ಪ್ರಕೃತಿವಿಕೋಪದ ಹೊಡೆತಕ್ಕೆ ಸಿಲುಕಿ ಬೀದಿಗೆ ಬಿದ್ದ ಕುಟುಂಬ

| ಅಜ್ಜಮಾಡ ರಮೇಶ್ ಕುಟ್ಟಪ್ಪ

ಮಡಿಕೇರಿ: ಆರು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿರುವ ಮೂವರು ಹೆಣ್ಣು ಮಕ್ಕಳ ತಾಯಿ ಎ.ಪಿ.ಜಯಲಕ್ಷ್ಮಿ(43) ಪ್ರಕೃತಿ ವಿಕೋಪದ ಹೊಡೆತಕ್ಕೆ ತತ್ತರಿಸಿ ಹೋಗಿದ್ದಾರೆ. ನೆಲೆಸಿದ್ದ ಮನೆ, ಕಾಫಿ ತೋಟ ಸೇರಿ ಸರ್ವಸ್ವವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿರುವ ಈ ಕುಟುಂಬಕ್ಕೆ ಮುಂದಿನ ಹಾದಿ ಕಾಣದಂತಾಗಿದೆ.

ಮಂಡ್ಯ ಜಿಲ್ಲೆಯ ನ್ಯೂ ನವೋದಯ ನರ್ಸಿಂಗ್ ಕಾಲೇಜಿನಲ್ಲಿ ಮೂರನೇ ವರ್ಷದ ನರ್ಸಿಂಗ್ ತರಬೇತಿ ಪಡೆಯುತ್ತಿರುವ ಜಯಲಕ್ಷ್ಮೀ  ಪುತ್ರಿ ಎ.ಪಿ.ಅಕ್ಷತಾ, 40 ಸಾವಿರ ರೂ. ಕಾಲೇಜು ಶುಲ್ಕ ಪಾವತಿಸಲಾಗದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಕ್ಟೋಬರ್ ಮೊದಲ ವಾರ ತರಗತಿ ಪ್ರಾರಂಭವಾಗಲಿದ್ದು, ಯಾರಾದರೂ ನೆರವು ನೀಡುತ್ತಾರೆಂಬ ನಿರೀಕ್ಷೆಯಲ್ಲಿದ್ದಾರೆ.

ಮಡಿಕೇರಿ ತಾಲೂಕಿನ ಹೆಬ್ಬಟ್ಟಗೇರಿ ಗ್ರಾಮದಲ್ಲಿ ಪತಿ ದಿ.ಆಮೆಮನೆ ಎಸ್.ಪೂವಯ್ಯ ಕಟ್ಟಿದ ಹೆಂಚಿನಮನೆ ಸಂಪೂರ್ಣ ನೆಲಸಮಗೊಂಡಿದೆ. ಜೀವನ ಸಾಗಿಸಲು ಪ್ರಮುಖ ಆರ್ಥಿಕ ಮೂಲವಾಗಿದ್ದ 3 ಎಕರೆ ಕಾಫಿ ತೋಟ ಭೂಕುಸಿತಕ್ಕೆ ಕೊಚ್ಚಿಕೊಂಡು ಹೋಗಿದೆ. ಮೂವರು ಪುತ್ರಿಯರೊಂದಿಗೆ ಮೈತ್ರಿ ಪೊಲೀಸ್ ಸಮುದಾಯ ಭವನದಲ್ಲಿ ಜಿಲ್ಲಾಡಳಿತ ನಡೆಸುತ್ತಿರುವ ಪರಿಹಾರ ಕೇಂದ್ರದಲ್ಲಿ ಜಯಲಕ್ಷಿ್ಮೕ ಆಶ್ರಯ ಪಡೆದಿದ್ದಾರೆ. ಸದ್ಯ ಸರ್ಕಾರ ಕಟ್ಟಿಕೊಡುವ ಮನೆಗಾಗಿ ಕಾಯುತ್ತಿದ್ದಾರೆ. ಆಸ್ತಿ-ಪಾಸ್ತಿ ಕಳೆದುಕೊಂಡು ನಿರ್ಗತಿಕರಾಗಿರುವ ಈ ಕುಟುಂಬ, ಮುಂದಿನ ಜೀವನದ ಹಾದಿಯ ದಿಕ್ಕು ಕಾಣದೆ ಕಣ್ಣೀರಿನಲ್ಲಿ ದಿನ ಕಳೆಯುತ್ತಿದ್ದಾರೆ.

ಕಿರಿಯ ಪುತ್ರಿ ವಿನುತಾ ಮಡಿಕೇರಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಥಮ ಬಿಎ ವ್ಯಾಸಂಗ ಮಾಡುತ್ತಿದ್ದಾಳೆ. ಮತ್ತೊಬ್ಬಳು ಪುತ್ರಿ ಬಬಿತಾ ಮೆಡಿಕಲ್ ಶಾಪ್​ವೊಂದರಲ್ಲಿ ಉದ್ಯೋಗದಲ್ಲಿದ್ದಾಳೆ. ಜಯಲಕ್ಷಿ್ಮೕ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ 95 ಸಾವಿರ, ಸ್ವಸಹಾಯ ಸಂಘದಿಂದ 25 ಸಾವಿರ ರೂ. ಸಾಲ ಮಾಡಿದ್ದು ಮರುಪಾವತಿಸುವುದು ಹೇಗೆಂದು ಚಿಂತೆಗೆ ಸಿಲುಕಿದ್ದಾರೆ.

ಮನೆ ಖಾಲಿ ಮಾಡಿ ಪ್ರಾಣ ಉಳಿಸಿಕೊಂಡೆವು!

ಅನಾಹುತ ಸಂಭವಿಸಬಹುದೆಂಬ ಆತಂಕದಲ್ಲಿ ಒಂದು ದಿನ ಮುಂಚಿತವಾಗಿ ಮನೆ ಖಾಲಿ ಮಾಡಿದ್ದರಿಂದ ಪ್ರಾಣ ಉಳಿದಿದೆ. ಮನೆಯಲ್ಲಿದ್ದ ಸಾಮಗ್ರಿ, ಉಡುಗೆ-ತೊಡುಗೆ ಎಲ್ಲವೂ ಮಣ್ಣುಪಾಲಾಗಿದೆ ಎಂದು ಜಯಲಕ್ಷ್ಮೀ ಪುತ್ರಿ ಬಬಿತಾ ನೋವು ವ್ಯಕ್ತಪಡಿಸುತ್ತಾರೆ.

ನಮ್ಮ ಸಂಕಷ್ಟದ ಬಗ್ಗೆ ಸಾಕಷ್ಟು ಜನ ಮಾಹಿತಿ ಸಂಗ್ರಹಿಸಿ, ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಇದುವರೆಗೂ ಯಾವ ಸಹಾಯವೂ ಸಿಕ್ಕಿಲ್ಲ. ನೆಲೆಸಿದ್ದ ಮನೆ, ಕಾಫಿ ತೋಟ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ತಂದೆ ಕಳೆದುಕೊಂಡಿರುವ ನಮಗೆ ತಾಯಿಯೇ ತಂದೆ-ಎಲ್ಲ.

| ಎ.ಪಿ.ಅಕ್ಷತಾ, ಸಂತ್ರಸ್ತೆ ಪುತ್ರಿ