ಮಂಡ್ಯ: ಕನ್ನಡ ನಾಡು, ನುಡಿ, ಜಲ ಹಾಗೂ ಚಿತ್ರರಂಗದ ಉಳಿವಿನ ಹಿತದೃಷ್ಟಿಯಿಂದ ಹೇಳಿಕೆ ನೀಡಿದ್ದ ಶಾಸಕ ರವಿಕುಮಾರ್ ಗಣಿಗ ವಿರುದ್ಧ ಕನ್ನಡ ವಿರೋಧಿ ಸಂಘಟನೆಗಳಿಗೆ ಪ್ರಚೋದನೆ ಕೊಟ್ಟು ತೇಜೋವಧೆಗೆ ಮುಂದಾಗುವ ಮೂಲಕ ಕಾನೂನು ಸುವ್ಯವಸ್ಥೆ ಹದಗೆಡಿಸಿ ಶಾಂತಿ ಭಂಗಕ್ಕೆ ಮುಂದಾಗಿದ್ದಾರೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ವಿರುದ್ಧ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
ಜಿಲ್ಲಾ ಪೊಲೀಸ್ ಭವನದ ಕಚೇರಿ ಎದುರು ಪ್ರತಿಭಟನೆ ನಡೆಸಿದ ಮುಖಂಡರು ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ಮನವಿ ಸಲ್ಲಿಸಿ ಎನ್.ಯು ನಾಚಪ್ಪ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಂಬಂಧಿಸಿದಂತೆ ಶಾಸಕ ರವಿಕುಮಾರ್ ಗಣಿಗ ಚಿತ್ರರಂಗದ ಎಲ್ಲರೂ ಇಂತಹ ಕಾರ್ಯಕರಮದಲ್ಲಿ ಭಾಗಿಯಾಗಬೇಕು. ಅದೇ ರೀತಿ ಕನ್ನಡ ನಾಡು ನುಡಿ ಜಲ ವಿಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಹಲವರು ವಿಫಲರಾಗಿದ್ದಾರೆಂದು ಹೇಳಿಕೆ ನೀಡಿದ್ದರು. ಇದಕ್ಕೆ ಚಲನಚಿತ್ರ ನಿರ್ದೇಶಕ ಚಂದ್ರಚೂಡ ಆಕ್ಷೇಪ ವ್ಯಕ್ತಪಡಿಸಿ, ಶಾಸಕರ ವಿರುದ್ಧ ೇರಾವ್ ಮಾಡುವ ಬೆದರಿಕೆಯೊಡ್ಡಿದ್ದರು. ಆದರೆ ಶಾಸಕರು ಪ್ರತಿಕ್ರಿಯೆ ನೀಡಿದ ಮೌನ ವಹಿಸಿದ್ದರು. ಇಂತಹ ಸಂದರ್ಭದಲ್ಲಿ ಕೊಡಗಿನ ಸಿಎನ್‌ಸಿ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ, ಇದೀಗ ಶಾಸಕರನ್ನು ತೇಜೋವಧೆ ಮಾಡುವ ದೃಷ್ಟಿಯಿಂದ ಚಿತ್ರನಟಿ ರಶ್ಮಿಕಾ ಮಂದಣ್ಣ ಹೆಸರು ಮುಂದಿಟ್ಟುಕೊಂಡು ಹಾಗೂ ಕನ್ನಡ ವಿರೋಧಿ ಸಂಘಟನೆಗಳನ್ನು ಎತ್ತಿಕಟ್ಟಿ ಶಾಸಕರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ರಾಜ್ಯದ ಏಕೀಕರಣ ವ್ಯವಸ್ಥೆಗೆ ಮಾರಕವಾದಂತಹ ಕೊಡಗು ಪ್ರತ್ಯೇಕ ರಾಜ್ಯ ಹೋರಾಟದ ನೇತೃತ್ವ ವಹಿಸಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷರು ಶಾಸಕರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎನ್.ಯು.ನಾಚಪ್ಪ ವಿರುದ್ಧ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಆರ್‌ಎಪಿಸಿಎಂಎಸ್ ನಿರ್ದೇಶಕರಾದ ಕೆ.ಸಿ.ರವೀಂದ್ರ, ಸೋಮಶೇಖರ್, ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಕಾಗೆಹಳ್ಳದದೊಡ್ಡಿ ರಾಮಕೃಷ್ಣ, ಉಮ್ಮಡಹಳ್ಳಿ ನಾಗೇಶ್, ಮಹೇಶ್ ಇತರರಿದ್ದರು.
