ದೂರು ನೀಡಲು ಬಂದವರ ಮೇಲೆ ಲಾಠಿ ಪ್ರಹಾರ

ಖಾನಾಪುರ: ಒಂದು ಕೋಮಿಗೆ ಸೇರಿದ ಯುವತಿಯನ್ನು ಅನ್ಯ ಕೋಮಿಗೆ ಸೇರಿದ ಯುವಕ ಪ್ರೀತಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ದೂರಿನಂತೆ ಯುವಕನನ್ನು ನಂದಗಡ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಯುವತಿಯ ಕುಟುಂಬಸ್ಥರು ಯುವಕನ ವಿರುದ್ಧ ಲವ್ ಜಿಹಾದ್ ಆರೋಪ ಮಾಡಿದ್ದು, ಅಪಹರಿಸಲು ಯತ್ನಿಸುತ್ತಿದ್ದಾನೆ ಎಂದು ಭಾನುವಾರ ದೂರು ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆ ಮುಂದೆ ಸೇರಿದ್ದ ಯುವತಿಯ ಸಂಬಂಧಿಕರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಯುವತಿಯ ಕಡೆಯವರು ನಂದಗಡ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಘಟನೆಯ ವಿವರ: ನಂದಗಡ ಗ್ರಾಮದ ಯುವತಿಯೋರ್ವಳನ್ನು ಪಕ್ಕದ ಬೀದಿಯ ಯುವಕ ಪ್ರೀತಿಸುತ್ತಿದ್ದ. ಆತ ಅನ್ಯ ಧರ್ಮಕ್ಕೆ ಸೇರಿದ್ದು, ಶನಿವಾರ ಸಂಜೆ ಗ್ರಾಮದ ನಿರ್ಜನ ಪ್ರದೇಶದಲ್ಲಿ ಏಕಾಂತದಲ್ಲಿದ್ದ ಯುವಕ-ಯುವತಿಯರನ್ನು ಗ್ರಾಮದ ಕೆಲ ಯುವಕರು ಪತ್ತೆ ಮಾಡಿದ್ದರು.

ಈ ವೇಳೆ ಯುವಕ ಸ್ಥಳದಿಂದ ಪಲಾಯನ ಮಾಡಿದ್ದ. ಯುವತಿಯನ್ನು ಪೊಲೀಸ್ ಠಾಣೆಗೆ ಕರೆತಂದ ಯುವಕರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ಯುವಕನನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಯುವತಿ ತನ್ನ ಹೆತ್ತವರೊಂದಿಗೆ ದೂರು ಸಲ್ಲಿಸಲು ಮುಂದಾದಾಗ ದೂರು ಸ್ವೀಕರಿಸದ ಪೊಲೀಸರ ಕ್ರಮವನ್ನು ಯುವಕರು ಖಂಡಿಸಿದ್ದಾರೆ. ಈ ವೇಳೆ ಯುವತಿಗೆ ಆದ ಅನ್ಯಾಯದ ಬಗ್ಗೆ ದೂರು ನೀಡಲು ಹೋಗಿದ್ದ ಯುವಕರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ.

ತಮ್ಮ ಕೋಮಿಯ ಯುವತಿಗೆ ಮೋಸ ಮಾಡಲು ಯತ್ನಿಸಿದ ಯುವಕನನ್ನು ಬಂಧಿಸುವಂತೆ ಠಾಣೆಗೆ ದೂರು ನೀಡಲು ಆಗಮಿಸಿದ ಅಮಾಯಕರ ಮೇಲೆ ಪೊಲೀಸರು ಏಕಾಏಕಿ ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದ್ದರು. ಪೊಲೀಸರ ಈ ವರ್ತನೆಯಿಂದ ಗ್ರಾಮದ ಕುಂಬಾರ ಗಲ್ಲಿಯ ಹಲವು ಯುವಕರು ಗಾಯಗೊಂಡಿದ್ದಾರೆ.

ಪ್ರೇಮ ಪ್ರಕರಣದ ಬಗ್ಗೆ ಮಾಹಿತಿ ಕೇಳಲು ಖಾನಾಪುರ ಸಿಪಿಐ ಮೋತಿಲಾಲ ಪವಾರ ಅವರನ್ನು ಸಂಪರ್ಕಿಸಿದಾಗ ಅವರು ಪ್ರಕರಣದ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಹಾಗಾಗಿ ಇದು ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

One Reply to “ದೂರು ನೀಡಲು ಬಂದವರ ಮೇಲೆ ಲಾಠಿ ಪ್ರಹಾರ”

Comments are closed.