ಹಾಸನ: ನಗರದ ಕೈಗಾರಿಕಾ ಪ್ರದೇಶದ ಹಿಮತ್‌ಸಿಂಗ್ ಕಾಲಿನೆನ್ಸ್ ಫ್ಯಾಕ್ಟರಿ ಕಾಂಪೌಂಡ್‌ನಲ್ಲಿ ಗುರುವಾರ ಹತ್ಯೆಗೀಡಾದ ಆಲೂರು ತಾಲೂಕು ಹಾಂಜಿಹಳ್ಳಿ ಗ್ರಾಮದ ಚಂದನ್ (24) ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಳೆ ದ್ವೇಷದ ಹಿನ್ನೆಲೆಯಲ್ಲಿ ಯುವಕನ ಕೊಲೆ ನಡೆದಿದೆ ಎನ್ನಲಾಗಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಗುರುವಾರ ಮಧ್ಯಾಹ್ನ 1.30ರಲ್ಲಿ ಕೊಲೆ ವಿಚಾರ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ನಿವಾಸ್‌ಸೆಪಟ್, ಡಿವೈಎಸ್ಪಿ ಪುಟ್ಟಸ್ವಾಮಿಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.
ಸೇಡು ತೀರಿಸಿಕೊಳ್ಳಲು ಕೊಲೆ ?: ಚಂದನ್ ಸಹೋದರಿಯನ್ನು ತಮ್ಮ ಮಗನಿಗೆ ಮದುವೆ ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ದೂರದ ಸಂಬಂಧಿ ಕೊಲೆ ಮಾಡಿಸಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ.
ತಾಲೂಕಿನ ಪಡುವಳಲು ಗ್ರಾಮದ ಮಲ್ಲೇಗೌಡ ಎಂಬಾತ ಐದು ವರ್ಷದ ಹಿಂದೆ ತಮ್ಮ ಪುತ್ರ ಮಂಜುನಾಥ್‌ಗೆ ಚಂದನ್‌ನ ಸಹೋದರಿಯನ್ನು ಕೊಟ್ಟು ಮದುವೆ ಮಾಡುವಂತೆ ಕೇಳಿದ್ದರು. ಆಗ ಹುಡುಗಿಗೆ ಮದುವೆ ವಯಸ್ಸಾಗಿಲ್ಲ ಎಂದು ಮದುವೆ ಮಾತುಕತೆ ನಿರಾಕರಿಸಿದ್ದರು. ಇದರಿಂದ ಜಿಗುಪ್ಸೆಗೊಂಡ ಮಂಜುನಾಥ್ ಹಾಸನದ ಇಂಜಿನಿಯರಿಂಗ್ ಕಾಲೇಜಿನ ಬಳಿ ವಿಷ ಸೇವಿಸಿ ಮೃತಪಟ್ಟಿದ್ದನು.
ತಮ್ಮ ಪುತ್ರನ ಸಾವಿಗೆ ಚಂದನ್ ಹಾಗೂ ಆತನ ತಂದೆ ರಮೇಶ್ ಕಾರಣ ಎಂದು ದ್ವೇಷ ಸಾಧಿಸಿದ್ದರು. ಈ ಸಂಬಂಧ ಆಲೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ಜನವರಿ 6 ರಂದು ಪ್ರಕರಣದ ವಿಚಾರಣೆ ನಿಗದಿಯಾಗಿತ್ತು. ನ್ಯಾಯಾಲಯದಲ್ಲಿ ತೀರ್ಪು ತಮ್ಮ ಪರ ಬರುವುದಿಲ್ಲ ಎಂಬ ಸಂಶಯದಿಂದ ಮಲ್ಲೇಗೌಡ ಚಂದನ್ ಕೊಲೆಗೆ ನಿರ್ಧರಿಸಿದ್ದರು ಎನ್ನಲಾಗಿದೆ.
ಜನವರಿ 1 ರಂದು ಬೆಳಗ್ಗೆ ಮಲ್ಲೇಗೌಡರ ಸಂಬಂಧಿ ಹಂಚೂರಿನ ತಮ್ಮಣ್ಣಗೌಡ ಎಂಬುವರ ಪುತ್ರ ನಯನ್ ಎಂಬಾತ ಚಂದನ್ ಮನೆಗೆ ಬಂದು ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದ. ಚಂದನ್ ಮಾರನೇ ದಿನ ಹಾಸನದ ಹಿಮತ್ ಸಿಂಗ್ ಕಾ ಲಿನೆನ್ಸ್ ಫ್ಯಾಕ್ಟರಿ ಕಾಂಪೌಂಡ್‌ನಲ್ಲಿ ಹೆಣವಾಗಿ ಬಿದ್ದಿದ್ದ.
ಚಂದನ್ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದು, ನಯನ್, ನಾಗರಾಜು, ಮಲ್ಲೇಗೌಡ ಮತ್ತು ಪತ್ನಿ ಯೋಗೇಶ್ವರಿ, ಮಲ್ಲೇಗೌಡ, ಶೀಲಾ, ಚಂದ್ರೇಗೌಡ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮೃತ ಚಂದನ್ ತಂದೆ ರಮೇಶ್ ಹಾಸನ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.