ಎಲ್ಲೆ ಮೀರಿದ ಮಾತಿಗೆ ಲಗಾಮು

ನವದೆಹಲಿ: ಉತ್ತರಪ್ರದೇಶದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಧರ್ಮದ ಬಣ್ಣ ಬಳಿಯುತ್ತಿರುವಂತೆಯೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಾಜಿ ಮುಖ್ಯಮಂತ್ರಿ ಮಾಯಾವತಿ, ಕೇಂದ್ರ ಸಚಿವೆ ಮೇನಕಾ ಗಾಂಧಿ, ಸಮಾಜವಾದಿ ಪಕ್ಷದ ಮುಖಂಡ ಆಜಂ ಖಾನ್ ಪ್ರಚಾರಕ್ಕೆ ಚುನಾವಣಾ ಆಯೋಗ ತಾತ್ಕಾಲಿಕ ನಿರ್ಬಂಧ ಹೇರಿದೆ.

ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಮುಂದಿನ 72 ಗಂಟೆವರೆಗೆ ಯೋಗಿ ಹಾಗೂ ಆಜಂ ಖಾನ್ ಪ್ರಚಾರ ಮಾಡುವಂತಿಲ್ಲ. ಹಾಗೆಯೇ ಮುಂದಿನ 48 ಗಂಟೆವರೆಗೆ ಮೇನಕಾ ಹಾಗೂ ಮಾಯಾವತಿ ಕೂಡ ಚುನಾವಣಾ ಸಭೆ ನಡೆಸುವಂತಿಲ್ಲ ಎಂದು ಆಯೋಗ ನಿಷೇಧ ಹೇರಿದೆ. ಕೋಮು ಭಾವನೆ ಕೆರಳಿಸುವ ಹೇಳಿಕೆಗಳು ಈ ನಿರ್ಬಂಧಕ್ಕೆ ಕಾರಣವಾಗಿವೆ. ಜಯಪ್ರದಾ ವಿರುದ್ಧ ಕೀಳು ಅಭಿರುಚಿಯ ಹೇಳಿಕೆ ನೀಡುರುವುದು ಆಜಂ ಖಾನ್ ವಿರುದ್ಧದ ಕ್ರಮಕ್ಕೆ ಕಾರಣವಾಗಿದೆ.

2014ರ ಲೋಕಸಭೆ ಹಾಗೂ 2017ರ ವಿಧಾನಸಭಾ ಚುನಾವಣೆಯಲ್ಲೂ ಮತಗಳ ಧ್ರುವೀಕರಣಕ್ಕೆ ಈ ಕಾರ್ಯತಂತ್ರ ಬಳಕೆಯಾಗಿತ್ತು. ಆದರೆ ಈ ಬಾರಿ ಪ್ರಚಾರದ ಆರಂಭಿಕ ಹಂತದಲ್ಲೇ ಉಭಯ ಪಕ್ಷಗಳು ಚುನಾವಣಾ ಆಯೋಗ ಹಾಗೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರಿಂದ ಪ್ರಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಸುಪ್ರೀಂ ಕೋರ್ಟ್ ಆಕ್ರೋಶ: ಚುನಾವಣಾ ಸಂದರ್ಭದಲ್ಲಿ ಧಾರ್ವಿುಕ ನೆಲೆಗಟ್ಟಿನಲ್ಲಿ ದ್ವೇಷದ ಹೇಳಿಕೆ ನೀಡುವ ಕುರಿತ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಚುನಾವಣಾ ಆಯೋಗವನ್ನು ತರಾಟೆ ತೆಗೆದುಕೊಂಡಿತು.

ಆಯೋಗದ ಅಧಿಕಾರದ ಬಗ್ಗೆ ಮಂಗಳವಾರದ ವಿಚಾರಣೆಯಲ್ಲಿ ವಿವರವಾಗಿ ತಿಳಿಸಲಾಗುವುದು. ಆದರೆ ಈಗಾಗಲೇ ಈ ರೀತಿ ಹೇಳಿಕೆ ನೀಡುತ್ತಿರುವವರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಸುಪ್ರೀಂ ಕೋರ್ಟ್​ನ ಈ ಅಭಿಪ್ರಾಯ ಬಂದ ಕೆಲವೇ ಗಂಟೆಗಳಲ್ಲಿ ನಿರ್ಬಂಧದ ಆದೇಶ ಹೊರಬಿದ್ದಿದೆ.

ನಿರ್ಬಂಧಕ್ಕೆ ಕಾರಣವಾದ ಅಂಶಗಳು

  • ಬಿಜೆಪಿ ಸೋಲಿಸುವ ಉದ್ದೇಶದಿಂದ ಕಾಂಗ್ರೆಸ್ ಬದಲಿಗೆ ಬಿಎಸ್​ಪಿಗೆ ಮುಸ್ಲಿಮರು ಮತ ಹಾಕಬೇಕು ಎಂದಿದ್ದ ಮಾಯಾವತಿ.
  • ಮಾಯಾವತಿ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದ ಯೋಗಿ, ಎಸ್​ಪಿ-ಬಿಎಸ್​ಪಿ-ಆರ್​ಎಲ್​ಡಿ ಮೈತ್ರಿಯೊಂದಿಗೆ ಅಲಿ ಇದ್ದರೆ, ನಮ್ಮೊಡನೆ ಬಜರಂಗಬಲಿ ಇದ್ದಾರೆ ಎಂದಿದ್ದರು.
  • ಮತ್ತೆ ವಾಗ್ವಾದ ಮುಂದುವರಿಸಿದ್ದ ಮಾಯಾವತಿ, ಮೈತ್ರಿಗೆ ಅಲಿ ಹಾಗೂ ಬಜರಂಗಬಲಿ ಇಬ್ಬರೂ ಬೇಕು ಎಂದು ಹೇಳಿಕೆ ನೀಡಿದ್ದರು.
  • ಮೋದಿಯ ಸೇನೆ ಎಂದು ಹೇಳಿದ್ದ ಯೋಗಿ ಆದಿತ್ಯನಾಥ್
  • ಬಿಜೆಪಿ ಅಭ್ಯರ್ಥಿ ಜಯಪ್ರದಾ ಒಳ ಉಡುಪಿನ ಬಣ್ಣದ ಬಗ್ಗೆ ಹೇಳಿಕೆ ನೀಡಿದ್ದ ಆಜಂ ಖಾನ್
  • ಮುಸ್ಲಿಮರು ಮತ ನೀಡದಿದ್ದರೆ ಆ ಸಮುದಾಯದ ಯಾವುದೇ ಕೆಲಸ ಮಾಡಿಕೊಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ ಮೇನಕಾ ಗಾಂಧಿ

ಆಯೋಗಕ್ಕೆ ತನ್ನ ಅಧಿಕಾರದ ಪರಿವೆ ಇದೆಯೇ? ಮುಖ್ಯ ಚುನಾವಣಾ ಆಯುಕ್ತರನ್ನು ಕೋರ್ಟ್​ಗೆ ಕರೆಯಿಸಿ ತಿಳಿಸಿಕೊಡಬೇಕೆ? ದ್ವೇಷ ಮಾತುಗಳ ಬಗ್ಗೆ ಕ್ರಮ ತೆಗೆದುಕೊಳ್ಳಲು ಇನ್ನೆಷ್ಟು ವಿಳಂಬ ಮಾಡುತ್ತೀರಿ?

| ರಂಜನ್ ಗೊಗೊಯ್, ಸಿಜೆಐ

ನಾಳೆ ಯೋಗಿ ಬೆಳಗಾವಿ ಪ್ರಚಾರ ರದ್ದು

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಏ.17ರಂದು ನಿಗದಿಯಾಗಿದ್ದ ಯೋಗಿ ಚುನಾವಣೆ ಪ್ರಚಾರ ಕಾರ್ಯಕ್ರಮ ರದ್ದಾಗಿದೆ. ಚುನಾವಣೆ ಆಯೋಗದ ನಿಷೇಧದ ಹಿನ್ನೆಲೆಯಲ್ಲಿ ಆ ದಿನ ಕಾರ್ಯಕ್ರಮ ಇರುವುದಿಲ್ಲ ಎಂದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ನಕಲಿ ಪತ್ರದ ವಿರುದ್ಧ ಜೋಷಿ ಗರಂ

ಬಿಜೆಪಿ ವರಿಷ್ಠ ಎಲ್.ಕೆ.ಆಡ್ವಾಣಿಗೆ ಮುರಳಿ ಮನೋಹರ್ ಜೋಷಿ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಪತ್ರದ ಪ್ರಕಾರ ಬಿಜೆಪಿ ಕೇವಲ 120 ಸೀಟುಗಳಿಗೆ ಸೀಮಿತವಾಗಲಿದೆ ಎಂದು ವಿವರಿಸಲಾಗಿತ್ತು. ಆದರೆ ಈ ಪತ್ರ ನಕಲಿ ಎಂದು ಹೇಳಿರುವ ಜೋಷಿ, ಕಾರಣೀಕರ್ತರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಇಂತಹ ಯಾವುದೇ ಪತ್ರ ಬರೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಜೋಷಿಗೆ ಟಿಕೆಟ್ ನಿರಾಕರಣೆ ಬಳಿಕ ಕೆಲ ಕಿಡಿಗೇಡಿಗಳು ಇಂತಹದೊಂದು ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

ಮೇನಕಾ ಎಬಿಸಿಡಿ

ಲೋಕಸಭಾ ಕ್ಷೇತ್ರದ ಹಳ್ಳಿಗಳ ಅಭಿವೃದ್ಧಿ ಕುರಿತು ಕೇಂದ್ರ ಸಚಿವೆ ಮೇನಕಾ ಗಾಂಧಿ ಹೊಸ ವ್ಯಾಖ್ಯಾನ ನೀಡಿದ್ದಾರೆ. ಹಳ್ಳಿಯಲ್ಲಿ ಶೇ.80 ಮತ ಬಂದರೆ ಎ, ಶೇ.60 ಮತ ಬಂದರೆ ಬಿ, ಶೇ.50 ಮತ ಬಂದರೆ ಸಿ ಹಾಗೂ ಶೇ.50ಕ್ಕಿಂತ ಕಡಿಮೆ ಮತ ಬಂದರೆ ಡಿ ಎಂದು ವರ್ಗೀಕರಿ ಸಲಾಗುವುದು. ಈ ಮತ ಪ್ರಮಾಣ ಆಧರಿಸಿ ಹಳ್ಳಿಗಳ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತದೆ ಎಂದು ಮೇನಕಾ ವಿವರಿಸಿದ್ದಾರೆ.

ಆಜಂ ಖಾನ್ ಉದ್ಧಟತನ

ಲಖನೌ: ಖ್ಯಾತ ಚಿತ್ರನಟಿ ಹಾಗೂ ಬಿಜೆಪಿ ಅಭ್ಯರ್ಥಿ ಜಯಪ್ರದಾ ವಿರುದ್ಧ ಸಮಾಜವಾದಿ ಪಕ್ಷದ ಮುಖಂಡ ಆಜಂ ಖಾನ್ ನೀಡಿರುವ ಕೀಳುಮಟ್ಟದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಅಜಾಂ ಖಾನ್ ವಿರುದ್ಧ ಎಫ್​ಐಆರ ದಾಖಲಾಗಿದ್ದು, ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ. ಕೇಂದ್ರ ಚುನಾವಣಾ ಆಯೋಗಕ್ಕೆ ಈ ಕುರಿತು ವರದಿ ಕೂಡ ನೀಡಲಾಗಿದ್ದು, ಆಜಂ ಖಾನ್ ವಿರುದ್ಧ ಕ್ರಮದ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಯೋಗಿ ಆದಿತ್ಯನಾಥ್ ಹಾಗೂ ಮಾಯಾವತಿ ಮಾದರಿಯಲ್ಲಿ ಆಜಂ ವಿರುದ್ಧವೂ ನಿರ್ಬಂಧ ಹೇರಲಾಗಿದೆ.

ರಾಂಪುರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ಆಜಂ ಖಾನ್, ರಾಂಪುರದ ಜನತೆಗೆ ಜಯಪ್ರದಾ ಅಸಲಿಯತ್ತು ತಿಳಿಯಲು 17 ವರ್ಷ ಬೇಕಾಯಿತು. ಆದರೆ ನನಗೆ 17 ದಿನಗಳಲ್ಲಿ ಜಯಪ್ರದಾ ಧರಿಸುವ ಒಳ ಉಡುಪಿನ ಬಣ್ಣ ಖಾಕಿ ಎಂದು ಗೊತ್ತಾಗಿದೆ ಎಂದಿದ್ದಾರೆ. ಈ ಕೀಳು ಅಭಿರುಚಿಯ ಹೇಳಿಕೆಗೆ ಪಕ್ಷಾತೀತವಾಗಿ ಖಂಡನೆ ವ್ಯಕ್ತವಾಗಿದೆ. ಘಟನೆ ಕುರಿತು ರಾಜ್ಯ ಮುಖ್ಯಚುನಾವಣಾಧಿಕಾರಿ ಕೇಂದ್ರಕ್ಕೆ ವರದಿ ಸಲ್ಲಿಸಿದ್ದು, ಭಾಷಣದ ವಿಡಿಯೋ ತುಣುಕನ್ನು ಕೂಡ ಕಳುಹಿಸಿಕೊಟ್ಟಿದ್ದಾರೆ.

ಸಮಾಜವಾದಿಗಳ ಸಮರ್ಥನೆ: ಆಜಂ ಖಾನ್ ಹೇಳಿಕೆ ಕುರಿತು ಮಾಯಾವತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸಮರ್ಥಿಸಿಕೊಂಡಿದ್ದು, ಜಯಪ್ರದಾ ಕುರಿತು ನೀಡಿರುವ ಹೇಳಿಕೆ ಅದಲ್ಲ ಎಂದಿದ್ದಾರೆ. ತನ್ನ ಮೇಲಿನ ಆರೋಪ ಸಾಬೀತಾದರೆ ಚುನಾವಣಾ ಸ್ಪರ್ಧಾ ಕಣದಿಂದ ಹಿಂದೆ ಸರಿಯುವುದಾಗಿ ಆಜಂ ಸವಾಲು ಹಾಕಿದ್ದು, ಇದು ಮಾಧ್ಯಮ ಸೃಷ್ಟಿ ಎಂದು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

2017ರಲ್ಲಿ ಪ್ರಚಾರ ನಿಷೇಧ: ಉತ್ತರಪ್ರದೇಶ ಚುನಾವಣಾ ಸಂದರ್ಭದಲ್ಲಿ ಸೇನೆ ಹಾಗೂ ಸೈನಿಕರ ಬಗ್ಗೆ ಕೀಳು ಅಭಿರುಚಿಯ ಹೇಳಿಕೆ ನೀಡಿ ಆಜಂ ಖಾನ್ ಕೆಂಗಣ್ಣಿಗೆ ಗುರಿಯಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಚುನಾವಣಾ ಆಯೋಗ, ಚುನಾವಣಾ ಪ್ರಚಾರಕ್ಕೆ ಸಂಪೂರ್ಣ ನಿಷೇಧ ಹೇರಿತ್ತು. ಇದೇ ರೀತಿ 2014ರಲ್ಲಿಯೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ವಿರುದ್ಧವೂ ತಾತ್ಕಾಲಿಕ ನಿರ್ಬಂಧ ಹೇರಲಾಗಿತ್ತು. ಆಗ ಷಾ ಉತ್ತರಪ್ರದೇಶದ ಉಸ್ತುವಾರಿ ಹೊಂದಿದ್ದರು.

ದೂರದರ್ಶನಕ್ಕೆ ತರಾಟೆ

ಕಳೆದೊಂದು ತಿಂಗಳಲ್ಲಿ ಸರ್ಕಾರಿ ವಾಹಿನಿ ದೂರದರ್ಶನದಲ್ಲಿ ಬಿಜೆಪಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ 160 ಗಂಟೆ ಮೀಸಲಿಡಲಾಗಿದ್ದರೆ, ಕಾಂಗ್ರೆಸ್​ಗೆ ಕೇವಲ 80 ಗಂಟೆ ನೀಡಲಾಗಿದೆ. ಆಡಳಿತಾರೂಢ ಪಕ್ಷದ ಪರವಾಗಿ ಕಾರ್ಯಕ್ರಮ ನಿರೂಪಿಸುವುದಕ್ಕೆ ತಡೆ ಹಾಕಿ. ಸಮತೋಲನದಿಂದ ಕಾರ್ಯನಿರ್ವಹಿಸಿ ಎಂದು ದೂರದರ್ಶನಕ್ಕೆ ಚುನಾವಣಾ ಆಯೋಗ ಸೂಚಿಸಿದೆ ಎಂದು ವರದಿಯಾಗಿದೆ. ‘ಮೈ ಭೀ ಚೌಕಿದಾರ್’ ಕಾರ್ಯಕ್ರಮವನ್ನು ದೂರದರ್ಶನ ನೇರ ಪ್ರಸಾರ ಮಾಡಿರುವ ಬಗ್ಗೆ ಆಯೋಗಕ್ಕೆ ದೂರು ಸಲ್ಲಿಕೆಯಾದ ಬಳಿಕ ಈ ಕ್ರಮವಾಗಿದೆ.

One Reply to “ಎಲ್ಲೆ ಮೀರಿದ ಮಾತಿಗೆ ಲಗಾಮು”

  1. ಅಜಾಂ ಖಾನ್ ಇವನಿಗೆ ತಾಯಿ ,ಅಕ್ಕ,ತಂಗಿ ಯಾರನ್ನೂ ಸಮಾನವಾಗಿ ಕಾಣುವ ಮಾನವನಲ್ಲ. ಇತರ ಹೆಣ್ಣು ಮಕ್ಕಳ ಒಳ ಉಡುಪಿನ ಬಗ್ಗೆ ಮಾತಾಡುವ ಇವನು ಇವನ ತಾಯಿಯನ್ನೂ ಬಿಡದ ವಿಕೃತ ಮನಸ್ಸಿನವನು.ಇಂತವರು ನಮ್ಮ ನಾಯಕನಾ..

Comments are closed.