ಕಲ್ಯಾಣ ಶಾಸಕ ವಿರುದ್ಧ ಠಾಣೆಗೆ ದೂರು

ಬೀದರ್: ಮಾಧ್ಯಮದವರ ವಿರುದ್ಧ ಕೀಳುಮಟ್ಟದ ಪದ ಬಳಸುವ ಜತೆಗೆ ಧಮ್ಕಿ ಹಾಕಿರುವ ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಹೈದರಾಬಾದ್ ಕರ್ನಾಟಕ ಮಾಹಿತಿ ಹಕ್ಕು (ಆರ್ಟಿಐ) ಕಾರ್ಯಕರ್ತರ ಸಂಘ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಸಂಘದ ಅಧ್ಯಕ್ಷರೂ ಆದ ನ್ಯಾಯವಾದಿ ನರೇಶ ಪಾಠಕ್ ಅವರು ಸೋಮವಾರ ಇಲ್ಲಿನ ನ್ಯೂಟೌನ್ ಠಾಣೆಗೆ ತೆರಳಿ ಈ ಸಂಬಂಧ ಲಿಖಿತ ದೂರು ಸಲ್ಲಿಸಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕರು ಬಹಿರಂಗವಾಗಿ ಮಾಧ್ಯಮದವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಧಮ್ಕಿ ಸಹ ಹಾಕಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೇ ಅಂಗವಾಗಿ ಕೆಲಸ ಮಾಡುತ್ತಿರುವ ಮಾಧ್ಯಮ ಕ್ಷೇತ್ರವನ್ನು ಅವಮಾನಿಸಿದ್ದು, ಕಾನೂನಾತ್ಮಕ ಕ್ರಮ ಜರುಗಿಸಬೇಕೆಂದು ಕೋರಿದ್ದಾರೆ.
ಸೆ.27ರಂದು ಬೀದರ್ ನ ನೆಹರು ಕ್ರೀಡಾಂಗಣದಲ್ಲಿ ನಡೆದ ಸಂವಿಧಾನ ಉಳಿಸಿ-ದೇಶ ರಕ್ಷಿಸಿ ಮಹಾ ರ್ಯಾಲಿಯಲ್ಲಿ ಬಿ.ನಾರಾಯಣರಾವ್ ಅವರು ಮಾಧ್ಯಮದವರ ವಿರುದ್ಧ ಅಸಾಂವಿಧಾನಿಕ, ಕೀಳು ಮಟ್ಟದ ಪದಗಳನ್ನು ಬಳಸಿ ವಾಗ್ದಾಳಿ ನಡೆಸಿದ್ದಾರೆ. ನಿಮ್ಮ ಮೀಡಿಯಾ ಟಿವಿ ಬಂದ್ ಮಾಡ್ತೀನಿ, ನಿಮ್ಮ ಅಪ್ಪಗೂ ಬಿಡಲ್ಲ ಎಂದು ಹೇಳಿದ್ದಾರೆ. ಇವರು ಬಳಸಿದ ಮಾತುಗಳು ಅನಾಗರಿಕ ಹಾಗೂ ಗೂಂಡಾಗಿರಿಯಂತಿವೆ. ಶಾಸಕ ಸ್ಥಾನದಲ್ಲಿ ಇದ್ದವರು ಸಂವಿಧಾನದ ಮೌಲ್ಯಗಳು, ಆದರ್ಶ ಎತ್ತಿ ಹಿಡಿಯುವುದನ್ನು ಮರೆತು ಅರ್ಥಹೀನ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.
ಬಹಿರಂಗ ವೇದಿಕೆಯಲ್ಲಿ ಶಾಸಕರು ಆಡಿದ ಮಾತುಗಳ ಅವರ ವ್ಯಕ್ತಿತ್ವ ಪ್ರತಿಬಿಂಬಿಸುವಂತಾಗಿದೆ. ಅವರ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದನೆ, ಬೆದರಿಕೆ, ಮಾನಹಾನಿ ಸೇರಿ ಐಪಿಸಿಯ ವಿವಿಧ ಸೂಕ್ತವಾದ ಕಲಂಗಳನ್ವಯ ಪ್ರಕರಣ ದಾಖಲಿಸಿಕೊಂಡು, ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಕೋರಿದ್ದಾರೆ. ದೂರಿನ ಪ್ರತಿಯನ್ನು ವಿಧಾನಸಭೆ ಸ್ಪೀಕರ್ ಅವರಿಗೂ ರವಾನಿಸಿದ್ದಾರೆ. ಸಂಘದ ಕಾರ್ಯದರ್ಶಿ ಅಂಗದ್ ಪಾಟೀಲ್, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ನ್ಯಾಯವಾದಿ ಮೋಹನ್ ಎಳ್ನೂರಕರ್ ಇದ್ದರು.
ದೂರಿನ ಜತೆಗೆ ಶಾಸಕರು ನೀಡಿದ ಹೇಳಿಕೆಗಳ ಮಾಧ್ಯಮ ತುಣುಕಗಳನ್ನು ಲಗತ್ತಿಸಲಾಗಿದೆ. ಅಗತ್ಯಬಿದ್ದರೆ ವಿಡಿಯೋ ತುಣುಕುಗಳೂ ನೀಡುವುದಾಗಿ ನರೇಶ ಪಾಠಕ್ ತಿಳಿಸಿದ್ದಾರೆ. ಶಾಸಕರ ವಿರುದ್ಧ ಪತ್ರಕರ್ತರು ಸಹ ಖಟ್ಲೆ ಹೂಡುವುದಾಗಿ ನಿರ್ಧರಿಸಿದ್ದರು. ಅದಕ್ಕಿಂತ ಮುಂಚೆ ಆರ್ಟಿಐ ಸಂಘ ಠಾಣೆ ಮೆಟ್ಟಿಲೇರಿರುವುದು ಗಮನಾರ್ಹ.

ಶಾಸಕರ ಹೇಳಿಕೆಗೆ ಸಚಿವರ ಖಂಡನೆ: ಶಾಸಕ ಬಿ. ನಾರಾಯಣರಾವ್ ಅವರು ಮಾಧ್ಯಮದವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಸಹಕಾರ, ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ ಕಟುವಾಗಿ ಖಂಡಿಸಿದ್ದಾರೆ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ರಾಜಕಾರಣಿಗಳು ಸಹ ಮಾಧ್ಯಮ ವಿರುದ್ಧ ಮಾತನಾಡಲ್ಲ. ಆದರೆ ಶಾಸಕರು ಈ ರೀತಿ ಹೇಳಿಕೆ ನೀಡಿದ್ದು ಸರಿಯಲ್ಲ. ಜನಪ್ರತಿನಿಧಿಗಳು ಎಲ್ಲರನ್ನೂ ಗೌರವಿಸುವ ಸ್ವಭಾವ ಬೆಳೆಸಿಕೊಳ್ಳಬೇಕು ಎಂದು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಚುನಾಯಿತ ಪ್ರತಿನಿಧಿಗಳ ಒಂದೊಂದು ಮಾತು ಸಹ ಅರ್ಥಪೂರ್ಣವಾಗಿರಬೇಕು. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಜತೆಗೆ ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ರಂಗಕ್ಕೆ ತನ್ನದೆ ಆದ ಘನತೆ ಇದೆ. ಅದರ ಬಗ್ಗೆ ಅವಹೇಳನಕಾರಿ ಮಾತಾಡಿದ್ದು ಖಂಡನೀಯ. ಇದು ನನಗೂ ಮುಜುಗುರ ತಂದಿದೆ. ನಾರಾಯಣರಾವ್ ಚೆನ್ನಾಗಿ ಭಾಷಣ ಮಾಡತ್ತಾರೆ. ಆದರೆ ಕೆಲವೊಮ್ಮೆ ಎಡವಿ ಬಿಡುತ್ತಾರೆ ಎಂದರು.