ಪಾಕ್​ ಮತ್ತು ರಾಹುಲ್​ ಗಾಂಧಿ ಮಧ್ಯದ ಸಾಮಾನ್ಯ ಸಂಗತಿಯೆಂದರೆ ಉಗ್ರರೆಡೆಗಿನ ಪ್ರೀತಿ: ಸ್ಮೃತಿ ಟೀಕೆ

ನವದೆಹಲಿ: ಕಂದಹಾರ್​ ವಿಮಾನ ಅಪಹರಣವಾದಾಗ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವೆಲ್​ ಅವರು ಜಸ್ವಂತ್​ ಸಿಂಗ್​ ಮತ್ತು ಉಗ್ರರ ಜತೆ ಪ್ರಯಾಣಿಸಿದ್ದರು ಎಂದು ಆರೋಪ ಮಾಡುವ ಭರದಲ್ಲಿ ಜೈಶ್​ ಎ ಮೊಹಮ್ಮದ್​ ಸಂಘಟನೆ ಮುಖ್ಯಸ್ಥ ಮಸೂದ್​ ಅಜರ್​ನನ್ನು ಜೀ ಎಂದು ಸಂಬೋಧಿಸಿದ ರಾಹುಲ್​ ಗಾಂಧಿ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಟು ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಹಾಗೂ ಪಾಕಿಸ್ತಾನಕ್ಕೆ ಇರುವ ಒಂದು ಹೋಲಿಕೆಯೆಂದರೆ ಇಬ್ಬರೂ ಉಗ್ರರನ್ನು ಬಹುವಾಗಿ ಪ್ರೀತಿಸುತ್ತಾರೆ ಎಂದು ಕುಟುಕಿದ್ದಾರೆ.

ಮಸೂದ್​ ಅಜರ್​ ಜೀ ಎಂದು ರಾಹುಲ್​ ಗಾಂಧಿ ಹೇಳಿರುವ ಆರು ಸೆಕೆಂಡ್​ಗಳ ವಿಡಿಯೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿರುವ ಸಚಿವೆ, ಎಲ್ಲರೂ ಗಮನಿಸಿ ರಾಹುಲ್​ ಗಾಂಧಿಯವರು ಉಗ್ರರಿಗೆ ಅದೆಷ್ಟು ಗೌರವ ಕೊಡುತ್ತಾರೆ ಎಂಬುದನ್ನು. ಉಗ್ರರ ಬಗ್ಗೆ ಅವರಿಗೆ ಇರುವ ಪ್ರೀತಿಗೆ ಇದೇ ಸಾಕ್ಷಿ ಎಂದು ವ್ಯಂಗ್ಯವಾಗಿ ಕ್ಯಾಪ್ಷನ್​ ಬರೆದಿದ್ದಾರೆ.

ಹಾಗೇ ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್​ ಅವರು ಕೂಡ ಆಕ್ರೋಶ ವ್ಯಕ್ತ ಪಡಿಸಿದ್ದು, ಕಮ್ ಆನ್​ ರಾಹುಲ್​ ಜೀ, ಈ ಹಿಂದೆ ದಿಗ್ವಿಜಯ್​ ಜೀ ಅವರು ಒಸಾಮಾ ಜೀ ಹಾಗೂ ಹಫೀಜ್​ ಸಯ್ಯದ್​ ಸಾಹೇಬ್​ ಎಂದು ಕರೆದಿದ್ದರು. ಈಗ ನಿಮ್ಮ ಸರದಿ, ನಿಮ್ಮ ಕಾಂಗ್ರೆಸ್​ ಪಕ್ಷದಲ್ಲಿ ಏನು ನಡೆಯುತ್ತಿದೆ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.