ಸಮುದಾಯ ಭವನ ಕೀ ಗ್ರಾಪಂ ವಶಕ್ಕೆ

ಗುಂಡ್ಲುಪೇಟೆ: ತಾಲೂಕಿನ ಬೆಳಚಲವಾಡಿ ಗ್ರಾಮದಲ್ಲಿ ಜನಪ್ರತಿನಿಧಿಗಳ ವಶದಲ್ಲಿದ್ದ ಸಮುದಾಯ ಭವನದ ಬೀಗದ ಕೀಯನ್ನು ಗ್ರಾಮ ಪಂಚಾಯಿತಿ ವಶಕ್ಕೆ ನೀಡಲಾಗಿದೆ.

2017 ರಲ್ಲಿ 11 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದಲ್ಲಿ ಭಗೀರಥ ಉಪ್ಪಾರ ಸಮುದಾಯ ಭವನ ಉದ್ಘಾಟನೆಯಾಗಿದ್ದು ಸಮುದಾಯದ ಬಳಕೆಗೆ ಮುಕ್ತಗೊಳಿಸಲಾಗಿತ್ತು. ಗ್ರಾಮದ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಗುಂಪುಗಳ ಬಳಿ ತಲಾ ಒಂದು ಕೀಯಿದ್ದು ಸಮುದಾಯದ ವಿವಿಧ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು. ಇತ್ತೀಚೆಗೆ ಎರಡೂ ಗುಂಪುಗಳ ನಡುವೆ ಭಿನ್ನಾಭಿಪ್ರಾಯ ತಲೆದೋರಿ ವಿವಾದವು ಪೊಲೀಸ್ ಠಾಣೆಯ ಮೆಟ್ಟಿಲೇರಿತು.

ಪ್ರಕರಣದ ವಿಚಾರಣೆ ನಡೆಸಿದ ಬೇಗೂರು ಠಾಣೆಯ ಪಿಎಸ್‌ಐ ವಿಜಯಕೃಷ್ಣ, ಜನಾಂಗದ ಯಾವುದೇ ಕಾರ್ಯಕ್ರಮಗಳಿಗೆ ಭವನವನ್ನು ಬಳಕೆ ಮಾಡುವವರು ಮುಂಚಿತವಾಗಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕೆಂದು ಸೂಚಿಸಿ, ಯಾವುದೇ ಕಾರಣಕ್ಕೂ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವುದಿಲ್ಲವೆಂದು ಮುಚ್ಚಳಿಕೆ ಬರೆಸಿಕೊಂಡರು. ನಂತರ ಎರಡು ಗುಂಪುಗಳ ಬಳಿಯಿದ್ದ ಕೀಗಳನ್ನು ಬೇಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಸ್ವಾಮಿ ಅವರ ವಶಕ್ಕೆ ನೀಡಿದರು.

ಈ ಸಂದರ್ಭದಲ್ಲಿ ಜನಾಂಗದ ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *