ವಿದ್ಯಾರ್ಥಿಗಳಿಂದ ದೂರಿನ ಸುರಿಮಳೆ!

ಕಟ್ಟೆಮಳಲವಾಡಿ: ವಾಲಿಬಾಲ್ ಆಟಗಾರರಿಂದ ಶಾಲಾ ಕೊಠಡಿಗಳ ಹೆಂಚುಗಳು ಹಾಳಾಗುತ್ತಿದೆ.., ಸಂಜೆ ಬಳಿಕ ಶಾಲಾವರಣ ಕುಡುಕರ ಸ್ಥಳವಾಗಿ ಮಾರ್ಪಟ್ಟಿದೆ…, ನಲ್ಲಿಗಳು ಹಾಳಾಗಿದ್ದು, ರಿಪೇರಿ ಯಾವಾಗ…,

ಹುಣಸೂರು ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ಮಕ್ಕಳು ಕೇಳಿದ ಪ್ರಶ್ನೆಗಳಿವು.

ವೇಣುಗೋಪಾಲ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಆಕಾಶ್ ಮಾತನಾಡಿ, ನಮ್ಮ ಶಾಲೆಯ ಆವರಣದಲ್ಲಿ ಖಾಲಿ ಪ್ಲಾಸ್ಟಿಕ್ ಲೋಟ ಹಾಗೂ ಸಾರಾಯಿ ಪೌಚುಗಳು ಸಿಗುತ್ತಿವೆ. ಇದನ್ನು ತಪ್ಪಿಸಿ ಎಂದು ಕೇಳಿದರೆ, ಅದೇ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ನಿಸರ್ಗಾ ಮಾತನಾಡಿ, ಶಾಲೆಯಲ್ಲಿ ಬಿಸಿಯೂಟದ ತಟ್ಟೆಗಳನ್ನು ತೊಳೆಯಲು ಅಳವಡಿಸಿರುವ ನಲ್ಲಿಗಳು ಜೂಜುಕೋರರು ಹಾಗೂ ಮದ್ಯವ್ಯಸನಿಗಳಿಂದ ಹಾಳಾಗಿವೆ. ಇವುಗಳನ್ನು ಸರಿಪಡಿಸುವುದರ ಜತೆಗೆ ಜೂಜುಕೋರರು ಮತ್ತು ಮದ್ಯವ್ಯಸನಿಗಳ ವಿರುದ್ಧ ಕ್ರಮ ಕೈ ಗೊಳ್ಳಬೇಕು ಎಂದು ಆಗ್ರಹಿಸಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಯಶ್ವಂತ್ ಮಾತನಾಡಿ, ಸಂಜೆ ಬಳಿಕ ಶಾಲಾವರಣದಲ್ಲಿ ಕಾಲೇಜು ವಿದ್ಯಾಥಿಗಳು ವಾಲಿಬಾಲ್ ಹಾಗೂ ಕ್ರಿಕೆಟ್ ಆಟ ಆಡುವುದರಿಂದ ಕೊಠಡಿಗಳ ಹೆಂಚು ಹಾಳಾಗಿ ಮಳೆಗಾಲದಲ್ಲಿ ನೀರು ಸೋರುತ್ತದೆ. ಇದರಿಂದ ಕೂತು ಪಾಠ ಕೇಳಲು ತೊಂದರೆಯಾಗುತ್ತಿದೆ. ಇದನ್ನು ತಡೆಗಟ್ಟಬೇಕು ಎಂದರು.

ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದ ಪಿಡಿಒ ಶ್ರೀನಿವಾಸ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಹಂತ ಹಂತವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪಾ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ನರಸಿಂಹಮೂರ್ತಿ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಿದ್ದೇಗೌಡ, ವೇಣುಗೋಪಾಲ ಶಾಲೆಯ ಶಿಕ್ಷಕ ಯೋಗೇಂದ,್ರ ಸಿಆರ್‌ಪಿ ಕಾಂತರಾಜು ಇತರರು ಹಜರಿದ್ದರು.