ಸೂರಿನ ಪರಿಹಾರದ ಗೊಂದಲಕ್ಕೆ ಬೇಕಾಗಿದೆ ಪರಿಹಾರ

| ಸಿ.ಕೆ. ಮಹೇಂದ್ರ

ಮೈಸೂರು: ಜಲಪ್ರಳಯದಿಂದ ಕಾವೇರಿ ತವರು ತತ್ತರಿಸುತ್ತಿದ್ದ ಸಂದರ್ಭದಲ್ಲಿ ತೋರಿದ ಉತ್ಸಾಹ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಪರಿಹಾರ ನೀಡುವ ಬಗ್ಗೆ ಇರುವ ಗೊಂದಲಗಳನ್ನು ಪರಿಹರಿಸು ವವರು ಯಾರು ಎಂಬ ಪ್ರಶ್ನೆ ಎದ್ದಿದೆ.

ನಿಯಮಾವಳಿ ಪ್ರಕಾರ ಪರಿಹಾರ ನೀಡಿದರೆ ‘ಆನೆಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಸುರಿದಂತಾಗುತ್ತದೆ. ನಿಯಮ ಸಡಿಲಿಸಿ, ಮಾನವೀಯತೆ ನೆಲೆಯಲ್ಲಿ ನಿಂತು ಪರಿಹಾರ ನೀಡುವ ಮನಸ್ಥಿತಿ ನಿರ್ಮಾಣವಾಗದಿದ್ದರೆ ಕೊಡಗಿನ ಜನರ ಬದುಕು ದುಸ್ತರವಾಗುವುದರಲ್ಲಿ ಅನುಮಾನವೇ ಇಲ್ಲ. ಈವರೆಗೆ ಸಂತ್ರಸ್ತರ ಲೆಕ್ಕಾಚಾರಕ್ಕಷ್ಟೇ ಸೀಮಿತವಾಗಿದೆಯೇ ಹೊರತು ಅವರ ಸಂಕಷ್ಟಕ್ಕೆ ನೆರವಾಗುವ ಕಾರ್ಯಕ್ಕೆ ಯಾರೂ ಕೈಹಾಕಿಲ್ಲ. ಜೇನಿನ ಗೂಡಿಗೆ ಕೈ ಹಾಕುವ ಕೆಲಸ ಎಂಬುದು ಅಧಿಕಾರಿಗಳ ಅಂಜಿಕೆ.

ಸಚಿವರ ಓಡಾಟ ಕಡಿಮೆಯಾಗಿದ್ದು, ಅಧಿಕಾರಿ ಗಳು ಕೆಲಸ ಮಾಡುವ ವಾತಾವರಣ ಸೃಷ್ಟಿಯಾಗಿದೆ. ಮನೆ ಕಳೆದುಕೊಂಡಿರುವ ಸಂತ್ರಸ್ತರನ್ನು ಗುರುತಿಸುವ ಕೆಲಸ ಬಹುಪಾಲು ಮುಗಿದಂತಿದೆ. ಆದರೆ, ಯಾವ ಮಾನದಂಡದ ಮೇಲೆ ಪರಿಹಾರ ನಿಗದಿ ಮಾಡಬೇಕೆಂಬ ಗೊಂದಲ ಬಗೆಹರಿದಿಲ್ಲ. ಇದು ಸರ್ಕಾರಿ ಹಂತದಲ್ಲೇ ತೀರ್ಮಾನ ಆಗಬೇಕಿದೆ. ಹೀಗಾಗಿ ಅಧಿಕಾರಿಗಳು, ತಜ್ಞರು, ಸ್ಥಳೀಯರೊಂದಿಗೆ ರ್ಚಚಿಸಬೇಕಾಗಿದೆ. ಈ ಕೆಲಸ ತೀರಾ ನಿರಾಶಾದಾಯಕವಾಗಿದೆ.

ಉತ್ತರ ಸಿಗದ ಪ್ರಶ್ನೆ!: ಪೂರ್ತಿ ಮನೆ ಕಳೆದುಕೊಂಡವರು, ಶೇಕಡಾವಾರು ಮನೆ ಕಳೆದುಕೊಂಡವರಿಗೆ ಇಂತಿಷ್ಟು ಪರಿಹಾರ ನೀಡಬೇಕು ಎಂಬ ಹಳೆಯ ನಿಯಮ ಇದೆ. ಇದರನ್ವಯ 5 ಸಾವಿರ ರೂ.ನಿಂದ 1.5 ಲಕ್ಷ ರೂ. ವರೆಗೆ ನೀಡಬಹುದು. ಈ ಮಾನದಂಡ ಪ್ರಕಾರ ಪರಿಹಾರ ನೀಡಲು ಸಂತ್ರಸ್ತರ ಗುರುತಿಸಿದ್ದು, ಪರಿಹಾರ ವಿತರಣೆ ಸಂದರ್ಭದಲ್ಲಿ ಗೊಂದಲಗಳು ನಿರ್ವಣವಾಗಿವೆ.

ಪೂರ್ತಿ ಮನೆ ಕಳೆದುಕೊಂಡವರು ಎಂಬುದನ್ನು ನಿರ್ಧಾರ ಮಾಡುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಕೆಲವರ ಮನೆಗಳು ಬಿರುಕು ಬಿಟ್ಟಿವೆ. ಆದರೆ, ನೆಲಕ್ಕೆ ಬಿದ್ದಿಲ್ಲ. ಈ ಸ್ಥಿತಿಯಲ್ಲಿರುವ ಮನೆಗಳನ್ನು ಭಾಗಶಃ ಎಂಬರ್ಥದಲ್ಲಿ ಗ್ರಹಿಸಲಾಗಿದೆ. ಬಿರುಕು ಬಿಟ್ಟಿರುವ ಮನೆಯನ್ನು ದುರಸ್ತಿ ಮಾಡಿಸುವುದು ಹೊಸ ಮನೆ ಕಟ್ಟುವುದಕ್ಕಿಂತ ಸಾಹಸದ ಕೆಲಸ. ಅದೇ ಮನೆಯಲ್ಲಿ ವಾಸ ಮಾಡುವುದಂತೂ ಸಾಧ್ಯವೇ ಇಲ್ಲ. ಇಂತಹ ಮನೆಗಳನ್ನು ಪೂರ್ಣ ಹಾಳಾಗಿರುವ ಮನೆಗಳು ಎಂದು ತೀರ್ವನಿಸಬೇಕು ಎಂಬುದು ಸಂತ್ರಸ್ತರ ವಾದ. ಇದು ಅಧಿಕಾರಿಗಳನ್ನು ಪೇಚಿಗೆ ಸಿಲುಕಿಸಿದೆ.

ಕೃಷಿ ಸಂಬಂಧಿ ಗೊಂದಲ

ನೆರೆ ಹಾವಳಿಯಿಂದ ಕೃಷಿ ಭೂಮಿಗೆ ಮಣ್ಣು ತುಂಬಿಕೊಂಡಿದ್ದರೆ ಪ್ರತಿ ಹೆಕ್ಟೇರ್​ಗೆ 12,200 ರೂ. ನೀಡಲು ನಿಯಮಾವಳಿಯಲ್ಲಿ ಅವಕಾಶವಿದೆ. 2.5 ಎಕರೆ ಭೂಮಿಗೆ ಮಣ್ಣು ತುಂಬಿಕೊಂಡಿದ್ದರೆ ಅದನ್ನು ತೆಗೆಯಲು ಈ ಮೊತ್ತದಿಂದ ಸಾಧ್ಯವೇ? ನಿಯಮಾವಳಿ ಪ್ರಕಾರ ಬೆಳೆನಷ್ಟಕ್ಕೆ ಪ್ರತಿ ಹೆಕ್ಟೇರ್​ಗೆ ಮಳೆಯಾಶ್ರಿತ ಪ್ರದೇಶವಾದರೆ 6800 ರೂ. ಹಾಗೂ ನೀರಾವರಿ ಪ್ರದೇಶಕ್ಕೆ 13500 ರೂ. ಎಂದು ನಿಗದಿಪಡಿಸಲಾಗಿದೆ. ಕೊಡಗಿನ ಗುಡ್ಡಗಾಡನ್ನು ಯಾವ ವರ್ಗಕ್ಕೆ ಸೇರಿಸಬೇಕು ಎಂಬುದು ಗೊತ್ತಾಗುತ್ತಿಲ್ಲ. ಕೊಚ್ಚಿಹೋಗಿರುವ ಕಾಫಿಗಿಡಗಳು ಒಂದು ಫಸಲಿನ ಪರಿಹಾರಕ್ಕೆ ಸೀಮಿತವಾಗಬೇಕೇ ಎನ್ನುವುದು ಪ್ರಶ್ನೆ. ಭತ್ತದ ಗದ್ದೆಗಳ ಮೇಲೆ ಬಿದ್ದಿರುವ ರಾಶಿ ಮಣ್ಣನ್ನು ಹೊರತೆಗೆಯಲು ಸಾಧ್ಯವೇ ಇಲ್ಲ. ಆ ಮಣ್ಣಿನ ಮೇಲೆ ಮತ್ಯಾವ ಬೆಳೆ ಬೆಳೆಯಲು ಸದ್ಯಕ್ಕಂತೂ ಆಗಲ್ಲ. ಇವರಿಗೆ ಬೆಳೆ ಪರಿಹಾರ ನೀಡಿ ಕೈತೊಳೆದುಕೊಂಡರೆ ಹೇಗೆ?

ಚೆಂದವಿದ್ರೂ ಸುರಕ್ಷಿತವಲ್ಲ

ಕೆಲವು ಕಡೆಗಳಲ್ಲಿ ಮನೆ ಸಂಪೂರ್ಣ ಚೆನ್ನಾಗಿದೆ. ಆದರೆ, ಇರುವ ಸ್ಥಳ ಸುರಕ್ಷಿತವಾಗಿಲ್ಲ. ಯಾವುದೇ ಕ್ಷಣದಲ್ಲಿ ಮನೆ ಇರುವ ಜಾಗದ ಮೇಲ್ಭಾಗದ ಗುಡ್ಡ ಜಾರಿ ಬೀಳಬಹುದು ಅಥವಾ ಕೆಳಗಿನ ಗುಡ್ಡ ಕುಸಿಯಬಹುದು. ಇಂತಹ ಮನೆಗಳಿಗೆ ಪರಿಹಾರವೂ ಸಿಗುವುದಿಲ್ಲ. ಅಲ್ಲದೆ ಮನೆ ನಿರ್ವಣಕ್ಕೆ ನೆರವೂ ಸಿಗುವುದಿಲ್ಲ. ಅಂತಹವರು ಏನು ಮಾಡಬೇಕು? ಭೂಗರ್ಭ ಶಾಸ್ತ್ರ್ಞು ಈಗಷ್ಟೇ ಪ್ರಾಥಮಿಕ ವರದಿ ನೀಡಿದ್ದಾರೆ. ಮತ್ತೆ ಸಂಪೂರ್ಣ ಪರಿಶೀಲನೆ ನಡೆಸಿ ಯಾವ ಪ್ರದೇಶ ವಾಸಯೋಗ್ಯವಲ್ಲ ಎಂಬ ವರದಿಯನ್ನು ನೀಡ ಬೇಕಾಗಿದೆ. ಹೀಗೆ ಭೌಗೋಳಿಕವಾಗಿ ವಾಸಯೋಗ್ಯವಲ್ಲದ ಪ್ರದೇಶದಲ್ಲಿ ಸುಭದ್ರ ವಾಗಿರುವ ಮನೆಗಳಿಗೆ ಪರಿಹಾರ ಸಿಗುವುದಿಲ್ಲ. ಅಂತಹವರು ಏನು ಮಾಡಬೇಕು? ಉದಾಹರಣೆಗೆ ಮಕ್ಕಂದೂರು ಗ್ರಾಮದಲ್ಲಿ ನಿರಂಜನ ಕುಮಾರ್ ಎಂಬುವವರ ಮನೆಗೆ ಯಾವುದೇ ಹಾನಿಯಾಗಿಲ್ಲ. ಆದರೆ, ಅವರ ಮನೆ ಪಕ್ಕದಲ್ಲೇ ಗುಡ್ಡ ಕುಸಿದಿದೆ. ಮತ್ತೆ ಮಳೆಯಾದರೆ ಯಾವುದೇ ಸಂದರ್ಭದಲ್ಲಿ ಗುಡ್ಡ ಕುಸಿಯುವ ಅಪಾಯ ಇದ್ದೇ ಇದೆ. ಮೂರು ತಿಂಗಳ ಹಿಂದಷ್ಟೇ ಗೃಹ ಪ್ರವೇಶವಾಗಿದೆ. ಇಂಥವರಿಗೆ ಪರಿಹಾರ ಹೇಗೆ?

ನಿಯಮಾವಳಿ ಪ್ರಕಾರ ಹೋದರೆ ಸಂತ್ರಸ್ತರಿಗೆ ಅನುಕೂಲವಾಗದು. ನೆರೆ ಹಾವಳಿಯ ಸಂಪೂರ್ಣ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜ್ಯ ಸರ್ಕಾರ ನೀಡುವ ಪರಿಹಾರವನ್ನೂ ಹೆಚ್ಚಿಸುವಂತೆ ಸಿಎಂಗೆ ಮನವಿ ಮಾಡಲಾಗಿದೆ. ಹಾನಿಯ ಸಂಪೂರ್ಣ ವಿವರ ಸಿಕ್ಕ ನಂತರ ಕೇಂದ್ರ ಸರ್ಕಾರದಿಂದಲೂ ಹೆಚ್ಚಿನ ಅನುದಾನ ಸಿಗುವಂತೆ ಮಾಡಲಾಗುವುದು.

| ಪ್ರತಾಪಸಿಂಹ, ಸಂಸದ