ಕೊರಗ ಕುಟುಂಬಗಳಿಂದ ಹೈಕೋರ್ಟ್‌ನಲ್ಲಿ ದಾವೆ

ಉಡುಪಿ: ಕೊರಗ ಸಮುದಾಯದವರಿಗಾಗಿ 2010ರಲ್ಲೇ ಜಿಲ್ಲಾಡಳಿತದಿಂದ ಕಾಯ್ದಿರಿಸಲಾಗಿದ್ದ ಬೊಮ್ಮರಬೆಟ್ಟು ಗ್ರಾಮದ ಕೊಂಡಾಡಿಯಲ್ಲಿ 229ನೇ ಸರ್ವೇ ನಂಬ್ರದ 2.61 ಎಕರೆ ಜಮೀನನ್ನು 29 ಕುಟುಂಬಗಳಿಗೆ ನಿವೇಶನಗಳನ್ನಾಗಿ ವಿಂಗಡಿಸದೆ ಕರ್ತವ್ಯಲೋಪ ಎಸಗುತ್ತಿರುವ ಅಧಿಕಾರಿಗಳ ವಿರುದ್ಧ ಹೈಕೋರ್ಟ್‌ನಲ್ಲಿ ದಾವೆ ಹೂಡುವುದಾಗಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಅಧ್ಯಕ್ಷ ಡಾ. ರವೀಂದ್ರನಾಥ್ ಶಾನುಭಾಗ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2011ರ ಸ್ವಾತಂತ್ರೃ ದಿನಾಚರಣೆಯಂದು ಪ್ರತೀ ಕುಟುಂಬಕ್ಕೆ 8 ಸೆಂಟ್ಸ್ ಜಾಗ ನಿಗದಿಪಡಿಸಿ ಜನಪ್ರತಿನಿಧಿಗಳು ನಿವೇಶನಗಳ ಹಕ್ಕು ಪತ್ರಗಳನ್ನು 29 ಕೊರಗ ಕುಟುಂಬಗಳಿಗೆ ವಿತರಿಸಿದ್ದರು. ಆದರೆ ನಿವೇಶನದ ಗಡಿಗುರುತು ಮಾಡಿ, ಮೂಲಸೌಕರ್ಯ ಒದಗಿಸದೆ ವಂಚಿಸಲಾಗಿದೆ. ಕಾಲನಿಗೆ ರಸ್ತೆ, ನಳ್ಳಿನೀರು, ವಿದ್ಯುತ್ ಮುಂತಾದ ಮೂಲಸೌಕರ್ಯ ಒದಗಿಸಲು ಬಿಡುಗಡೆ ಮಾಡಲಾಗಿದ್ದ 50 ಲಕ್ಷ ರೂ. ಕೇವಲ ನೆಲ ಸಮತಟ್ಟುಗೊಳಿಸಲು ಉಪಯೋಗಿಸಲಾಗಿದ್ದು, ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ಜಿಲ್ಲಾ ಗಿರಿಜನ ಯೋಜನಾ ಸಮನ್ವಯ ಅಧಿಕಾರಿಗೆ ನೋಟಿಸ್ ನೀಡಿ ಹಗರಣದ ತನಿಖೆ ಆರಂಭಿಸಿದ್ದಾರೆ ಎಂದರು.

2017ರಲ್ಲಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ನೆರವಿನಿಂದ ಕೊಂಡಾಡಿ ಗಿರಿಜನ ಕಾಲನಿ ನಿವೇಶನದಾರರ ಸಂಘವನ್ನು ಸ್ಥಾಪಿಸಲಾಗಿದೆ. ಮಣಿಪಾಲ ವಿಶ್ವವಿದ್ಯಾಲಯದ ಸುಮಾರು 800 ವಿದ್ಯಾರ್ಥಿಗಳ ಸಹಕಾರದಲ್ಲಿ ಕೊರಗ ಸಮುದಾಯದ 300ಕ್ಕೂ ಹೆಚ್ಚಿನ ಕಾರ್ಯಕರ್ತರು ಜಮೀನು ಸಮತಟ್ಟು ಮಾಡಿದ್ದಾರೆ. ಅಂದಿನ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಶೀಘ್ರ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.

ಕೊಂಡಾಡಿ ಕಾಲನಿಯ ಮೂಲ ಸೌಕರ್ಯಗಳಿಗಾಗಿ 50 ಲಕ್ಷ ರೂಪಾಯಿಯ ವಿಶೇಷ ಅನುದಾನ ಲಭಿಸಿದೆ. ಅವೈಜ್ಞಾನಿಕವಾಗಿ ಸುಮಾರು 30 ಅಡಿ ಆಳಕ್ಕೆ ಗುಡ್ಡವನ್ನು ಕೊರೆದಿದ್ದು, ಅನುಪಯುಕ್ತ ಕಾಮಗಾರಿ ವಿವರಗಳನ್ನು ಲೋಕಾಯುಕ್ತರ ಗಮನಕ್ಕೆ ತರಲಾಗಿದೆ ಎಂದರು.

ಅಧಿಕಾರಿಗಳ ಭರವಸೆ: ಸುದ್ದಿಗೋಷ್ಠಿ ಬಗ್ಗೆ ಮಾಹಿತಿ ತಿಳಿದ ಅಧಿಕಾರಿಗಳು ಮಂಗಳವಾರ ಸಾಯಂಕಾಲ ಫಲಾನುಭವಿಗಳಿಗೆ ಕರೆ ಮಾಡಿ ಬುಧವಾರ ನಿವೇಶನ ಸ್ಥಳಕ್ಕೆ ಕರೆಸಿಕೊಂಡು ಗಡಿ ಗುರುತು ಮಾಡಿ ಗುರುವಾರ ಹಂಚಲಾಗುವುದು. ಜತೆಗೆ 3.5 ಲಕ್ಷ ರೂ. ವಸತಿ ಯೋಜನೆ ಅನುದಾನಕ್ಕೆ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದಾರೆ ಎಂದು ಕೊಂಡಾಡಿ ಗಿರಿಜನ ಕಾಲನಿ ನಿವೇಶನದಾರರ ಸಂಘದ ಸಂಚಾಲಕಿ ಸುಬೇದಾ ಅಂಬಾಗಿಲು ತಿಳಿಸಿದರು.

Leave a Reply

Your email address will not be published. Required fields are marked *