ. ವೆಚ್ಚ

| ದ್ವಾರಕಾನಾಥ್ ಎಲ್. ಬೆಂಗಳೂರು

ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆ ಯಾದ 110 ಹಳ್ಳಿಗಳಿಗೆ ಕಾವೇರಿ 5ನೇ ಹಂತದಿಂದ ಕುಡಿಯುವ ನೀರು ಪೂರೈಸಲು ಜಲಮಂಡಲಿ ಕೈಗೊಂಡಿರುವ ಕೊಳವೆ ಮಾರ್ಗ (ಪೈಪ್​ಲೈನ್ ) ಅಳವಡಿಕೆ ಕಾಮಗಾರಿ ಶೇ.94 ಮುಗಿದಿದ್ದು, ಡಿಸೆಂಬರ್​ಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

2017ರ ಮೇನಲ್ಲಿ ಪೈಪ್​ಲೈನ್ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಒಟ್ಟು 2,661 ಕಿ.ಮೀ. ಪೈಪ್​ಲೈನ್ ಪೈಕಿ ಈವರೆಗೆ 2,521 ಕಿ.ಮೀ. ಅಳವಡಿಸಲಾಗಿದ್ದು ಶೇ.94.76 ಕಾಮಗಾರಿ ಮುಗಿದಿದೆ. ಇನ್ನು ಉಳಿದಿರುವ 140 ಕಿ.ಮೀ. ಪೈಪ್​ಲೈನ್ ಅಳವಡಿಕೆ ಕಾಮಗಾರಿ ಭರದಿಂದ ಸಾಗಿದ್ದು, ಇದು ಡಿಸೆಂಬರ್ ಹೊತ್ತಿಗೆ ಮುಕ್ತಾಯಗೊಳ್ಳಲಿದೆ.

110ರ ಪೈಕಿ 41 ಹಳ್ಳಿ ನೋಟಿಫೈ: ಪೈಪ್​ಲೈನ್ ಅಳವಡಿಕೆ ಕಾಮಗಾರಿ ಬಹುತೇಕ ಮುಕ್ತಾಯದ ಹಂತ ತಲುಪಿರುವುದರಿಂದ 110 ಹಳ್ಳಿಗಳ ಪೈಕಿ 41 ಹಳ್ಳಿಗಳಿಗೆ ನೀರು ಪೂರೈಕೆ ಮಾಡಲು ನೋಟಿಫೈ ಮಾಡಲಾಗಿದೆ. ಆ ಭಾಗದ ಸಾರ್ವಜನಿಕರು ಹೊಸದಾಗಿ ನೀರಿನ ಸಂಪರ್ಕ ಪಡೆದುಕೊಳ್ಳಲು ಅರ್ಜಿ ಆಹ್ವಾನಿಸಿದೆ. ಪ್ರಸ್ತುತ ಜಲಮಂಡಳಿಯು ನಗರಕ್ಕೆ ದಿನಕ್ಕೆ 1,450 ದಶ ಲಕ್ಷ ಲೀಟರ್ ನೀರು ಪೂರೈಕೆ ಮಾಡುತ್ತಿದೆ. ಈ ನೀರಿನಲ್ಲೇ ಕೆಲ ಭಾಗವನ್ನು ಈ 41 ಹಳ್ಳಿಗಳಿಗೂ ಪೂರೈಸಲು ಜಲಮಂಡಳಿ ಮುಂದಾಗಿದೆ.

-ಠಿ;982.77 ಕೋಟಿ ವೆಚ್ಚ: ರಾಜರಾಜೇಶ್ವರಿ ನಗರ, ದಾಸರಹಳ್ಳಿ, ಮಹದೇವಪುರ, ಬ್ಯಾಟರಾಯನಪುರ ಹಾಗೂ ಬೊಮ್ಮನಹಳ್ಳಿ ವಲಯಗಳಲ್ಲಿ 982.77 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಎಲ್ಲ ವಲಯಗಳಲ್ಲಿ 110 ಹಳ್ಳಿಗಳಿವೆ. ಇವುಗಳಲ್ಲಿ ಬೊಮ್ಮನಹಳ್ಳಿ ವಲಯ ದೊಡ್ಡ ವಲಯವಾಗಿದ್ದು, 788 ಕಿ.ಮೀ. ಪೈಪ್​ಲೈನ್ ಅಳವಡಿಸಲಾಗು ತ್ತಿದೆ. ಪ್ರತಿ ವಲಯಕ್ಕೂ ಪ್ರತ್ಯೇಕ ಟೆಂಡರ್ ಕರೆದು ಕಾಮಗಾರಿ ನಡೆಸಲಾಗುತ್ತಿದೆ.

110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಕೆ ಸಂಬಂಧ ಕೈಗೊಂಡಿರುವ ಪೈಪ್​ಲೈನ್ ಅಳವಡಿಕೆ ಕಾಮಗಾರಿ ಬಹುತೇಕ ಮುಕ್ತಾಯದ ಹಂತ ತಲುಪಿದೆ. ಇದರ ಜತೆಗೆ 11 ಓವರ್ ಹೆಡ್ ಟ್ಯಾಂಕ್, ಐದಾರು ನೆಲಮಟ್ಟದ ಜಲಾಗಾರ ನಿರ್ಮಾಣ ಕಾಮಗಾರಿಯೂ ಭರದಿಂದ ಸಾಗುತ್ತಿದೆ.

| ಬಿ. ಶಿವಪ್ರಸಾದ್ ಜಲಮಂಡಳಿ ಮುಖ್ಯ ಇಂಜಿನಿಯರ್

Leave a Reply

Your email address will not be published. Required fields are marked *