ಸತತ ಎರಡನೇ ದಿನ ತ್ರಿವಳಿ ಸ್ವರ್ಣ

ಗೋಲ್ಡ್​ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್​ನಲ್ಲಿ ಭಾರತ ತನ್ನ ಪ್ರಾಬಲ್ಯದ ಕ್ರೀಡೆಗಳಲ್ಲಿ ಭರ್ಜರಿ ಪದಕ ಬೇಟೆ ಮುಂದುವರಿಸಿದೆ. ಕಳೆದ ನಾಲ್ಕು ದಿನಗಳಿಂದ ಸ್ವರ್ಣ ಜಯಿಸುತ್ತಿದ್ದ ವೇಟ್​ಲಿಫ್ಟಿಂಗ್​ನಲ್ಲಿ ಸೋಮವಾರ ರಜತಕ್ಕೆ ಸಮಾಧಾನ ಕಂಡರೆ, ಶೂಟರ್ ಜಿತು ರೈ, ಟೇಬಲ್ ಟೆನಿಸ್ ಪುರುಷರ ತಂಡ ಮತ್ತು ಬ್ಯಾಡ್ಮಿಂಟನ್ ಮಿಶ್ರ ತಂಡ ಸತತ 2ನೇ ದಿನ ತ್ರಿವಳಿ ಸ್ವರ್ಣ ಪದಕ ಗೆಲುವಿನ ಸಂಭ್ರಮ ತಂದಿತು. ಶೂಟಿಂಗ್​ನಲ್ಲಿ ಮೆಹುಲಿ ಘೋಷ್ ಕೂದಲೆಳೆಯ ಅಂತರದಲ್ಲಿ ಸ್ವರ್ಣ ತಪ್ಪಿಸಿಕೊಂಡು ರಜತ ಗೆದ್ದರೆ, ಓಂಪ್ರಕಾಶ್ ಮಿತ್ತರ್ವಲ್ ಮತ್ತು ಅಪೂರ್ವಿ ಚಾಂಡೆಲಾ ಕಂಚಿನ ಸಮಾಧಾನ ಕಂಡರು. ಪ್ರದೀಪ್ ಸಿಂಗ್ ಬೆಳ್ಳಿ ಪದಕದೊಂದಿಗೆ ಭಾರತ ವೇಟ್​ಲಿಫ್ಟಿಂಗ್ ಅಭಿಯಾನ ಮುಗಿಸಿತು. ಈ ಮೂಲಕ ಕೂಟದ ಸ್ಪರ್ಧೆಯ 5ನೇ ದಿನ 3 ಚಿನ್ನ, 2 ಬೆಳ್ಳಿ, 2 ಕಂಚಿನೊಂದಿಗೆ ಸಪ್ತ ಪದಕದ ಸಾಧನೆ ತೋರಿದ ಭಾರತ, ಪದಕಪಟ್ಟಿಯಲ್ಲಿ (10 ಚಿನ್ನ, 4 ಬೆಳ್ಳಿ, 5 ಕಂಚು) ಮೂರನೇ ಸ್ಥಾನಕ್ಕೆ ಪ್ರಗತಿ ಕಂಡಿದೆ.

ಸೈನಾ ಆಟದಿಂದ ಚಿನ್ನದ ಸಂಭ್ರಮ

ಅನುಭವಿ ಷಟ್ಲರ್ ಸೈನಾ ನೆಹ್ವಾಲ್ ಹಾಗೂ ಕಿಡಂಬಿ ಶ್ರೀಕಾಂತ್ ಅವರನ್ನೊಳಗೊಂಡ ಭಾರತ ಬ್ಯಾಡ್ಮಿಂಟನ್ ಮಿಶ್ರ ತಂಡ ಫೈನಲ್​ನಲ್ಲಿ 3-1ರಿಂದ ಮೂರು ಬಾರಿಯ ಹಾಗೂ ಹಾಲಿ ಚಾಂಪಿಯನ್ ಮಲೇಷ್ಯಾ ತಂಡವನ್ನು ಸೋಲಿಸಿ ಚಿನ್ನ ಜಯಿಸಿತು. ಇದು ಕಾಮನ್ವೆಲ್ತ್ ಗೇಮ್್ಸ ಇತಿಹಾಸದ ಮಿಶ್ರ ತಂಡ ವಿಭಾಗದಲ್ಲಿ ಭಾರತಕ್ಕೆ ಚೊಚ್ಚಲ ಸ್ವರ್ಣ ಪದಕವಾಗಿದೆ. ಪದಕ ಹೋರಾಟದಲ್ಲಿ ಮೊದಲ ಪಂದ್ಯವಾದ ಮಿಶ್ರ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ-ಸಾತ್ವಿಕ್ ರೆಡ್ಡಿ ಜೋಡಿ 21-14, 15-21, 21-15 ಗೇಮ್ಳಿಂದ ಪೆಂಗ್ ಸೂನ್ ಚಾನ್-ಲಿಯೂ ಯೊಂಗ್ ಜೋಡಿಯನ್ನು ಸೋಲಿಸಿ ಶುಭಾರಂಭ ಒದಗಿಸಿತು. ಪುರುಷರ ಸಿಂಗಲ್ಸ್​ನಲ್ಲಿ ಶ್ರೀಕಾಂತ್ 21-17, 21-14ರಿಂದ ಮೂರು ಬಾರಿಯ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಲೀ ಚಾಂಗ್ ವೀಯನ್ನು ಸೋಲಿಸಿ ಮುನ್ನಡೆಯನ್ನು 2-0ಗೆ ಏರಿಸಿದರು. ಆದರೆ ಪುರುಷರ ಡಬಲ್ಸ್​ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ- ಚಿರಾಗ್ ಶೆಟ್ಟಿ ಜೋಡಿ 15-21, 20-22ರಿಂದ ಲಿಯೂ ಯೊಂಗ್- ವೀ ಕಿಯೊಂಗ್ ಜೋಡಿಗೆ ಶರಣಾಯಿತು. ಇದರಿಂದ ಹಿನ್ನಡೆಯನ್ನು 1-2ಕ್ಕಿಳಿಸಿದ ಮಲೇಷ್ಯಾ ಗೆಲುವಿನ ಆಸೆ ಜೀವಂತವಿಟ್ಟಿತು. ನಂತರ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸೈನಾ ನೆಹ್ವಾಲ್ 21-11, 19-21, 21-9ರಿಂದ ಸೋನಿಯಾ ಚೀಹ್​ರನ್ನು ಸೋಲಿಸಿ ಚಿನ್ನ ಖಚಿತಪಡಿಸಿದರು. ಇದರಿಂದ ಭಾರತಕ್ಕೆ ಅಂತಿಮ ಮಹಿಳಾ ಡಬಲ್ಸ್ ಆಡುವ ಅಗತ್ಯ ಬರಲಿಲ್ಲ. ‘ನಾನು ಬಹಳಷ್ಟು ಆಯಾಸಗೊಂಡಿದ್ದೆ. ಅಲ್ಲದೆ ಏಕಾಗ್ರತೆ ಸಾಧಿಸಲು ಆಗುತ್ತಿರಲಿಲ್ಲ. ಆದರೆ ಜಾಗರೂಕತೆಯಿಂದ ಸವಾಲನ್ನು ನಿಭಾಯಿಸಿದೆ. ಸ್ವರ್ಣ ಪದಕದ ಗೆಲುವಿನ ಶಾಟ್ ಬಾರಿಸಲು ಯಶಸ್ವಿಯಾದೆ’ ಎಂದು ಸೈನಾ ನೆಹ್ವಾಲ್ ಗೆದ್ದ ಬಳಿಕ ಹರ್ಷ ವ್ಯಕ್ತಪಡಿಸಿದರು. ಮಂಗಳವಾರದಿಂದ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗದ ಸ್ಪರ್ಧೆಗಳು ನಡೆಯಲಿವೆ.

ಪುರುಷರಿಗೂ ಟೇಬಲ್ ಟೆನಿಸ್ ಸ್ವರ್ಣ

ಭಾರತದ ಮಹಿಳಾ ತಂಡದಂತೆ ಪುರುಷರ ಟೇಬಲ್ ಟೆನಿಸ್ ತಂಡವೂ ಸ್ವರ್ಣ ಪದಕಕ್ಕೆ ಸಂಭ್ರಮಿಸಿತು. ಏಕಪಕ್ಷೀಯವಾಗಿ ನಡೆದ ಫೈನಲ್ ಹೋರಾಟದಲ್ಲಿ ಭಾರತ 3-0ಯಿಂದ ನೈಜೀರಿಯಾವನ್ನು ಮಣಿಸಿತು. ಇದು ಕಾಮನ್ವೆಲ್ತ್ ಗೇಮ್್ಸ ಇತಿಹಾಸದಲ್ಲಿ ಪುರುಷರ ತಂಡಕ್ಕೆ 2ನೇ ಚಿನ್ನದ ಪದಕವಾಗಿದೆ. 2006ರ ಮೆಲ್ಬೋರ್ನ್ ಕೂಟದಲ್ಲಿ ಪುರುಷರ ತಂಡ ಮೊದಲ ಬಾರಿ ಚಿನ್ನ ಜಯಿಸಿತ್ತು. ಮೊದಲ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಶರತ್ ಕಮಲ್ ಎದುರಾಳಿ ಅಬಿಯೊಡೊನ್ ಬೊಡೆಯನ್ನು ಸೋಲಿಸಿ ಶುಭಾರಂಭ ಮಾಡಿದರು. 2ನೇ ಸಿಂಗಲ್ಸ್ ವಿಭಾಗದಲ್ಲೂ ಮೇಲುಗೈ ಕಂಡ ಭಾರತದ ಸತ್ಯನ್ ಜ್ಞಾನಶೇಖರನ್ ನೈಜೀರಿಯಾದ ಟೊರಿಲಾ ಸಿಗನ್​ರನ್ನು ಸೋಲಿಸಿದರು. ಆಸೆ ಜೀವಂತವಾಗಿರಿಸಿಕೊಳ್ಳಲು ನೈಜೀರಿಯಾಗೆ ನಿರ್ಣಾಯಕವೆನಿಸಿದ್ದ ಡಬಲ್ಸ್ ವಿಭಾಗದಲ್ಲೂ ಭಾರತ ಮಿಂಚಿತು. ಹರ್ವಿುತ್ ದೇಸಾಯಿ- ಸತ್ಯನ್ ಜ್ಞಾನಶೇಖರನ್ ಜೋಡಿ ಒಮಟಾಯೊ ಒಲಾಜಿಡೆ-ಅಬಿಯೊಡೊನ್ ಬೊಡೆ ಜೋಡಿಯನ್ನು ಸೋಲಿಸಿ ಜಯ ಖಚಿತಪಡಿಸಿತು. -ಪಿಟಿಐ/ಏಜೆನ್ಸೀಸ್

ವೇಟ್​ಲಿಫ್ಟರ್ ಪ್ರದೀಪ್​ಗೆ ರಜತ

ಪಂಜಾಬ್​ನ ಪ್ರದೀಪ್ ಸಿಂಗ್ ಸತತ 5ನೇ ಹಾಗೂ ವೇಟ್​ಲಿಫ್ಟಿಂಗ್ ಸ್ಪರ್ಧೆಯ ಅಂತಿಮ ದಿನವೂ ಭಾರತಕ್ಕೆ ಸ್ವರ್ಣ ಪದಕ ಗೆದ್ದುಕೊಡುವ ಪ್ರಯತ್ನದಲ್ಲಿ ಸ್ವಲ್ಪದರಲ್ಲಿಯೇ ಎಡವಿದರು. 105 ಕೆಜಿ ವಿಭಾಗದಲ್ಲಿ ಒಟ್ಟು 352 ಕೆಜಿ ಭಾರ ಎತ್ತಿದ ಅವರು ರಜತ ಪದಕಕ್ಕೆ ಸಮಾಧಾನ ಕಂಡರು. ಸಮೋವಾದ ಸನೆಲ್ ಮಾವೊ ಒಟ್ಟು 360 ಕೆಜಿ ಭಾರ ಎತ್ತಿ ಸ್ವರ್ಣ ಪಡೆದರು. ಪ್ರದೀಪ್ ಸ್ನಾ್ಯಚ್​ನಲ್ಲಿ ಗರಿಷ್ಠ 152 ಕೆಜಿ ಭಾರ ಎತ್ತಿದರೆ, ಕ್ಲೀನ್-ಜರ್ಕ್​ನಲ್ಲಿ 200 ಕೆಜಿ ಎತ್ತಿದರು. ಇದರಲ್ಲಿ 211 ಕೆಜಿ ಭಾರ ಎತ್ತುವ ಕೊನೇ ಪ್ರಯತ್ನದಲ್ಲಿ ವಿಫಲರಾಗಿದ್ದರಿಂದ ಪ್ರದೀಪ್ ರಜತಕ್ಕೆ ತೃಪ್ತಿಪಡುವಂತಾಯಿತು. ಕೂಟದ ವೇಟ್​ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತ ಒಟ್ಟು 5 ಚಿನ್ನ, 2 ಬೆಳ್ಳಿ ಮತ್ತು 2 ಕಂಚಿನ ಸಾಧನೆಯೊಂದಿಗೆ ಅಭಿಯಾನ ಮುಗಿಸಿತು. ಅಂತಿಮ ದಿನ ಮಹಿಳೆಯರ 90+ ಕೆಜಿ ವಿಭಾಗದಲ್ಲಿ ಭಾರತದ ಪೂರ್ಣಿಮಾ ಪಾಂಡೆ 6ನೇ ಮತ್ತು ಪುರುಷರ 105+ ಕೆಜಿ ವಿಭಾಗದಲ್ಲಿ ಗುರುದೀಪ್ ಸಿಂಗ್ 4ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಬಂಗಾರಕ್ಕೆ ಜಿತು ಗುರಿ, ಬೆಳ್ಳಿಗೆ ಮೆಹುಲಿ ತೃಪ್ತಿ

ವಿಶ್ವ ಚಾಂಪಿಯ್ಷಿಪ್ ಬೆಳ್ಳಿ ಪದಕ ವಿಜೇತ ಜಿತು ರೈ 10 ಮೀಟರ್ ಏರ್ ಪಿಸ್ತೂಲ್ ಫೈನಲ್ಸ್​ನಲ್ಲಿ 235.1 ಅಂಕಗಳೊಂದಿಗೆ ಚಿನ್ನಕ್ಕೆ ಗುರಿ ಇಟ್ಟರು. ಗ್ಲಾಸ್ಗೊ ಕಾಮನ್ವೆಲ್ತ್ ಗೇಮ್ಸ್​ನ ಸ್ವರ್ಣ ಪದಕ ವಿಜೇತ ಕೂಡ ಆಗಿರುವ ಜಿತುಗೆ ಪ್ರತಿಸ್ಪರ್ಧೆ ನೀಡಿದ ದೇಶಬಾಂಧವ ಓಂ ಪ್ರಕಾಶ್ ಮಿತ್ತರ್ವಲ್ 214.3 ಅಂಕಗಳಿಂದ ಕಂಚು ಗೆದ್ದರೆ, ಆಸ್ಟ್ರೇಲಿಯಾ ಶೂಟರ್ ಕೆರ್ರಿ ಬೆಲ್(233.5) ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ‘ಸ್ಪರ್ಧೆಯಲ್ಲಿ ನನ್ನ ಅರ್ಹತಾ ಅಂಕ ಉತ್ತಮವಾಗಿರಲಿಲ್ಲ. ಆದರೆ ಕಳೆದ ಕಾಮನ್ವೆಲ್ತ್ ಫೈನಲ್ಸ್​ನಲ್ಲೂ ಉತ್ತಮ ನಿರ್ವಹಣೆ ತೋರಿದ್ದರಿಂದ ನನ್ನ ಸಾಮರ್ಥ್ಯದ ಮೇಲೆ ಶೇ.100 ನಂಬಿಕೆಯಿತ್ತು ಎಂದು ಜೀತು ರೈ ಹರ್ಷ ವ್ಯಕ್ತಪಡಿಸಿದರು.

ಮೆಹುಲಿ ಬೆಳ್ಳಿ, ಅಪೂರ್ವಿ ಕಂಚು: 17 ವರ್ಷದ ಶೂಟರ್ ಮೆಹುಲಿ ಘೋಷ್ ಅನುಭವಿ ಶೂಟರ್ ಗ್ಲಾಸ್ಗೊ ಗೇಮ್್ಸ ಸ್ವರ್ಣ ವಿಜೇತೆ ಅಪೂರ್ವಿ ಚಾಂಡೆಲಾರನ್ನು ಹಿಂದಿಕ್ಕಿ ಬೆಳ್ಳಿ ಪದಕಕ್ಕೆ ಸಂಭ್ರಮಿಸಿದರು. 10 ಮೀ. ಏರ್​ರೈಫಲ್ ಫೈನಲ್​ನಲ್ಲಿ ಮೆಹುಲಿ 247.2 ಅಂಕಗಳೊಂದಿಗೆ 2ನೇ ಸ್ಥಾನ ಪಡೆದರೆ, ಅಪೂರ್ವಿ 225.3 ಅಂಕ ಸಂಪಾದಿಸಿ ಕಂಚಿಗೆ ಗುರಿ ಇಟ್ಟರು. ಮೇಲುಗೈ ಸಾಧಿಸಿದ ಸಿಂಗಾಪುರ ಶೂಟರ್ ಮಾರ್ಟಿನಾ ಲಿಂಡ್ಸೆ ವೆಲೆಸೊ ಚಿನ್ನ ಗೆದ್ದರು. ನಿರ್ಣಾಯಕ ಸುತ್ತಿನವರೆಗೆ ಮೆಹುಲಿ ಪ್ರತಿಸ್ಪರ್ಧಿ ವೆಲೊಸೊರೊಂದಿಗೆ ಸಮಬಲ ಹೊಂದಿದ್ದರು. ಆದರೆ ನಿರ್ಣಾಯಕ ಶೂಟ್​ಆಫ್​ನಲ್ಲಿ ಮೆಹುಲಿ 9.9 ಅಂಕ ಗಳಿಸಿದರೆ, ವೆಲೊಸೊ 10.3 ಅಂಕಗೆ ಗುರಿ ಇಟ್ಟು ಕೂದಲೆಳೆಯ ಅಂತರದಿಂದ ಚಿನ್ನ ಗೆದ್ದರು.

ಅಥ್ಲೆಟಿಕ್ಸ್ ನಿರಾಸೆ, ಬಾಕ್ಸಿಂಗ್ ಭರವಸೆ

ಅಥ್ಲೆಟಿಕ್ಸ್​ನ 2ನೇ ದಿನದ ಸ್ಪರ್ಧೆಯಲ್ಲಿ ಭಾರತದ ನಿರಾಶಾದಾಯಕ ನಿರ್ವಹಣೆ ಮುಂದುವರಿದಿದೆ. ಪುರುಷರ ಶಾಟ್ ಪುಟ್ ವಿಭಾಗದ ಫೈನಲ್​ನಲ್ಲಿ ತೇಜಿಂದರ್ ಸಿಂಗ್ 19.42 ಮೀ. ಸಾಧನೆಯೊಂದಿಗೆ 8ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಪುರುಷರ ಹೈ ಜಂಪ್​ನಲ್ಲಿ ತೇಜಸ್ವಿನ್ ಶಂಕರ್ 2.21 ಮೀ ಎತ್ತರ ಹಾರಿ ಅರ್ಹತಾ ಸುತ್ತಿನಲ್ಲಿ 5ನೇ ಸ್ಥಾನ ಪಡೆದು ಫೈನಲ್​ಗೆ ಪ್ರವೇಶ ಪಡೆದಿದ್ದಾರೆ. ಮೊಹಮದ್ ಅನಾಸ್ ಯಾಹಿಯಾ. ಪುರುಷರ 400ಮೀ. ಸೆಮಿಫೈನಲ್​ನಲ್ಲಿ 45.44 ಸೆಕೆಂಡ್ ಸಾಧನೆಯೊಂದಿಗೆ ಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ.

ಪೂವಮ್ಮಗೆ 24ನೇ ಸ್ಥಾನ: ಕರ್ನಾಟಕದ ಅಥ್ಲೀಟ್ ಎಂಆರ್ ಪೂವಮ್ಮ (53.72 ಸೆಕೆಂಡ್) ಮಹಿಳೆಯರ 400ಮೀ ಓಟದಲ್ಲಿ ಕೆಟ್ಟ ನಿರ್ವಹಣೆ ತೋರಿ 24ನೇ ಸ್ಥಾನ ಪಡೆದರು. ಹಿಮಾ ದಾಸ್ 52.11 ಸೆಕೆಂಡ್ ಸಾಧನೆಯೊಂದಿಗೆ ಸೆಮಿಫೈನಲ್​ಗೇರಿದ್ದಾರೆ.

# ಬಾಕ್ಸಿಂಗ್​ನಲ್ಲಿ ಭಾರತದ ಭರವಸೆ ಉಳಿದುಕೊಂಡಿದ್ದು, ಪುರುಷರ 52 ಕೆಜಿ ವಿಭಾಗದಲ್ಲಿ ಗೌರವ್ ಸೋಲಂಕಿ ಹಾಗೂ 60 ಕೆಜಿ ವಿಭಾಗದಲ್ಲಿ ಮನೀಷ್ ಕೌಶಿಕ್ ಕ್ವಾರ್ಟರ್​ಫೈನಲ್ ಪ್ರವೇಶಿಸಿದ್ದಾರೆ.

# ಈಜು ಸ್ಪರ್ಧೆಯ 5ನೇ ದಿನದ ಸ್ಪರ್ಧೆಯಲ್ಲಿ ರಾಜ್ಯದ ಶ್ರೀಹರಿ ನಟರಾಜ್ 200ಮೀ ಬ್ಯಾಕ್​ಸ್ಟ್ರೋಕ್​ನಲ್ಲಿ ಫೈನಲ್​ಗೇರಲು ವಿಫಲರಾದರು.

 

Leave a Reply

Your email address will not be published. Required fields are marked *