ನಿಡಗುಂದಿ: ಜಿಲ್ಲೆಯ ಶಾಸ್ತ್ರಿ ಮಾರುಕಟ್ಟೆಯಂತೆ ನಿಡಗುಂದಿಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಮೆಗಾ ಮಾರುಕಟ್ಟೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಹೆಚ್ಚಿನ ಅನುದಾನ ನೀಡುವ ಮೂಲಕ ನಿಡಗುಂದಿ ಅಭಿವೃದ್ಧಿಗೆ ಬದ್ಧ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದಲ್ಲಿ ನಮ್ಮ ಕ್ಲಿನಿಕ್, ಚರಂಡಿ ಕಾಮಗಾರಿಗೆ ಭೂಮಿ ಪೂಜೆ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಕೇಂದ್ರ ಉದ್ಘಾಟನೆ ಹಾಗೂ ಮೆಗಾ ಮಾರುಕಟ್ಟೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ವೇಗವಾಗಿ ಬೆಳೆಯುತ್ತಿರುವ ನಿಡಗುಂದಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂದರು.
ಬಡವರಿಗೆ ಅನುಕೂಲಕ್ಕಾಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪಿಸಲಾಗಿದ್ದು, ಜನರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ರಾಜ್ಯದಲ್ಲಿ ನಿಡಗುಂದಿ ಅತ್ಯಂತ ವೇಗವಾಗಿ ಬೆಳೆಯುವ ಪಟ್ಟಣವಾಗಿದೆ. ಮಿನಿ ವಿಧಾನಸೌಧ ನಿಮಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಕಾಂಗ್ರೆಸ್ ಮುಖಂಡರಾದ ಸಿದ್ಧಣ್ಣ ನಾಗಠಾಣ, ಶೇಕಪ್ಪಣ್ಣ ಬಳಿಗಾರ, ಪ.ಪಂ. ಮುಖ್ಯಾಧಿಕಾರಿ ವಿರೇಶ ಹಟ್ಟಿ, ರುದ್ರೇಶ್ವರ ಸಂಸ್ಥಾನ ಮಠದ ರುದ್ರಮುನಿ ಶ್ರೀ, ಪ.ಪಂ. ಅಧ್ಯೆ ದೇಸಾಯಿ ಜಂಬಕ್ಕ, ತಹಸೀಲ್ದಾರ್ ಎ.ಡಿ ಅಮರವಾದಗಿ, ಮುಖಂಡರಾದ ಬಸಯ್ಯ ಸಾಲಿಮಠ, ಮೌಲಾಸಾಬ ಅತ್ತಾರ, ಗ್ಯಾರಂಟಿ ಸಮಿತಿ ಅಧ್ಯ ಚಂದ್ರು ಹಳಮನಿ ಪಾಲ್ಗೊಂಡಿದ್ದರು.
ನಿಡಗುಂದಿ ಆಲಮಟ್ಟಿ ಸೇರಿ ನಗರಸಭೆಗೆ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಿದ್ದೇನೆ. ಮುಂಬರುವ ದಿನದಲ್ಲಿ ನಗರಸಭೆಯಾಗುವ ಭರವಸೆ ಇದೆ. ತಮ್ಮೆಲ್ಲರ ಸಹಮತದೊಂದಿಗೆ ನಿಡಗುಂದಿ ಮೆಗಾ ಮಾರುಕಟ್ಟೆಗೆ ಸಿದ್ಧೇಶ್ವರ ಶ್ರೀಗಳ ಹೆಸರಿಡಲಾಗುವುದು.
> ಶಿವಾನಂದ ಪಾಟೀಲ, ಸಚಿವರು