ಸಂತ್ರಸ್ತ ವಿದ್ಯಾರ್ಥಿಗಳಿಗೆ ಸಂಪೂರ್ಣ ವಿದ್ಯಾಭ್ಯಾಸ

ಮಡಿಕೇರಿ: ಕೊಡಗು ಜಲಸ್ಫೋಟದಿಂದ ಸಂಕಷ್ಟಕ್ಕೊಳಗಾಗಿದ್ದ ವಿದ್ಯಾರ್ಥಿಗಳ ಸಂಪೂರ್ಣ ವಿದ್ಯಾಭ್ಯಾಸದ ಹೊಣೆಯನ್ನು ದಾನಿಗಳ ನೆರವಿನೊಂದಿಗೆ ಮಂಗಳೂರು ವಿಶ್ವವಿದ್ಯಾಲಯ ಭರಿಸುವುದಾಗಿ ನೆರೆ ಸಂತ್ರಸ್ತ ಪರಿಹಾರ ಮರು ಪರಿಶೀಲನಾ ಸಭೆಯಲ್ಲಿ ನಿರ್ಣಯಿಸಲಾಯಿತು.
ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ನೆರೆ ಸಂತ್ರಸ್ತ ಪರಿಹಾರ ಸಮಿತಿ ವಿಶೇಷ ಅಧಿಕಾರಿ ಡಾ.ನಾಗಪ್ಪಗೌಡ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು.

ಸಂತ್ರಸ್ತ ವಿದ್ಯಾರ್ಥಿಗಳ ಶಿಕ್ಷಣ ಮೊಟಕುಗೊಳ್ಳದಂತೆ ತಡೆಯಲು ಹಲವರು ನೆರವಿಗೆ ಮುಂದೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಕೊಡಗಿಗೆ ಬಂದಿದ್ದ ಅನುದಾನ ವಿದ್ಯಾರ್ಥಿಗಳಿಗೆ ಯಾವ ರೀತಿ ಸದುಪಯೋಗವಾಗಿದೆ ಎಂಬ ಕುರಿತು ವಿಶ್ವವಿದ್ಯಾನಿಲಯಕ್ಕೆ ಸೂಚಿಸಿತ್ತು. ಅದರ ನೋಡಲ್ ಅಧಿಕಾರಿಯಾಗಿ ಕುಲಪತಿಯನ್ನು ನೇಮಿಸಿತ್ತು. ಈ ಹಿನ್ನೆಲೆಯಲ್ಲಿ ಮಾ.7ರಂದು ಮಂಗಳೂರು ವಿಶ್ವವಿದ್ಯಾಲಯ ನೆರೆ ಸಂತ್ರಸ್ತ ಪರಿಹಾರ ಸಮಿತಿಯು ಲೋಕಾಯುಕ್ತಕ್ಕೆ ವಿಸ್ಕೃತ ವರದಿ ಸಲ್ಲಿಸಬೇಕಿರುವುದರಿಂದ, ಸಭೆ ನಡೆಸಿ ಪರಿಹಾರ ಕಾರ್ಯಗಳ ಮಾಹಿತಿಯನ್ನು ಸಂಗ್ರಹಿಸಿತು.

ಕಾಲೇಜಿನಿಂದ ಶುಲ್ಕ ವಿನಾಯಿತಿ, ಉಳಿದುಕೊಳ್ಳಲು ವಸತಿ ವ್ಯವಸ್ಥೆ ಕಲ್ಪಿಸಿದ್ದರಿಂದ ಶಿಕ್ಷಣ ಮುಂದುವರಿಸಲು ಸಾಧ್ಯವಾಯಿತು. ಸರ್ಕಾರದಿಂದ ತಮಗೆ ಸಿಗಬೇಕಿದ್ದ ಸೌಲಭ್ಯಗಳು ಸಮರ್ಪಕವಾಗಿ ಸಿಗದಿದ್ದರಿಂದ ಇನ್ನೂ ಹಲವಾರು ವಿದ್ಯಾರ್ಥಿಗಳ ಕುಟುಂಬ ಸಂಕಷ್ಟ ಎದುರಿಸುತ್ತಿರುವುದಾಗಿ ವಿದ್ಯಾರ್ಥಿಗಳು ಕಣ್ಣೀರಿಟ್ಟರು.
ಇದಕ್ಕೆ ಸ್ಪಂದಿಸಿದ ಡಾ.ನಾಗಪ್ಪ ಗೌಡ, ಲೋಕಾಯುಕ್ತ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಜಿಲ್ಲಾಡಳಿತಕ್ಕೆ ಈ ಕುರಿತು ಮನವಿ ಮಾಡಿ ಸೂಕ್ತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಂಕಷ್ಟದಿಂದ ಶುಲ್ಕ ಪಾವತಿಸಲು ಸಾಧ್ಯವಾಗದಿರುವುದು ಹಾಗೂ ತಮ್ಮ ವಿದ್ಯಾಭ್ಯಾಸ ಮೊಟಕುಗೊಳ್ಳುವ ಸಾಧ್ಯತೆ ಕುರಿತು ವಿದ್ಯಾರ್ಥಿಗಳಲ್ಲಿದ್ದ ಗೊಂದಲ ನಿವಾರಿಸಿದ ಪ್ರಾಂಶುಪಾಲ ಡಾ.ಟಿ.ಡಿ.ತಿಮ್ಮಯ್ಯ, ಸಂತ್ರಸ್ತ ವಿದ್ಯಾರ್ಥಿಗಳ ಪ್ರಸಕ್ತ ಸಾಲಿನ ಶಿಕ್ಷಣ ಹಾಗೂ ಭವಿಷ್ಯದ ಉನ್ನತ ಶಿಕ್ಷಣಕ್ಕೂ ವಿಶ್ವವಿದ್ಯಾಲಯ ಜತೆ ಇರುವುದಾಗಿ ಭರವಸೆ ನೀಡಿ, ತಮ್ಮ ಅಹವಾಲನ್ನು ಲಿಖಿತ ರೂಪದಲ್ಲಿ ನೀಡುವಂತೆ ತಿಳಿಸಿದರು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾಲೇಜಿನ ವಿದ್ಯಾರ್ಥಿಗಳ ನೆರವಿಗೆ ಬಂದ ಹಣ ಸುಮಾರು 2 ಲಕ್ಷ ರೂ.ಗಳನ್ನು ಸಂತ್ರಸ್ತ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಸಮಿತಿ ಸದಸ್ಯರಾದ, ಸಹಾಯಕ ಕುಲಸಚಿವ ಉಕ್ರಪ್ಪ ನಾಯಕ್, ಪ್ರಾಂಶುಪಾಲ ಡಾ.ಟಿ.ಡಿ.ತಿಮ್ಮಯ್ಯ, ಸಮಿತಿ ಸಂಚಾಲಕ ಡಾ.ರವಿಶಂಕರ್, ಸಮಿತಿ ಸದಸ್ಯರಾದ ಡಾ.ತಿಪ್ಪೇಸ್ವಾಮಿ, ಡಾ.ಮಹದೇವ, ಲೋಕಾಯುಕ್ತ ಅಧಿಕಾರಿಗಳು, ಕೊಡಗಿನ ಎಲ್ಲ ಕಾಲೇಜಿನ ಪ್ರಾಂಶುಪಾಲರು ಹಾಗೂ ನೆರೆ ಭಾದಿತ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.