Wednesday, 12th December 2018  

Vijayavani

Breaking News

ಸಿದ್ಧತೆ ಇಲ್ಲದಿದ್ದರೆ ಯಶಸ್ಸು ಮರೀಚಿಕೆ

Wednesday, 21.03.2018, 3:05 AM       No Comments

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಾಲಿಟ್ಟಲ್ಲೆಲ್ಲ ಪಂದ್ಯವೇ. ಪ್ರತಿ ಅಭ್ಯರ್ಥಿಯೂ ಪೂರ್ಣ ಪ್ರತಿಭೆ ಖರ್ಚು ಮಾಡಲೇಬೇಕು. ಜಟ್ಟಿಗೆ ಅದೆಷ್ಟು ಶಕ್ತಿಯಿದ್ದರೂ ಕಾಳಗದಲ್ಲಿ ಅದನ್ನು ಸಕಾಲದಲ್ಲಿ ಪ್ರಯೋಗಿಸದಿದ್ದರೆ ವ್ಯರ್ಥ. ಹಾಗೆಯೇ ಅದೆಷ್ಟೇ ಕುಶಲಮತಿಯಾದರೂ ಸೂಕ್ತ ತಯಾರಿ ಇಲ್ಲದಿದ್ದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಮರೀಚಿಕೆ ಆಗಬಹುದಲ್ಲವೇ?

|ಕೆ.ಎನ್. ಬಾನುಪ್ರಸಾದ್ ಬೆಂಗಳೂರು

ಸರ್ಕಾರಿ ನೌಕರಿ ಸುಲಭವಾಗಿ ಸಿಗುವುದಿಲ್ಲ ಎಂಬ ಮಾತು ಇತ್ತು. ಈಗ ಖಾಸಗಿ ನೌಕರಿಗಳೂ ಸುಲಭಕ್ಕೆ ಸಿಗುವುದಿಲ್ಲ. ಸರ್ಕಾರಿ ಕೆಲಸಗಳ ಪರೀಕ್ಷೆಗಳಂತೂ ರ್ಯಾಟ್ ರೇಸ್​ನಂತಾಗಿಬಿಟ್ಟಿವೆ. ರೈಲ್ವೆ ಇಲಾಖೆಯ ಕೆಲವೇ ಸಾವಿರ ಹುದ್ದೆಗಳಿಗೆ ಬರೋಬ್ಬರಿ ಒಂದೂವರೆ ಕೋಟಿ ಅರ್ಜಿ ಬಂದಿರುವುದು ಇದಕ್ಕೆ ಸಾಕ್ಷಿ. ಡಿ ದರ್ಜೆ ಹುದ್ದೆಗಳಿಂದ ಹಿಡಿದು ಐಎಎಸ್​ನಂತಹ ಅಖಿಲ ಭಾರತ ಹುದ್ದೆಗಳವರೆಗೂ ಸ್ಪರ್ಧೆಯ ತೀವ್ರತೆ ಮತ್ತು ಕಾಠಿಣ್ಯ ಹೆಚ್ಚುತ್ತಲೇ ಹೋಗುತ್ತಿದೆ. ಕೆಲವರು ಯಶಸ್ಸಿಗೆ ವಾಮಮಾರ್ಗ ಹಿಡಿಯುವುದು ನಿಜವಾದರೂ, ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ ಎಂಬುದು ಸಾರ್ವಕಾಲಿಕ ಸತ್ಯ. ನಮ್ಮ ಜ್ಞಾನ ಮತ್ತು ಸತತ ಪರಿಶ್ರಮಗಳು ಗೆಲುವಿಗೆ ದಾರಿಯಾಗಬೇಕು. ಹಾಗೆ ಆದಾಗಲೇ ಸಾಧನೆಗೊಂದು ಸಾರ್ಥಕತೆ.

ಸಾಮಾನ್ಯವಾಗಿ ಬಹುತೇಕ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಲ್ಲಿ ಆರಂಭ ಶೂರತ್ವ ಕಾಣುತ್ತದೆ. ಅಂದರೆ, ಆರಂಭದ ಉತ್ಸಾಹವನ್ನು ಕೊನೆವರೆಗೂ ಉಳಿಸಿಕೊಳ್ಳುವುದಿಲ್ಲ. ಸ್ಪರ್ಧಾ ಮನೋಭಾವವೂ ಕ್ರಮೇಣ ಕಡಿಮೆಯಾಗುತ್ತದೆ. ಕಲಿಕಾ ವಾತಾವರಣದ ಕೊರತೆ, ನಿತ್ಯಜೀವನದ ಸಮಸ್ಯೆಗಳು, ಮಾಹಿತಿಯ ಕೊರತೆ, ವಿಷಯದ ಕ್ರೋಢೀಕರಣ, ಸಮಯದ ಅಭಾವ, ಸಿದ್ಧತೆಗೆ ಯೋಜನೆ ಇಲ್ಲದಿರುವಿಕೆ, ಪ್ರಶ್ನೆಗಳ ಸ್ವರೂಪ ಮತ್ತು ಅವುಗಳನ್ನು ಬಿಡಿಸುವ ವಿಧಾನ ತಿಳಿಯದಿರುವುದು ಇದಕ್ಕೆ ಪ್ರಮುಖ ಕಾರಣಗಳು ಎನ್ನಬಹುದು. ಶಾಲಾ-ಕಾಲೇಜುಗಳಲ್ಲಿ ಪ್ರಚಂಡ ಪಂಡಿತರಾದವರಿಗೂ, ಸ್ಪರ್ಧಾತ್ಮಕ ಪರೀಕ್ಷೆಗಳು ಕಬ್ಬಿಣದ ಕಡಲೆಯಾಗಬಹುದು. ಇತ್ತೀಚಿನ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಂದರೆ, ಐಎಎಸ್, ಕೆಎಎಸ್, ಬ್ಯಾಂಕಿಂಗ್, ಶಿಕ್ಷಕರ ಆಯ್ಕೆ ಹಾಗೂ ಇತರ ಪರೀಕ್ಷೆಗಳಲ್ಲಿ ಪ್ರತಿ ಅಭ್ಯರ್ಥಿಯ ಮನೋಸಾಮರ್ಥ್ಯ ಪರೀಕ್ಷಿಸುವ ಪ್ರಶ್ನೆಗಳು ಸಾಮಾನ್ಯ. ಈ ಪ್ರಶ್ನೆಗಳು ವಿದ್ಯಾರ್ಥಿಯು ಮಾನಸಿಕ ಸಾಮರ್ಥ್ಯ ಹಾಗೂ ಜ್ಞಾನವನ್ನು ಹೇಗೆ ಅನ್ವಯಿಸಬಲ್ಲ, ಕೌಶಲಗಳನ್ನು ಹೇಗೆ ಬಳಸಿಕೊಳ್ಳಬಲ್ಲ ಎಂಬುದನ್ನು ಪರೀಕ್ಷಿಸುವಂತಿರುತ್ತವೆ. ಕಲಿತ ಜ್ಞಾನವನ್ನು ನಂತರದ ಹಂತಗಳಲ್ಲಿ ಬಳಸಿ ತನ್ನ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಬಲ್ಲ ಚಾಕಚಕ್ಯತೆಯನ್ನೇ ಮಾನಸಿಕ ಸಾಮರ್ಥ್ಯ ಎನ್ನುತ್ತೇವೆ. ಇಲ್ಲಿ ಕೆಲವು ಪ್ರಶ್ನೆಗಳು ಸರಳವಾಗಿ ಕಂಡರೂ, ಹಲವಾರು ಮೂಲ ಕಲ್ಪನೆಗಳ ಸಂಯೋಜನೆಯಿಂದ ಸಿದ್ಧಗೊಂಡ ಸಂಕೀರ್ಣ ಪ್ರಶ್ನೆಗಳಾಗಿರುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಯಲ್ಲಿ ಬಹಳ ಮುಖ್ಯವಾದ ಅಂಶವೆಂದರೆ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಹಾಗೂ ಛಲ ಬಿಡದೆ ಧನಾತ್ಮಕ ಮನೋಭಾವದಿಂದ ಗುರಿಯೆಡೆಗೆ ಸಾಗುವುದು. ಇದಕ್ಕಾಗಿ ಸೂಕ್ತ ಸಿದ್ಧತಾ ಯೋಜನೆ ಸಿದ್ಧಪಡಿಸಿಟ್ಟುಕೊಂಡು ಅದರಂತೆ ಸಿದ್ಧತೆ ಮಾಡಿ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಜಯಿಸಲು ನಿಖರತೆ, ತ್ವರಿತಗತಿ ಹಾಗೂ ಸಮಯ ನಿರ್ವಹಣೆ ಬಹಳ ಮುಖ್ಯ. ಇದರೊಂದಿಗೆ ಉತ್ತಮ ಅವಲೋಕನ ಗುಣ ಇದ್ದರಂತೂ ನಿಮ್ಮ ಶ್ರಮ ಸಾರ್ಥಕವಾಗುತ್ತದೆ.

 

ತರಬೇತಿ ಅಗತ್ಯ: ಅಭ್ಯರ್ಥಿಯು ನಿರ್ದಿಷ್ಟ ಪರೀಕ್ಷೆಯ ಪಠ್ಯಕ್ರಮ ತಿಳಿಯಲೇಬೇಕು. ಪಠ್ಯಕ್ರಮಕ್ಕೆ ಅನುಗುಣವಾಗಿ ಅಭ್ಯಾಸ ಮಾಡುವುದರಿಂದ ಸಮಯ ಉಳಿಯುವ ಜತೆಗೆ, ಅನವಶ್ಯಕ ಒತ್ತಡ ಉಂಟಾಗದು. ಪಠ್ಯವಸ್ತುವಿನೊಂದಿಗೆ, ಸಂಬಂಧಿಸಿದ ಪ್ರಾಧಿಕಾರ ಅಥವಾ ಇಲಾಖೆ ನೀಡುವ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸಿ. ಇದರಿಂದ ಪ್ರಶ್ನೆಗಳ ವಿಧಗಳು, ಅಂಕಗಳ ವಿತರಣೆ ಮತ್ತಿತರ ಅಂಶಗಳು ತಿಳಿಯುತ್ತವೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ತಮ ಲೇಖಕರು ಸಂಪಾದಿಸಿರುವ ಮಾದರಿ ಪತ್ರಿಕೆಗಳು ಸಿಗುತ್ತವೆ. ಉತ್ತರಿಸಲು ಪ್ರಯತ್ನಿಸಿ. ಸೂಕ್ತ ತರಬೇತಿಯ ಅವಶ್ಯಕತೆ ಇದೆ ಅನಿಸಿದಲ್ಲಿ, ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆದುಕೊಳ್ಳಿ. ಪ್ರವೇಶ ಪಡೆದ ಮೇಲೆ ಗೈರು ಹಾಜರಾಗದೆ ಪ್ರತಿ ತರಗತಿಯಲ್ಲೂ ಸಂಪೂರ್ಣ ತೊಡಗಿಸಿಕೊಂಡು ವಿಷಯ ಸಂಗ್ರಹಿಸಿ. ಆಕರ ಗ್ರಂಥಗಳ ಮಾಹಿತಿಯನ್ನು ಬೋಧಕರಿಂದ ಪಡೆದುಕೊಳ್ಳಿ. ತರಗತಿ ನಡೆಯುವಾಗ ಸಂದೇಹಗಳನ್ನು ಪರಿಹರಿಸಿಕೊಳ್ಳಿ. ಅನುಮಾನಗಳು ಕ್ಷುಲ್ಲಕವೆನಿಸಿದರೂ ಅಡ್ಡಿಯಿಲ್ಲ. ಬೋಧಕರೊಂದಿಗೆ ರ್ಚಚಿಸಿ ಪರಿಹರಿಸಿಕೊಳ್ಳಿ. ಉಳಿದವರು ನಗುತ್ತಾರೆ ಎಂಬ ದಾಕ್ಷಿಣ್ಯ ಬೇಡ. ನಗುವವರೆಲ್ಲ ನಮ್ಮ ಸಹಾಯಕ್ಕೆ ಬರುವುದಿಲ್ಲ. ಜತೆಗಾರರೊಂದಿಗೆ ಮಾತು ಹಿತವಾಗಿರಲಿ. ಯಾವುದೇ ವಿಷಯದ ಬಗ್ಗೆ ವಾದ ಮಾಡಬೇಡಿ.

ಜ್ಞಾನ ಗಳಿಕೆಗೆ ಓದಿ: ಉತ್ತಮ ಅಂಕಗಳನ್ನು ಗಳಿಸುವುದು ಅತ್ಯಾವಶ್ಯಕ. ಆದರೆ ಕೇವಲ ಅಂಕ ಗಳಿಕೆಗಾಗಿ ಓದದೇ, ಜ್ಞಾನ ಸಂಪಾದನೆಗೆ ಓದಿದರೆ, ಅಂಕಗಳು ತಾನಾಗಿಯೇ ಬರುತ್ತವೆ. ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಸಕಾರಾತ್ಮಕವಾಗಿ ಯೋಚಿಸಿ, ಮನಸ್ಸನ್ನು ಪ್ರಶಾಂತವಾಗಿರಿಸಿಕೊಂಡು, ನಿಮ್ಮ ಸುತ್ತಲಿನ ವಾತಾವರಣ ಆಹ್ಲಾದಕರವಾಗಿರುವಂತೆ ನೋಡಿಕೊಳ್ಳಿ.

ಕೋಚಿಂಗ್ ಅನಿವಾರ್ಯವಲ್ಲ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲೇಬೇಕೆಂಬುದು ತಪ್ಪು ಕಲ್ಪನೆ. ಯಾವುದೇ ಕೋಚಿಂಗ್ ಪಡೆಯದೆ ಸ್ವಾಧ್ಯಾಯದಿಂದಲೇ ಐಎಎಸ್, ಐಪಿಎಸ್ ಅಧಿಕಾರಿಗಳಾಗಿರುವವರು ಸಾಕಷ್ಟು ಜನರಿದ್ದಾರೆ. ಮನೆಯಲ್ಲೆ ಕುಳಿತು ಸ್ವಯಂ ಬುದ್ಧಿಶಕ್ತಿಯಿಂದ ಪರೀಕ್ಷೆಗೆ ಸಿದ್ಧರಾಗಬಹುದು.

ಮನೆಗಳಲ್ಲಿ ಕೋಚಿಂಗ್ ಸೆಂಟರ್​ನಂತೆ ಓದುವ ವಾತಾವರಣ ಇರುವುದು ಕಷ್ಟ. ಆಟವಾಡುವ ಮಕ್ಕಳ ಸದ್ದು, ಟಿವಿ ಗದ್ದಲ, ಆಗಾಗ ಬರುವ ಅತಿಥಿಗಳು, ಅಕ್ಕಪಕ್ಕದ ಮನೆಯ ಗೆಳೆಯರು, ಹೀಗೆ ಓದಿಗೆ ಭಂಗ ತರುವ ಸಾಕಷ್ಟು ಅಂಶಗಳಿರಬಹುದು. ಆದರೂ, ಮನಸ್ಸು ಮಾಡಿದರೆ ಮನೆಯಲ್ಲಿ ಕುಳಿತು ಓದಿ ಯಶಸ್ಸು ಪಡೆಯಬಹುದು.

ಪ್ರತಿದಿನ ಇಂತಿಷ್ಟು ಗಂಟೆ ಪರೀಕ್ಷೆಗೆ ಸಿದ್ಧತೆ ಮಾಡಲೇಬೇಕು ಎಂದು ವೇಳಾಪಟ್ಟಿ ಹಾಕಿಕೊಳ್ಳಿ.ಕಷ್ಟಪಟ್ಟು ಸಾಕಷ್ಟು ಸಮಯವನ್ನು ಓದಲು ಮತ್ತು ವಿಷಯಗಳ ಮನನ ಮಾಡಲು ವಿನಿಯೋಗಿಸಿ.

ಪಠ್ಯಕ್ರಮ ಜತೆಗಿರಲಿ: ನೀವು ಬರೆಯಲಿರುವ ಪರೀಕ್ಷೆಗೆ ಸಂಬಂಧಪಟ್ಟ ಪಠ್ಯಕ್ರಮ,ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳು,ಯುಪಿಎಸ್​ಸಿ, ಕೆಪಿಎಸ್​ಸಿ ಇತ್ಯಾದಿ ವೆಬ್​ಸೈಟ್​ಗಳಲ್ಲೆ ದೊರಕುತ್ತದೆ. ಆಯಾ ಸಿಲೆಬಸ್​ಗೆ ತಕ್ಕಂತಹ ಪುಸ್ತಕಗಳನ್ನು ಸಂಗ್ರಹಿಸಿ. ತಯಾರಿ ಆರಂಭಿಸಿ.

ರಿವಿಷನ್: ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಪಠ್ಯಕ್ರಮದ ವಿಷಯಗಳನ್ನು ಓದಿಕೊಳ್ಳಿ. ವಿಷಯಗಳನ್ನು ಮತ್ತೆ ಮತ್ತೆ ಮನನ ಮಾಡಿಕೊಳ್ಳಿ. ಇದರಿಂದ ನಿಮ್ಮ ಸ್ಮರಣಶಕ್ತಿ ಉತ್ತಮಗೊಳ್ಳುತ್ತದೆ.

ಹಳೆ ಪ್ರಶ್ನೆಪತ್ರಿಕೆ: ಈ ಹಿಂದಿನ ವರ್ಷ ನಡೆಸಿದ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳಿಗೆ ಉತ್ತರಗಳನ್ನು ಕಂಡುಹಿಡಿಯಿರಿ. ಇದರಿಂದ ನಿಮಗೆ ಸಮಯದ ನಿರ್ವಹಣೆ, ವಿಷಯದ ಕುರಿತು ಅರಿವು ಇತ್ಯಾದಿ ಅನೇಕ ಲಾಭಗಳಿವೆ.

ಹೊಸ ಪುಸ್ತಕಗಳನ್ನು ಖರೀದಿಸಿ: ನೀವು ಓದಲೇಬೇಕಾದ ಕೆಲವು ಪುಸ್ತಕಗಳನ್ನು ಖರೀದಿಸಿ. ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಿಗಳನ್ನು ಓದಿ. ವಿಕೆ ಮಿನಿಯಲ್ಲಿ ಪ್ರಕಟಗೊಳ್ಳುವ ಪ್ರಶ್ನೊತ್ತರ, ಮಾಹಿತಿಗಳನ್ನು ಓದಿ ತಿಳಿದುಕೊಳ್ಳಿ. ಹತ್ತಿರದ ಗ್ರಂಥಾಲಯಕ್ಕೆ ಭೇಟಿ ನೀಡಿ. ಅಲ್ಲಿ ನಿಮ್ಮಂತೆಯೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಇತರೆ ಸ್ನೇಹಿತರ ಪರಿಚಯವಾಗುತ್ತದೆ.

ಇಂಟರ್​ನೆಟ್ ನೆರವು: ನಿಮ್ಮಲ್ಲಿ ಇಂಟರ್​ನೆಟ್ ಸೌಲಭ್ಯವಿದ್ದರೆ ದೊಡ್ಡ ಲೈಬ್ರರಿ ನಿಮ್ಮ ಬಳಿ ಇದ್ದಂತೆ. ಇಂಟರ್​ನೆಟ್ ಮೂಲಕ ನಿಮ್ಮ ಪರೀಕ್ಷೆಗೆ ಪೂರಕ ಮಾಹಿತಿಗಳನ್ನು ಪಡೆದುಕೊಂಡು ಅಧ್ಯಯನ ಮಾಡಿ. ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ವೆಬ್​ಸೈಟ್​ಗಳು, ಚರ್ಚಾ ತಾಣಗಳಿಗೆ ಭೇಟಿ ನೀಡುತ್ತಿರಿ. ನಿಮ್ಮ ಕೈಯಲ್ಲಿರುವ ಪುಟ್ಟ ಮೊಬೈಲ್​ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಪಟ್ಟ ಆಪ್​ಗಳನ್ನು ಡೌನ್​ಲೋಡ್ ಮಾಡಿ ಬಿಡುವು ಸಿಕ್ಕಾಗ ಅಧ್ಯಯನ ಮಾಡಿ. ಬಸ್, ರೈಲು ಇತ್ಯಾದಿಗಳಲ್ಲಿ ಪ್ರಯಾಣ ಕೈಗೊಂಡಾಗಲೂ ಆಪ್ ಮೂಲಕ ಅಧ್ಯಯನ ನಡೆಸಬಹುದು.

ಗುಂಪು ಚರ್ಚೆ: ನಿಮ್ಮೂರಿನಲ್ಲಿ ನಿಮ್ಮಂತೆ ಪರೀಕ್ಷೆ ಬರೆಯುವವರಿದ್ದರೆ ಅವರ ಸ್ನೇಹ ಬೆಳೆಸಿಕೊಳ್ಳಿ. ಅವರೊಂದಿಗೆ ಗುಂಪು ಚರ್ಚೆ ನಡೆಸಿ.

ಉತ್ತಮ ಫಲಿತಾಂಶಕ್ಕೆ ಸರಳ ಸೂತ್ರಗಳು

 1. ಯಾವ ವಿಷಯಗಳಿಗೆ ಎಷ್ಟು ಸಮಯ ನೀಡಬೇಕು ಎಂದು ನಿರ್ಧರಿಸಿಕೊಳ್ಳಿ.
 2. ಸುಲಭವಾಗಿ ಅರ್ಥವಾಗದ ವಿಷಯಕ್ಕೆ ಹೆಚ್ಚಿನ ಸಮಯ ನೀಡಿ.
 3. ರೀಡ್ ಆಂಡ್ ರಿವಿಷನ್ ವಿಧಾನ ಅನುಸರಿಸಿ.
 4. ಬೆಳಗಿನ ಜಾವದಲ್ಲಿ ಬೇಗ ಎದ್ದು ಓದಲು ಪ್ರಾರಂಭಿಸಿ.
 5. ಓದಿನ ನಡುವೆ ನಿಮ್ಮ ಇತರೆ ಹವ್ಯಾಸಗಳಿಗೆ ಸಮಯ ಹೊಂದಿಸಿಕೊಳ್ಳಿ.
 6. ಧ್ಯಾನ, ಯೋಗ, ಪ್ರಾರ್ಥನೆಗಳಿಂದ ಒತ್ತಡ ದೂರ ಮಾಡಬಹುದು.
 7. ಚಿಕ್ಕ ನೋಟ್ ಪುಸ್ತಕದಲ್ಲಿ ನಿಮ್ಮದೇ ವಿಧಾನದಲ್ಲಿ ಲಘು ಟಿಪ್ಪಣಿ ಮಾಡಿಟ್ಟುಕೊಳ್ಳಿ.. ಟಿಪ್ಪಣಿ ನೋಡಿದರೆ, ಪೂರ್ಣ ವಿಷಯ ನೆನಪಿಗೆ ಬರುವಂತಿರಲಿ.
 8. ಅಭ್ಯಾಸದ ನಡುವೆ ಆಗಾಗ ವಿಶ್ರಾಂತಿ ಪಡೆಯಿರಿ. ಸಂಗೀತ ಕೇಳಿ, ಕಿಟಕಿ ಬಳಿ ಸುಮ್ಮನೆ ಹೊರಗೆ ಗಮನಿಸಿ.
 9. ಯಾವಾಗಲೂ ಧನಾತ್ಮಕವಾಗಿ ಚಿಂತಿಸಿ. ಗುರಿಯೆಡೆಗೆ ಗಮನ ಕೇಂದ್ರಿಕೃತವಾಗಲಿ
 10. ಋಣಾತ್ಮಕವಾಗಿ ಪ್ರತಿಕ್ರಿಯಿಸುವವರ ಅಥವಾ ಕಾಲು ಎಳೆಯುವವರ ಮಾತನ್ನು ಪರಿಗಣಿಸಬೇಡಿ.
 11. ಉತ್ತಮ ಆಹಾರ ಕ್ರಮ ಅನುಸರಿಸಿ. ಸಮಯಕ್ಕೆ ಸರಿಯಾಗಿ ಊಟ-ತಿಂಡಿ ಮುಗಿಸಿ.
 12. ಅತಿಯಾದ ಊಟ, ಕರಿದ ಪದಾರ್ಥಗಳನ್ನು ತಪ್ಪಿಸಿ.
 13. ಬೆಳಗ್ಗೆ ಅಥವಾ ಸಂಜೆ ವಾಕಿಂಗ್, ಜಾಗಿಂಗ್ ನಡೆಸಿ, ಆರೋಗ್ಯವೂ ಬಹಳ ಮುಖ್ಯ.

 

Leave a Reply

Your email address will not be published. Required fields are marked *

Back To Top