ಲೋಕಾಪುರ: ತಾಲೂಕಿನಿಂದ ಬಾಗಲಕೋಟೆ ಜಿಲ್ಲೆಗೆ ರೈಲು ಸೇವೆ ಪ್ರಾರಂಭಿಸದೆ ರೈಲ್ವೆ ಇಲಾಖೆ ಜನರ ಸಹನೆ ಪರೀಕ್ಷಿಸುತ್ತಿದೆ ಎಂದು ರೈಲ್ವೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕುತುಬುದ್ದೀನ್ ಕಾಜಿ ಹೇಳಿದರು.

ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಬುಧವಾರ ಭೇಟಿ ನೀಡಿ ನಿಲ್ದಾಣದ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ತಾಲೂಕಿನಿಂದ ಬಸವ ಎಕ್ಸ್‌ಪ್ರೆಸ್ ರೈಲು ಸೇವೆ ಪ್ರಾರಂಭಿಸುವಂತೆ ಆಗ್ರಹಿಸಿದರು.
ವಿಜಯಪುರ-ಹೈದರಾಬಾದ್, ವಿಜಯಪುರ- ಬಾಂಬೆ, ವಿಜಯಪುರ-ರಾಯಚೂರು ರೈಲುಗಳನ್ನು ಲೋಕಾಪುರದವರೆಗೆ ವಿಸ್ತರಿಸಬೇಕು. 2023ರಿಂದ ಕಜ್ಜಿಢೋನಿ-ಲೋಕಾಪುರ ಕಾಮಗಾರಿ ಪ್ರಾರಂಭಗೊಂಡಿದ್ದು, 2024ರ ಮಾರ್ಚ್‌ಗೆ ಪೂರ್ಣಗೊಳಿಸಬೇಕಾಗಿತ್ತು. ಆದರೆ, 2025ರ ಮಾರ್ಚ್ ಕಳೆದರು ರೈಲ್ವೆ ಸೇವೆ ಪ್ರಾರಂಭಿಸದಿರುವುದು ವಿಷಾದದ ಸಂಗತಿ. ಲೋಕಾಪುರ ಬಾಗಲಕೋಟೆ ನಡುವಿನ ರೈಲು ನಿಲ್ದಾಣಗಳಾದ ನವನಗರ, ಸುಳಿಕೇರಿ, ಕೆರ್ಕಲ್ಮಟ್ಟಿ, ಸಲ್ಲಿಕೆರಿ ಹಾಗೂ ಕಜ್ಜಿಡೋಣಿಗಳಲ್ಲಿ ನಿಲ್ದಾಣವಿದ್ದರೂ ರೈಲು ಸಂಚಾರವಿಲ್ಲ. ಆದ್ದರಿಂದ ತಕ್ಷಣ ರೈಲು ಸಂಚಾರ ಪ್ರಾರಂಭಿಸಬೇಕು ಎಂದರು.
2026ರ ಒಳಗಾಗಿ ಕುಡಚಿ ಬಾಗಲಕೋಟೆ ರೈಲ್ವೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಒದಗಿಸಬೇಕು. ಇಲ್ಲದಿದ್ದರೆ ಜಿಲ್ಲಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.