ನವದೆಹಲಿ: ಕೈ ಮುರಿದರೂ ಡೈಮಂಡ್ ಲೀಗ್ ಫೈನಲ್‌ನಲ್ಲಿ ಸ್ಪರ್ಧಿಸಿದೆ ಎಂದು ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಹೇಳಿದ್ದಾರೆ. ಕಳೆದ ಶನಿವಾರ ಬ್ರಸೆಲ್ಸ್‌ನಲ್ಲಿ ನಡೆದ ಡೈಮಂಡ್ ಲೀಗ್ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಎರಡನೇ ಸ್ಥಾನ ಗಳಿಸುವ ಮೂಲಕ ನಿರಾಸೆ ಅನುಭವಿಸಿದರು. ಗ್ರೆನೆಡಾದ ಪೀಟರ್ಸ್ ಆ್ಯಂಡರ್ಸನ್ಗೆ ನಿಕಟ ಪೈಪೋಟಿ ಒಡ್ಡಿದ ನೀರಜ್ಗೆ 0.01 ಮೀ ಅಂತರದಲ್ಲಿ ಸೋಲುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಇದೀಗ ನೀರಜ್ ಚೋಪ್ರಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಎಕ್ಸ್-ರೇ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಕೈ ಮುರಿತವನ್ನು ಬಹಿರಂಗಪಡಿಸಿದ್ದಾರೆ. ಎಡಗೈಯ ಉಂಗುರದ ಬೆರಳು ಮುರಿತವಾಗಿದೆ. ತರಬೇತಿ ವೇಳೆ ಗಾಯಗೊಂಡಿದ್ದರು. ನೋವಿದ್ದರೂ ಅದನ್ನು ಲೆಕ್ಕಿಸದೇ ಸ್ಪರ್ಧೆಯಲ್ಲಿ ಭಾಗಿಸಿದರು.
ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ನೀರಜ್, 2024ರ ಸೀಸನ್ ಮುಗಿಯುತ್ತಿದ್ದಂತೆ ವರ್ಷದಲ್ಲಿ ನಾನು ಕಲಿತ ಎಲ್ಲದರ ಬಗ್ಗೆ ನಾನು ಹಿಂತಿರುಗಿ ನೋಡುತ್ತೇನೆ. ಸುಧಾರಣೆ, ಹಿನ್ನಡೆ ಹಾಗೂ ಮನಸ್ಥಿತಿ ಎಲ್ಲದರ ಬಗ್ಗೆ ಅವಲೋಕಿಸುತ್ತೇನೆ. ಡೈಮಂಡ್ ಲೀಗ್ಗೂ ಮುನ್ನ ಅಭ್ಯಾಸದಲ್ಲಿ ಗಾಯಗೊಂಡೆನು. ಕ್ಷ-ಕಿರಣಗಳು ನನ್ನ ಎಡಗೈಯಲ್ಲಿ ನಾಲ್ಕನೇ ಮೆಟಾಕಾರ್ಪಲ್ ಅನ್ನು ಮುರಿದಿರುವುದನ್ನು ತೋರಿಸಿದೆ. ಇದು ನನಗೆ ಮತ್ತೊಂದು ನೋವಿನ ಸವಾಲಾಗಿತ್ತು. ಆದರೆ, ನನ್ನ ತಂಡದ ಸಹಾಯದಿಂದ ನಾನು ಬ್ರಸೆಲ್ಸ್‌ನಲ್ಲಿ ಭಾಗವಹಿಸಲು ಸಾಧ್ಯವಾಯಿತು.
ಇದು ಈ ವರ್ಷದ ಕೊನೆಯ ಸ್ಪರ್ಧೆಯಾಗಿತ್ತು ಮತ್ತು ನನ್ನ ಸೀಸನ್ ಅನ್ನು ಟ್ರ್ಯಾಕ್‌ನಲ್ಲಿ ಕೊನೆಗೊಳಿಸಲು ನಾನು ಬಯಸುತ್ತೇನೆ. ನನ್ನ ಸ್ವಂತ ನಿರೀಕ್ಷೆಗಳನ್ನು ನಾನು ಪೂರೈಸಲು ಸಾಧ್ಯವಾಗದಿದ್ದರೂ, ಇದು ನಾನು ಬಹಳಷ್ಟು ಕಲಿತಿರುವ ಸೀಸನ್ ಎಂದು ಭಾವಿಸುತ್ತೇನೆ. ನಿಮ್ಮ ಪ್ರೋತ್ಸಾಹಕ್ಕಾಗಿ ನಾನು ನಿಮ್ಮೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. 2024 ನನ್ನನ್ನು ಉತ್ತಮ ಕ್ರೀಡಾಪಟು ಮತ್ತು ವ್ಯಕ್ತಿಯನ್ನಾಗಿ ಮಾಡಿದೆ. 2025 ರಲ್ಲಿ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ನೀರಜ್ ಹೇಳಿದ್ದಾರೆ.
As the 2024 season ends, I look back on everything I’ve learned through the year – about improvement, setbacks, mentality and more.
On Monday, I injured myself in practice and x-rays showed that I had fractured the fourth metacarpal in my left hand. It was another painful… pic.twitter.com/H8nRkUkaNM
— Neeraj Chopra (@Neeraj_chopra1) September 15, 2024
ಇನ್ನು ಡೈಮಂಡ್ ಲೀಗ್ ವಿಚಾರಕ್ಕೆ ಬಂದರೆ, ಆ್ಯಂಡರ್ಸನ್ ಅವರು ತಮ್ಮ ಮೊದಲ ಎಸೆತದಲ್ಲಿಯೇ 87.87 ಮೀಟರ್ ದೂರ ಎಸೆದರು. ನೀರಜ್ ತಮ್ಮ ಮೂರನೇ ಥ್ರೋನಲ್ಲಿ 87.86 ಮೀ ಎಸೆದರು. ನಂತರದ ಮೂರು ಎಸೆತಗಳಲ್ಲಿ ನೀರಜ್ ಕ್ರಮವಾಗಿ 82.04 ಮೀ, 83.30 ಮೀ ಹಾಗೂ 86.46 ಮೀ ದೂರ ಥ್ರೋ ಮಾಡಿದರು. ಎರಡು ಬಾರಿ ವಿಶ್ವ ಚಾಂಪಿಯನ್ ಆಗಿರುವ ಗ್ರೆನಡಾದ ಪೀಟರ್ಸ್ ತನ್ನ ಆರಂಭಿಕ ಪ್ರಯತ್ನದಲ್ಲಿ ದಿನದ ಅತ್ಯುತ್ತಮ ಎಸೆತವನ್ನು ಸಾಧಿಸಿದರು. ಜರ್ಮನಿಯ ಜೂಲಿಯನ್ ವೆಬರ್ 85.97 ಮೀಟರ್ ಎಸೆದು ಮೂರನೇ ಸ್ಥಾನ ಗಳಿಸಿದರು.
ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಚಿನ್ನ ಗೆದ್ದಿದ್ದ ನೀರಜ್, ಪ್ಯಾರಿಸ್‌ನಲ್ಲಿ ನಡೆದ 2024 ಒಲಿಂಪಿಕ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಈ ಮೂಲಕ ತಮ್ಮ ಸೀಸನ್ ಅನ್ನು ಉನ್ನತ ಮಟ್ಟದಲ್ಲಿ ಕೊನೆಗೊಳಿಸಿದರು. ಡೈಮಂಡ್ ಲೀಗ್ ಚಾಂಪಿಯನ್ ಆಗಿ ಹೊರಹೊಮ್ಮಿರುವ ಪೀಟರ್ಸ್ ಡೈಮಂಡ್ ಲೀಗ್ ಟ್ರೋಫಿ ಮತ್ತು 30,000 ಡಾಲರ್ (25 ಲಕ್ಷ ರೂ) ನಗದು ಬಹುಮಾನವನ್ನು ಪಡೆಯಲಿದ್ದಾರೆ. ಇತ್ತ ಎರಡನೇ ಸ್ಥಾನ ಗಳಿಸಿರುವ ನೀರಜ್ 12,000 ಡಾಲರ್ (10 ಲಕ್ಷ ರೂ) ನಗದು ಬಹುಮಾನ ಪಡೆಯಲಿದ್ದಾರೆ. (ಏಜೆನ್ಸೀಸ್)
ಚಿನ್ನದ ಹುಡುಗನಿಗೆ ಮತ್ತೊಮ್ಮೆ ನಿರಾಸೆ; ಕೇವಲ 0.01 ಮೀ. ಅಂತರದಲ್ಲಿ ನೀರಜ್ ಕೈತಪ್ಪಿದ ಡೈಮಂಡ್ ಲೀಗ್ ಟ್ರೋಫಿ
ತೂಕ ಇಳಿಕೆಗೆ ನಂಬರ್ 1 ಹಣ್ಣು! ಇದನ್ನು ತಿಂದರೆ ಸಾಕು ಬೆಣ್ಣೆಯಂತೆ ಕರಗಿ ಹೋಗುತ್ತದೆ ಬೊಜ್ಜು