ಮಕ್ಕಳನ್ನು ದೇವರ ಸಮಾನ ಎಂದು ಕರೆಯುತ್ತಾರೆ. ಅಂತಹ ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಅವರ ಮೊಗದಲ್ಲಿ ನಗು ತರಿಸಬೇಕೆಂಬ ಅಚಲ ಗುರಿಯಿರಿಸಿಕೊಂಡಿರುವ ಬಾಲವಿಕಾಸ ಅಕಾಡೆಮಿ ಆ ನಿಟ್ಟಿನಲ್ಲಿ ರಚನಾತ್ಮಕ ಹೆಜ್ಜೆಯನ್ನಿರಿಸಿದೆ. ಮಕ್ಕಳ ದಿನಾಚರಣೆ (ನ.14) ಹಿನ್ನೆಲೆಯಲ್ಲಿ ‘ವಿಜಯವಾಣಿ’ ಹಮ್ಮಿಕೊಂಡಿದ್ದ ಸಂವಾದದಲ್ಲಿ ಅಕಾಡೆಮಿ ಅಧ್ಯಕ್ಷ ಸಂಗಮೇಶ ಆ. ಬಬಲೇಶ್ವರ ನೀಡಿದ ಮಾಹಿತಿಯ ಸಾರಾಂಶ ಇಲ್ಲಿದೆ.
ಬೆಂಗಳೂರು: ಬಾಲವಿಕಾಸ ಅಕಾಡೆಮಿಯು ಬಾಲಮಂದಿರದ ಮಕ್ಕಳ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಿದ್ದು, ಸಂಸ್ಕೃತಿ ವಿನಿಮಯಕ್ಕಾಗಿ ‘ಶೈಕ್ಷಣಿಕ ಪ್ರವಾಸ’, ಮಕ್ಕಳಿಗೆ ಹಾಗೂ ಪೋಷಕರಿಗೆ ಕಾನೂನು ಅರಿವು ಮೂಡಿಸುವ ಶಿಬಿರಗಳು, ‘ಸಾಧಕರ ನಡಿಗೆ ಬಾಲವಿಕಾಸದ ಕಡೆಗೆ’ ಇತ್ಯಾದಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಹದಿನೆಂಟು ವರ್ಷದೊಳಗಿನ ಮಕ್ಕಳ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಮತ್ತು ಅವರ ಸರ್ವಾಂಗೀಣ ಬೆಳವಣಿಗೆಗೆ ನೂತನ ಆವಿಷ್ಕಾರ ಮತ್ತು ಸಂಶೋಧನೆಗಳನ್ನು ಮುಂದಿಟ್ಟುಕೊಂಡು ತರಬೇತಿ, ಕಾರ್ಯಾಗಾರ ರೂಪಿಸುತ್ತಾ ಅನುಷ್ಠಾನಕ್ಕೆ ತರುವುದಕ್ಕೆ ಸ್ಥಾಪಿತಗೊಂಡ ದೇಶದ ಪ್ರತಿಷ್ಠಿತ ಸಂಸ್ಥೆ ಬಾಲವಿಕಾಸ ಅಕಾಡೆಮಿ. ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿಯು ಧಾರವಾಡದಲ್ಲಿ ತನ್ನ ಪ್ರಧಾನ ಕಚೇರಿ ಹೊಂದಿದ್ದು, ಇಡೀ ರಾಜ್ಯದ ವ್ಯಾಪ್ತಿಯಲ್ಲಿ ಕೆಲಸ ಮಾಡುವ ತನ್ನದೇ ಆದ ವಿಶೇಷ ಅಧಿಕಾರ ಮತ್ತು ಅವಕಾಶವನ್ನು ಹೊಂದಿದೆ. ಕಳೆದ 5 ತಿಂಗಳಿನಿಂದ ಅಕಾಡೆಮಿಯು ಕ್ರಿಯಾಶೀಲ ಮತ್ತು ರಚನಾತ್ಮಕವಾಗಿ ಕಾರ್ಯಾರಂಭ ಮಾಡಿದ್ದು, ಹೊಸ ಹೊಸ ಯೋಜನೆಗಳ ಮೂಲಕ ಹೆಚ್ಚಿನ ಕಾರ್ಯಯೋಜನೆಯನ್ನು ಹಾಕಿಕೊಂಡಿದೆ ಎಂದು ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾಹಿತಿ ನೀಡಿದ್ದಾರೆ.
ಪ್ರತಿಭೆಗಳಿಗೆ ಅವಕಾಶ: ಪ್ರತಿಭಾವಂತ ಮಕ್ಕಳಿಗೆ ‘ಬಾಲ ಗೌರವ ಪ್ರಶಸ್ತಿ’ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಮಕ್ಕಳಲ್ಲಿ ಬರವಣಿಗೆ ಹಾಗೂ ಸಾಹಿತ್ಯದ ಬಗೆಗಿನ ಅಭಿರುಚಿ ಹೆಚ್ಚಿಸಲು ಕಥೆ, ಕಾದಂಬರಿ ಸೇರಿ ಮಕ್ಕಳ ಶ್ರೇಷ್ಠ ಸಾಹಿತ್ಯಕ್ಕೆ ‘ಪುಸ್ತಕ ಚಂದಿರ’ ಪ್ರಶಸ್ತಿ ನೀಡಲಾಗುತ್ತಿದೆ. ಇದಲ್ಲದೆ ಮಕ್ಕಳ ಕಲೆಗೆ ವೇದಿಕೆ ಕಲ್ಪಿಸಲು ಮಕ್ಕಳ ಕಲಾ ಉತ್ಸವ, ಕಮ್ಮಟಗಳು, ವೈಜ್ಞಾನಿಕ ಶಿಬಿರ, ಸ್ಥಳೀಯ ಸಂಸ್ಕೃತಿ ಹಾಗೂ ಪರಿಸರ ಉಳಿಸುವ ಕುರಿತು ಅರಿವು ಶಿಬಿರ, ಸಾಧಕರೊಂದಿಗೆ ಸಂವಾದ ಇತ್ಯಾದಿ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಅಕಾಡೆಮಿ ಕಾರ್ಯಪ್ರವೃತ್ತವಾಗಿದೆ.
ಅಮ್ಮನ ಮಡಿಲು…: ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಶಿಕ್ಷಣತಜ್ಞರು. ತಮ್ಮದೇ ಆದ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿರುವ ಇವರು, ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಗಳನ್ನು ಕಳೆದುಕೊಂಡವರು. ಈ ಕಾರಣದಿಂದ ಅನಾಥ ಮಕ್ಕಳ ತೊಳಲಾಟಗಳ ಬಗ್ಗೆ ಸ್ವತಃ ಅರಿವಿದ್ದು, ಪಾಲಕರಿಲ್ಲದ ಮಕ್ಕಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಇಂತಹ ಮಕ್ಕಳ ಸಹಾಯಕ್ಕಾಗಿ ಹುಟ್ಟು ಹಾಕಿರುವ ಅವರ ‘ಅಮ್ಮನ ಮಡಿಲು’ ಯೋಜನೆಯಿಂದ ಹಲವರ ಬಾಳಿನಲ್ಲಿ ಹೊಸ ಬೆಳಕು ಮೂಡಿದೆ. ಪ್ರತಿವರ್ಷ 10 ವಿದ್ಯಾರ್ಥಿಗಳಿಗೆ ಶಿಕ್ಷಣ ವೇತನ ನೀಡುವ ಮೂಲಕ ಬೆಂಬಲವಾಗಿ ನಿಂತಿದ್ದಾರೆ. ಅಮ್ಮನ ಮಡಿಲಿನಲ್ಲಿ ಬೆಳೆದ ಅನೇಕ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಗಳಾಗಿ ಬೆಳೆದಿರುವುದು ತಮಗೆ ಅತ್ಯಂತ ಸಂತಸ ತಂದಿದೆ ಎಂದು ಸಂಗಮೇಶ ಬಬಲೇಶ್ವರ ತಿಳಿಸಿದರು.
ಅನುದಾನಕ್ಕಿಂತ ಅನುಷ್ಠಾನ ಮುಖ್ಯ: ಸಾಮಾನ್ಯವಾಗಿ ರಾಜಕೀಯ ವ್ಯವಸ್ಥೆಯಲ್ಲಿ ಯಾವುದೇ ಅಕಾಡೆಮಿ, ನಿಗಮ-ಮಂಡಳಿ ನೇಮಕಾತಿ ಸಂದರ್ಭದಲ್ಲಿ ಅನುದಾನದ ಪ್ರಶ್ನೆಯೇ ಪ್ರಧಾನವಾಗಿರುತ್ತದೆ. ಆದರೆ, ಸಂಗಮೇಶ ಬಬಲೇಶ್ವರ ಅನುದಾನಕ್ಕಿಂತ ಅಕಾಡೆಮಿಯಲ್ಲಿರುವ ಅವಕಾಶದಲ್ಲಿ ಯೋಜನೆಗಳ ಅನುಷ್ಠಾನ ಮುಖ್ಯ ಎಂಬುದನ್ನು ಪ್ರತಿಪಾದಿಸಿ ತಾವೇ ಸ್ವತಃ ಕೇಳಿ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷತೆ ಪಡೆದುಕೊಂಡಿದ್ದಾರೆ. ಅಕಾಡೆಮಿಯ ಇತಿಹಾಸದಲ್ಲೇ ಮೊದಲ ಬಾರಿಗೆ ರೆಸಾರ್ಟ್ನಲ್ಲಿ ಕಾರ್ಯಾಗಾರವೊಂದನ್ನು ಹಮ್ಮಿಕೊಂಡು, ಅಕಾಡೆಮಿ ನಿರ್ವಹಣೆಯಲ್ಲಿರುವ ಬಾಲಮಂದಿರದ ಮಕ್ಕಳಲ್ಲಿರುವ ಶಿಕ್ಷಣ, ಸಾಹಿತ್ಯ, ಕ್ರೀಡೆ, ಕಲೆ ಸಂಸ್ಕೃತಿ ಕ್ಷೇತ್ರಗಳಲ್ಲಿನ ಪ್ರತಿಭೆ ಗುರುತಿಸಿ, ಮಕ್ಕಳಿಗೆ ಆತ್ಮಸ್ಥೆ ೖರ್ಯ ತುಂಬುವ ಕೆಲಸ ಮಾಡಲಾಗಿದೆ. ಈ ಕಾರ್ಯಾಗಾರದಲ್ಲಿ ಪಾಲ್ಗೊಂಡ ಮಕ್ಕಳು ಸುಮಾರು 400 ಕತೆಗಳನ್ನು ಬರೆದಿದ್ದು, ಒಂದಕ್ಕಿಂತ ಒಂದು ಅದ್ಭುತವಾಗಿವೆ. ಆಯ್ದ ಕತೆಗಳನ್ನು ಪ್ರಕಟಿಸುವ ಚಿಂತನೆ ಇದೆ. ಅಕಾಡೆಮಿಯು ರಾಜ್ಯದಾದ್ಯಂತ ಸಂಚರಿಸಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಕ್ಕಳ ಕಲ್ಯಾಣಕ್ಕೆ ಬೇಕಾದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
ಡಿಜಿಟಲ್ ಹಾವಳಿಯಿಂದ ಮಕ್ಕಳ ರಕ್ಷಣೆ: ಇಂದಿನ ಮಕ್ಕಳು ‘ಡಿಜಿಟಲ್ ಸ್ಲೇವ್ಸ್’ ಆಗುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಸಕಾರಾತ್ಮಕವಾಗಿ ಬಳಕೆಗಿಂತ ನಕಾರಾತ್ಮಕ ಬಳಕೆಯೇ ಹೆಚ್ಚಾಗಿದೆ. ಇದರಿಂದ ಮಕ್ಕಳನ್ನು ರಕ್ಷಿಸಲು ಆಸ್ಟ್ರೇಲಿಯಾ ದೇಶದ ಮಾದರಿಯಲ್ಲಿ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ವೀಕ್ಷಿಸದಂತೆ ಜಾರಿಯಲ್ಲಿರುವ ಕಾನೂನು ನಮ್ಮ ದೇಶದಲ್ಲೂ ಜಾರಿಯಾಗಬೇಕೆಂಬ ಚಿಂತನೆ ಅಕಾಡೆಮಿ ಅಧ್ಯಕ್ಷರ ಮುಂದಿದೆ. ಜುವೆನೈಲ್ ಜಸ್ಟೀಸ್ ಆಕ್ಟ್ ಪ್ರಕಾರ 18 ವರ್ಷದೊಳಗಿನವರು ಮಕ್ಕಳು ಎಂಬ ವ್ಯಾಖ್ಯಾನ ಇದೆ. ಆದರೆ, ಸಮಾಜದಲ್ಲಿ ಆಗುತ್ತಿರುವ ಬೆಳವಣಿಗೆ ಹಿನ್ನೆಲೆಯಲ್ಲಿ (ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳ ಸಂಖ್ಯೆ ಹೆಚ್ಚಳವಾಗುತ್ತಿರುವುದು) ಮಕ್ಕಳ ವಯೋಮಿತಿಯನ್ನು 18ರಿಂದ 15ಕ್ಕೆ ಇಳಿಸಬೇಕೆಂಬ ಮಾತಿಗೆ ಅಕಾಡೆಮಿ ಅಧ್ಯಕ್ಷರು ಸಹಮತ ವ್ಯಕ್ತಪಡಿಸಿದರು.
ಗೈರಾದ ಮಕ್ಕಳ ಮಾಹಿತಿ: ಮಕ್ಕಳ ಹಕ್ಕುಗಳ ಕುರಿತು ಎಷ್ಟೆಲ್ಲಾ ಜಾಗೃತಿ ಹಾಗೂ ಕಾನೂನು ಜಾರಿ ನಂತರವೂ ಬಾಲ್ಯ ವಿವಾಹ ಪ್ರಯತ್ನಗಳು ಹಾಗೂ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರ ಪತ್ತೆ ಮತ್ತು ತಡೆಗಾಗಿ ಶಾಲಾ-ಕಾಲೇಜುಗಳಲ್ಲಿ ಒಂದು ವಾರಕ್ಕಿಂತ ಹೆಚ್ಚು ಕಾಲ ತರಗತಿಗೆ ಗೈರಾದ ಮಕ್ಕಳ ಬಗ್ಗೆ ಸಂಬಂಧಪಟ್ಟ ಅಕಾಡೆಮಿ, ಪ್ರಾಧಿಕಾರಗಳಿಗೆ ಮಾಹಿತಿ ಒದಗಿಸುವಂತೆ ಶಾಲಾ ಕಾಲೇಜುಗಳ ಮುಖ್ಯಸ್ಥರಿಗೆ ಸುತ್ತೋಲೆ ಕಳುಹಿಸಲಾಗಿದೆ. ಇದರಿಂದ ಮಗು ಗೈರಾಗಲು ಕಾರಣ ತಿಳಿಯುವುದರ ಜತೆಗೆ ಸಂತ್ರಸ್ತ ಮಕ್ಕಳ ರಕ್ಷಣೆ ಮಾಡಲು ಸಾಧ್ಯವಾಗಲಿದೆ.
ಅನುದಾನ ಪೋಲಾಗದಂತೆ ನಿಗಾ: ನಿರ್ಗತಿಕ, ನೊಂದ, ಅಸಹಾಯಕ ಮಕ್ಕಳಿಗೆ ಸರ್ಕಾರದ ಅನುದಾನ ಶೇ.70 ತಲುಪುತ್ತಿದ್ದು, ಪೋಲಾಗುತ್ತಿರುವ ಹಣದ ಸದ್ಭಳಕೆಗೆ ನಿಗಾ ವಹಿಸಲಾಗಿದೆ. ಮಕ್ಕಳಿಗೆ ಮೊಟ್ಟೆ ಅಥವಾ ಚಿಕ್ಕಿಯಂತಹ ಪೌಷ್ಟಿಕ ಆಹಾರ ನೀಡುವ ಯೋಜನೆಗೆ ಖಾಸಗಿ ಸಂಸ್ಥೆಯು ಅನುದಾನ ನೀಡಿದ್ದು ಇದರಲ್ಲೂ ಲೋಪಗಳಾಗುತ್ತಿವೆ. ಶಿಕ್ಷಣ ಇಲಾಖೆ ಇದನ್ನು ಸರಿಪಡಿಸಬೇಕು. ಬಿಸಿಯೂಟ ಯೋಜನೆಗೆ ಬಳಸುವ ಸಾಮಾಗ್ರಿ ಕೆಲವು ಕಡೆ ತೀರಾ ಕಳಪೆಯಾಗಿದ್ದು ಅಕಾಡೆಮಿ ಗಮನಕ್ಕೆ ಬಂದಿದ್ದು, ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ ನಂತರ ನೋಡಲ್ ಅಧಿಕಾರಿಗಳನ್ನು ಹೆಚ್ಚಿಸಲಾಗಿದೆ. ಕೆಲವು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಶಿಸ್ತುಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಲಾಗಿದೆ.
ಮಕ್ಕಳ ಹಬ್ಬ ಹಳ್ಳಿಗಳಿಗೂ ವಿಸ್ತರಣೆ: ಮಕ್ಕಳ ಕಲೆಯನ್ನು ಪ್ರೋತ್ಸಾಹಿಸುವ ಸಲುವಾಗಿ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ‘ಮಕ್ಕಳ ಹಬ್ಬ’ ನಡೆಸಲು ಸರ್ಕಾರ ಅನುದಾನ ನೀಡುತ್ತಿದೆ. ಈ ಹಿಂದೆ 12 ಜಿಲ್ಲೆಗಳಲ್ಲಿ ಮಕ್ಕಳ ಹಬ್ಬಗಳೇ ನಡೆಸಿಲ್ಲ. ಹಾಗಾಗಿ ಆ ಜಿಲ್ಲೆಗಳಿಂದ ಅನುದಾನ ಹಿಂಪಡೆದು, ಮಕ್ಕಳ ಹಬ್ಬವನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ವಿಸ್ತರಿಸುವ ಪ್ರಯತ್ನ ನಡೆಯುತ್ತಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಶಾಲೆಗಳ ಮಕ್ಕಳನ್ನು ಒಂದೆಡೆ ಸೇರಿಸಿ ಪಂಚಾಯಿತಿ ಪ್ರಧಾನ ಕಚೇರಿ ಇರುವ ಊರಿನಲ್ಲಿ ‘ಮಕ್ಕಳ ಹಬ್ಬ’ ಆಯೋಜಿಸಲು ಯೋಜನೆ ರೂಪಿಸಲಾಗಿದೆ.
ಗ್ರಾಪಂ ಮಟ್ಟದಿಂದ ಬದಲಾವಣೆ: ಮಕ್ಕಳ ಅಭಿವೃದ್ಧಿ ವಿಷಯದಲ್ಲಿ ಗ್ರಾಪಂ ಮಟ್ಟದಲ್ಲಿ ಬಾಲವಿಕಾಸ ಸಮಿತಿಗಳಿದ್ದು, ಇವುಗಳನ್ನು ಪುನಶ್ಚೇತಗೊಳಿಸಿ ಹೆಚ್ಚಿನ ಚಟುವಟಿಕೆಗಳಿಗೆ ಪ್ರೇರಣೆ ನೀಡಲಾಗುತ್ತಿದೆ. ಗ್ರಾಮಗಳಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆ, ‘ಸಾಧಕರ ನಡಿಗೆ ಬಾಲವಿಕಾಸ ಮಂದಿರಗಳ ಕಡೆಗೆ’ ಎಂಬ ವಿನೂತನ ಕಾರ್ಯಕ್ರಮದ ಚಿಂತನೆ ನಡೆಸಲಾಗಿದೆ. ಆ ಮೂಲಕ ಪ್ರತಿ ಜಿಲ್ಲೆಯಲ್ಲಿರುವ 150-200 (ತಂದೆ-ತಾಯಿ ಇಲ್ಲದ, ಏಕ ಪೋಷಕ, ನಿರ್ಲಕ್ಷ್ಯಕ್ಕೊಳಗಾದ) ಮಕ್ಕಳಿಗೆ ಅನುಕೂಲವಾಗಲಿದೆ. ಈ ಮಕ್ಕಳನ್ನು ದತ್ತು ಸ್ವೀಕರಿಸುವುದಕ್ಕೆ ಇಲಾಖೆಯಲ್ಲಿ ಪ್ರತ್ಯೇಕ ನಿಯಮವಿದ್ದು, ಅದಕ್ಕೂ ಅವಕಾಶ ಕಲ್ಪಿಸಲಾಗಿದೆ.
ವಿವಿಧ ಇಲಾಖೆಗಳ ಸಮನ್ವಯ ಅವಶ್ಯ: ಮಕ್ಕಳ ವಿಚಾರದಲ್ಲಿ ಸಾರ್ವಜನಿಕ ವಲಯ, ಸರ್ಕಾರ, ಅಧಿಕಾರಿಗಳು ಎಲ್ಲರಲ್ಲೂ ಗಂಭೀರತೆ ಕಡಿಮೆ. ಆದ್ದರಿಂದ ಅಕಾಡೆಮಿಯ ಕಾರ್ಯಯೋಜನೆಗಳು ಈವರೆಗೆ ಪರಿಣಾಮಕಾರಿಯಾಗಿ ಫಲಾನುಭವಿಗಳಿಗೆ ತಲುಪಿಲ್ಲ. ವಿಶೇಷವಾಗಿ ಮಕ್ಕಳ ಕಲ್ಯಾಣಕ್ಕೆ ಸಂಬಂಧಪಟ್ಟಂತೆ ವಿವಿಧ ಇಲಾಖೆಗಳ ನಡುವೆ ಸಮನ್ವಯ ಅವಶ್ಯವಾಗಿದೆ. ಬಾಲ್ಯವಿವಾಹ, ಭಿಕ್ಷಾಟನೆಗೆ ಮಕ್ಕಳ ಬಳಕೆಯಂತಹ ಗಂಭೀರ ಸಮಸ್ಯೆಯನ್ನು ತೊಡೆದು ಹಾಕಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ.
ಸಾಂಸ್ಕೃತಿಕ ವಿನಿಮಯ: ಮಕ್ಕಳ ನಡುವಿನ ಅಂತರ ತಗ್ಗಿಸಿ, ಅವರಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ರೂಪಿಸಲಾಗಿದೆ. ಇದರ ಮೂಲಕ ಉತ್ತರ ಕರ್ನಾಟಕ ಭಾಗದ ಕಲೆಯನ್ನು ದಕ್ಷಿಣ ಕರ್ನಾಟಕ ಭಾಗದಲ್ಲಿ ಪರಿಚಯಿಸುವ, ರಾಜ್ಯದ ಕಲೆಯನ್ನು ಹೊರ ರಾಜ್ಯಗಳಲ್ಲಿ ಪ್ರಚಾರ ಮಾಡುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಬೃಹತ್ ಕೈಗಾರಿಕಾ ಇಲಾಖೆ ಸಹಯೋಗದಲ್ಲಿ ರಾಜ್ಯ ಮತ್ತು ಅಂತರರಾಜ್ಯ ಮಟ್ಟದಲ್ಲಿ ‘ಮಕ್ಕಳ ಶೈಕ್ಷಣಿಕ ಪ್ರವಾಸ’ ಕೈಗೊಳ್ಳುವ ಯೋಜನೆ ಹೊಂದಿದ್ದು, ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆಯಲಾಗಿದೆ. ಇದರಿಂದ ಸಾಂಸ್ಕೃತಿಕ ವಿನಿಯಮಕ್ಕೆ ಸಹಕಾರಿಯಾಗಲಿದೆ.
ಹದಿಹರೆಯದ ಮಕ್ಕಳ ರಕ್ಷಣೆ: ಪ್ರಸ್ತುತ ಪೋಷಕರು ಕೇವಲ ಹದಿಹರೆಯದ ಹೆಣ್ಣು ಮಕ್ಕಳ ರಕ್ಷಣೆ ಮಾಡಿದರಷ್ಟೇ ಸಾಲದು, ಹದಿಹರೆಯದ ಗಂಡು ಮಕ್ಕಳ ಬಗ್ಗೆಯೂ ಎಚ್ಚರಿಕೆ ವಹಿಸುವ ಅಗತ್ಯವಿದೆ. ಈ ಸಂಬಂಧ ವಿಶೇಷ ಕ್ರಿಯಾ ಯೋಜನೆ ರೂಪಿಸಲಾಗಿದೆ. ಬೆಂಗಳೂರು, ಹಾವೇರಿ, ವಿಜಯನಗರ, ಬೆಳಗಾವಿ, ಬಾಗಲಕೋಟೆ ಮತ್ತು ಕಲಬುರಗಿ ಜಿಲ್ಲೆಗಳಲ್ಲಿನ ಮೊರಾರ್ಜಿ ದೇಸಾಯಿ, ಹಿಂದುಳಿದ ವರ್ಗಗಳು, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ ಅಡಿಯಲ್ಲಿ ಬರುವ ಬಾಲಕರ ವಸತಿ ನಿಲಯಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಗೊಳಿಸಿ, ಅದರ ಫಲಶ್ರುತಿ ಆಧರಿಸಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು.
ಲಖನೌ ತಂಡದಲ್ಲಿ ನಾನು…LSG ಮಾಲೀಕ ಸಂಜೀವ್ ಜೊತೆಗಿನ ವಿವಾದದ ಕುರಿತು ಮೌನಮುರಿದ KL Rahul
Orange ಜ್ಯೂಸ್ನಿಂದಾಗಿ ಬದಲಾಯ್ತು ಮಹಿಳೆಯ ಬದುಕು; ಲಾಟರಿಯಲ್ಲಿ ಗೆದ್ದಿದ್ದು ಕೋಟಿ ಕೋಟಿ