ಜಿಪಂ ಸಿಇಒಗೆ ದೂರು ಸಲ್ಲಿಕೆ

ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತ ವಿಜಯ್ ಉಪ್ಪಾರ್ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ಬಿಳಿಗಿರಿರಂಗನಬೆಟ್ಟದ ಮುಖ್ಯ ರಸ್ತೆಯಿಂದ ಬಿ.ಮಾದೇಗೌಡರ ಮನೆ ವರೆಗೆ, ಕುನ್ನಪ್ಪ ಅವರ ಮನೆಯಿಂದ ಬಿ.ಲಕ್ಷ್ಮೀ ಕೊಳದವರೆಗೆ, ರಾಘವೇಂದ್ರ ಮಠದಿಂದ ರೇಷ್ಮೆ ಇಲಾಖೆ ಕಚೇರಿವರೆಗೆ, ಅಚ್ಚುಗೇಗೌಡರ ಮನೆಯಿಂದ ರಂಗೇಗೌಡರ ಮನೆ ತನಕ, ನಂದಕುಮಾರ್ ಮನೆಯಿಂದ ಕುನ್ನಮ್ಮ ಅವರ ಮನೆವರೆಗೆ, ಗೌರಮ್ಮ ಮನೆಯಿಂದ ನಿಂಗರಾಜಮ್ಮ ಅವರ ಮನೆ ವರೆಗೆ, ಯೋಗೇಶ್ ಮನೆಯಿಂದ ರಂಗಸ್ವಾಮಿ ಮನೆವರೆಗೆ, ಪಂಚಾಯಿತಿ ಬಳಿಯ ಬಿ.ಲಕ್ಷ್ಮೀ ಕೊಳದಿಂದ ರೇವತಿ ಅವರ ಜಮೀನಿನವರೆಗೆ ನರೇಗಾ ಯೋಜನೆಯಡಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ.

ಆದರೆ, ಕೆಲ ಕಾಮಗಾರಿಗಳಿಗೆ ಬೋರ್ಡ್ ಹಾಕಿಲ್ಲ. ಬೋರ್ಡ್‌ನಲ್ಲಿ ಪೂರ್ತಿ ವಿವರ ಬರೆದಿಲ್ಲ. ಕೆಲ ಕಾಮಗಾರಿಗಳನ್ನು ಅಂದಾಜು ಮೊತ್ತಕ್ಕಿಂತ ಕಡಿಮೆ ಮೊತ್ತಕ್ಕೆ ಮುಗಿಸಲಾಗಿದೆ. ಇದರಲ್ಲಿ ಕೆಲವು ಕಳಪೆ ಗುಣಮಟ್ಟದಿಂದ ಕೂಡಿದೆ. ಕೆಲವೆಡೆ ಒಂದೇ ಕೆಲಸ ಮಾಡಿ 2 ಕಾಮಗಾರಿ ಎಂದು ತೋರಿಸಿ ಸುಳ್ಳು ದಾಖಲೆ ಸೃಷ್ಟಿಸಿ ಹಣ ಪಾವತಿ ಮಾಡಲಾಗಿದೆ. ಇದರಲ್ಲಿ ಸಂಬಂಧಪಟ್ಟ ಇಂಜಿನಿಯರ್ ಹಾಗೂ ಗುತ್ತಿಗೆದಾರರು ಸೇರಿ ಉದ್ಯೋಗ ಖಾತ್ರಿ ಹಣವನ್ನು ಗುಳುಂ ಮಾಡಿದ್ದಾರೆ. ಆದ್ದರಿಂದ ಈ ಸಂಬಂಧ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು. ಜತೆಗೆ ಸರ್ಕಾರದ ದೂರುಪಯೋಗ ಹಣವನ್ನು ಪತ್ತೆ ಹಚ್ಚಿ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ದೂರು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *