More

    ಕಬ್ಬಿಣದ ಕಡಲೆ ಅಲ್ಲ ಸ್ಪರ್ಧಾತ್ಮಕ ಪರೀಕ್ಷೆ

    ಸಾಧನೆಗೆ ಕೆಲ ತ್ಯಾಗಗಳನ್ನು ಮಾಡಲೇಬೇಕಾಗುತ್ತದೆ. ಕೇಂದ್ರ ಲೋಕಸೇವಾ ಆಯೋಗದ ಸಿವಿಲ್ ಸರ್ವಿಸ್ ಪರೀಕ್ಷೆ ಅಥವಾ ಇನ್ನಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ನಿರಂತರ ಅಧ್ಯಯನ, ಏಕಾಗ್ರತೆ, ದೃಢ ನಿರ್ಧಾರ ಅತ್ಯಗತ್ಯ. ಇಂದು ಅಂತರಿಕ್ಷದವರೆಗೂ ಮಹಿಳೆಯರ ಸಾಧನೆ ಇರುವಾಗ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಹೆಣ್ಣು ಮನಸ್ಸು ಸಜ್ಜುಗೊಳಿಸದೇ ಇರಲಾರಳು ಎನ್ನುತ್ತಾರೆ ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣಾಭಿವೃದ್ಧಿ ವಿಭಾಗದ ಆಯುಕ್ತರಾಗಿರುವ ಶಿಲ್ಪಾ ನಾಗ್.

    ಶಾಲಾ- ಕಾಲೇಜು ಹಂತದ ಪರೀಕ್ಷೆ ಫಲಿತಾಂಶ ಬಂದಾಗ ಬಾಲಕಿಯರ ಮೇಲುಗೈ ಎಂದು ಪ್ರತಿ ಬಾರಿ ನೋಡುತ್ತೇವೆ. ಆದರೆ ನಂತರದ ಹಂತಗಳಲ್ಲಿ ಅವರೆಲ್ಲ ಎಲ್ಲಿ ಕಣ್ಮರೆ ಆಗುತ್ತಾರೆ…! ಆ ಹೆಣ್ಣು ಮಕ್ಕಳೆಲ್ಲ ಹೆಚ್ಚಿನ ಅಧ್ಯಯನಕ್ಕಾಗಿ ಹಪಹಪಿಸಿದರೂ ಕುಟುಂಬದ ಸಮಸ್ಯೆ, ಆರ್ಥಿಕ ಸಮಸ್ಯೆ ಇತ್ಯಾದಿಗಳಿಂದ ತಮ್ಮ ಆಸೆಗಳನ್ನು ಚಿವುಟಿಬಿಡುತ್ತಾರೆ. ಆದರೆ ಇನ್ನೂ ಕೆಲವರು, ತಮ್ಮ ಗುರಿ ಮುಟ್ಟುವ ಸದುದ್ದೇಶದಿಂದ ಸಾಕಷ್ಟು ತ್ಯಾಗಗಳನ್ನು ಮಾಡಿ ಜಯಶೀಲರಾಗುತ್ತಾರೆ. ಇವರು ಸಮಸ್ಯೆ ಎದುರಿಸಿರುವುದಿಲ್ಲ ಎಂದೇನು ಇಲ್ಲ… ಆದರೆ ಅವರಿಗೆ ಅದನ್ನು ನಿಭಾಯಿಸುವ ಜಾಣ್ಮೆ ಇರುತ್ತದೆ ಎನ್ನಬಹುದು. ಇಂದು ಪ್ರತಿ ಹೆಣ್ಣು ಇಂತಹ ಜಾಣ್ಮೆ, ಕೌಶಲ ಬೆಳೆಸಿಕೊಳ್ಳಬೇಕಿದೆ. ಆಡಳಿತ, ವಿಜ್ಞಾನ, ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ಸಕ್ರಿಯರಾಗುತ್ತಿದ್ದಾರೆ. ಆದರೆ ಇದರ ಪ್ರಗತಿ ನಮ್ಮ ನಿರೀಕ್ಷಿತ ಮಟ್ಟದಲ್ಲಿಲ್ಲ… ಇದರ ವೇಗ ಇನ್ನಷ್ಟು ಹೆಚ್ಚಬೇಕಿದೆ… ಎನ್ನುವುದು ಶಿಲ್ಪಾನಾಗ್ ಅವರ ಮನದಾಳದ ಮಾತು.

    ಸಾಮಾನ್ಯವಾಗಿ ಮಹಿಳೆಯರಿಗೆ ಪುರುಷರಿಗಿಂತ ಜಾಸ್ತಿ ಜವಾಬ್ದಾರಿಗಳಿರುತ್ತವೆ. ಮನೆ ನಿರ್ವಹಣೆ, ಮಕ್ಕಳ ಲಾಲನೆ, ಪಾಲನೆ, ಕುಟುಂಬದ ನಿರ್ವಹಣೆ ಜತೆಗೆ ಕಚೇರಿ ಕೆಲಸಗಳ ಜವಾಬ್ದಾರಿಯನ್ನು ಆಕೆ ಯಶಸ್ವಿಯಾಗಿ ನಿರ್ವಹಿಸುತ್ತಾಳೆ. ಇಂತಹ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಆಕೆಗೇನು ಅಷ್ಟು ಕಷ್ಟವಲ್ಲ. ಹಾಗಂತ ಸ್ಪರ್ಧಾತ್ಮಕ ಪರೀಕ್ಷೆಯು ಸರಳವಾಗಿರುತ್ತದೆ ಎಂದೆಣಿಸುವುದು ಬೇಡ. ಕೆಪಿಎಸ್ಸಿ ಪರೀಕ್ಷೆ ಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಶೇ.33 ಮೀಸಲಾತಿ ಇದೆ, ಆದರೆ ಯುಪಿಎಸ್​ಸಿ ಪರೀಕ್ಷೆಯಲ್ಲಿ ಎಲ್ಲರೂ ಒಂದೇ. ಅಲ್ಲಿ ನಿಮ್ಮ ಜ್ಞಾನ, ವ್ಯಕ್ತಿತ್ವಕ್ಕೆ ಅಷ್ಟೇ ಮಹತ್ವ ಇರುತ್ತದೆ. ಈಗ ಕಾಲ ಬದಲಾಗುತ್ತಾ ಇರುವುದರಿಂದ ಮಹಿಳೆಯರೂ ತಮ್ಮ ಮದುವೆಯ ವಯಸ್ಸನ್ನು ಮುಂದೂಡಿ, ಅಧ್ಯಯನಕ್ಕೆ ಹೆಚ್ಚು ಪ್ರಾಶಸ್ಱ ನೀಡುತ್ತಿದ್ದಾರೆ. ಇನ್ನು ಕೆಲವರು ಮದುವೆ ನಂತರವೂ ಯುಪಿಎಸ್​ಸಿ ಉತ್ತೀರ್ಣರಾದ ಉದಾಹರಣೆಗಳಿವೆ. ಅವರಲ್ಲಿ ನಾನೂ ಒಬ್ಬಳು. ಮಗು ಜನಿಸಿದ ಮೇಲೆ ಸಿವಿಲ್ ಸರ್ವಿಸ್ ಪರೀಕ್ಷೆ ಉತ್ತೀರ್ಣಳಾಗಿದ್ದೇನೆ. ನನ್ನಂತೆ ಸಾಕಷ್ಟು ಸ್ತ್ರೀಶಕ್ತಿ ಇದ್ದಾರೆ ಎನ್ನುತ್ತಾರೆ ಶಿಲ್ಪಾ.

    ಕುಟುಂಬದ ಸಹಕಾರ ಅತ್ಯಗತ್ಯ: ಯಾವುದೇ ಕೆಲಸ ಅಥವಾ ಅಧ್ಯಯನ ಇರಲಿ ಅಲ್ಲಿ ಆಕೆಗೆ ಕುಟುಂಬದ ಸಹಕಾರ ಅತ್ಯಗತ್ಯವಾಗಿಬೇಕಿದೆ. ಯುಪಿಎಸ್​ಸಿ ಪರೀಕ್ಷೆ ಸಾಕಷ್ಟು ಪರಿಶ್ರಮ ಬೇಡುವುದರಿಂದ ಮಹಿಳೆಯರು ತಮ್ಮ ಜವಾಬ್ದಾರಿಗಳ ನಡುವೆ ಪ್ರಿಲಿಮ್್ಸ, ಮುಖ್ಯಪರೀಕ್ಷೆ ಹಾಗೂ ವ್ಯಕ್ತಿತ್ವ ಪರೀಕ್ಷೆಗಳನ್ನು ಒಂದೇ ಬಾರಿಗೆ ಎದುರಿಸಿ ಗುರಿ ಮುಟ್ಟುವುದು ಸ್ವಲ್ಪ ಕಷ್ಟ ಎನಿಸಬಹುದು. ಇಂತಹ ಸಮಯದಲ್ಲಿ ಆಕೆಯ ಜಬಾಬ್ದಾರಿಗಳನ್ನು ಕಡಿಮೆ ಮಾಡಿ, ಆಕೆಯ ಅಧ್ಯಯನಕ್ಕೆ ಪ್ರೋತ್ಸಾಹ ನೀಡಿ, ಧೈರ್ಯ ನೀಡುವ ಕುಟುಂಬ ಅಗತ್ಯವಿರುತ್ತದೆ.

    ಕಬ್ಬಿಣದ ಕಡಲೆ ಅಲ್ಲ ಸ್ಪರ್ಧಾತ್ಮಕ ಪರೀಕ್ಷೆ
    ಶಿಲ್ಪಾ ನಾಗ್

    ಸವಾಲುಗಳೇನು?

    • ದೇಶದ ಯಾವುದೇ ಭಾಗಕ್ಕೆ ವರ್ಗ ಮಾಡಿದರೂ ಕಾರ್ಯನಿರ್ವಹಿಸಲು ಸಿದ್ಧರಿರಬೇಕು. ವಿವಾಹಿತರು ಅಥವಾ ಮಕ್ಕಳಿರುವವರಿಗೆ ಇದು ಸವಾಲಾಗಿರುತ್ತದೆ.
    • ಹೆಣ್ಣು ಮಗಳು ನೀನು ಎಷ್ಟು ಓದಿದರೂ ಒಂದೇ ಎನ್ನುವ ಮನಸ್ಥಿತಿ ಇತ್ತೀಚಿನ ದಿನಗಳಲ್ಲಿ ಬದಲಾಗಿದೆ. ಆದರೂ ಇನ್ನೂ ಕೆಲ ಪ್ರದೇಶ/ ಕುಟುಂಬಗಳಲ್ಲಿ ಈ ಸಂಪ್ರದಾಯ ಇರುವುದರಿಂದ ಅದನ್ನು ಎದುರಿಸುವ ಸಾಮರ್ಥ್ಯದ ಕೊರತೆ.
    • ಪದವಿ ಪಡೆದ ನಂತರ ಉದ್ಯೋಗಕ್ಕೆ ಸೇರಿ ಅದರ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಾಕಷ್ಟು ಜನ ಸಿದ್ಧತೆ ನಡೆಸುತ್ತಾರೆ. ಕೆಲವರಿಗೆ ಎರಡನ್ನೂ ನಿಭಾಯಿಸುವುದು ಕಷ್ಟವಾಗಬಹುದು.
    • ಪ್ರತಿ ವರ್ಷ 15-20 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಎದುರಿಸುತ್ತಾರೆ. ಆದರೆ ಉತ್ತೀರ್ಣರಾಗುವವರ ಸಂಖ್ಯೆ ಕೇವಲ ಸಾವಿರ ದಲ್ಲಿರುತ್ತದೆ. ಹಾಗಾಗಿ ಕಠಿಣ ಸ್ಪರ್ಧೆ ಇರುತ್ತದೆ.

    ಆಕಾಂಕ್ಷಿಗಳಿಗೆ ಸಲಹೆಗಳೇನು?

    • ಬೇರೆಯವರು ಪರೀಕ್ಷೆ ಎದುರಿಸಿದರು, ನೀನೂ ಪರೀಕ್ಷೆ ಬರಿ ಎಂದು ಬೇರೆಯವರ ಮಾತು ಕೇಳಿ ಪರೀಕ್ಷೆಗೆ ಹಾಜರಾಗುವುದಕ್ಕಿಂತ ನಿಮಗೆ ಆಸಕ್ತಿ ಇದ್ದರೆ ಮಾತ್ರ ಪರೀಕ್ಷೆ ಎದುರಿಸಿ.
    • ಸೋಲು-ಗೆಲುವುಗಳ ಜತೆಗೆ ಯಾವಾಗಲೂ ಸ್ವಯಂ ಪ್ರೇರಣೆ (ಸೆಲ್ಪ್ ಮೋಟಿವೇಷನ್) ಇರಬೇಕು.
    • ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮಹಿಳೆಯರಿಗೆ ಸಮಸ್ಯೆ ಇದೆ ಎಂದು ಚಿಂತಿಸುವುದನ್ನು ಬಿಡಬೇಕು.
    • ಪ್ಲಾನ್ ಬಿ ಇರಲಿ. ಸ್ಪರ್ಧಾತ್ಮಕ ಪರೀಕ್ಷೆಯನ್ನು ಗುರಿಯಾಗಿಟ್ಟುಕೊಂಡು 4-5 ವರ್ಷ ವ್ಯಯಿಸಿದ ನಂತರ ಗುರಿ ಸಾಧಿಸಲಾಗದಿದ್ದಾಗ, ಪ್ಲಾನ್ ಬಿ ಉಪಯೋಗಕ್ಕೆ ಬರುತ್ತದೆ. ಇಲ್ಲವಾದರೆ 4-5 ವರ್ಷಗಳ ಗೋಲ್ಡನ್ ಸಮಯ ಕಳೆದುಕೊಳ್ಳುವುದರ ಜತೆಗೆ ಭವಿಷ್ಯ ಹೇಗೆ ಎಂದೂ ಚಿಂತಿಸಬೇಕಾಗುತ್ತದೆ. ಹಾಗಾಗಿ ಉನ್ನತ ಶಿಕ್ಷಣದ ಕಡೆಗೂ ಗಮನ ಹರಿಸುವುದು ಸೂಕ್ತ.
    • ಯುಪಿಎಸ್​ಸಿ ಪರೀಕ್ಷೆಯ ವಿಸ್ತಾರ ಎಷ್ಟಿದೆ? ಯಾವ ಪರೀಕ್ಷೆಗಳನ್ನು ಬರೆಯಬಹುದು? ಯಾವೆಲ್ಲ ಪಠ್ಯ ಇದೆ ಎಂಬ ಬಗ್ಗೆ ಮೊದಲು ಅರಿಯಿರಿ.
    • ಅಧ್ಯಯನದ ಜತೆಗೆ ಆದಷ್ಟು ಹಳೆಯ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸುವ ಅಭ್ಯಾಸ ಮಾಡಿ.
    • ಯುಪಿಎಸ್​ಸಿಗೆ ಸಿದ್ಧತೆ ನಡೆಸುವುದರ ಜತೆಗೆ ಕೆಪಿಎಸ್​ಸಿಯಂತಹ ಇತರ ಪರೀಕ್ಷೆಗಳನ್ನು ಬರೆಯುತ್ತಿರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts