More

    ‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್: ಟ್ರಾಫಿಕ್ ಜಾಮ್​ ಸಂಚಾರ ನೀತಿಯ ಸಮಸ್ಯೆ!

    ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ ತಡೆಯಲು ಹಲೋ ನೇಬರ್ ಯೋಜನೆ, ಡ್ರಗ್ಸ್ ದಂಧೆ ತಡೆಯಲು ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಸೇರಿ ಬೆಂಗಳೂರು ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕಾರ್ಯಪ್ರವೃತ್ತರಾಗಿದ್ದಾರೆ. ಶುಕ್ರವಾರ ವಿಜಯವಾಣಿ ಕಚೇರಿಯಲ್ಲಿ ಆಯೋಜಿಸಿದ್ದ ಫೋನ್​ಇನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಮಿಷನರ್, ಪೊಲೀಸ್ ಇಲಾಖೆ ಕಾರ್ಯವೈಖರಿ, ಭ್ರಷ್ಟಾಚಾರ ಹಾಗೂ ಅಪರಾಧ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಹೇಗಿರಬೇಕು ಎಂಬುದರ ಕುರಿತು ಹಂಚಿಕೊಂಡ ಸಮಗ್ರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಬೆಂಗಳೂರಿನಲ್ಲಿ ವಾಹನದಟ್ಟಣೆ, ವಾಹನ ಸವಾರರಿಗೆ ಕಿರಿಕಿರಿ ಆಗುತ್ತಿದೆ. ಇದಕ್ಕೆ ಸಾರಿಗೆ ಮತ್ತು ಸಂಚಾರ ನೀತಿ ಕಾರಣ ಎಂದು ಭಾಸ್ಕರ್ ರಾವ್ ಹೇಳಿದರು. ಬೆಂಗಳೂರಿನ ಹೃದಯ ಭಾಗಕ್ಕೆ ದೊಡ್ಡ ಟ್ರಕ್​ಗಳು ಬರುತ್ತವೆ.

    ಈ ಮಾರ್ಗದ ಮೂಲಕವೇ ಮತ್ತೊಂದು ಭಾಗಕ್ಕೆ ತೆರಳುತ್ತವೆ. ರಿಂಗ್​ರೋಡ್ ನಿರ್ಮಾಣ ಪೂರ್ಣವಾಗಿಲ್ಲ. ಸಾರ್ವಜನಿಕ ಸಾರಿಗೆಗೆ ಉತ್ತೇಜನ ನೀಡುವುದು, ಬಿಎಂಟಿಸಿ ದರ ಇಳಿಕೆ ಸೇರಿ ಅನೇಕ ಕ್ರಮಗಳ ಅಗತ್ಯವಿದೆ. ಇದರಿಂದ ಸಂಚಾರದಟ್ಟಣೆ ಸಮಸ್ಯೆ ತಕ್ಕಮಟ್ಟಿಗೆ ನೀಗಬಹುದು ಎಂದರು.

    ಹೆಣ್ಣಿನ ರಕ್ಷಣೆಗೆ ವೀರವನಿತೆ ಪಡೆ

    ಹೆಣ್ಣುಮಕ್ಕಳಿಗೆ ಸ್ವ-ರಕ್ಷಣೆಗೆ ಕುರಿತು ತರಬೇತಿ ನೀಡಲು ‘ವೀರ ವನಿತೆ’ ತಂಡ ಬರಲಿದೆ ಎಂದು ಭಾಸ್ಕರ್ ರಾವ್ ಭರವಸೆ ನೀಡಿದರು. ಆಗ್ನೇಯಾ ವಿಭಾಗ ಡಿಸಿಪಿ ಇಶಾ ಪಂತ್ ಅವರು ಆಸಕ್ತ 15 ಮಹಿಳಾ ಪೊಲೀಸರನ್ನು ಆಯ್ಕೆ ಮಾಡಿ ‘ವೀರ ವನಿತೆ’ ತಂಡ ರಚಿಸಿದ್ದಾರೆ. ಇವರಿಗೆ 6 ತಿಂಗಳ ಕಾಲ ಸ್ವ-ರಕ್ಷಣೆ ಕುರಿತು ವಿವಿಧ ಕಲೆಯಲ್ಲಿ ಪರಿಣಿತ ತಂಡದಿಂದ ವಿಶೇಷ ತರಬೇತಿ ಕೊಡಿಸಿದ್ದಾರೆ. ಇದೀಗ ವೀರ ವನಿತೆಯರು ಸಂಪೂರ್ಣ ತರಬೇತಿ ಮುಗಿಸಿದ್ದು, ಶೀಘ್ರದಲ್ಲೇ ಕಾರ್ಯ ಆರಂಭಿಸಲಿದ್ದಾರೆ ಎಂದು ಹೇಳಿದರು.

    ಸಿಲಿಕಾನ್ ಸಿಟಿಯ ಶಾಲೆ- ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ವೀರವನಿತೆಯರ ತಂಡ ತೆರಳಿ ವಿದ್ಯಾರ್ಥಿನಿಯರಿಗೆ ಮಾರ್ಷಲ್ ಕಲೆ, ಕರಾಟೆ ಸೇರಿ ವಿವಿಧ ಸ್ವ-ರಕ್ಷಣೆ ಕುರಿತು ತರಬೇತಿ ನೀಡಲಿದೆ. ದುಷ್ಕರ್ವಿುಗಳು ದಾಳಿ ನಡೆಸಿದಾಗ ಅವರಿಂದ ತಪ್ಪಿಸಿಕೊಳ್ಳಲು ಹೋರಾಟದ ಕಲೆ ಮತ್ತು ಆರೋಪಿಗಳಿಗೆ ಶಿಕ್ಷೆ ಕೊಡಿಸುವ ಕುರಿತು ಜಾಗೃತಿ ಮೂಡಿಸುತ್ತಾರೆ.

    ಬೀದಿ ನಾಟಕದ ಮೂಲಕ ಮಾದಕ ದ್ರವ್ಯ ಮತ್ತು ಲೈಂಗಿಕ ದೌರ್ಜನ್ಯ ತಡೆಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಿದೆ. ನಗರದಲ್ಲಿ ಇದೇ ಮೊದಲ ಬಾರಿಗೆ ‘ವೀರ ವನಿತೆ’ ತಂಡ ರಚಿಸಲಾಗಿದೆ. ಕೆಲಕಡೆಗಳಲ್ಲಿ ಪ್ರದರ್ಶನ ನೀಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಈ ಯೋಜನೆ ನಗರ ವ್ಯಾಪಿ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆ ಹಮ್ಮಿಕೊಳ್ಳಬೇಕು. ಆದರೆ, ಎಲ್ಲವರನ್ನು ಪೊಲೀಸರ ಮೇಲೆ ವಹಿಸಲಾಗಿದೆ ಎಂದು ಭಾಸ್ಕರ್ ರಾವ್ ಹೇಳಿದರು.

    ಹಲೋ ನೇಬರ್ ಉಪಯುಕ್ತ

    ನಗರದಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಬೆಂಗಳೂರು ಪೊಲೀಸರು ‘ಹಲೋ ನೇಬರ್’ ಯೋಜನೆ ಜಾರಿಗೆ ತಂದಿದ್ದು, ಇದರಿಂದ ಸುತ್ತಮುತ್ತಲಿನ ಸಮುದಾಯವು ಸುಭದ್ರವಾಗಿರಲಿದೆ ಎಂದು ಭಾಸ್ಕರ್ ರಾವ್ ವಿವರಿಸಿದರು. ವಿಜಯವಾಣಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಫೋನ್-ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ನೀಡಿದರು. ನಗರದಲ್ಲಿ ನಡೆವ ಅಪರಾಧ ಕೃತ್ಯಗಳನ್ನು ನಿಯಂತ್ರಿಸಲು ಸಾಕಷ್ಟು ಹೊಸ ಯೋಜನೆಗಳನ್ನು ಪರಿಚಯಿಸಲಾಗಿದೆ. ಇದೀಗ ನೆರೆಹೊರೆಯವರಿಗೆ ಸಹಾಯವಾಗುವ ದೃಷ್ಟಿಯಿಂದ ‘ಹಲೋ ನೇಬರ್’ ಯೋಜನೆ ಜಾರಿಗೆ ತರಲಾಗಿದೆ.

    ನೆರೆಹೊರೆಯವರು ಸಂಪರ್ಕದಲ್ಲಿದ್ದು, ಒಬ್ಬರಿಗೊಬ್ಬರು ಸಹಾಯಕ್ಕೆ ಬಂದರೆ ಕೆಲ ಅಪರಾಧ ಕೃತ್ಯಗಳನ್ನು ತಡೆಗಟ್ಟಬಹುದು. ಆದರೆ, ಬೆಂಗಳೂರಿನ ಕೆಲ ಅಪಾರ್ಟ್​ವೆುಂಟ್​ಗಳಲ್ಲಿ, ಬಡಾವಣೆಗಳಲ್ಲಿ ಅಕ್ಕಪಕ್ಕದ ಮನೆಯವರ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಈ ಸಮಸ್ಯೆಯನ್ನು ನಿವಾರಿಸಿ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬುದು ‘ಹಲೋ ನೇಬರ್’ ಯೋಜನೆಯ ಉದ್ದೇಶ. ಆಯಾ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಅಕ್ಕಪಕ್ಕದವರನ್ನು ಕರೆಸಿ ಪರಸ್ಪರ ಪರಿಚಯಿಸಲಾಗುತ್ತದೆ.

    ಸಾರ್ವಜನಿಕರಿಗೆ ಪೊಲೀಸ್ ಠಾಣೆಗಳ ಹೆಸರು, ಗಸ್ತು ಸಿಬ್ಬಂದಿಯ ಮೊಬೈಲ್ ನಂಬರ್ ಮತ್ತಿತರ ವಿವರ ನೀಡಲಾಗುತ್ತದೆ. ಅಪರಾಧ ಕೃತ್ಯಗಳು ಗಮನಕ್ಕೆ ಬರುತ್ತಲೇ ಪೊಲೀಸರಿಗೆ ಮಾಹಿತಿ ಒದಗಿಸಲು ಇದು ಸಹಕಾರಿಯಾಗಿದೆ. ತಕ್ಷಣ ಮಾಹಿತಿ ನೀಡಲಾಗದಿದ್ದರೆ ನೆರೆಹೊರೆಯವರ ಸಹಾಯ ಪಡಿಯಬಹುದು ಎಂದರು.

    ಆಯುಕ್ತರ ಗಮನಕ್ಕೆ ತನ್ನಿ

    ರಾಜಧಾನಿಯಲ್ಲಿ ಅಕ್ಕಪಕ್ಕದವರ ಪರಿಚಯ ಇಲ್ಲದ ಕಾರಣ ಅಪರಾಧ ತಡೆಯಲು ಪರಸ್ಪರ ಸಹಾಯ ಮಾಡುತ್ತಿಲ್ಲ ಎಂದು ಯಲಹಂಕ ಮಾರುತಿ ನಗರದ ರಮೇಶ್ ಕರೆ ಮಾಡಿ ಆಯುಕ್ತರ ಗಮನಕ್ಕೆ ತಂದರು. ಇದಕ್ಕೆ ಆಯುಕ್ತರು ‘ಹಲೋ ನೇಬರ್’ ಯೋಜನೆ ಮೂಲಕ ನೆರೆಮನೆಯವರನ್ನು ಪರಿಚಯಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts