ದೂರು ನೀಡಿದರೂ ಕ್ರಮ ಕೈಗೊಳ್ಳದ ಪೊಲೀಸರು

ಬೈಲಹೊಂಗಲ: ಅಪಘಾತಕ್ಕೀಡಾದ ವಾಹನದ ಸಂಖ್ಯೆಯೊಂದಿಗೆ ದೂರು ಸಲ್ಲಿಸಿದರೂ ಪೊಲೀಸರು ಕ್ರಮ ಜರುಗಿಸುತ್ತಿಲ್ಲ ಎಂದು ಅಪಘಾತದಲ್ಲಿ ಮೃತಪಟ್ಟ ಯುವಕನ ತಂದೆ ಮಹಾಂತೇಶ ಇಂಚಲಮಠ ಆರೋಪಿಸಿದ್ದಾರೆ.

ಸ್ಥಳೀಯ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ಹಲಕಿ ಕ್ರಾಸ್ ಬಳಿ ಅ.5 ರಂದು ರಾತ್ರಿ 10 ರ ಸುಮಾರಿಗೆ ರಸ್ತೆ ಅಪಘಾತದಲ್ಲಿ ಮುರಗೋಡ ಗ್ರಾಮದ ನನ್ನ ಮಗ ಮೃತ್ಯುಂಜಯ ಉರ್ಫ್ ಈರಣ್ಣ ಮಹಾಂತೇಶ ಇಂಚಲಮಠ (27) ಸಾವಿಗೀಡಾಗಿದ್ದು, ಈ ಬಗ್ಗೆ ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.

ಅಪಘಾತ ಸಂಭವಿಸಿದ ದಿನ ನಾನು ಸ್ಥಳಕ್ಕೆ ಧಾವಿಸಿದ್ದೆ. ಪೊಲೀಸರು ಮೃತ ದೇಹವನ್ನು ತೋರಿಸಿದಾಗ ತಮ್ಮ ಮಗನೇ ಎಂಬುದನ್ನು ಖಚಿತಪಡಿಸಿಕೊಂಡರು. ಬಳಿಕ ಮೃತ ದೇಹವನ್ನು ಮುರಗೋಡ ಶವಾಗಾರಕ್ಕೆ ಪೊಲೀಸರು ಸಾಗಿಸಿದರು. ಅಪಘಾತ ಮಾಡಿದ ವಾಹನ ಯಾವುದೆಂಬುದು ನಮಗೆ ತಿಳಿದಿರಲಿಲ್ಲ. ಯಾವುದೋ ವಾಹನ ಅಪಘಾತ ಮಾಡಿದೆ ಎಂದು ದೂರು ನೀಡಿ. ನಾವು ತನಿಖೆ ನಡೆಸಿ ವಾಹನ ಗುರುತಿಸುವ ಪ್ರಯತ್ನ ನಡೆಸುವುದಾಗಿ ಪೊಲೀಸರ ತಿಳಿಸಿದ್ದರು ಎಂದರು.

ರಾತ್ರಿ ಸಂಬಂಧಿಕರೊಂದಿಗೆ ಗ್ರಾಮದಲ್ಲಿ ಅಲೆದಾಡಿ ಅವರಿವರನ್ನು ವಿಚಾರಿಸಿದೆವು. ಮುರಗೋಡ ಗ್ರಾಮದ ರಸ್ತೆಯ ಪಕ್ಕದಲ್ಲಿದ್ದ ಚಿದಂಬರ ತೊರಗಲ್ಲ ಎಂಬುವರ ಪ್ಲಾಸ್ಟಿಕ್ ಹೂವಿನ ಕಾರ್ಖಾನೆ ಮುಂಭಾಗದ ಸಿಸಿ ಟಿವಿ ಕ್ಯಾಮರಾ ಪರಿಶೀಲಿಸಿದಾಗ 9.34 ರ ಸಮಯದಲ್ಲಿ ಐಶರ್ ಕಂಪನಿ ಪೆಟ್ರೋಲ್ ಟ್ಯಾಂಕರ್ ಆ ದಾರಿಯತ್ತ ಸಾಗಿದ್ದು ಕಂಡುಬಂತು.

ತಡಸಲೂರ ಗ್ರಾಮದಲ್ಲಿ ವಾಹನ ಪತ್ತೆ ಹಚ್ಚಿ ಪೊಲೀಸರಿಗೆ ಲಿಖಿತ ದೂರು ನೀಡಿದಾಗ ಪೊಲೀಸರು ವಾಹನವನ್ನು ರಾತ್ರಿ ಠಾಣೆಗೆ ತಂದು ನಿಲ್ಲಿಸಿದರು. ಅಂತ್ಯಕ್ರಿಯೆ ನಡೆದ ನಂತರ ವಾಹನ ಬಿಟ್ಟಿದ್ದಾರೆ. ಪೊಲೀಸರ ನಡೆ ಅನುಮಾನ ಮೂಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕುಟುಂಬ ಸಮೇತ ದೂರು ನೀಡುವುದಾಗಿ ತಿಳಿಸಿದರು.

ನಾನು ಈಚೆಗೆ ಅಧಿಕಾರ ವಹಿಸಿಕೊಂಡಿದ್ದು, ಪ್ರಕರಣ ಕುರಿತು ಸಿಪಿಐ ನೇತೃತ್ವದಲ್ಲಿ ತನಿಖೆ ನಡೆದಿದೆ. ಸತ್ಯಾಸತ್ಯತೆ ಪರಿಶೀಲಿಸಿ ದೂರುದಾರರಿಗೆ ನ್ಯಾಯ ದೊರಕಿಸಿಕೊಡಲಾಗುವುದು.
| ಪ್ರವೀಣ ಗಂಗೊಳ್ಳಿ ಪಿಎಸ್‌ಐ ಮುರಗೋಡ

Leave a Reply

Your email address will not be published. Required fields are marked *