ರಿಪ್ಪನ್‌ಪೇಟೆ: ನವೋದಯ ಮತ್ತು ಮುರಾರ್ಜಿ ವಸತಿ ಶಾಲೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅತ್ಯುತ್ತಮ ಶಿಕ್ಷಣ ಯೋಜನೆಗಳು. ಅವುಗಳ ಮೂಲಕ ಮಕ್ಕಳ ಕಲಿಕಾ ಜ್ಞಾನ ವೃದ್ಧಿಸುವುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಜ್ಞಾನ, ಸಲಹೆ, ಸೂಚನೆ ನೀಡಲಾಗುತ್ತಿದೆ ಎಂದು ನವೋದಯ ಮತ್ತು ಮುರಾರ್ಜಿ ಶಿಬಿರದ ಸಂಸ್ಥಾಪಕ ಪ್ರಕಾಶ್ ಜೋಯ್ಸ ಹೇಳಿದರು.
ಹೊಸನಗರ ತಾಲೂಕಿನ ಹುಂಚದಲ್ಲಿ ಭಾನುವಾರ ನಾಲ್ಕನೇ ವರ್ಷದ ನವೋದಯ ಮತ್ತು ಮುರಾರ್ಜಿ ಶಾಲೆಗಳ ಪ್ರವೇಶ ಪರೀಕ್ಷೆಯ ಉಚಿತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, 2021ರಲ್ಲಿ ಉಚಿತ ತರಬೇತಿ ಶಿಬಿರ ಶುರುವಾಗಿದ್ದು, ಮಲೆನಾಡಿನ ವಿದ್ಯಾರ್ಥಿಗಳಿಗೆ ಈ ಎರಡೂ ಶಾಲೆಗಳ ಪರಿಚಯ, ಆಯ್ಕೆ ಪ್ರಕ್ರಿಯೆ ಮಾಹಿತಿ, ಕೋಚಿಂಗ್, ಮಾದರಿ ಪರೀಕ್ಷೆ, ಕಲಿಕಾ ಸಾಮಗ್ರಿ, ಸಮಯ ನಿರ್ವಹಣೆ ಮತ್ತಿತರ ಮಾಹಿತಿಗಳನ್ನು ನೀಡಲಾಗುತ್ತಿದೆ ಎಂದರು.
ಕಳೆದ ಮೂರು ವರ್ಷದಲ್ಲಿ 20ಕ್ಕೂ ಅಧಿಕ ಶಾಲೆಗಳಿಂದ 209 ಮಕ್ಕಳು ಭಾಗವಹಿಸಿದ್ದು, 6 ಮಕ್ಕಳು ನವೋದಯ ಶಾಲೆಗೆ ಮತ್ತು 42 ಮಕ್ಕಳು ಮುರಾರ್ಜಿ ಶಾಲೆಗೆ ಪ್ರವೇಶ ಪಡೆದಿದ್ದಾರೆ. ಶಿಬಿರದಿಂದ 48 ಮಕ್ಕಳು, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 1.68 ಕೋಟಿ ರೂ. ಮೌಲ್ಯದ ಶೈಕ್ಷಣಿಕ ಉಪಯೋಗ ಪಡೆದಿದ್ದಾರೆ. ಪ್ರಸಕ್ತ ಸಾಲಿನ ಶಿಬಿರಕ್ಕೆ ಹುಂಚ ಸುತ್ತಮುತ್ತಲಿನ 22ಕ್ಕೂ ಹೆಚ್ಚು ಶಾಲೆಗಳಿಂದ 72 ಮಕ್ಕಳು ನೋಂದಾಯಿಸಿದ್ದಾರೆ. ಸತತ ನಾಲ್ಕು ತಿಂಗಳು, ಪ್ರತಿ ಭಾನುವಾರ ಮಕ್ಕಳಿಗೆ ಪ್ರವೇಶ ಪರೀಕ್ಷೆಗೆ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.
ನಿವೃತ್ತ ಮುಖ್ಯ ಶಿಕ್ಷಕ ಮಂಜಪ್ಪ ಗುಳುಕೊಪ್ಪ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳು ಮಕ್ಕಳ ಸಮಗ್ರ ಬೆಳವಣಿಗೆಗೆ ಪೂರಕ. 5ನೇ ತರಗತಿಯಲ್ಲೇ ಇದನ್ನು ಎದುರಿಸಲು ಹಳೇ ನವೋದಯ ವಿದ್ಯಾರ್ಥಿ ಬಳಗ ಮತ್ತು ಹುಂಚ ಯುವ ತಂಡ ಉತ್ತಮ ವೇದಿಕೆ ಕಲ್ಪಿಸಿದೆ ಎಂದು ಶ್ಲಾಘಿಸಿದರು.
ವಿದ್ಯಾರ್ಥಿಗಳಿಗೆ ಉಚಿತವಾಗಿ ಟಿ ಶರ್ಟ್, ನೋಟ್‌ಬುಕ್, ಪೆನ್, ಹಣ ಉಳಿತಾಯ ಹುಂಡಿ ಮತ್ತು ಅಧ್ಯಯನ ಸಾಮಗ್ರಿ ಒಳಗೊಂಡ ಸ್ವಾಗತ ಕಿಟ್ ವಿತರಿಸಲಾಯಿತು. ದ್ವಿತೀಯ ವರ್ಷದ ಶಿಬಿರದಲ್ಲಿ ಭಾಗಿಯಾದ ಎಲ್ಲ ಮಕ್ಕಳಿಗೆ ಅಭಿನಂದನಾ ಪತ್ರ ಮತ್ತು ಪರಿಸರ ಜಾಗೃತಿಗೆ ಸಸಿ ವಿತರಿಸಲಾಯಿತು. ಶಿಬಿರದ ಸಂಚಾಳಕರು ಮತ್ತು ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹುಂಚ ಜೈನ ಮಠದ ಕಾರ್ಯನಿರ್ವಾಹಕ ಪ್ರಕಾಶ್ ಮಗದಂ, ಗ್ರಾಮದ ಮುಖಂಡ ಗೋಪಾಲರಾವ್ ಉಪಸ್ಥಿತರಿದ್ದರು.