ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡಿನ ಏರಿಳಿತದ ಹಾದಿಯಲ್ಲಿ ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್ ಸ್ಪರ್ಧೆ ಆಯೋಜನೆಗೊಂಡಿದ್ದು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ 1198 ಮಂದಿ ವೇಗಿ ಓಟಗಾರರು ಪಾಲ್ಗೊಳ್ಳಲಿದ್ದಾರೆ.

ಅ.13 ಮತ್ತು 14ರಂದು ನಡೆಯಲಿರುವ ಈ ಮ್ಯಾರಥಾನ್​ಗೆ ತರೀಕೆರೆ ತಾಲೂಕು ಲಿಂಗದಹಳ್ಳಿ ಸಮೀಪದ ಲಾಲ್​ಬಾಗ್ ಕಾಫಿ ತೋಟದಲ್ಲಿ ಚಾಲನೆ ದೊರೆಯಲಿದ್ದು, ದೇಶದ ವಿವಿಧ ರಾಜ್ಯಗಳಲ್ಲದೆ ಇಂಗ್ಲೆಂಡ್, ಪೋಲೆಂಡ್, ಫ್ರಾನ್ಸ್, ಅಮೆರಿಕಾ, ಮಾಲ್ಡೀವ್ಸ್, ಜರ್ಮನಿ, ಆಸ್ಟ್ರೇಲಿಯಾ, ಕೆನಡಾ, ಬೆಲ್ಜಿಯಂ, ಸಿಂಗಾಪುರ್, ಕೊಲಂಬಿಯಾ, ಜಪಾನ್, ಮಲೇಷಿಯಾದಿಂದ ಓಟಗಾರರು ಪಾಲ್ಗೊಳ್ಳಿದ್ದಾರೆ ಎಂದು ಅಲ್ಟ್ರಾ ಮ್ಯಾರಥಾನ್ ನಿರ್ದೇಶಕ ಶ್ಯಾಮ್ ಸುಂದರ್ ಫಣಿ ಮತ್ತು ಎಬಿಸಿ ಸಂಶೋಧನಾ ವಿಭಾಗದ ಡಾ.ಪ್ರದೀಪ್ ಕೆಂಜಿಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಗತ್ತಿನ ಆರು ಮಂದಿ ಅತೀ ವೇಗಿ ಓಟಗಾರರು ಭಾಗವಹಿಸುತ್ತಿರುವುದು ವಿಶೇಷ. ಲಂಡನ್ನಿನ ಪ್ರಸಿದ್ಧ ಓಟಗಾರ್ತಿ ಜೋಮೀಕ್, ಅಮೆರಿಕಾದ ಮ್ಯಾಥ್ಯು ಹೆಡನ್, ಕೊರಿನ್ ಮಾಲ್ಕಮ್ ಫ್ರಾನ್ಸ್​ನ ಟಾಯ್ಟೆ ಟಾಲ್​ವೆುನ್, ಕೆನಡಾದಿಂದ ಮೇರಿಯಾನ್ ಹೋಗಾನ್ ಮತ್ತು ಫ್ಲೋರೆಂಟ್ ಬೋಗಿನ್ ಗಮನ ಸೆಳೆಯಲಿದ್ದಾರೆ.

ಕರ್ನಾಟಕದಿಂದ 385 ತಮಿಳುನಾಡಿನಿಂದ 315 ಮಹಾರಾಷ್ಟ್ರದಿಂದ 89 ಮಂದಿ ಪಾಲ್ಗೊಳ್ಳಲಿದ್ದು, ಮಿಕ್ಕ 409 ಸ್ಪರ್ಧಿಗಳು ದೇಶದ ವಿವಿಧ ರಾಜ್ಯಗಳು ಹಾಗೂ ವಿಶ್ವದ 22 ರಾಷ್ಟ್ರಗಳನ್ನು ಪ್ರತಿನಿಧಿಸಲಿದ್ದಾರೆ. ವಿಶೇಷವೆಂದರೆ ಭೂಸೇನೆ ಮತ್ತು ನೌಕಾಪಡೆಯ ಸೈನಿಕರು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಆಸಕ್ತಿ ತೋರಿಸಿದ್ದು, ಎರಡು ವಿಭಾಗದಿಂದ ತಲಾ 15 ಮಂದಿ ಹಾಗೂ ಪಶ್ಚಿಮ ಬಂಗಾಳದಿಂದ ಪೊಲೀಸ್ ಸಹಾಯಕ ಉಪನಿರ್ದೇಶಕರೊಬ್ಬರು ಭಾಗವಹಿಸಲು ಇಚ್ಛಿಸಿದ್ದಾರೆ ಎಂದರು.

ಈಗಾಗಲೇ 50 ಕಿ.ಮೀ., 80 ಕಿ.ಮೀ. ಹಾಗೂ 110 ಕಿ.ಮೀ. ಅಂತರದ ಮೂರು ವಿಭಾಗಗಳ ಈ ಮ್ಯಾರಥಾನ್​ನಲ್ಲಿ ಸ್ಪರ್ಧಿಗಳು ಮೊದಲೇ ತಮಗಿಷ್ಟವಾದ ವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. 751 ಸ್ಪರ್ಧಿಗಳು 50 ಕಿ.ಮೀ. ವಿಭಾಗದಲ್ಲಿದ್ದರೆ, 182 ಮಂದಿ 80 ಕಿ.ಮೀ. ಹಾಗೂ 265 ಮಂದಿ 110 ಕಿ.ಮೀ.ವಿಭಾಗದಲ್ಲಿದ್ದಾರೆ. ಒಟ್ಟು ಸ್ಪರ್ಧಿಗಳಲ್ಲಿ 142 ಮಂದಿ ಮಹಿಳೆಯರಿದ್ದು, ಇವರಲ್ಲಿ 50 ಕಿ.ಮೀ.ನಲ್ಲಿ 110, 80 ಕಿ.ಮೀ.ನಲ್ಲಿ 17, 110 ಕಿ.ಮೀ.ನಲ್ಲಿ 15 ಸ್ಪರ್ಧಿಗಳಿದ್ದಾರೆ.

ಅ.13 ರಂದು ಬೆಳಗ್ಗೆ 6.30ಕ್ಕೆ 80 ಮತ್ತು 110 ಕಿ.ಮೀ. ವಿಭಾಗದ ಸ್ಪರ್ಧೆಗಳು ಮೊದಲು ಆರಂಭವಾಗಲಿದ್ದು, ಅರ್ಧಗಂಟೆ ಬಳಿಕ 50 ಕಿ.ಮೀ. ವಿಭಾಗಕ್ಕೆ ಚಾಲನೆ ದೊರೆಯಲಿದೆ. ಕತ್ಲೆಕಾನ್, ದೂಪದಕಾನ್, ಸಂಪಿಗೆ ಹಟ್ಟಿಯ ಅತ್ಯಂತ ಕಿರಿದಾದ ಅಂಕುಡೊಂಕಿನ ಏರಿಳಿತದ ಟ್ರ್ಯಾಕ್​ನಲ್ಲಿ ಓಟದ ಹಾದಿ ಸಾಗಲಿದೆ. ಕೆಲವು ಕಡೆ 4250 ಮೀಟರ್ ಎತ್ತರದಲ್ಲಿ ಸಹ ಮಾರ್ಗ ಕ್ರಮಿಸಿ ರಾಜಗಿರಿಯಲ್ಲಿ ಸ್ಪರ್ಧೆ ಅಂತಿಮಗೊಳ್ಳಲಿದೆ. ಕಳೆದ ವರ್ಷ ಮೊದಲ ಸ್ಥಾನ ಪಡೆದಿದ್ದ ಇಂಗ್ಲೇಂಡಿನ ಪಾಲ್ ಗಿಬ್ಲಿನ್ ಈ ವರ್ಷ ಭಾಗವಹಿಸುತ್ತಿಲ್ಲ ಎಂದು ವಿವರಿಸಿದರು.

ಮಲೆನಾಡ ಸಂಸ್ಕೃತಿ ಪರಿಚಯ: ಮಲ್ನಾಡ್ ಅಲ್ಟ್ರಾ ಮ್ಯಾರಥಾನ್ ಕ್ರೀಡೆ ಮಲೆನಾಡಿನ ಸಂಸ್ಕೃತಿ ಜತೆಗೆ ಇಲ್ಲಿನ ನಿಸರ್ಗ ಸೌಂದರ್ಯ, ಸಸ್ಯ ಹಾಗೂ ಪ್ರಾಣಿಗಳ ಸಂಪತ್ತು ಪರಿಚಯಿಸುವ ಕಿಟಕಿಯಾಗಲಿದೆ ಎಂದು ಎಬಿಸಿ ಕಾಫಿ ಡೇ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ಪ್ರದೀಪ್ ಕೆಂಜಿಗೆ ಹೇಳಿದರು.

ಮೊದಲು ಸ್ಪರ್ಧೆ ಆರಂಭಿಸುವಾಗ ಕೊಡಗು ಅಥವಾ ಸಕಲೇಶಪುರದತ್ತ ಗುರಿ ಇರಿಸಲಾಗಿತ್ತು. ಆದರೆ ಎಬಿಸಿ ಕಂಪನಿ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಸಿದ್ದಾರ್ಥ ಹೆಗ್ಡೆ ಈ ಜಿಲ್ಲೆಯ ಮಲೆನಾಡಿನ ಬದುಕನ್ನು ದೇಶ ವಿದೇಶದ ಮುಂದಿಡುವ ಉದ್ದೇಶದಿಂದಲೇ ತಮ್ಮ ತೋಟದಿಂದಲೇ ಸ್ಪರ್ಧೆ ಆರಂಭಿಸಲು ಬಯಸಿ ಅಚ್ಚುಕಟ್ಟಾದ ವ್ಯವಸ್ಥೆಗೆ ಬೆನ್ನೆಲುಬಾದರು ಎಂದು ನಿರ್ದೇಶಕ ಶ್ಯಾಮ್ ಸುಂದರ್ ಹೇಳಿದರು.

ಇದೊಂದು ಸ್ಪರ್ಧೆ ಮಾತ್ರವಲ್ಲ. ಮ್ಯಾರಥಾನ್ ನಡೆಯುವ ಬೀರೂರು-ತರೀಕೆರೆ ಭಾಗದ ಜನರಿಗೆ ಒಂದು ಆದಾಯ ತಂದು ಕೊಡಲಿದೆ. 1198 ಮಂದಿ ಸ್ಪರ್ಧಿಗಳು ಹಾಗೂ ಸಹಾಯಕರು ತಂಗಲು ಈ ಭಾಗದ ಎಲ್ಲ ಹೋಂಸ್ಟೇ ಹಾಗೂ ರೆಸಾರ್ಟ್​ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಈಗಾಗಲೇ ಅಂತಾರಾಷ್ಟ್ರೀಯ ಮಟ್ಟ ರ್ಯಾಲಿಗಳನ್ನು ಆಯೋಜಿಸುವ ಮೂಲಕ ಕಾಫಿ ಡೇ ಹಲವು ಸಾಧ್ಯತೆಗಳನ್ನು ಜಗತ್ತಿನ ಮುಂದೆ ತೆರೆದಿಡುತ್ತಾ ಬಂದಿದೆ. ಇದೀಗ ಈ ಸ್ಪರ್ಧೆಯ ಮೂಲಕ ಒಂದು ಆಂತರಿಕ ಶಕ್ತಿ ಪ್ರದರ್ಶಿಸುವುದಕ್ಕೂ ಅವಕಾಶ ಕಲ್ಪಿಸಿದೆ.

ಸ್ಪರ್ಧಿಗಳಿಗೆ ನೀಡುವ ಆಹಾರ ಮಲೆನಾಡಿನ ಸೊಗಡು ಹಾಗೂ ಪೌಷ್ಟಿಕತೆಯನ್ನು ಹೊಂದಿರಲಿದ್ದು, ಜಗತ್ತಿನ ಮುಂದೆ ನಮ್ಮೂರಿನ ಬ್ರಾಂಡ್​ನ ಪರಿಕಲ್ಪನೆ ಮೂಡಿಸುವ ಉದ್ದೇಶವೂ ಈ ಸ್ಪರ್ಧೆಯ ಉದ್ದೇಶದಲ್ಲಿದೆ ಎಂದರು.

ಕಳೆದ ಬಾರಿ ಕ್ರಮಿಸಿದ ಅವಧಿಯ ಅಚ್ಚರಿ!: ಕಳೆದ ಮ್ಯಾರಥಾನ್​ನಲ್ಲಿ 110 ಕಿ.ಮೀ. ಓಟಕ್ಕೆ 24 ಗಂಟೆ ನಿಗದಿಪಡಿಸಿದ್ದರೆ, ವಿಜೇತ ಪಾಲ್ ಗಿಬ್ಲಿನ್ 12.48 ಗಂಟೆ ಅವಧಿ ತೆಗೆದುಕೊಂಡು ಅಚ್ಚರಿ ಮೂಡಿಸಿದರು. ಭಾರತದ ಸಂಪತ್ ಕುಮಾರ್ 80 ಕಿ.ಮೀ.ಓಡಲು ತೆಗೆದುಕೊಂಡ ಅವಧಿ 9.15 ಗಂಟೆ. ನಿಗದಿಪಡಿಸಿದ ಸಮಯ 16 ಗಂಟೆ. ಕೈರನ್ ಡಿಸೋಜ 4.45 ಗಂಟೆ ಅವಧಿಯನ್ನು 50 ಕಿ.ಮೀ. ಕ್ರಮಿಸಲು ನಿಗದಿಪಡಿಸಿದ ಸಮಯ 9 ಗಂಟೆ.

ಮಹಿಳಾ ಓಟಗಾರರಲ್ಲಿ 110 ಕಿ.ಮೀ.ನಲ್ಲಿ ಮೊದಲಿಗರಾದ ಫಿಲಿಪ್ಪೈನ್ಸ್​ನ ದಿವೈನ್ ಮೆಕ್​ಬ್ರೖೆಡ್ ತೆಗೆದುಕೊಂಡ ಅವಧಿ 20.16 ಗಂಟೆ. 80 ಕಿ.ಮೀ. ಓಡಿದ ಅಮೆರಿಕಾದ ಮೋನಿಕಾ ಬೆಸೆರಿಲ್ 11.41 ಗಂಟೆ ಅವಧಿ ತೆಗೆದುಕೊಂಡರು. 50 ಕಿ.ಮೀ.ನಲ್ಲಿ ಮೊದಲಿಗರಾದ ಭಾರತದ ಆಕೃತಿ ವರ್ಮರ ಅವಧಿ 6.15 ಗಂಟೆ.