ಕೆಜಿಎಫ್-: ಲೋಕಾಯುಕ್ತ ಸಂಸ್ಥೆಯನ್ನು ಜನಸ್ನೇಹಿಯನ್ನಾಗಿಸಲು ಎಲ್ಲ ಕ್ರಮಗಳನ್ನು ಕೈಗೊಂಡಿದ್ದರೂ ಸಾರ್ವಜನಿಕರು ವಿವಿಧ ಇಲಾಖೆಗಳಲ್ಲಿ ತಮಗೆ ಆಗುತ್ತಿರುವ ತೊಂದರೆಗಳ ಬಗ್ಗೆ ದೂರುಗಳನ್ನು ನೀಡಲು ಮುಂದಾಗದೇ ಇರುವುದು ವಿಷಾದಕರ ಸಂಗತಿ ಎಂದು ಲೋಕಾಯುಕ್ತ ಎಸ್ಪಿ ಧನಂಜಯ್ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ಲೋಕಾಯುಕ್ತ ಇಲಾಖೆಯಿಂದ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ನೌಕರರು ಸರ್ಕಾರದಿಂದ ಸಂಬಳ ಪಡೆದುಕೊಂಡರೂ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡುವುದಕ್ಕೆ ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆಯೇ ಹೊರತೂ ಲಂಚ ತೆಗೆದುಕೊಳ್ಳುವವರ ವಿರುದ್ಧ ದೂರು ನೀಡಲು ಮುಂದಾಗುತ್ತಿಲ್ಲ ಎಂದರು.
ಕೆಜಿಎಫ್ ನಗರಸಭೆಯಲ್ಲಿ ಘನತ್ಯಾಜ್ಯ ಘಟಕದ ಯಂತ್ರೋಪಕರಣಗಳ ಖರೀದಿಗೆ ಸಂಬಂಧಿಸಿದ ಟೆಂಡರ್ನಲ್ಲಿ 5 ಕೋಟಿ ರೂ. ಅವ್ಯವಹಾರ ನಡೆದಿದ್ದು, ತನಿಖೆಗೆ ಒಳಪಡಿಸುವಂತೆ (ನವಕರವೇ )ಅಧ್ಯಕ್ಷ ಎಸ್.ಎನ್.ರಾಜಗೋಪಾಲಗೌಡ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಿದರು.
ನಗರಸಭೆ ವ್ಯಾಪ್ತಿಯಲ್ಲಿ 2023-&24 ಮತ್ತು 2024&-25ನೇ ಸಾಲಿನಲ್ಲಿ ಕೈಗೊಂಡಿರುವ ಸಿಮೆಂಟ್ ರಸ್ತೆ, ಚರಂಡಿ, ಡಾಂಬರ್ ಕಾಮಗಾರಿ ಮತ್ತು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಖರೀದಿ ಮಾಡಿರುವ ಪುಶ್ಕಾರ್ಟ್, ಎಲೆಕ್ಟ್ರಿಕ್ ಮಿನಿ ಟಿಪ್ಪರ್, ಸಿಸಿ ಕ್ಯಾಮರಾ ಮೊದಲಾದ ವಸ್ತುಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಎಸ್.ಎನ್.ರಾಜಗೋಪಾಲಗೌಡ ದೂರಿನಲ್ಲಿ ತಿಳಿಸಿದ್ದಾರೆ. ಈ ಎಲ್ಲ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರು ನಗರಸಭೆಗೆ ಕಳಪೆ ಗುಣಮಟ್ಟದ ಯಂತ್ರಗಳು ಹಾಗೂ ಯಂತ್ರೋಪಕರಣಗಳನ್ನು ಪೂರೈಕೆ ಮಾಡಿದ್ದು, ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಿದ್ದರೂ, ಮಾರುಕಟ್ಟೆ ಬೆಲೆಗಿಂತ ದುಪ್ಪಟ್ಟು ಹಣ ನಗರಸಭೆಯಿಂದ ಗುತ್ತಿಗೆದಾರರರಿಗೆ ಪಾವತಿಸಲಾಗಿದೆ ಎಂದು ಆರೋಪಿಸಿದ್ದಾರೆ. ಈ ಎಲ್ಲ ಟೆಂಡರ್ಗಳು ನಗರಸಭೆಯಲ್ಲಿ ಆಡಳಿತಾಧಿಕಾರಿಗಳ ಅವಧಿಯಲ್ಲಿ ನಡೆದಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ನಗರಸಭೆ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳು ಹಾಗೂ ಅಗತ್ಯ ಪರಿಕರಗಳು ಖರೀದಿಯಲ್ಲಿ ಆಗಿರುವ ಅಕ್ರಮಗಳ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.
ಕೆಜಿಎಫ್ ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳ ಗುಣಮಟ್ಟದ ತಪಾಸಣೆ ನಡೆಸಿದ ಮೂರನೇ ವ್ಯಕ್ತಿ ಪ್ರಮಾಣ ಪತ್ರ ನೀಡಬೇಕು, ಆದರೆ ಗುತ್ತಿಗೆದಾರರೊಂದಿಗೆ ಶಾಮೀಲಾಗಿರುವ ಮೂರನೇ ವ್ಯಕ್ತಿ ಗುತ್ತಿಗೆದಾರರ ಪರವಾಗಿ ತಪಾಸಣಾ ವರದಿ ಪ್ರಮಾಣ ಪತ್ರ ನೀಡುತ್ತಾರೆ. ನಗರಸಭೆ ವ್ಯಾಪ್ತಿಯಲ್ಲಿ ಎರಡು ವರ್ಷಗಳಲ್ಲಿ ಕೈಗೊಂಡಿರುವ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸುವ ಅಗತ್ಯವಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಸೂರ್ಯನಾರಾಯಣರಾವ್ ಮಾತನಾಡಿ, ಕೃಷಿ ಇಲಾಖೆ- 1, ಶಿಕ್ಷಣ ಇಲಾಖೆ- 1, ಕಂದಾಯ ಇಲಾಖೆ -4, ಮುಜಾರಾಯಿ ಇಲಾಖೆ- 2, ನಗರಸಭೆ- 2, ಆರ್ಡಿಪಿಆರ್ -2 ಸೇರಿ ಒಟ್ಟು 12 ಅರ್ಜಿ ಬಂದಿದ್ದು, ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಿ ಎಲ್ಲ ಅರ್ಜಿಗಳ ವಿಲೇ ಮಾಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಫೆಬ್ರವರಿ 14ರಂದು ನಡೆದಿದ್ದ ಜನಸಂಪರ್ಕ ಸಭೆಯಲ್ಲಿ 28 ಅರ್ಜಿಗಳು ಬಂದಿದ್ದು, 5 ಅರ್ಜಿಗಳನ್ನು ಕೇಂದ್ರ ಕಚೇರಿಗೆ ಕಳುಹಿಸಿಕೊಟ್ಟಿದ್ದು, ಉಳಿದ ಅರ್ಜಿಗಳನ್ನು ಸ್ಥಳಿಯಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಇತ್ಯರ್ಥಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು. ವೃತ್ತ ನಿರೀಕ್ಷಕ ಆಂಜಪ್ಪ, ವಿವಿಧ ಇಲಾಖೆಗಳ ತಾಲೂಕುಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಇದ್ದರು.