ಕಾಟ ಕೊಡುವ ಬುದ್ಧಿವಂತಿಕೆ ಹಲ್ಲುಗಳು!

| ಡಾ. ಅನುಷಾ ಆರ್. ಗುಪ್ತಾ, ದಂತ ವೈದ್ಯರು, 

ಬುದ್ಧಿವಂತಿಕೆಯ ಹಲ್ಲುಗಳು ಬಾಯಿಯ ಹಿಂಭಾಗದಲ್ಲಿ ಕಾಣಿಸಿಕೊಳ್ಳುವ ಕೊನೆಯ ಹಲ್ಲುಗಳು. ಸಾಮಾನ್ಯವಾಗಿ 17ರಿಂದ 25ನೇ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುತ್ತವೆ. ವಯಸ್ಕರಲ್ಲಿ 32 ಹಲ್ಲುಗಳಿರುತ್ತವೆ. ಸಾಮಾನ್ಯವಾಗಿ ದವಡೆಗಳು ಚಿಕ್ಕದಿರುವಾಗ ಎಲ್ಲ 32 ಹಲ್ಲುಗಳು ಸರಿ ಹೊಂದದೆ, 28 ಹಲ್ಲುಗಳಿಗೆ ಮಾತ್ರ ಸ್ಥಳಾವಕಾಶವಿರುತ್ತದೆ. ಆಗ ಈ ಬುದ್ಧಿವಂತಿಕೆಯ ಹಲ್ಲುಗಳು ಸರಿಯಾಗಿ ಬರಲು ಸಾಕಷ್ಟು ಜಾಗ ಇರುವುದಿಲ್ಲ. ಇವುಗಳನ್ನು ಇಂಪ್ಯಾಕ್ಟೆಡ್ ಎಂದು ಕರೆಯಲಾಗುತ್ತದೆ. ಇಂಥ ಸಂದರ್ಭದಲ್ಲಿ ಇವುಗಳನ್ನು ತೆಗೆದು ಹಾಕಬೇಕಾಗುತ್ತದೆ. ಆದರೆ, ಸಾಕಷ್ಟು ಸ್ಥಳಾವಕಾಶವಿದ್ದು, ಸರಿಯಾದ ಜಾಗದಲ್ಲಿ ಬಂದರೆ ಯಾವುದೇ ತೊಂದರೆ ಇರುವುದಿಲ್ಲ. ಅನೇಕ ವೇಳೆ, ಇವು ಸ್ವಲ್ಪಮಟ್ಟಿಗೆ ಅನನುಕೂಲವನ್ನು ಉಂಟುಮಾಡುತ್ತವೆ. ಒಸಡಿನ ಭಾಗ ಸ್ವಲ್ಪ ಊದಿಕೊಳ್ಳುತ್ತದೆ. ಇದನ್ನು ಪೆರಿಕೊರನೈಟಿಸ್ ಎಂದು ಕರೆಯುತ್ತಾರೆ. ಬ್ಯಾಕ್ಟೀರಿಯಾ ಮತ್ತು ಆಹಾರ ಪದಾರ್ಥಗಳು ಒಸಡಿನ ಅಂಚಿನ ಕೆಳಗೆ ಸೇರಿ ಸ್ವಚ್ಛಗೊಳಿಸಲು ಕಷ್ಟವಾಗಿ ಉರಿಯೂತ ಉಂಟಾಗುತ್ತದೆ. ಇಂಥ ಸನ್ನಿವೇಶದಲ್ಲಿ ಉಗುರು ಬೆಚ್ಚನೆ ನೀರಿಗೆ ಸ್ವಲ್ಪ ಉಪು್ಪ ಸೇರಿಸಿ ಬಾಯಿ ತೊಳೆಯುವುದರಿಂದ ಉರಿಯೂತವನ್ನು ಕಡಿಮೆ ಮಾಡಬಹುದು. ದಿನಕ್ಕೆ 4-5 ಬಾರಿ ಇದನ್ನು ಮಾಡುವುದರಿಂದ ಉತ್ತಮ ಪರಿಣಾಮ ಬೀರುತ್ತದೆ. ಕ್ಲೋರ್​ಹೆಕ್ಸಿಡಿನ್ ಮೌತ್ ವಾಶ್ ಬಳಕೆ ಮತ್ತು ನೋವು ನಿವಾರಕ ಮಾತ್ರೆಗಳಿಂದಲೂ ಅಲ್ಪಾವಧಿಯಲ್ಲಿ ಉಪಯುಕ್ತವಾಗಬಹುದು. ಆದರೆ, ನೋವು ಮುಂದುವರಿದರೆ ಅಥವಾ ಬಾಯಿ ತೆರೆಯಲು ಕಷ್ಟವಾದಲ್ಲಿ ನಿಮ್ಮ ದಂತ ವೈದ್ಯರನ್ನು ಭೇಟಿ ಮಾಡಿ ಅವರ ಸಲಹೆ ಪಡೆಯುವುದು ಉತ್ತಮ.

Leave a Reply

Your email address will not be published. Required fields are marked *