ಬೇಸಿಗೆಯಲ್ಲಿ ಇಲ್ಲಿ, ಮಳೆಗಾಲದಲ್ಲಿ ಎಲ್ಲಿ?

| ಸಿ.ಕೆ.ಮಹೇಂದ್ರ

ಮೈಸೂರು: ಕೊಡಗಿನ ಮಳೆಹಾನಿ ಪ್ರದೇಶಗಳೀಗ ಬೇಸಿಗೆಯಲ್ಲಷ್ಟೇ ಜೀವನ ನಡೆಸಲು ಸಾಧ್ಯ ಎಂಬಂತಾಗಿವೆ. ಅಳಿದುಳಿದ ಮನೆ, ಮಳೆಯಿಂದಾದ ಕೃತಕ ಕಂದಕಗಳ ಮಧ್ಯೆ ಧೈರ್ಯವಾಗಿ ಬದುಕು ಕಟ್ಟಿಕೊಳ್ಳುವುದು ಅಸಾಧ್ಯ ಎಂಬುದು ವಿಕೋಪಕ್ಕೆ ತುತ್ತಾದ ಸಂತ್ರಸ್ತರಿಗೆ ಮನವರಿಕೆ ಆಗಿದೆ.

ಮನೆ ಸಂತ್ರಸ್ತರನ್ನು ಗುರುತಿಸುವ ಕಾರ್ಯ ಮುಕ್ತಾಯದ ಹಂತದಲ್ಲಿದೆ. ಹಾನಿಗೀಡಾಗಿರುವ ಭೂಮಿಯ ಲೆಕ್ಕಾಚಾರ ಆರಂಭವಾಗಿದ್ದು, ಲೆಕ್ಕ ಸಿಗುವುದು ಕಷ್ಟವಾಗಲಾರದು. ಆದರೆ, ಭೂಮಿ ಬಳಕೆ ಹಾಗೂ ಅಕ್ಕಪಕ್ಕದ ಭೂಮಿ ಬಗ್ಗೆ ನಿಖರತೆ ನೀಡುವುದೇ ಸವಾಲು. ಭಾರಿ ಮಳೆಯ ರಭಸಕ್ಕೆ ಕೊಚ್ಚಿಹೋಗಿದ್ದರಿಂದ ಕೃತಕವಾಗಿ ಸೃಷ್ಟಿಯಾಗಿರುವ ಕಂದಕ ಪೂರ್ಣವಾಗಿ ಮಣ್ಣಿಗೆ ತೆರೆದುಕೊಂಡಿದ್ದು, ಗಿಡಮರಗಳ ರಕ್ಷಣೆ ಇಲ್ಲದಾಗಿದೆ. ಇದರಿಂದ ಭೂ ಸವೆತ ನಿಯಂತ್ರಣ ಕಷ್ಟ. ಅಲ್ಲದೆ, ಮತ್ತೆ ಮಳೆ ಬಂದಾಗ ಕಂದಕ ಇನ್ನಷ್ಟು ದೊಡ್ಡದಾಗುವ ಅಪಾಯವಿದೆ.

ಆಗಿರುವ ನಷ್ಟಕ್ಕೆ ಪರಿಹಾರ-ಪರ್ಯಾಯ ಸೃಷ್ಟಿಸಿದರೆ ಸಾಕು ಎಂಬ ಲೆಕ್ಕಾಚಾರದಲ್ಲಿ ಸರ್ಕಾರ ಇರುವಂತಿದೆ. ಆದರದು ಅಷ್ಟು ಸುಲಭವಲ್ಲ. ಮನೆ ಕಳೆದುಕೊಂಡವರಿಗೆ ಪರ್ಯಾಯ ವಸತಿ ನೀಡಬಹುದು. ಭೂಮಿ ಕಳೆದುಕೊಂಡವರಿಗೆ ಬೆಳೆ ಪರಿಹಾರ ಅಥವಾ ಭೂಮಿಗೆ ಸರ್ಕಾರಿ ಬೆಲೆ ಕಟ್ಟಿ ಹಣ ನೀಡಬಹುದು. ಇವೆರಡರಿಂದ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ಸಿಗಬಹುದಾದರೂ, ಇದು ಅವರ ಬದುಕನ್ನು ಸರಿದಾರಿಗೆ ತರಲು ಸಾಧ್ಯವಿಲ್ಲ.

ಉದಾಹರಣೆಗೆ ಸೋಮವಾರಪೇಟೆ ತಾಲೂಕಿನ ಮೂವತ್ತೊಕ್ಲು ಗ್ರಾಮದಲ್ಲಿ ಗುಡ್ಡಕುಸಿತಕ್ಕೆ ಮನೆಯೊಂದು ಕೊಚ್ಚಿ ಹೋಯಿತು. ಮಣ್ಣಿನಲ್ಲಿ ಸಿಲುಕಿದ ಮನೆಮಾಲೀಕನ ಶವವನ್ನು 13 ದಿನಗಳ ನಂತರ ಹೊರತೆಗೆಯಲಾಯಿತು. ಈಗಲೂ ಕುಸಿತದ ಪ್ರದೇಶ ತನ್ನ ಕೆನ್ನಾಲಿಗೆ ಚಾಚಿಕೊಂಡು ರಕ್ತಸಿಕ್ತವಾಗಿರುವಂತೆ ಕಾಣುತ್ತದೆ. ಪಕ್ಕದಲ್ಲೇ ಜನವಸತಿ ಪ್ರದೇಶವಿದೆ. ಇದೇ ಗುಡ್ಡಕುಸಿತ ಸ್ವಲ್ಪ ದಿಕ್ಕು ಬದಲಿಸಿದ್ದರೂ ಇನ್ನೂ ದೊಡ್ಡ ಪ್ರಮಾಣದ ಹಾನಿಯಾಗುವ ಅಪಾಯವಿತ್ತು.

ಗ್ರಾಮಸ್ಥರ ಪ್ರಕಾರ, ಗುಡ್ಡದ ಇನ್ನೂ ಕೆಲವು ಭಾಗ ಅಪಾಯದಲ್ಲೇ ಇದೆ. ಯಾವುದೇ ಸಂದರ್ಭದಲ್ಲಿ ಅದು ಜಾರಬಹುದು. ಹಾಗಾಗಿ ಮಳೆಗಾಲದಲ್ಲಿ ಇಲ್ಲಿರುವುದು ಸಾಧ್ಯವೇ ಇಲ್ಲ. ವಾಸವಷ್ಟೇ ಅಲ್ಲ, ಚೆನ್ನಾಗಿ ಕಾಣುವ ಕೃಷಿಭೂಮಿಯಲ್ಲೂ ಬೇಸಾಯ ಮುಂದುವರಿಕೆ ಅಸಾಧ್ಯ ಎಂಬುದು ಗ್ರಾಮಸ್ಥರ ಅಭಿಪ್ರಾಯ.

ಕಾಫಿ ತೋಟ ಕುಸಿದು ಸಮತಟ್ಟಾಗಿದ್ದ ಭತ್ತದ ಗದ್ದೆ ಮೇಲೆ ಬಿದ್ದಿದೆ. ಗದ್ದೆಯ ಮಣ್ಣನ್ನು ತೆಗೆದು ಬೇಸಾಯ ಮಾಡಲು ಸಾಧ್ಯವಿಲ್ಲ. ಕುಸಿದಿರುವ ಬೆಟ್ಟದ ಭಾಗದಲ್ಲೂ ಮತ್ತೆ ಕಾಫಿ ಗಿಡ ನೆಡುವುದು ಅಸಾಧ್ಯ. ಆ ಪ್ರದೇಶದಲ್ಲಿ ಬೇರೆ ಕಡೆ ಬೇಸಾಯ ಮಾಡುವುದು ಅಪಾಯಕಾರಿ. ಇಂಥ ಪರಿಸ್ಥಿತಿ ಬಹುಪಾಲು ಪ್ರವಾಹ ಪೀಡಿತ ಪ್ರದೇಶಗಳಲ್ಲಿದೆ. ಮಳೆಹಾನಿಗೆ ಒಳಗಾಗಿರುವ ಜನ ಸ್ವತಃ ಒಂದು ತೀರ್ವನಕ್ಕೆ ಬಂದಿದ್ದಾರೆ. ಬೇಸಿಗೆಯಲ್ಲಿ ತಮ್ಮೂರಿನಲ್ಲಿದ್ದು ಬೇಸಾಯ ಮಾಡುವುದು. ಮಳೆಗಾಲದಲ್ಲಿ ಸರ್ಕಾರ ಕಟ್ಟಿಕೊಡುವ ಮನೆಗಳಿಗೆ ಹೋಗುವುದು. ಇದೂ ಶಾಶ್ವತ ಪರಿಹಾರ ಆಗಲಾರದು. ಹಾಗಾದರೆ ಪರ್ಯಾಯವೇನು? ರೈತರನ್ನು ಬೇರೆ ಕಡೆಗೆ ಸ್ಥಳಾಂತರಿಸುವುದು ಹಾಗೂ ಅವರಿಗೆ ಪರ್ಯಾಯ ಕೃಷಿ ಭೂಮಿ ನೀಡುವುದು. ಮಳೆ ಹಾನಿ ಅಂದಾಜು ಸಂದರ್ಭದಲ್ಲಿ ಇವೆಲ್ಲವನ್ನೂ ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ.

ಗುಡ್ಡ ಕುಸಿದು ಜಮೀನಿನ ಮೇಲೆಲ್ಲ ಬಿದ್ದಿದೆ. ಮನೆಯೂ ಅಪಾಯದಲ್ಲಿದೆ. ಮಳೆಗಾಲದಲ್ಲಿ ಇಲ್ಲಿರೋದು ಅಸಾಧ್ಯ. ಬೇಸಾಯ ಮಾಡಲೂ ಆಗ್ತಿಲ್ಲ. ನಮ್ಮ ಹಿರಿಯರ ಕಾಲದಿಂದ ಪೂಜೆ ಮಾಡಿಕೊಂಡು ಬಂದ ದೇವಸ್ಥಾನ ಇಲ್ಲಿದೆ. ಎಲ್ಲವನ್ನೂ ಬಿಟ್ಟು ಹೋಗೋದು ಎಲ್ಲಿಗೆ, ಇಲ್ಲಿ ಬದುಕೋದು ಹೇಗೆ? ಒಂದೂ ಗೊತ್ತಾಗ್ತಿಲ್ಲ.

| ಕೆ.ಬೋಪಯ್ಯ, ಮೂವತ್ತೊಕ್ಲು ಗ್ರಾಮದ ರೈತ

ವೆಟಿವೇರ್ ಹುಲ್ಲು ಬೆಳೆಯಲು ಸಲಹೆ

ಮಳೆ ಹಾನಿಗೀಡಾದ ಪ್ರದೇಶದಲ್ಲಿ ಲಾವಂಚ ಜಾತಿಗೆ ಸೇರಿದ ವೆಟಿವೇರ್ ಹುಲ್ಲು ಬೆಳೆಯುವಂತೆ ಭೂಗರ್ಭ ತಜ್ಞರು ಸಲಹೆ ನೀಡಿದ್ದಾರೆ. ಮಳೆಹಾನಿ ಪ್ರದೇಶದಲ್ಲಿ ಕೃಷಿ ಅಪಾಯಕಾರಿ ಎಂಬುದನ್ನು ಪ್ರಾಥಮಿಕ ಹಂತದಲ್ಲಿ ಮನಗಂಡಿರುವ ತಜ್ಞರು, ಎಲ್ಲೆಲ್ಲಿ ವಸತಿ ಹಾಗೂ ಕೃಷಿ ಸಾಧ್ಯವಿಲ್ಲ ಎಂಬುದನ್ನು ಮುಂದಿನ ಸಂಪೂರ್ಣ ಸಂಶೋಧನೆ ಬಳಿಕ ವಿವರ ನೀಡಲಿದ್ದಾರೆ. ವೆಟಿವೇರ್ ಅತಿ ಎತ್ತರಕ್ಕೆ ಬೆಳೆಯುವುದಲ್ಲದೆ 13 ಅಡಿಗಳಷ್ಟು ಆಳಕ್ಕೆ ಬೇರುಗಳನ್ನು ಬಿಡಲಿದೆ. ಇದರ ಬೇರುಗಳು ಲಾವಂಚದಂತೆ ಒಂದಕ್ಕೊಂದು ಹೆಣೆದುಕೊಂಡಿರುತ್ತವೆ. ಈ ಹುಲ್ಲು ಬೇಗ ಬೆಳೆದು ನಿಲ್ಲುತ್ತದೆ. ಈಗ ಬಿರುಕು ಬಿಟ್ಟಿರುವ ಕಂದಕಗಳಲ್ಲಿ ಗಿಡಮರಗಳು ಬೆಳೆಯಲು ವರ್ಷಾನುಗಟ್ಟಲೆ ಬೇಕು. ಅಷ್ಟರಲ್ಲಿ ಮತ್ತೆ ಅಪಾಯ ಸಂಭವಿಸಿದರೆ ಮತ್ತಷ್ಟು ಹಾನಿ ಸಾಧ್ಯತೆಗಳಿರುತ್ತವೆ.